ಗುರುಪ್ರಸಾದ್ ರೈ ಕುದ್ಕಾಡಿ ಮನೆ ದರೋಡೆ ಪ್ರಕರಣ-ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

0

ಪುತ್ತೂರು:6 ತಿಂಗಳ ಹಿಂದೆ ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ಜಿಲ್ಲಾ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ಪ್ರಕರಣದ ಆರೋಪಿಗಳಾಗಿರುವ ಕಾಞಂಗಾಡಿನ ಸನಲ್ ಮತ್ತು ವಿಟ್ಲ ಪೆರುವಾಯಿಯ ಸುಧೀರ್ ಮಣಿಯಾಣಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.ಕಳೆದ ಸೆ.6ರಂದು ತಡರಾತ್ರಿ ದರೋಡೆಕೋರರ ತಂಡ ಗುರುಪ್ರಸಾದ್ ರೈಯವರ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿ ದರೋಡೆ ಮಾಡಿತ್ತು.ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈಯವರನ್ನು ಹಗ್ಗ ಮತ್ತು ಬಟ್ಟೆಯಿಂದ ಕಟ್ಟಿ ಬಾಯಿಯನ್ನು ಬಿಗಿದು ಕತ್ತಿನ ಭಾಗಕ್ಕೆ ಮಾರಕಾಸ್ತ್ರಗಳನ್ನು ಇಟ್ಟು ಬೆದರಿಸಿ 30 ಸಾವಿರ ರೂ.ನಗದು ಮತ್ತು ಚಿನ್ನಾಭರಣವನ್ನು ದರೋಡೆ ಮಾಡಲಾಗಿತ್ತು.ಕಸ್ತೂರಿ ರೈಯವರನ್ನು ಬೆದರಿಸಿ ಅವರ ಕೈಯಿಂದಲೇ ಬೀಗದ ಕೀ ಪಡೆದುಕೊಂಡು ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿ ತಂಡ ಪರಾರಿಯಾಗಿತ್ತು.

ಹೋಗುವಾಗ ಗುರುಪ್ರಸಾದ್ ರೈ ಮತ್ತವರ ತಾಯಿಯ ಕಾಲು ಮುಟ್ಟಿ ನಮಸ್ಕರಿಸಿ, ಕಸ್ತೂರಿ ರೈಯವರಿಗೆ ಕುಡಿಯಲು ನೀರು ಕೊಟ್ಟು ಹೋಗಿದ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೆರುವಾಯಿಯ ಸುಧೀರ್ ಮಣಿಯಾಣಿ, ಕೇರಳದ ಇಚ್ಚಂಗೋಡು ಗ್ರಾಮದ ಪಚ್ಚಂಬಳದ ರವಿ, ಪೈವಳಿಕೆ ಸಮೀಪದ ಅಟ್ಟಿಗೋಳಿಯ ಕಿರಣ್, ಸೀತಂಗೋಳಿ ಸಮೀಪದ ಬಾಡೂರಿನ ವಸಂತ್, ಕೇರಳದ ಫೈಝಲ್ ಮತ್ತು ಕಾಸರಗೋಡಿನ ಎಡನಾಡ್ ಗ್ರಾಮದ ರಾಜೀವ ಗಾಂಧಿ ನಗರದ ಅಬ್ದುಲ್ ನಿಸಾರ್ ಎಂಬವರನ್ನು ಬಂಧಿಸಲಾಗಿತ್ತು.ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿ ಕಾಞಂಗಾಡಿನ ಸನಲ್ ಬಳಿಕ ಬಂಧಿತನಾಗಿದ್ದ.ಎಲ್ಲ 7 ಮಂದಿ ಆರೋಪಿಗಳೂ ನ್ಯಾಯಾಂಗ ಬಂಧನದಲ್ಲಿದ್ದರು.ಇದೀಗ ಆರೋಪಿಗಳಾದ ಸುಧೀರ್ ಮಣಿಯಾಣಿ ಮತ್ತು ಸನಲ್‌ಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ,ಚಂದ್ರಕಾಂತ್, ರಾಕೇಶ್ ಬಲ್ನಾಡು,ಮೋಹಿನಿ ವಾದಿಸಿದ್ದರು.

LEAVE A REPLY

Please enter your comment!
Please enter your name here