*ದೇವರ ಸೇವೆಯಲ್ಲಿ ನಂಬಿಕೆ, ಭಕ್ತಿ, ಶ್ರದ್ಧೆ ಬೇಕು; ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ
*ತಂದೆ, ತಾಯಿಯೇ ಮಾತನಾಡುವ ದೇವರು: ಅಶೋಕ್ ರೈ
*ಜಗತ್ತಿಗೆ ಆಧ್ಯಾತ್ಮಿಕ ಶಕ್ತಿಯ ಪರಿಚಯವಾಗಿದೆ: ಮಠಂದೂರು
*ಜನರ ಸಹಭಾಗಿತ್ವದ ಕಾರ್ಯಕ್ರಮ: ಗಂಗಾಧರ ಪಿ.ಎನ್.
ನೆಲ್ಯಾಡಿ: ಬಜತ್ತೂರು ಗ್ರಾಮದ ಒಡ್ಯಮೆ ಶ್ರೀ ನರಸಿಂಹಮಠ ಕೂವೆಮಠ(ಶಿವತ್ತಮಠ)ದಲ್ಲಿ ನಡೆಯುತ್ತಿರುವ ಸಪರಿವಾರ ಶ್ರೀ ನರಸಿಂಹ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ೨ನೇ ದಿನವಾದ ಫೆ.24ರಂದು ವೈದಿಕ ಕಾರ್ಯಕ್ರಮ, ಭಜನೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭೆ:
ಸಂಜೆ ದಿ| ಶ್ರೀ ಬೂಚಗೌಡ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯನ್ನು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ|ಧರ್ಮಪಾಲನಾಥ ಸ್ವಾಮೀಜಿಯವರು ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು, ದೇವರ ಸೇವೆಯಲ್ಲಿ ನಂಬಿಕೆ, ಭಕ್ತಿ, ಶ್ರದ್ಧೆ ಇರಬೇಕು. ಭಗವಂತ ಸರ್ವಾಂತರ್ಯಾಮಿ. ಆದರೆ ಭಗವಂತನನ್ನು ಕಾಣಲು ಧಾರ್ಮಿಕ ಚೌಕಟ್ಟು ಇದೆ. ಕಲ್ಲು, ಮಣ್ಣಿನಲ್ಲೂ ದೈವತ್ವವನ್ನು ಕಾಣುವ ಸಂಸ್ಕೃತಿ ಭಾರತೀಯರದ್ದು. ಮೊಬೈಲ್ನಿಂದಾಗಿ ದೇವಸ್ಥಾನದಲ್ಲಿ ಶಾಂತಿ, ನೆಮ್ಮದಿ, ಸುಖ, ಸಂತೋಷವೇ ಕಳೆದುಹೋಗಿದೆ. ಮನುಷ್ಯ ಮಾನವೀಯತೆ ಮರೆತಲ್ಲಿ ಎಷ್ಟು ಬ್ರಹ್ಮಕಲಶೋತ್ಸವ ಮಾಡಿದರೂ ಪ್ರಯೋಜನವಿಲ್ಲ. ಆತ್ಮ ಪರಿಶುದ್ಧಿ ಆಗಬೇಕು. ಇದಕ್ಕೆ ಶಾಸ್ತ್ರ, ಚಿಂತನೆಗಳನ್ನು ಶಬರಿಯಂತೆ ನಂಬಬೇಕು ಎಂದರು. ಅಹಂಕಾರ ದೂರವಾಗಿ ಜನರ ಮನಸ್ಸು ಪರಿಶುದ್ಧವಾಗಿ ಯಾವಾಗ ಮಾನಸಿಕ ಪರಿವರ್ತನೆಯಾಗುತ್ತದೋ ಆಗ ಊರಿಗೆ ಬ್ರಹ್ಮಕಲಶೋತ್ಸವ ಆಗುತ್ತದೆ. ಪ್ರಕೃತಿದತ್ತವಾಗಿ ಸಿಗುವ ಬಿಸಿಲು, ಹರಿಯುವ ನೀರು, ಗಾಳಿಗೆ ಟ್ಯಾಕ್ಸ್ ಇಲ್ಲ. ಇವೆಲ್ಲವನ್ನೂ ಮುಕ್ತವಾಗಿ ಉಪಯೋಗಿಸಬಹುದಾಗಿದೆ. ಆದರೆ ಕೃತಕವಾಗಿ ಬಳಕೆ ಮಾಡುವ ಯಾವುದೇ ವಸ್ತುವಿಗೂ ಟ್ಯಾಕ್ಸ್ ಇದೆ. ಇದನ್ನು ಅರ್ಥಮಾಡಿಕೊಳ್ಳಬೇಕು. ಮನಸ್ಸು, ಭಾವನೆಗಳಿಗೆ ಬ್ರಹ್ಮಕಲಶೋತ್ಸವ ಆದಲ್ಲಿ ಪರಿವರ್ತನೆ ಆಗಲಿದೆ. ಮಕ್ಕಳಿಗೆ ಸತ್ಚಿಂತನೆ ನೀಡಬೇಕೆಂದು ಸ್ವಾಮೀಜಿ ಹೇಳಿದರು.
ತಂದೆ,ತಾಯಿಯೇ ಮಾತನಾಡುವ ದೇವರು: ಅಶೋಕ್ ರೈ
ಅತಿಥಿಯಾಗಿದ್ದ ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡಿ, ತಂದೆ, ತಾಯಿಯೇ ಮಾತನಾಡುವ ದೇವರು. ತಂದೆ, ತಾಯಿಯ ಆಶೀರ್ವಾದ ದೊರೆತಲ್ಲಿ ಮಾತ್ರ ಗರ್ಭಗುಡಿಯೊಳಗೆ ಇರುವ ದೇವರ ಆಶೀರ್ವಾದ ಸಿಗುತ್ತದೆ. ಮಕ್ಕಳಿಗೆ ಸಂಸ್ಕಾರ ಕೊಡಬೇಕು. ಭಕ್ತಿಯ ಸೇವೆ, ಪೂಜೆಯಿಂದ ದೇವರ ಅನುಗ್ರಹ ಸಿಗಲಿದೆ. ದೇವರ ಸಾನಿಧ್ಯದ ಜೊತೆಗೆ ಮನಸ್ಸಿನ ಸಾನಿಧ್ಯಕ್ಕೂ ಬ್ರಹ್ಮಕಲಶೋತ್ಸವ ಆಗಬೇಕು ಎಂದು ಹೇಳಿದರು. 2.50 ಕೋಟಿ ರೂ.,ಅನುದಾನ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ನೀಡಲಾಗಿದೆ. ಶಿವತ್ತಮಠದಿಂದ ಅನುದಾನಕ್ಕೆ ಯಾವುದೇ ಅರ್ಜಿ ಬಂದಿರಲಿಲ್ಲ. ಮುಂದಿನ ದಿನಗಳಲ್ಲಿ 10 ಲಕ್ಷ ರೂ.ಅನುದಾನ ನೀಡುವುದಾಗಿ ಹೇಳಿದರು.
ಜಗತ್ತಿಗೆ ಆಧ್ಯಾತ್ಮಿಕ ಶಕ್ತಿಯ ಪರಿಚಯವಾಗಿದೆ: ಮಠಂದೂರು
ಇನ್ನೋರ್ವ ಅತಿಥಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಹಳ್ಳಿ ಹಳ್ಳಿಗಳಲ್ಲಿ ಧಾರ್ಮಿಕ ಪುನರುತ್ಥಾನ ಹಾಗೂ ರಾಮಮಂದಿರ ನಿರ್ಮಾಣದ ಮೂಲಕ ಜಗತ್ತಿಗೆ ಆಧ್ಯಾತ್ಮಿಕತೆಯ ಶಕ್ತಿಯ ಪರಿಚಯವಾಗಿದೆ. ಅಬುದಾಬಿಯಲ್ಲಿ ಸ್ವಾಮಿ ನಾರಾಯಣ ಮಂದಿರ ನಿರ್ಮಾಣದ ಮೂಲಕ ಭಾರತದ ನಾಯತ್ವದ ಪರಿಚಯವೂ ಜಗತ್ತಿಗೆ ಆಗಿದೆ. ದೇಶದ ಆತ್ಮ ಹಳ್ಳಿಯಾಗಿದೆ. ಇಲ್ಲಿ ಧಾರ್ಮಿಕತೆ, ಸಾಮರಸ್ಯದ ಬದುಕು ಇದೆ ಎಂದರು. ಶಿವತ್ತಮಠವೇ ವೈಶಿಷ್ಟ್ಯ ಕ್ಷೇತ್ರವಾಗಿದೆ. ಶಿವನ ಹೆಸರಿನ ಊರು ಆಗಿದ್ದರೂ ಇಲ್ಲಿ ನರಸಿಂಹ ದೇವರ ಆರಾಧನೆ ನಡೆಯುತ್ತಿದೆ. ಅಜೀರ್ಣವಸ್ಥೆಯಲ್ಲಿದ್ದ ದೇವಾಲಯದ ಜೀರ್ಣೋದ್ದಾರದ ಮೂಲಕ ಧಾರ್ಮಿಕವಾಗಿ ಗ್ರಾಮವೇ ಒಂದಾಗಿದೆ ಎಂಬ ಸಂದೇಶ ನೀಡಲಾಗಿದೆ. ಇಲ್ಲಿ ಊರಿಗೆ ಬ್ರಹ್ಮಕಲಶಾಭಿಷೇಕ ಆಗಿದ್ದು ದೈವ, ದೇವರ ಜೊತೆಗೆ ಸಾಮಾಜಿಕ ಪರಿವರ್ತನೆಯೂ ಆಗಿದೆ ಎಂದರು.
ಜನರ ಸಹಭಾಗಿತ್ವದ ಕಾರ್ಯಕ್ರಮ: ಗಂಗಾಧರ
ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್.ಅವರು ಮಾತನಾಡಿ, ಎಲ್ಲರ ಸಹಭಾಗಿತ್ವದಲ್ಲಿ ಕೂವೆಮಠದಲ್ಲಿ ಕಾರ್ಯಕ್ರಮ ನಡೆದಿದೆ ಎಂದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಕೆ.ಎಸ್.ಕುವೆಚ್ಚಾರು ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಗೋಪುರ ಸೇರಿದಂತೆ ಇತರೇ ಕೆಲಸಗಳು ಆಗಬೇಕಿದ್ದು ಜನರು ಮುಂದೆಯೂ ಸಹಕಾರ ನೀಡಬೇಕೆಂದು ಹೇಳಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷೆ ವಿಜಯ ಎಮ್.ಶೆಟ್ಟಿ ಒಡ್ಯಮೆ ಎಸ್ಟೇಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಕಾರ್ಯದರ್ಶಿ ರಮೇಶ್ ಬಿ.ಜಿ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗೋಳಿತ್ತೊಟ್ಟು ವಲಯಾಧ್ಯಕ್ಷ ಬಾಲಕೃಷ್ಣ ಅಲೆಕ್ಕಿ, ಕೃಷ್ಣಪ್ರಸಾದ್ ಜನನಿ ಅಂಬಟೆಮಾರು ಕಾಂಚನ, ಶಿವತ್ತಮಠದ ಮನೆಯವರಾದ ರುಕ್ಮಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ದೇವಸ್ಥಾನದ ವಿವಿಧ ಕೆಲಸ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದ ಸ್ವಯಂ ಸೇವಕರಿಗೆ ಜೀರ್ಣೋದ್ಧಾರ ಸಮಿತಿಯವರ ಪರವಾಗಿ ಸ್ವಾಮೀಜಿಯವರು ಶಾಲು ಹಾಕಿ ಗೌರವಿಸಿದರು. ಶಿವತ್ತಮಠ ಮನೆಯವರು ಹಾಗೂ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಸ್ವಾಮೀಜಿಯವರಿಗೆ ತುಳಸಿ ಮಾಲೆ ಹಾಕಿ, ಫಲತಾಂಬೂಲ ನೀಡಿ ಗೌರವಿಸಲಾಯಿತು. ಸುಬ್ರಾಯ ಗೌಡ ಮೇಲೂರು, ರಾಮಣ್ಣ ಗೌಡ ಬಾಳೆಹಿತ್ಲು, ತಿಮ್ಮಪ್ಪ, ದಿನೇಶ್ ಮೇಲೂರು, ನಾರಾಯಣ ಶೆಟ್ಟಿ, ರಾಮಣ್ಣ ನಾಯ್ಕ್ ಬರ್ನಜಾಲು, ರಂಜಿತ್ ಜೈನ್ ಮೇಲೂರುಪಟ್ಟೆ ಅವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಜೊತೆ ಕಾರ್ಯದರ್ಶಿ ಮಹೇಶ್ ಪಾತೃಮಾಡಿ ವಂದಿಸಿದರು. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ನಿರೂಪಿಸಿದರು. ಪೂಜಾಶ್ರೀ,ತನುಶ್ರೀ ಒಡ್ಯಮೆ ಪ್ರಾರ್ಥಿಸಿದರು.
ವೈದಿಕ ಕಾರ್ಯಕ್ರಮ:
ಬೆಳಿಗ್ಗೆ ಪುಣ್ಯಾಹವಾಚನ, ಗಣಪತಿ ಹೋಮ, ವಿಷ್ಣುಗಾಯತ್ರಿ ಮಂತ್ರ ಹೋಮ, ಅಷ್ಟ ಮಹಾಮಂತ್ರ ಹೋಮ, ಶಾಂತಿಹೋಮ, ಮನ್ಯುಸೂಕ್ತ ಹೋಮ(ನರಸಿಂಹ ಮಂತ್ರ ಸಹಿತ), ಬಿಂಬ ಶುದ್ದಿ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಭೂ ವರಾಹ ಹೋಮ, ರಕ್ಷಾ ಸುದರ್ಶನ ಹೋಮ, ಕೂಪಶಾಂತಿ ನಡೆದು ರಾತ್ರಿ ಮಹಾಪೂಜೆ,ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.
ಭಜನೆ:
ಬೆಳಿಗ್ಗೆ ಭಜನಾ ಕಾರ್ಯಕ್ರಮದಲ್ಲಿ ಹಳೆನೇರೆಂಕಿ ಎರಟಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಹರಿನಾರಾಯಣ ಆಚಾರ್ಯ ಅವರು ದೀಪ ಪ್ರಜ್ವಲನೆ ಮಾಡಿದರು. ಬಳಿಕ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಶಿವಾರು, ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಮುದ್ಯ ಇವರಿಂದ ಭಜನೆ ನಡೆಯಿತು. ಸಂಜೆ ಶ್ರೀ ರಾಮ ಭಜನಾ ಮಂದಿರ ರಾಮನಗರ, ಆಲಂತಾಯ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ನಡ್ಪ ಇವರಿಂದ ಭಜನೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಉಮೇಶ್ ಕೋಟ್ಯಾನ್ ವಾಮದಪದವು ಸಾರಥ್ಯದಲ್ಲಿ ಭಕ್ತಿ-ಗಾನ-ವೈಭವ ನಡೆಯಿತು.