ಯಕ್ಷಗಾನ ನಮ್ಮ ಮಣ್ಣಿನ ಶ್ರೀಮಂತ ಗಂಡು ಕಲೆ-ಮಹೇಶ್ ಕಜೆ
ಪುತ್ತೂರು: ಯಕ್ಷಗಾನ ನಮ್ಮ ಮಣ್ಣಿನ ಶ್ರೀಮಂತ ಗಂಡು ಕಲೆ ಎಂದು ಖ್ಯಾತ ವಕೀಲ ಮಹೇಶ್ ಕಜೆ ಹೇಳಿದರು. ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಮೂರು ದಿನ ನಡೆದ 32ನೇ ವರ್ಷದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ-2024’ ಕಾರ್ಯಕ್ರಮವನ್ನು ಫೆ. 23 ರಂದು ಕಾಲೇಜಿನ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದ ಪುತ್ತೂರಿನ ಹಿರಿಯ ವಕೀಲರೂ ಕಾಲೇಜಿನ ಹಿರಿಯ ವಿದ್ಯಾರ್ಥಿಯೂ ಆಗಿರುವ ಮಹೇಶ್ ಕಜೆ ಅವರು ಯಕ್ಷಗಾನ ಪರಿಪೂರ್ಣ ಕಲೆಯಾಗಿದೆ. ಯಕ್ಷಗಾನ ನಮ್ಮ ಮಣ್ಣಿನ ಶ್ರೀಮಂತ ಗಂಡು ಕಲೆಯಾಗಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸಲು ಯಕ್ಷೋತ್ಸವದಂತಹ ವೇದಿಕೆ ಸೂಕ್ತವಾಗಿದೆ ಎಂದರು. ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ ಹಲವಾರು ಜನರ ಪರಿಶ್ರಮದಿಂದ ಇಂದು ಯಕ್ಷೋತ್ಸವ ಮುಂದುವರೆಯುತ್ತಿದೆ. ವಿದ್ಯಾರ್ಥಿಗಳ ತಂಡ ಮುಂದಿಟ್ಟ ಹೆಜ್ಜೆಗಳಿಂದಾಗಿ 32 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದ ಅವರು ಯಾವುದೇ ಕಾರ್ಯಕ್ರಮ ಆರಂಭಿಸುವುದು ಮುಖ್ಯವಲ್ಲ. ಅದನ್ನು ಮುಂದುವರಿಸಿಕೊಂಡು ಹೋಗುವುದು ಮುಖ್ಯ. ಅಂದು ಆರಂಭಿಸಿದ್ದ ಯಕ್ಷೋತ್ಸವವನ್ನು ಇಂದಿಗೂ ಸುಸೂತ್ರವಾಗಿ ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ದೇವರಾಜ್ ಕೆ. ಮಾತನಾಡಿ ಕಳೆದ 32 ವರ್ಷಗಳಿಂದ ಆಡಳಿತ ಮಂಡಳಿಯ ಸಹಕಾರದಿಂದ ಉತ್ತಮ ಕಾರ್ಯ ನಡೆಯುತ್ತಿದೆ. ಕೆಲವು ಅನಿವಾರ್ಯ ಸಂದರ್ಭದಲ್ಲಿ ನಿಲ್ಲಿಸುವ ಹಂತಕ್ಕೆ ಬಂದಾಗ ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಮುನ್ನಡೆಸಲು ಸಾಧ್ಯವಾಗಿದೆ ಎಂದರು. ಯಕ್ಷೋತ್ಸವದ ಸಂಚಾಲಕ ಪ್ರೊ. ಪುಷ್ಪರಾಜ್ ಕೆ. ಮಾತನಾಡಿ ಆರಂಭದ ದಿನಗಳಿಂದ ಇಲ್ಲಿಯ ತನಕ ವಿವಿಧ ರೀತಿಯಲ್ಲಿ ಹೊಸತನಕ್ಕೆ ಯಕ್ಷೋತ್ಸವ ಸಾಕ್ಷಿಯಾಗಿದೆ ಎಂದು ಹೇಳಿದರು.
ಯಕ್ಷೋತ್ಸವದ ಮಾಜಿ ಸಂಚಾಲಕ ನರೇಶ್ ಮಲ್ಲಿಗೆಮಾಡು ಹಾಗೂ ರಂಜಿತ್ ನಾಯ್ಕ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜು ಪ್ರಾಂಶುಪಾಲ ಡಾ. ತಾರಾನಾಥ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್ ಶುಭ ಹಾರೈಸಿದರು. ಯಕ್ಷೋತ್ಸವ ಸಲಹಾ ಸಮಿತಿ ಸದಸ್ಯರಾದ ಪೂರ್ವ ವಿದ್ಯಾರ್ಥಿ ಮತ್ತು ಯಕ್ಷೋತ್ಸವ ಆರಂಭಿಸಿದ ತಂಡದ ಕಲಾವಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಉಪಸ್ಥಿತರಿದ್ದರು. ಡಾ. ಚಂದ್ರಲೇಖ ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಮಯಿ ಕಾರ್ಯಕ್ರಮ ನಿರೂಪಿಸಿದರು. ಯಕ್ಷೋತ್ಸವದ ಕಾರ್ಯನಿರ್ವಹಣಾ ಕಾರ್ಯದರ್ಶಿ ದಿಶಾ ವಂದಿಸಿದರು.
ಕೆ.ಎಂ.ನಟರಾಜ್, ಮಹೇಶ್ ಕಜೆ 1991ರಲ್ಲಿ ಪ್ರಾರಂಭಿಸಿದ್ದ ಯಕ್ಷೋತ್ಸವ
ಪ್ರಸ್ತುತ ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ಆಗಿರುವ ಈಶ್ವರಮಂಗಲ ಕೊನೆತೋಟದ ಕೆ.ಎಂ.ನಟರಾಜ್ ಮತ್ತು ಇ.ಡಿ. ಪರ ವಕೀಲರೂ ಆಗಿರುವ ಖ್ಯಾತ ಕ್ರಿಮಿನಲ್ ವಕೀಲ ಉಪ್ಪಿನಂಗಡಿ ಸಮೀಪದ ಕೇದಾರ ನಿವಾಸಿ ಮಹೇಶ್ ಕಜೆ ಅವರು 1991ನೇ ಇಸವಿಯಲ್ಲಿ ಮಂಗಳೂರು ಎಸ್.ಡಿ.ಎಂ. ಕಾಲೇಜಿನಲ್ಲಿ ಯಕ್ಷೋತ್ಸವ ಕಾರ್ಯಕ್ರಮ ಆರಂಭಿಸಿದ್ದರು. ಬಳಿಕ ಈ ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ಮಂಡಳಿ ಮತ್ತು ಹಿರಿಯ ವಿದ್ಯಾರ್ಥಿ ಸಂಘದವರು ಮುಂದುವರಿಸಿದ್ದರು. ಕಾಲಮಿತಿ ಯಕ್ಷಗಾನದ ಕಲ್ಪನೆಯೇ ಇಲ್ಲದ ಅಂದಿನ ಕಾಲದಲ್ಲಿ ವಿದ್ಯಾರ್ಥಿಗಳ ನಡುವೆ ಸ್ಪರ್ಧೆ ಏರ್ಪಡಿಸುವುದಕ್ಕಾಗಿ ಕಾಲಮಿತಿಯ ಯಕ್ಷಗಾನ ನಡೆಸಲಾಗಿತ್ತು.