ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ ಬನ್ನೂರು ನಿವಾಸಿ ಇಂಜಿನಿಯರ್ ಗೋಪಿನಾಥ್ ಶೆಟ್ಟಿ (62ವ) ಅವರು ಮಾ.13 ರ ನಸುಕಿನ ಜಾವ ನಿಧನರಾದರು. ನಸುಕಿನ ಜಾವ 2 ಗಂಟೆ ಸುಮಾರಿಗೆ ದಿಡೀರ್ ಅಸ್ವಸ್ಥಗೊಂಡು ನಿಧನ ಹೊಂದಿದ್ದಾರೆ. ರಾತ್ರಿ ಊಟ ಮಾಡಿ ಮಲಗಿದ ನಂತರ ಅವರ ಆರೋಗ್ಯದಲ್ಲಿ ಏರು ಪೇರು ಉಂಟಾಗಿದ್ದು, ಬಳಿಕ ಕೆಲವೇ ಕ್ಷಣಗಳಲ್ಲಿ ನಿಧನ ಹೊಂದಿರುವುದಾಗಿ ಅವರ ಆಪ್ತ ವಲಯದವರು ತಿಳಿಸಿದ್ದಾರೆ.
1986ರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಆರಂಭಗೊಂಡಿದ್ದು, 1987ರಲ್ಲಿ ಅದರ ಪ್ರಾಂಶುಪಾಲರಾಗಿ ಗೋಪಿನಾಥ್ ಶೆಟ್ಟಿಯವರು ನೇಮಕಗೊಂಡಿದ್ದರು ಅದಾದ ಬಳಿಕ ಸುದೀರ್ಘ 35 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 2022 ರಲ್ಲಿ ನಿವೃತ್ತರಾಗಿದ್ದರು. ಈ ಮೂಲಕ ವಿವೇಕಾನಂದ ಪಾಲಿಟೆಕ್ನಿಕ್ ನ ಆಧಾರ ಸ್ಥಂಭವಾಗಿ ಉತ್ತಮ ಶಿಕ್ಷಣ ಸಂಸ್ಥೆಯಾಗಿ ರೂಪಿಸುವಲ್ಲಿ ಗೋಪಿನಾಥ್ ಶೆಟ್ಟಿಯವರ ಪಾತ್ರ ಮಹತ್ವದ್ದು.ಪ್ರಸ್ತುತ ವಿವೇಕಾನಂದ ಫಾರ್ಮಸಿ ಕಾಲೇಜಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕೊರೋನಾ ಸಂದರ್ಭದಲ್ಲಿ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ನಡೆಸಿದ ಉದ್ಯೋಗ ನೈಪುಣ್ಯ ತರಬೇತಿಯಲ್ಲಿ 27 ವಿಷಯಗಳ ತರಬೇತಿಯನ್ನು 5000 ಮಂದಿಗೆ ನೀಡುವಲ್ಲಿ ಇವರ ಪ್ರಯತ್ನ ಬಹಳ. ಇವರು ಪ್ರಸ್ತುತ ಪುತ್ತೂರು ನಗರದ ಮಾನ್ಯ ಸಹಸಂಘ ಚಾಲಕರಾಗಿ ಜವಾಬ್ದಾರಿ ಹೊಂದಿದ್ದರು.