ಹತ್ತನೇ ತರಗತಿ ವಿದ್ಯಾರ್ಥಿನಿಯರ ವಿದಾಯ ಸಮಾರಂಭ 2024

0

ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಹತ್ತನೇಯ ತರಗತಿ ವಿದ್ಯಾರ್ಥಿನಿಯರಿಗೆ ವಿದಾಯ ಸಮಾರಂಭವು ಮಾ.5ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮಾಯಿದೆ ದೇವುಸ್ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ|ವಂ|ಫಾ| ಲಾರೆನ್ಸ್ ಮಸ್ಕರೇನ್ಹಸ್, ಮುಖ್ಯ ಅತಿಥಿಗಳಾದ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂದನೀಯ ಫಾ|ಸ್ಟ್ಯಾನಿ ಪಿಂಟೊ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಉದಯ ಕುಮಾರಿ, ಸಹ ಕಾರ್ಯದರ್ಶಿ ಕಾಸಿಂ ಬೈತಡ್ಕ, ಹೆಣ್ಮಕ್ಕಳ ಸುರಕ್ಷಾ ಸಮಿತಿಯ ಸಂಯೋಜಕಿಯಾದ ಶ್ವೇತಾ ಕೆ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಇವಾನ್ ಮಸ್ಕರೇನ್ಹಸ್, ಶಾಲಾ ಮುಖ್ಯೋಪಾಧ್ಯಾಯಿನಿ ರೋಸ್‌ಲಿನ್ ಲೋಬೊ, ಶಾಲಾ ನಾಯಕಿ ಕು| ಫಾತಿಮ ಕಾಸಿಂ ಹಾಗೂ 10ನೇ ತರಗತಿ ವಿದ್ಯಾರ್ಥಿ ಪ್ರತಿನಿಧಿಗಳಾದ ಕು|ನಿಶ್ಮಿತಾ, ಕು|ಹಸ್ತಾ ಕೆ.ಪಿ, ಕು|ಅಪೂರ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಾರ್ಥನಾ ವಿಧಿಯೊಂದಿಗೆ ಆರಂಭಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಂ|ಫಾ| ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ ಹತ್ತನೆಯ ತರಗತಿ ಎಂಬುದು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ನಿರ್ಣಾಯಕ ಹಂತ. ಜವಾಬ್ದಾರಿಯುತ ಜೀವನಕ್ಕೆ ಕಾಲಿಡುವ ಸಮಯ. ಹಿರಿಯರ ಗುರುಗಳ ಮಾರ್ಗದರ್ಶನದಂತೆ ಜೀವನವನ್ನು ರೂಪಿಸಬೇಕು. ಆಲಸಿಗಳಿಗೆ ಭವಿಷ್ಯವಿಲ್ಲ, ಶ್ರಮಜೀವಿಗಳಿಗೆ ಖಂಡಿತ ಉತ್ತಮ ಭವಿಷ್ಯವಿದೆ. ಒಳ್ಳೆಯ ಸಾಧನೆ ಮಾಡಬೇಕಾದರೆ ಸ್ವಾರ್ಥಿಗಳಾಗದೆ ತ್ಯಾಗಿಗಳಾಗಬೇಕು. ಸಿಗುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಿ ಹೆತ್ತವರಿಗೆ, ಕಲಿತ ಸಂಸ್ಥೆಗೆ ಹೆಸರನ್ನು ತರಬೇಕು. ಸಂಕುಚಿತ ಮನೋಭಾವನೆಯನ್ನು ತೊರೆದು, ವಿಶಾಲ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಮುಖ್ಯ ಅತಿಥಿಗಳಾದ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂದನೀಯ ಫಾ| ಸ್ಟ್ಯಾನಿ ಪಿಂಟೊರವರು ಮಾತನಾಡಿ, ಈ ಶಾಲೆಯಿಂದ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುತ್ತಿರುವುದರಿಂದ ಉನ್ನತ ಫಲಿತಾಂಶವನ್ನು ತರುವ ನಿರೀಕ್ಷೆ ನಿಮ್ಮ ಮೇಲಿದೆ. ಶಿಕ್ಷಕರು ತಿಳಿಸಿದ ಸಲಹೆ ಸೂಚನೆಗಳನ್ನು ಪಾಲಿಸಿ ಕಠಿಣ ಪರಿಶ್ರಮದಿಂದ ಪರೀಕ್ಷೆಯನ್ನು ಬರೆದು ಶಾಲೆಗೆ ಕೀರ್ತಿಯನ್ನು ತಂದು ಯಶಸ್ಸನ್ನು ಪಡೆಯಿರಿ ಎಂದು ಶುಭಹಾರೈಸಿದರು.
ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಇವಾನ್ ಮಸ್ಕರೇನ್ಹಸ್‌ರವರು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಕೊಡಲ್ಪಡುವ ವಿದ್ಯಾರ್ಥಿ ವೇತನವನ್ನು ವಿತರಿಸಿ ವಿದ್ಯಾರ್ಥಿನಿಯರನ್ನು ಹಿರಿಯ ವಿದ್ಯಾರ್ಥಿ ಸಂಘಕ್ಕೆ ಸ್ವಾಗತಿಸಿ ಶಾಲಾಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಲು ಕರೆಯಿತ್ತರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಉದಯ ಕುಮಾರಿ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.

ಶಾಲಾ ಸಹಶಿಕ್ಷಕ ರೊನಾಲ್ಡ್ ಮೊನಿಸ್‌ರವರು ಎಲ್ಲಾ ಶಿಕ್ಷಕರ ಪರವಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಪ್ರತಿನಿಧಿಗಳಾದ ಕು|ನಿಶ್ಮಿತಾ, ಕು|ಹಸ್ತಾ ಕೆ ಪಿ, ಕು|ಅಪೂರ್ವ, ಕು|ಫಾತಿಮ ಕಾಸಿಂ ರವರು ಈ ಶಾಲೆಯಲ್ಲಿ ಕಳೆದ ತಮ್ಮ ಮೂರು ವರುಷಗಳ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕಿ ರೀನಾ ರೆಬೆಲ್ಲೊ ಹಾಗೂ ರೂಪ ಡಿ’ಕೊಸ್ಟ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರ ಹೆಸರನ್ನು ವಾಚಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕಾರ್ಯಕ್ರಮದ ಗಣ್ಯರನ್ನು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿನಿಯರನ್ನು ಶಾಲಾ ವಾದ್ಯವೃಂದದೊಂದಿಗೆ ಸಭಾಂಗಣಕ್ಕೆ ಕರೆತರಲಾಯಿತು. ಶಾಲಾ ನವೀಕರಣದ ರೂವಾರಿಗಳಾದ ಸಂಚಾಲಕರಾದ ಅತಿ|ವಂ|ಫಾ| ಲಾರೆನ್ಸ್ ಮಸ್ಕರೇನ್ಹಸ್‌ರವರನ್ನು ಹಾಗೂ ಶಾಲಾ ನವೀಕರಣದ ಮೇಲುಸ್ತುವಾರಿಯನ್ನು ವಹಿಸಿದ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂದನೀಯ ಫಾ| ಸ್ಟ್ಯಾನಿ ಪಿಂಟೊರವರನ್ನು ಕೃತಜ್ಞತಾ ಪೂರ್ವಕವಾಗಿ ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ರೋಸ್‌ಲಿನ್ ಲೋಬೊರವರು ನೆರೆದ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿನಿಯರು ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಎದುರಿಸಲು ಮೊಂಬತ್ತಿಯನ್ನು ಹಚ್ಚುವುದರ ಮೂಲಕ ಸಮರ್ಪಣಾ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಶಿಕ್ಷಕಿ ಪಲ್ಲವಿ ಸರ್ವರನ್ನು ವಂದಿಸಿದರು. 9ನೇ ತರಗತಿಯ ವಿದ್ಯಾರ್ಥಿನಿಯರಾದ ಕು.ಅಂಜಲಿ ಒಲಿವೆರಾ, ಕು|ಫಾತಿಮತ್ ಫಿಝಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here