ಸಿಎಎ ವಿರೋಧಿಸಿ ಎಸ್‌ಡಿಪಿಐಯಿಂದ ಪ್ರತಿಭಟನೆ

0

ಪುತ್ತೂರು: ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾಸಸಭಾ ಸಮಿತಿ ವತಿಯಿಂದ ಮಾ.13ರಂದು ಸಂಜೆ ದರ್ಬೆ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಸಿದ್ದೀಕ್ ಪುತ್ತೂರು ಮಾತನಾಡಿ, ಸಿಎಎ ಜಾರಿಯಾದರೆ ಕೇವಲ ಮುಸ್ಲಿಮರಿಗೆ ಮಾತ್ರ ಸಮಸ್ಯೆಯಾಗುವುದಲ್ಲ. ಸಿಎಎ ಮುಂದುವರಿದ ಭಾಗವಾಗಿ ಎನ್‌ಪಿಆರ್, ಎನ್‌ಆರ್‌ಸಿ ಜಾರಿಗೆ ಬಂದಾಗ ದೇಶದ ಎಲ್ಲಾ ಜನರಿಗೂ ತೊಂದರೆಯಾಗಲಿದೆ. ಇದನ್ನು ಅರಿತುಕೊಂಡು ಎಲ್ಲರೂ ಇದರ ವಿರುದ್ದ ಪ್ರತಿಭಟಿಸಿ ಈ ಕರಾಳ ಕಾಯ್ದೆಯನ್ನು ರದ್ದು ಪಡಿಸಬೇಕಾಗಿದೆ ಎಂದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಹಿಂದೂ ಮತ್ತು ಮುಸ್ಲಿಮರ ನಡುವೆ ಗೋಡೆ ನಿರ್ಮಿಸುತ್ತಾ ಹಿಂದುತ್ವದ ಹೇರಿಕೆ ಮಾಡುತ್ತಿದೆ. ಸಿಎಎ ಕಾಯ್ದೆ ಇದರ ಭಾಗವಾಗಿದೆ. ಪಾಕಿಸ್ತಾನ, ಬಾಂಗ್ಲಾ ಮತ್ತು ಅಪಘನಿಸ್ತಾನದಿಂದ ವಲಸೆ ಬಂದಿರುವ ಮುಸ್ಲಿಂ ಸಮುದಾಯವನ್ನು ಹೊರತು ಪಡಿಸಿ ಉಳಿದ 6 ಧರ್ಮಗಳಿಗೆ ಮಾತ್ರ ಭಾರತರ ಪೌರತ್ವ ನೀಡುತ್ತಿದೆ. ಭಾರತಕ್ಕೆ ಶ್ರೀಲಂಕಾದಿಂದ, ರೋಹಿಂಗ್ಯಾದಿಂದಲೂ ವಲಸೆ ಬಂದಿದ್ದಾರೆ. ಆದರೆ ಅವರಿಗೆ ಪೌರತ್ವ ನೀಡುವ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಹೇಳಿದರು.
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಮಾತನಾಡಿ, ಸಿಎಎ ಕಾಯ್ದೆ ಜಾರಿಗೊಳಿಸಿ ಅದನ್ನು ತನ್ನ ಅಧಿಕಾರ ಪಡೆಯುವ ಮೆಟ್ಟಿಲುಗಳಾಗಿ ಮಾಡಿಕೊಳ್ಳುತ್ತಿದೆ. ಸಿಎಎ ಇಸ್ಲಾಂ ಧರ್ಮದ ವಿರುದ್ದ ಹೇರುವ ಕರಾಳ ಕಾಯ್ದೆಯಾಗಿದೆ. ಇದನ್ನು ಎಲ್ಲರೂ ಖಂಡಿಸಬೇಕಾಗಿದೆ. ಮುಸ್ಲಿಂ ವಿರೋಧಿ ಧೋರಣೆಗಳ ಕಾರಣದಿಂದ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ನಾಶಗೊಂಡಿರುವ ಬಿಜೆಪಿಯು ಸಿಎಎ ಕಾಯ್ದೆಯ ಕಾರಣದಿಂದ ಕೇಂದ್ರದಲ್ಲಿಯೂ ಆಡಳಿತ ಕಳೆದುಕೊಳ್ಳಲಿದೆ ಎಂದರು.
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇಬ್ರಾಹಿಂ ಹಾಜಿ ಸಾಗರ್ ಮಾತನಾಡಿ, ಕರಾಳ ಕಾಯಿದೆ ಜಾರಿ ಮಾಡಿರುವ ಕೇಂದ್ರ ಸರಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಪೇರಮುಗೇರು, ಖಜಾಂಜಿ ವಿಶ್ವನಾಥ ಪುಣ್ಚತ್ತಾರು, ನಗರ ಸಮಿತಿ ಅಧ್ಯಕ್ಷ ಅಶ್ರಫ್ ಬಾವಾ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here