ಕೋರಂ ಕೊರತೆ: ಇಳಂತಿಲ ಗ್ರಾ.ಪಂ. ಸಾಮಾನ್ಯ ಸಭೆ ರದ್ದು

0

ಉಪ್ಪಿನಂಗಡಿ: ಪ್ರಮುಖವಾಗಿ ಆಡಳಿತ ಪಕ್ಷದ ಸದಸ್ಯರೇ ಗೈರು ಹಾಜರಾಗಿ ಕೋರಂ ಕೊರತೆ ಉಂಟಾಗಿದ್ದರಿಂದ ಇಳಂತಿಲ ಗ್ರಾ.ಪಂ. ಸಾಮಾನ್ಯ ಸಭೆ ರದ್ದುಗೊಂಡ ಘಟನೆ ಫೆ.29ರಂದು ನಡೆದಿದೆ.


ಗ್ರಾ.ಪಂ.ನ ಸಭಾಂಗಣದಲ್ಲಿ ಪೂರ್ವ ನಿಗದಿಯಂತೆ ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪ ಇಳಂತಿಲ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಆರಂಭಿಸಲಾಯಿತು. ಆದರೆ ಸಭೆಗೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ನಾಲ್ಕು ಮಂದಿ ಸದಸ್ಯರಷ್ಟೇ ಹಾಜರಾಗಿದ್ದರು. ಇನ್ನುಳಿದ ಸದಸ್ಯರ ಬರುವಿಕೆಗಾಗಿ ಸುಮಾರು ಒಂದು ಗಂಟೆಯಷ್ಟು ಕಾದರೂ, ಸಭೆಗೆ ಇತರ ಸದಸ್ಯರ ಆಗಮನವಾಗದಿದ್ದಾಗ ಕೋರಂ ಕೊರತೆಯಿಂದ ಸಭೆಯನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಂಜೀವ ನಾಯ್ಕ ರದ್ದುಗೊಳಿಸಿ, ಮಾ.6ಕ್ಕೆ ಸಭೆಯನ್ನು ಮುಂದೂಡಿದರು. ಬಳಿಕ ಮಾತನಾಡಿದ ಪಿಡಿಒ, ಸಾಮಾನ್ಯ ಸಭೆಗಳು ರದ್ದುಗೊಂಡರೆ ಗ್ರಾಮದ ಅಭಿವೃದ್ಧಿಗಳು ಕುಂಠಿತವಾಗುತ್ತವೆ ಹಾಗೂ ಸಾರ್ವಜನಿಕ ಅರ್ಜಿ ವಿಲೇವಾರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಸಭೆಗೆ ಹಾಜರಾಗುವಂತೆ ಇತರ ಸದಸ್ಯರಿಗೆ ಮನವರಿಕೆ ಮಾಡುವಂತೆ ಸಭೆಯಲ್ಲಿ ಹಾಜರಿದ್ದ ಸದಸ್ಯರಿಗೆ ತಿಳಿಸಿದರು.


ಇಳಂತಿಲ ಗ್ರಾಮ ಪಂಚಾಯತ್ 15 ಸದಸ್ಯ ಬಲವನ್ನು ಹೊಂದಿದ್ದು, ಅದರಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ 12, ಎಸ್‌ಡಿಪಿಐ ಬೆಂಬಲಿತ ಸದಸ್ಯರು 1 ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಬ್ಬರು ಇದ್ದಾರೆ. ಅವರಲ್ಲಿ ಬಿಜೆಪಿ ಬೆಂಬಲಿತ ಏಳು ಮಂದಿ ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ ಓರ್ವ ಸದಸ್ಯರು ಸಭೆಗೆ ಗೈರಾಗಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಸವಿತಾ, ಸದಸ್ಯರಾದ ಉಷಾ ಎನ್., ರಮೇಶ, ಜಾನಕಿ, ಮುಶ್ರತ್ ಸಭೆಗೆ ಹಾಜರಾಗಿದ್ದರು. ಕಾರ್ಯದರ್ಶಿ ಜಾನಕಿ ಈ ಸಂದರ್ಭ ಉಪಸ್ಥಿತರಿದ್ದರು. ಇಳಂತಿಲ ಗ್ರಾ.ಪಂ.ನಲ್ಲಿ ಈ ಹಿಂದೆಯೂ ಕೋರಂ ಕೊರತೆಯಿಂದ ಸಭೆ ರದ್ದುಗೊಂಡಿರುವ ಘಟನೆ ಗ್ರಾ.ಪಂ.ನ ಇದೇ ಆಡಳಿತ ಮಂಡಳಿಯ ಅವಧಿಯಲ್ಲಿ ನಡೆದಿದೆ.

LEAVE A REPLY

Please enter your comment!
Please enter your name here