ಕೇವಲ 9 ತಿಂಗಳಲ್ಲಿ ತಾಲೂಕಿಗೆ 1476 ಕೋಟಿ ರೂ.ಅನುದಾನ ತಂದ ಖುಷಿ ಇದೆ: ಅಶೋಕ್ ರೈ
ಪುತ್ತೂರು: ಸರಕಾರ ಏನು ಕೊಟ್ಟಿದೆ ಎಂದು ಕೇಳುವವರಿಗೆ ಸರಿಯಾದ ಉತ್ತರ ಕೊಡಬೇಕಾದ ದಿನಗಳು ಇದಾಗಿವೆ. ಸರಕಾರದ 5 ಗ್ಯಾರಂಟಿಗಳು ಇಂದು ಪ್ರತಿಯೊಬ್ಬರಿಗೂ ತಲುಪಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಈ ಹಿಂದೆ ಸರಕಾರ ನಮಗೆ ಏನು ಕೊಟ್ಟಿದೆ? ಚುನಾವಣೆ ಬಂದಾಗ ಮನೆ ಬಾಗಿಲಿಗೆ ಬಂದು ಓಟು ಕೇಳುತ್ತೀರಿ ಗೆದ್ದ ಬಳಿಕ ನಮ್ಮನ್ನು ಮರೆತುಬಿಡುತ್ತೀರಿ ಎಂದು ಕೇಳುವ ಜನರಿಗೆ ಇಂದು ಎದೆ ತಟ್ಟಿ ಉತ್ತರ ಕೊಡಬೇಕಾದ ಅಗತ್ಯತೆ ಇದ್ದು ಸರಕಾರ ನಮಗಾಗಿ 5 ಗ್ಯಾರಂಟಿಗಳನ್ನು ಕೊಟ್ಟಿದ್ದು ಅದು ಜನರಿಗೆ ಅದರಲ್ಲೂ ಬಡವರಿಗೆ ತಲುಪಿದೆ ಎಂದು ಹೇಳಲು ಅತ್ಯಂತ ಹೆಮ್ಮೆಯಾಗುತ್ತಿದೆ. ಇದನ್ನು ನಮ್ಮ ಕಾರ್ಯಕರ್ತರು ಪ್ರತಿ ಮನೆಗೂ ಮುಟ್ಟಿಸುವ ಕೆಲಸವನ್ನು ಮಾಡಬೇಕು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈಯವರು ಹೇಳಿದರು.
ಅವರು ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 73 ಲಕ್ಷ 10 ಸಾವಿರದ ವಿವಿಧ ರಸ್ತೆ ಕಾಮಗಾರಿಗಳಿಗೆ ಉಜಿರೋಡಿಯಲ್ಲಿ ಫೆ.9ರಂದು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿಕೊಂಡ ಬಳಿಕ ನನ್ನ ಶಾಸಕತ್ವದ ಅವಧಿಯ ಕೇವಲ 9 ತಿಂಗಳಲ್ಲಿ ಪುತ್ತೂರು ತಾಲೂಕಿಗೆ 1476 ಕೋಟಿ ರೂಪಾಯಿ ಅನುದಾನವನ್ನು ತಂದುಕೊಟ್ಟಿದ್ದೇನೆ ಇದು ನನಗೆ ತುಂಬಾ ಹೆಮ್ಮೆ ಕೊಟ್ಟಿದೆ. ಇದೆಲ್ಲವೂ ನಿಮ್ಮೆಲ್ಲರ ಆಶೀರ್ವಾದದಿಂದ ಸಾಧ್ಯವಾಗಿದೆ. ಪುತ್ತೂರು ತಾಲೂಕಿನ ಸರ್ವತೋಮುಖ ಅಭಿವೃದ್ದಿಯೇ ನನ್ನ ಗುರಿಯಾಗಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು. ಕಾಂಗ್ರೆಸ್ ಸರಕಾರ ಬಡವರ ಪರ, ಬಡವರ ಅಭಿವೃದ್ದಿಗಾಗಿಯೇ ಇರುವ ಸರಕಾರವಾಗಿದೆ. ಸರಕಾರದ 5 ಗ್ಯಾರಂಟಿಗಳ ವಿಷಯವನ್ನು ಇಂದು ಪ್ರತಿ ಮನೆಗೆ ಮುಟ್ಟಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕು, ಇದರಲ್ಲಿ ಯಾವುದೆ ಉದಾಸಿನ ತೋರಬಾರದು ಎಂದು ಅವರು ನನ್ನಿಂದ ಶೇ..100ರಷ್ಟು ಸಾಧ್ಯವಾಗುತ್ತೆ ಅಂತ ಹೇಳಲಾರೆ ಆದರೆ ಪುತ್ತೂರಿನ ಅಭಿವೃದ್ದಿಯೇ ನನ್ನ 5 ವರ್ಷಗಳ ಕನಸಾಗಿದೆ ಅದನ್ನು ಮಾಡಿಯೇ ಮಾಡುತ್ತೇನೆ ಎಂದು ಶಾಸಕ ರೈ ಈ ಸಂದರ್ಭದಲ್ಲಿ ತಿಳಿಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈಯವರು ಮಾತನಾಡಿ, ಅಭಿವೃದ್ದಿ ವಿಚಾರದಲ್ಲಿ ಓರ್ವ ದೂರದೃಷ್ಟಿಯುಳ್ಳ ಶಾಸಕರು ನಮಗೆ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ. ಈಗಾಗಲೇ ತಾಲೂಕಿಗೆ 1476 ಕೋಟಿ ರೂ.ಅನುದಾನ ತಂದುಕೊಟ್ಟಿದ್ದಾರೆ. ಅದರಲ್ಲಿ ಒಳಮೊಗ್ರು ಗ್ರಾಮಕ್ಕೆ ಸುಮಾರು 93 ಲಕ್ಷ ರೂ.ವೆಚ್ಚದ ಕಾಮಗಾರಿಗಳಿಗೆ ಗುದ್ದಲಿಪೂಜೆ ಆಗಿದೆ. ಮುಂದೆಯೂ ನಾವೆಲ್ಲವರೂ ರೈಯವರಿಗೆ ಬೆಂಬಲವಾಗಿ ನಿಲ್ಲಬೇಕಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಕೆದಂಬಾಡಿ ಗ್ರಾಮ ಉಸ್ತುವಾರಿ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಸ್ವಾಗತಿಸಿ, ವಂದಿಸಿದರು. ಕುಂಬ್ರ ವರ್ತಕರ ಸಂಘದ ಅಧ್ಯಕ್ಷ, ಹೊಟೇಲ್ ಉದ್ಯಮಿ ರಫೀಕ್ ಅಲ್‌ರಾಯರವರು ಶಾಸಕರಿಗೆ ಹೂಗುಚ್ಚ, ಶಾಲು ಹಾಕಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಒಳಮೊಗ್ರು ಕಾಂಗ್ರೆಸ್ ವಲಯ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ಚಿತ್ರಾ, ಶಾರದಾ, ಕೆಪಿಎಸ್ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು, ಒಳಮೊಗ್ರು ಉಸ್ತುವಾರಿ ಶಶಿಕಿರಣ್ ರೈ ನೂಜಿಬೈಲು, ವಲಯ ಉಪಾಧ್ಯಕ್ಷ ಮಹಮ್ಮದ್ ಬೊಳ್ಳಾಡಿ, ಪಂಚಾಯತ್ ಮಾಜಿ ಸದಸ್ಯ ಯು.ಕೆ ಇಬ್ರಾಹಿಂ, ಮೊದೀನ್ ಉಜಿರೋಡಿ, ಜಗದೀಶ್ ಆಲಂಗೂರು, ಹರೀಶ್ ರೈ ಮುಗೇರು, ಕಮಲ್ ನೀರ್ಪಾಡಿ, ಅಬ್ದುಲ್ಲಾ ಬಾಳಯ, ಹಸೈನಾರ್ ಅಲಂಬಾಡಿ, ಇಲ್ಯಾಸ್ ಅಲಂಬಾಡಿ, ಆದಂಕುಂಞ ನೆಲ್ಲೊಡಿ, ಹಮೀದ್ ಉಜಿರೋಡಿ, ಬಾತೀಶ ಉಜಿರೋಡಿ, ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೈನ್ ಕೌಡಿಚ್ಚಾರ್, ಬಶೀರ್ ಕೌಡಿಚ್ಚಾರ್, ಡಾ.ಸತ್ಯವತಿ ಆಳ್ವ ಮುಗೇರ್, ಶರೀಫ್ ಮುಡಾಲ, ಸಂತೋಷ್ ರೈ, ಕೆ.ಮುಹಮ್ಮದ್, ಅಸೀನಾ, ನಾಫಿಯ, ಮಮ್ತಾಜ್, ಹಕೀಂ ಉಜಿರೋಡಿ, ಚಿತ್ರಾ ಉಜಿರೋಡಿ, ಮುಸ್ತಾಫ ಎಂಪವರ್, ಕಾಸಿಂ ಉಜಿರೋಡಿ, ಅಸ್ಮಾ ಗಟ್ಟಮನೆ, , ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಿದ್ದೀಕ್ ಸುಲ್ತಾನ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ, ಭೂನ್ಯಾಯ ಮಂಡಳಿಯ ಸದಸ್ಯ ಕೃಷ್ಣ ಪ್ರಸಾದ್ ಆಳ್ವ ಸಹಿತ ಹಲವು ಗಣ್ಯರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ರೂ.73 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿಪೂಜೆ
ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲತ್ತಡ್ಕ ಮಗಿರೆ ರಸ್ತೆ ರೂ. 5.05 ಲಕ್ಷ, ಕುಂಬ್ರ ಕೆ.ಐ.ಸಿ ರಸ್ತೆ ರೂ.5 ಲಕ್ಷ, ಇಡಿಂಜಿಲ ಕೈಕಾರ ರಸ್ತೆ ರೂ.20 ಲಕ್ಷ, ಶೇಖಮಲೆ ಬೊಳ್ಳಾಡಿ ರಸ್ತೆ ರೂ.8 ಲಕ್ಷ, ಅಡ್ಕ ಉಜಿರೋಡಿ ರಸ್ತೆ ರೂ.20 ಲಕ್ಷ, ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರ ಅಜ್ಜಿಕಲ್ಲು ರೂ.5 ಲಕ್ಷ, ಪರ್ಪುಂಜ ಮಾರಿಯಮ್ಮ ರಸ್ತೆ ರೂ. 5.05 ಲಕ್ಷ, ಇಡಿಂಜಿಲ ಕೈಕಾರ ಪರಿಶಿಷ್ಠ ಜಾತಿ ಕಾಲನಿ ರಸ್ತೆ ರೂ.10 ಲಕ್ಷ, ಕುಂಬ್ರ, ಉಜಿರೋಡಿ ರಸ್ತೆ ರೂ.15 ಲಕ್ಷ ಅನುದಾನ ನೀಡಲಾಗಿದ್ದು ಇದರ ಗುದ್ದಲಿಪೂಜೆಯನ್ನು ಶಾಸಕರು ನೆರವೇರಿಸಿದರು. ಇದರಲ್ಲಿ ಈಗಾಗಲೇ 20 ಲಕ್ಷ ರೂ.ರಸ್ತೆ ಅಭಿವೃದ್ಧಿ ಪೂರ್ಣಗೊಂಡಿರುತ್ತದೆ.
ಗ್ರಾಮಕ್ಕೆ 93 ಲಕ್ಷ ರೂ.ಅನುದಾನ
ಶಾಸಕರು ತನ್ನ ಮೊದಲ ಅವಧಿಯಲ್ಲಿ ಒಳಮೊಗ್ರು ಗ್ರಾಮಕ್ಕೆ ಒಟ್ಟು 93 ಲಕ್ಷ ರೂ. ಅನುದಾನವನ್ನು ನೀಡಿದ್ದು ಇದರಲ್ಲಿ ಈಗಾಗಲೇ 20 ಲಕ್ಷ ರೂ.ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು 73 ಲಕ್ಷದ ಕಾಮಗಾರಿಗಳಿಗೆ ಗುದ್ದಲಿಪೂಜೆ ನಡೆದಿದೆ. ಇನ್ನುಳಿದಂತೆ ಇನ್ನಷ್ಟು ರಸ್ತೆ ಅಭಿವೃದ್ದಿ ಸೇರಿದಂತೆ ವಿವಿದ ಅಭಿವೃದ್ದಿ ಕಾಮಗಾರಿಗಳಿಗೆ ಅರ್ಜಿ ಸಲ್ಲಿಕೆಯಾಗಿದ್ದು ಮುಂದಿನ ಹಂತದಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.
`ಶಾಸಕ ಅಶೋಕ್ ಕುಮಾರ್ ರೈ ಅವರು ತನ್ನ 8 ತಿಂಗಳ ಅವಧಿಯಲ್ಲಿ ಒಳಮೊಗ್ರು ಗ್ರಾಮಕ್ಕೆ ಬರೋಬ್ಬರಿ ರೂ.93ಲಕ್ಷ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ. ಮುಂದಿನ ಹಂತದಲ್ಲಿ ಇನ್ನಷ್ಟು ಅನುದಾನ ಕೊಡುವ ಭರವಸೆ ಕೊಟ್ಟಿದ್ದಾರೆ. ಗ್ರಾಮದ ಅಭಿವೃದ್ಧಿಯಲ್ಲಿ ವಿಶೇಷ ಮುತುವರ್ಜಿ ತೋರಿಸುತ್ತಿರುವ ಶಾಸಕರಿಗೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.’
ಅಶೋಕ್ ಪೂಜಾರಿ ಬೊಳ್ಳಾಡಿ,
ಅಧ್ಯಕ್ಷರು ಒಳಮೊಗ್ರು ವಲಯ ಕಾಂಗ್ರೆಸ್