ನಾಪತ್ತೆ ಪ್ರಕರಣಕ್ಕೆ ತಿರುವು: ಚೈತ್ರಾ ವಿದೇಶಕ್ಕೆ?

0

ಪುತ್ತೂರು: ಪಿಹೆಚ್‌ಡಿ ವಿದ್ಯಾರ್ಥಿನಿ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ನಿವಾಸಿ 27ರ ಹರೆಯದ ಯುವತಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ, ಈಕೆ ವಿದೇಶಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ.ದೇರಳಕಟ್ಟೆಯ ಖಾಸಗಿ ಕಾಲೇಜಿನಲ್ಲಿ ಪಿಹೆಚ್‌ಡಿ ಅಧ್ಯಯನ ಮಾಡುತ್ತಿದ್ದ ಚೈತ್ರಾ ಫೆ.17ರಂದು ತನ್ನ ಸ್ಕೂಟರ್‌ನೊಂದಿಗೆ ತೆರಳಿದಾಕೆ ವಾಪಸಾಗದೆ ನಾಪತ್ತೆಯಾಗಿದ್ದು, ಈ ಬಗ್ಗೆ ಫೆ.18ರಂದು ಆಕೆಯ ದೊಡ್ಡಪ್ಪ ಉಳ್ಳಾಲ ಪೊಲೀಸ್ ಠಾಣೆಗೆ ಈ ಬಗ್ಗೆ ದೂರನ್ನೂ ನೀಡಿದ್ದರು.

ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಈಕೆ ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿಯೋರ್ವನ ಜೊತೆ ಬೆಂಗಳೂರಿಗೆ ತೆರಳಿದ್ದು, ಬಳಿಕ ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿದ್ದಾಳೆ. ಬಳಿಕ ದೆಹಲಿಗೆ ವಾಪಸ್ಸಾಗಿ ಅಲ್ಲಿಂದ ವಿದೇಶಕ್ಕೆ ತೆರಳಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಈಕೆಯ ಜೊತೆಗೆ ತೆರಳಿರುವ ಯುವಕನನ್ನು ಪತ್ತೆಹಚ್ಚಿರುವ ಪೊಲೀಸರು ಆತನನ್ನು ವಿಚಾರಣೆಗಾಗಿ ಉಳ್ಳಾಲ ಪೋಲೀಸ್ ಠಾಣೆಗೆ ಕರೆ ತಂದಿದ್ದಾರೆ. ಆದರೆ ವಿಚಾರಣೆ ವೇಳೆ ಆತ ಚೈತ್ರಾ ಜೊತೆ ಇದ್ದ ಎನ್ನುವುದಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ವಾಪಸ್ ಕಳುಹಿಸಲಾಗಿದೆ. ಎಂದು ಪೊಲೀಸ್ ಮೂಲದಿಂದ ತಿಳಿದುಬಂದಿದೆ.

ಮುಕ್ವೆ ದಿ.ಸತೀಶ್ ಹೆಬ್ಬಾರ್ ಅವರ ಪುತ್ರಿ ಚೈತ್ರಾ ಹೆಬ್ಬಾರ್ (27ವ) ಅವರು ಕೋಟೆಕಾರು ಮಾಡೂರು ಬಳಿಯ ಖಾಸಗಿ ಪಿಜಿಯಲ್ಲಿ ಉಳಿದುಕೊಂಡಿದ್ದರು.ಆಹಾರ ಭದ್ರತೆ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ಅವರು ಫೆ.17ರಂದು ಪಿ.ಜಿಯಿಂದ ಹೊರಗೆ ಹೋಗಿದ್ದವರು ಕಾಲೇಜಿಗೂ ಹೋಗದೆ, ಮರಳಿ ಪಿ.ಜಿಗೂ ಬಾರದೆ ನಾಪತ್ತೆಯಾಗಿದ್ದರು. ವಿದ್ಯಾರ್ಥಿನಿಯ ಚಿಕ್ಕಪ್ಪ ಪ್ರಕಾಶ್ ಹೆಬ್ಬಾರ್ ಅವರು ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾಪತ್ತೆಯಾಗಿರುವ ಚೈತ್ರಾ ಅವರ ಸ್ಕೂಟರ್ ಸುರತ್ಕಲ್ ಕೋಟೆಕಾರ್ ಸಮೀಪ ಹೊಟೇಲೊಂದರ ಬಳಿಯಲ್ಲಿ ಪತ್ತೆಯಾಗಿದೆ. ಆಕೆಯ ಮೊಬೈಲ್‌ಫೋನ್ ಹೊಸಬೆಟ್ಟು ಬಳಿ ಕೊನೆಯ ಲೊಕೇಶನ್ ತೋರಿಸುತ್ತಿದ್ದು ಆ ಬಳಿಕ ಸ್ವಿಚ್ ಆಫ್ ಆಗಿತ್ತು. ಈಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಈ ನಡುವೆ ಚೈತ್ರಾಳಿಗೆ ವಿದೇಶದ ವೀಸಾ ಕಳುಹಿಸಿದವರು ಯಾರು? ವೀಸಾ ಕಳುಹಿಸಿದ ವ್ಯಕ್ತಿಗೂ ಚೈತ್ರಾಳಿಗೂ ಇರುವ ನಂಟೇನು ಎಂಬುದು ಇನ್ನೂ ನಿಗೂಢವಾಗಿದ್ದು, ಒಟ್ಟಿನಲ್ಲಿ ಈ ಪ್ರಕರಣ ಗೊಂದಲದ ಗೂಡಾಗಿದೆ.





LEAVE A REPLY

Please enter your comment!
Please enter your name here