ಉಪ್ಪಿನಂಗಡಿ: 1ನೇ ಹುಣ್ಣಿಮೆ ಮಖೆಕೂಟ ಸಂಪನ್ನ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ವರ್ಷಾವಧಿ ನಡೆಯುವ ಮೂರು ಮಖೆ ಜಾತ್ರೆಗಳ ಪೈಕಿ ಮೊದಲನೇ ಮಖೆ ಜಾತ್ರೆಯಾಗಿ ಈ ಬಾರಿ ಹುಣ್ಣಿಮೆ ಮಖೆ ಜಾತ್ರೆಯು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ರಥೋತ್ಸವ ಸಹಿತ ವಿಜೃಂಭಣೆಯಿಂದ ನೆರವೇರಿತು.


ವೇದಮೂರ್ತಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳ ನೇತೃತ್ವದಲ್ಲಿ ಫೆ.23ರ ರಾತ್ರಿ ಶ್ರೀ ದೇವರ ಬಲಿ ಹೊರಟು ರಥೋತ್ಸವವು ಉಪ್ಪಿನಂಗಡಿಯಲ್ಲಿ ರಥಬೀದಿಯಲ್ಲಿ ಜರಗಿತು. ಬಳಿಕ ದೇವರ ಬಲಿ ಹೊರಟು ಉತ್ಸವ ನಡೆದು ಮಹಾಪೂಜೆ ಜರಗಿತು. ಫೆ.24ರಂದು ಪ್ರಾತಃಕಾಲದಲ್ಲಿ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಪವಿತ್ರ ಮಖೆ ತೀರ್ಥ ಸ್ನಾನ ನಡೆದು ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ ನಡೆದು ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯು ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಉಪ್ಪಿನಂಗಡಿ ಘಟಕದ ವತಿಯಿಂದ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ʼಅಯೋಧ್ಯಾ ದೀಪ’ ಯಕ್ಷಗಾನ ಬಯಲಾಟ ನಡೆಯಿತು.


ಈ ವೇಳೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕರುಣಾಕರ ಸುವರ್ಣ, ಪ್ರಮುಖರಾದ ರಾಧಾಕೃಷ್ಣ ನಾಕ್, ಡಾ. ರಾಜಾರಾಮ್ ಕೆ.ಬಿ., ಅರ್ತಿಲ ಕೃಷ್ಣ ರಾವ್, ಹರಿರಾಮಚಂದ್ರ, ದೇವಿದಾಸ ರೈ, ಸುಂದರ ಗೌಡ, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಮಚಂದ್ರ ಮಣಿಯಾಣಿ, ಸಚಿನ್, ಸುಧಾಕರ ಶೆಟ್ಟಿ, ಶಾಂತಾರಾಮ ಭಟ್, ಶಿವಪ್ರಸಾದ್ ಮುದ್ರಾಜೆ, ಉಷಾಚಂದ್ರ ಮುಳಿಯ, ಕೈಲಾರ್ ರಾಜಗೋಪಾಲ ಭಟ್, ಮಹೇಶ್ ಬಜತ್ತೂರು, ಸುದರ್ಶನ, ವಾಮನ ಉಬಾರ್, ಎನ್. ಗೋಪಾಲ ಹೆಗ್ಡೆ, ಪ್ರೇಮಲತಾ ಕಾಂಚನ, ಸ್ವರ್ಣೇಶ್, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ಭಟ್, ಸಿಬ್ಬಂದಿ ಪದ್ಮನಾಭ ಕುಲಾಲ್, ದಿವಾಕರ, ಕೃಷ್ಣಪ್ರಸಾದ್ ಬಡಿಲ ಮೊದಲಾದವರು ಉಪಸ್ಥಿತರಿದ್ದರು.


ನದಿಯಲ್ಲಿ ಗೃಹರಕ್ಷಕ ದಳ ತಂಡ:
“ಬಿಳಿಯೂರಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದ್ದರಿಂದ ಉಪ್ಪಿನಂಗಡಿ ಬಳಿ ನೇತ್ರಾವತಿ- ಕುಮಾರಧಾರ ನದಿಯಲ್ಲಿ ಹಿನ್ನೀರು ತುಂಬಿಕೊಂಡಿದ್ದು, ಈ ನಿಟ್ಟಿನಲ್ಲಿ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ನದಿಯಲ್ಲಿ ಆರು ಜನರನ್ನೊಳಗೊಂಡ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡವನ್ನು ನಿಯೋಜಿಸಲಾಗಿತ್ತು. ದೋಣಿ, ಲೈಫ್ ಜಾಕೆಟ್‌ಗಳನ್ನು ಇವರು ಹೊಂದಿದ್ದು, ಜಾತ್ರೋತ್ಸವ ಮುಗಿಯುವವರೆಗೆ ದೇವಾಲಯದ ಬಳಿ ಈ ತಂಡ ಕಾರ್ಯಾಚರಿಸಲಿದೆ.

LEAVE A REPLY

Please enter your comment!
Please enter your name here