ಮಂಗಳೂರು : ಪುತ್ತಿಲ ಬಿಜೆಪಿಗೋಸ್ಕರ ಕೆಲಸ ಮಾಡಿದ್ದಾರೆ ಮಾತ್ರವಲ್ಲ ಅವರು ಬಿಜೆಪಿ ಕಾರ್ಯಕರ್ತರಾಗಿದ್ದವರು.ಅವರು ಪಕ್ಷಕ್ಕೆ ಬರುವುದಾದಲ್ಲಿ ನಮಗೆ ಯಾವುದೇ ಅಭ್ಯಂತರವಿಲ್ಲ, ನಾವು ಕರೆಯುತ್ತೇವೆ, ಒಪ್ಪಿಕೊಳ್ಳಲು ತಯಾರಿದ್ದೇವೆ.ಇತ್ತೀಚೆಗೆ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಪುತ್ತಿಲ ಪರಿವಾರದಿಂದ 3 ದಿನ ಗಡುವು ನೀಡಿದ್ದರು. ಆದರೆ ರಾಷ್ಟ್ರೀಯ ಪಕ್ಷಕ್ಕೆ ಗಡುವು ಸ್ವೀಕರಿಸುವ ವ್ಯವಸ್ಥೆ ಇಲ್ಲ. ಇದರ ಅರ್ಥ ಅವರು ಪಕ್ಷಕ್ಕೆ ಬೇಡ ಅಂತ ಅಲ್ಲ, ಅವರನ್ನು ಸೇರಿಸುವ ಕಾರ್ಯ ನಡೆಯುತ್ತಲೇ ಇದೆ ಎಂದು ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪುತ್ತಿಲರೊಂದಿಗೆ ರಾಜ್ಯಾಧ್ಯಕ್ಷರು ಹಾಗೂ ಸಂಘಟನಾ ಕಾರ್ಯದರ್ಶಿಗಳು ಹಲವು ಬಾರಿ ಮಾತುಕತೆ ನಡೆಸಿದ್ದಾರೆ.ಅವರೆಲ್ಲರೂ ಬಿಜೆಪಿಗೆ ಸೇರ್ಪಡೆಗೊಳ್ಳಲು ಮುಕ್ತವಾದ ಆಹ್ವಾನ ಕೊಟ್ಟಿರುತ್ತಾರೆ ಎಂಬುವುದನ್ನು ಸ್ವತಃ ರಾಜ್ಯಾಧ್ಯಕ್ಷರು ಕೂಡಾ ಸ್ಪಷ್ಟಪಡಿಸಿದ್ದಾರೆ. ನಮ್ಮ ಪಕ್ಷಕ್ಕೆ ನಮ್ಮ ತತ್ವ ಸಿದ್ಧಾಂತಗಳನ್ನು ಒಪ್ಪಿ ಬರುವ ಎಲ್ಲರೂ ಬೇಕು. ಪ್ರತಿಯೊಬ್ಬರ ಸೇವೆ ಕೂಡಾ ಬಿಜೆಪಿಗೆ ಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಬಂದಾಗಲಂತೂ ಒಬ್ಬ ವ್ಯಕ್ತಿ ರಾಜ್ಯ ಸಭೆಗೆ ಆಯ್ಕೆಯಾದಾಗ ಪಾಕಿಸ್ತಾನಕ್ಕೆ ಜೈಕಾರ ಹಾಕಿ ನಮ್ಮ ದೇಶಕ್ಕೆ ಅಪಚಾರ ಎಸಗಿದರೂ ಸರಕಾರಿ ಯಂತ್ರ ಅಪಚಾರ ಎಸಗಿದವರ ಪರವಾಗಿ ನಿಲ್ಲುತ್ತೆ. ಇದರ ಮುಂದುವರಿದ ಭಾಗವೇನೋ ಎಂಬಂತೆ ನಿನ್ನೆಯಷ್ಟೇ ಕಳೆದ ಹತ್ತು ವರ್ಷಗಳ ಕಾಲ ಆತಂಕಿಗಳ ಉಪಟಳದಿಂದ ಶಾಂತವಾಗಿದ್ದ ಬೆಂಗಳೂರಿನಲ್ಲಿ ಬಾಂಬ್ ಬ್ಲಾಷ್ಟ್ ಆಗಿದ್ದನ್ನು ನಾವು ನೋಡಿದ್ದೇವೆ. ಪುನಃ ದೇಶದ ಮೇಲೆ ಆತಂಕದ ಕರಿ ಛಾಯೆ ಮೂಡುತ್ತಿದೆ. ಅದ್ದರಿಂದ ರಾಷ್ಟ್ರೀಯ ವಿಚಾರಗಳನ್ನು ಪ್ರಧಾನವಾಗಿ ಮುಂದಿಟ್ಟುಕೊಂಡು ಕೆಲಸ ಮಾಡುತ್ತಿರುವ ಅನೇಕ ಸಂಘಟನೆಗಳು ಹಾಗೂ ಆರುಣ್ ಕುಮಾರ್ ಪುತ್ತಿಲ ಜನರೂ ಸಹ ನಮ್ಮ ಪ್ರದಾನಿ ಮೋದಿಜಿಯವರ ಕೈ ಬಲ ಪಡಿಸಲು ಸಹಕಾರಿಯಾಗಬೇಕು.
ರಾಜ್ಯಾಧ್ಯಕ್ಷರ ಭೇಟಿ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಪಾರ್ಟಿಯಲ್ಲಿ ಜಿಲ್ಲೆ ಅಥವಾ ಮಂಡಲ ಅಧ್ಯಕ್ಷ ಸ್ಥಾನಮಾನಕ್ಕೆ ಅಪೇಕ್ಷೆ ಪಟ್ಟಿದ್ದರು. ರಾಜ್ಯಾಧ್ಯಕ್ಷರು ಬಿಜೆಪಿ ಪಾರ್ಟಿಗೆ ಯಾರೂ ಕೂಡಾ ಪರತ್ತುಗಳನ್ನು ಒತ್ತಡಗಳನ್ನು ಹೇರುವಂತಹದು ಸರಿಯಲ್ಲ, ಪ್ರತಿಯೊಬ್ಬರೂ ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ ಬಿಜೆಪಿ ಸೇರಬೇಕು ಆಮೇಲೆ ಅವರಿಗೆ ಸೂಕ್ತವಾದ ಸ್ಥಾನಮಾನವನ್ನು ನೀಡುವ ಕುರಿತು ನಿರ್ಣಯ ಮಾಡಲಾಗುತ್ತದೆ. ಹಾಗೆಯೇ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆಯಾದ ಮೇಲೆ ಅವರಿಗೆ ಸಲ್ಲಬೇಕಾದ ಎಲ್ಲಾ ಗೌರವದೊಂದಿಗೆ ಸ್ಥಾನಮಾನಗಳನ್ನು ನೀಡಲಾಗುವುದು ಎಂಬ ವಿಚಾರವನ್ನು ರಾಜ್ಯಾಧ್ಯಕ್ಷರು ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಈಗಾಗಲೇ ತಿಳಿಸಿದ್ದಾರೆ ಇವತ್ತೂ ಕೂಡಾ ಅವರಿಗೆ ತಿಳಿಸುವುದೇನೆಂದರೆ ಬಿಜೆಪಿ ಪಕ್ಷಕ್ಕೆ ಬನ್ನಿ ಹಾಗೂ ರಾಷ್ಟ್ರ ಹಿತದ ಕಾರ್ಯವನ್ನು ನಾವೆಲ್ಲರೂ ಸೇರಿ ಮಾಡೋಣಾ ಮೋದಿಜಿಯವರ ನೇತೃತ್ವದಲ್ಲಿ ಬಲಾಡ್ಯ ರಾಷ್ಟ್ರವನ್ನು ಕಟ್ಟೋಣಾ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.