ನಳಿನ್, ಡಿವಿಎಸ್‌ಗಿಲ್ಲ ಈ ಬಾರಿ ಅವಕಾಶ-ಡಿ.ವಿ.ಎಸ್. ಕಾಂಗ್ರೆಸ್‌ಗೆ?

0

ಪುತ್ತೂರು:ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿ ರಾಜ್ಯದ 27 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಬಿಜೆಪಿ ಹಾಲಿ ಸಂಸದರಾದ ಡಿ.ವಿ.ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲ್ ಸಹಿತ ಕೆಲವರಿಗೆ ಈ ಬಾರಿ ಟಿಕೆಟ್ ನಿರಾಕರಿಸಿದೆ. ಬಿಜೆಪಿ ಯುವ ಮೋರ್ಚಾದ ಮುಖಂಡರಾಗಿದ್ದ ಪ್ರವೀಣ್ ನೆಟ್ಟಾರು ಅವರ ಹತ್ಯೆ ಘಟನೆ ಬಳಿಕದ ಬೆಳವಣಿಗೆಗಳ ನಂತರ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಕೆಲವು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದರು.ಪ್ರವೀಣ್ ನೆಟ್ಟಾರು ಅವರ ಅಂತಿಮ ಯಾತ್ರೆ ಸಂದರ್ಭ ಆಗಮಿಸಿದ್ದ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನು ಅಲುಗಾಡಿಸುವ ಮೂಲಕ ಕಾರ್ಯಕರ್ತರ ಗುಂಪೊಂದು ತಮ್ಮ ಆಕ್ರೋಶ ಹೊರ ಹಾಕಿತ್ತು. ಕಾರ್ಯಕರ್ತರ ಅಸಮಾಧಾನ ಮುಂದುವರಿದು, ಈ ಬಾರಿ ದ.ಕ.ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿದ್ದವು.ಮಾತ್ರವಲ್ಲದೆ ಬ್ರಿಜೇಶ್ ಚೌಟ ಸಹಿತ ಕೆಲವರ ಹೆಸರು ದ.ಕ.ಕ್ಷೇತ್ರದ ಅಭ್ಯರ್ಥಿತನಕ್ಕೆ ಕೇಳಿ ಬಂದಿತ್ತು.ಆದರೂ, ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರು ಉತ್ತಮ ಅಭಿಪ್ರಾಯ ಹೊಂದಿರುವುದರಿಂದ ಕೊನೇ ಕ್ಷಣದಲ್ಲಿ ಅವರಿಗೇ ದ.ಕ.ಕ್ಷೇತ್ರದಲ್ಲಿ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿ ಬಂದಿದ್ದವು.ಪಕ್ಷದ ರಾಷ್ಟ್ರೀಯ ನಾಯಕರು ಎಲ್ಲವನ್ನೂ ತಿಳಿದುಕೊಂಡು ಅಭ್ಯರ್ಥಿಯ ಆಯ್ಕೆ ಮಾಡುತ್ತಾರೆ.ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ನಳಿನ್ ಕುಮಾರ್ ಕಟೀಲ್ ಅವರು ಪ್ರತಿಕ್ರಿಯಿಸಿದ್ದರು.ತಳಮಟ್ಟದಿಂದ ಬಂದ ಕಾರ್ಯಕರ್ತನಾಗಿರುವ ನನಗೆ ಪಕ್ಷ ಎಲ್ಲ ಅವಕಾಶವನ್ನೂ ನೀಡಿದೆ.ಹೊಸಬರು ಪಕ್ಷಕ್ಕೆ ಬರಬೇಕು.ಪಕ್ಷ ನಿಂತ ನೀರಾಗಬಾರದು.ಪಕ್ಷ ಟಿಕೆಟ್ ನೀಡಿಲ್ಲ ಎಂದ ಮಾತ್ರಕ್ಕೆ ಪಕ್ಷ ಕೈಬಿಟ್ಟಿದೆ ಎಂದರ್ಥವಲ್ಲ,ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶ ದೊರೆಯಲಿದೆ ಎಂದು ಕಟೀಲ್ ಹೇಳಿದ್ದರು.

ಡಿ.ವಿ.ಎಸ್.ಅವರಿಗೂ ಇಲ್ಲ ಅವಕಾಶ:
ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದರೂ ಆಗಿರುವ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೂ ಈ ಬಾರಿ ಸ್ಪಽಸಲು ಬಿಜೆಪಿ ಟಿಕೆಟ್ ನಿರಾಕರಿಸಿದೆ.ಈ ಕುರಿತು ಡಿ.ವಿ.ಸದಾನಂದ ಗೌಡ ಅವರು ಟ್ವೀಟ್ ಮೂಲಕ ತಮ್ಮ ಕ್ಷೇತ್ರದ ಮತದಾರರಿಗೆ ವಿದಾಯ ಹೇಳಿದ್ದಾರೆ. ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ದ.ಕ.,ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮಾಜಿ ಸಂಸದರೂ ಆಗಿರುವ ಪುತ್ತೂರಿನ ಮಾಜಿ ಶಾಸಕ ಡಿ.ವಿ.ಸದಾನಂದ ಗೌಡ ಅವರು,ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನನ್ನೆಲ್ಲಾ ಪ್ರೀತಿಯ ಬಂಧುಗಳೇ, ನನಗೆ ಕಳೆದ 10 ವರ್ಷಗಳ ಕಾಲ ಈ ಕ್ಷೇತ್ರದ ಸಂಸದನಾಗಿ ನಿಮ್ಮ ಕೆಲಸ ಮಾಡುವ ಅವಕಾಶ ಮಾಡಿಕೊಟ್ಟು ಆರ್ಶೀವಾದವನ್ನು ಮಾಡಿದ್ದೀರಿ.ನಾನು ನನ್ನ ಶಕ್ತಿ ಮೀರಿ ನಿಮ್ಮ ಸೇವೆಯನ್ನು ಮಾಡುವ ಪ್ರಯತ್ನ ಮಾಡಿದ್ದೇನೆ.ನಿಮ್ಮ ಆರ್ಶೀವಾದದಿಂದ ಕೇಂದ್ರದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಯಲ್ಲಿ 7 ವರ್ಷಗಳ ಕಾಲ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಸಹ ಕಲ್ಪಿಸಿದ್ದೀರಿ.ನಾನು ನಿಮ್ಮೆಲ್ಲರಿಗೂ ಚಿರಋಣಿ.ನಿಮ್ಮ ಜೊತೆ ಇನ್ನು ಮುಂದೆಯೂ ಇರುತ್ತೇನೆ. ಎಲ್ಲರಿಗೂ ನನ್ನ ಅಂತರಾಳದ ಹೃದಯ ತುಂಬಿದ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.

ಪುತ್ತೂರಿನಿಂದ ರಾಜಕೀಯ ಜೀವನ:
1989ರಲ್ಲಿ ಪುತ್ತೂರಿನಿಂದ ಮೊದಲ ಬಾರಿ ಬಿಜೆಪಿ ಶಾಸಕರಾಗಿ ಚುನಾಯಿತರಾಗಿದ್ದ ಡಿ.ವಿ.ಸದಾನಂದ ಗೌಡ ಬಳಿಕ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.ವಿಪಕ್ಷ ಉಪನಾಯಕನಾಗಿ,ಬಿಜೆಪಿ ರಾಜ್ಯಾಧ್ಯಕ್ಷರಾಗಿ,ರಾಜ್ಯದ ಮುಖ್ಯಮಂತ್ರಿಯಾಗಿ,ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದುರ.ದ.ಕ.ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ತಲಾ ಒಂದು ಬಾರಿ ಸಂಸದರಾಗಿ ಚುನಾಯಿತಾಗಿದ್ದ ಡಿ.ವಿ.ಯವರು ಬಳಿಕ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಚುನಾಯಿತಾಗಿದ್ದರು.2014,2029ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ನೇಮಕಗೊಂಡಿದ್ದುರ.ಕಾನೂನು ಸಚಿವರಾಗಿ,ರೈಲ್ವೇ ಸಚಿವರಾಗಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ,ಅಂಕಿ ಅಂಶ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಡಿ.ವಿ.ಸದಾನಂದ ಗೌಡರು ಕೆಲ ಸಮಯದ ಹಿಂದೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದರು:
ಇತ್ತೀಚೆಗಷ್ಟೆ ಚುನಾವಣಾ ಸಕ್ರಿಯ ರಾಜಕಾರಣದಿಂದ ಡಿ.ವಿ.ಎಸ್.ನಿವೃತ್ತಿ ಘೋಷಿಸಿದ್ದರು.ಅದಾದ ಬಳಿಕ ಆರ್.ಅಶೋಕ್ ಸಹಿತ ರಾಜ್ಯ ಬಿಜೆಪಿ ನಾಯಕರ ತಂಡವೊಂದು ಡಿ.ವಿ.ಯವರನ್ನು ಭೇಟಿಯಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸದೆ ಈ ಬಾರಿಯೂ ತಾವೇ ಸ್ಪಽಸುವಂತೆ ಮನವೊಲಿಸಿತ್ತು.ಡಿ.ವಿ.ಯವರೂ ಇದಕ್ಕೆ ಪೂರಕವಾಗಿ ಸ್ಪಂದಿಸಿ, ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಹಿಂಪಡೆದಿದ್ದರು.ಕೆಲ ದಿನಗಳ ಹಿಂದೆಯಷ್ಟೆ, ಈ ಬಾರಿ ಮತ್ತೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಚೆ ಹೊಂದಿರುವುದಾಗಿ ಹೇಳಿದ್ದ ಡಿ.ವಿ.ಸದಾನಂದ ಗೌಡ,ತನಗೆ ಟಿಕೆಟ್ ದೊರೆಯುವ ನಿರೀಕ್ಷೆ ಇದೆ.ಒಂದು ವೇಳೆ ಟಿಕೆಟ್ ದೊರೆಯದೇ ಇದ್ದರೆ ಮನಸ್ಸಿಗೆ ಸ್ವಲ್ಪ ನೋವಾಗಲಿದೆ ಎಂದೂ ಹೇಳಿದ್ದರು.ಆದರೆ, ಮಾ.13ರಂದು ಪಕ್ಷದ ಕೇಂದ್ರ ನಾಯಕರೇ ಖುದ್ದು ಡಿ.ವಿ.ಸದಾನಂದ ಗೌಡರಿಗೆ ಕರೆ ಮಾಡಿ ‘ಈ ಬಾರಿ ನಿಮಗೆ ಪಕ್ಷದ ಟಿಕೆಟ್ ನೀಡಲಾಗುವುದಿಲ್ಲ’ ಎಂದು ಹೇಳಿದ್ದಾರೆ.

ಡಿ.ವಿ.ಎಸ್. ಕಾಂಗ್ರೆಸ್‌ಗೆ?
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಣೆ ಬೆನ್ನಲ್ಲೇ, ಡಿ.ವಿ.ಸದಾನಂದ ಗೌಡ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ವ್ಯಾಪಕವಾಗಿ ಪ್ರಚಾರವಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪರ್ಕದಲ್ಲಿರುವ ಡಿ.ವಿ.ಸದಾನಂದ ಗೌಡ ಅವರು ಈ ಕುರಿತು ಚರ್ಚಿಸಿದ್ದಾರೆ.ಡಿಕೆಶಿಯವರೂ ಡಿ.ವಿ.ಯವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ ಎಂದೆಲ್ಲ ಸುದ್ದಿ ಹರಡಿದೆ.ಆದರೆ ಇದು ಖಚಿತವಾಗಿಲ್ಲ.

ಹಿಂದುತ್ವವೇ ಬದ್ಧತೆ-ಅಭಿವೃದ್ಧಿಯೇ ಆದ್ಯತೆ
ದ.ಕ.ದಂತಹ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಕ್ಕೆ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ನನ್ನ ಆಯ್ಕೆಯಾಗಿದೆ.ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯದ ಮೇರು ನಾಯಕ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲೆಯ ಶಾಸಕರಾದ ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಡಾ.ಭರತ್ ಶೆಟ್ಟಿ, ಡಿ.ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮತ್ತು ಜಿಲ್ಲೆಯ ಎಲ್ಲಾ ಹಂತದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ಪದಾಧಿಕಾರಿಗಳಿಗೆ ಮತ್ತು ಪ್ರೀತಿಯ ದೇವದುರ್ಲಭ ಕಾರ್ಯಕರ್ತರಿಗೆ ಈ ಸಂದರ್ಭದಲ್ಲಿ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಸಂಘ ಪರಿವಾರದ ಎಲ್ಲಾ ಹಿರಿಯರಿಗೆ, ಸ್ವಯಂ ಸೇವಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ತುಳುನಾಡಿನಲ್ಲಿ ನಾವು ವಿಶೇಷವಾಗಿ ದೈವ ದೇವರನ್ನು ಆರಾಧನೆ ಮಾಡಿಕೊಂಡು ಬಂದಿರುವವರು. ಈ ಮಣ್ಣಿಗೆ ಶಕ್ತಿ ಇರುವುದೇ ದೈವ ದೇವರುಗಳಿಂದ. ಮಣ್ಣಿಗೆ ವಿಶೇಷವಾಗಿ ಗೌರವ ನೀಡುವ ವ್ಯಕ್ತಿ ನಾನು. ಟಿಕೆಟ್ ಘೋಷಣೆ ಆದ ಕೂಡಲೇ ತಂದೆ ತಾಯಿಯ ಆಶಿರ್ವಾದ ಪಡೆದುಕೊಂಡು, ದೇವರ ಆಶೀರ್ವಾದ ಪಡೆದುಕೊಂಡು, ನಾನು ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧರ ಸ್ಮಾರಕಕ್ಕೆ ಬಂದು ದೇಶಕ್ಕಾಗಿ ಬಲಿದಾನ ಮಾಡಿದ ಮಣ್ಣಿನ ಮಕ್ಕಳಿಗೆ ಗೌರವ ಸಮರ್ಪಣೆ ಮಾಡಿದ್ದೇನೆ.ಈ ಅವಕಾಶ ಕಲ್ಪಿಸಿಕೊಟ್ಟ ಎಲ್ಲಾ ಹಿರಿಯರಿಗೆ ಮತ್ತು ಕಾರ್ಯಕರ್ತರಿಗೆ ನಾನು ಋಣಿಯಾಗಿದ್ದೇನೆ.ಹಿಂದುತ್ವವೇ ನನ್ನ ಬದ್ಧತೆ.ಅಭಿವೃದ್ಧಿಯೇ ಆದ್ಯತೆ.ಈ ಎರಡೂ ಆದ್ಯತೆ ಇಟ್ಟುಕೊಂಡು ಪಾರ್ಟಿಯ ಎಲ್ಲರ ಸಹಕಾರ ಪಡೆದುಕೊಂಡು ಕೆಲಸ ಮಾಡಿಕೊಂಡು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವತ್ತ ನಮ್ಮ ಸಂಕಲ್ಪದತ್ತ ಕೆಲಸ ಮಾಡಲಿದ್ದೇನೆ
– ಬ್ರಿಜೇಶ್ ಚೌಟ, ಬಿಜೆಪಿ ಅಭ್ಯರ್ಥಿ, ದ.ಕ. ಲೋಕಸಭಾ ಕ್ಷೇತ್ರ.

ಯಾವುದೇ ಅಪೇಕ್ಷೆ ಇಟ್ಟು ಪಕ್ಷಕ್ಕೆ ಬಂದವನಲ್ಲ ಪಕ್ಷದ ತೀರ್ಮಾನವನ್ನು ಸ್ವಾಗತಿಸುತ್ತೇನೆ
ದ.ಕ.ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ|ಬ್ರಿಜೇಶ್ ಚೌಟ ಅವರನ್ನು ಆಯ್ಕೆ ಮಾಡಿದೆ.ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಕಳೆದ ೧೫ ವರ್ಷಗಳಲ್ಲಿ ಬಿಜೆಪಿ ದೊಡ್ಡ ಅವಕಾಶಗಳನ್ನು ನೀಡಿದೆ. ಕಾರ್ಯಕರ್ತರು ಅಹೋರಾತ್ರಿ ದುಡಿದು ನನ್ನನ್ನು ಗೆಲ್ಲಿಸಿದ್ದಾರೆ.ಈ ಕ್ಷೇತ್ರದ ಮತದಾರ ದೇವರುಗಳು ಆಶೀರ್ವಾದ ಮಾಡಿದ್ದಾರೆ.೧೫ ವರ್ಷಗಳಲ್ಲಿ ಪ್ರಾಮಾಣಿಕ ರಾಜಕಾರಣ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ 1 ಲಕ್ಷ ಕೋಟಿಗೂ ಅಽಕ ಅನುದಾನ ತರುವಲ್ಲಿ ಯಶಸ್ವಿ ಆಗಿದ್ದೇನೆ.ಜಿಲ್ಲೆಯ ಅಭಿವೃದ್ಧಿಗೆ ಯೋಜನೆಗಳನ್ನು ಹಾಕುವ ಅವಕಾಶ ಪಕ್ಷದ ಹಿರಿಯರು ನೀಡಿದ್ದರು.ಅಂದಿನಿಂದ ಇಂದಿನವರೆಗೆ ಪಕ್ಷದ, ಸಂಘದ ಹಿರಿಯರು ನನ್ನನ್ನು ಬೆಳೆಸಿದ್ದಾರೆ.ನಾನು ಯಾವುದೇ ಅಪೇಕ್ಷೆ ಇಟ್ಟು ರಾಜಕಾರಣಕ್ಕೆ ಬಂದವನಲ್ಲ. ಪಕ್ಷಕ್ಕೆ ಹೊಸಬರು ಬರಬೇಕು, ಪಕ್ಷ ಬೆಳೆಯಬೇಕೆನ್ನುವ ದೃಷ್ಟಿಯಿಂದ ಈ ರೀತಿಯ ತೀರ್ಮಾನಗಳನ್ನು ಪಕ್ಷ ತೆಗೆದುಕೊಂಡಿದೆ. ಇದನ್ನು ನಾನು ಸ್ವಾಗತಿಸುತ್ತೇನೆ. ಸಂಸದನಾದ ಮೇಲೆ ರಾಜ್ಯದ ಉಪಾಧ್ಯಕ್ಷನನ್ನಾಗಿ ಮಾಡಿದರು. ಕೇರಳದ ಸಹಪ್ರಭಾರಿಯಾಗಿ 4 ವರ್ಷ, ರಾಜ್ಯದ ಬಿಜೆಪಿ ಅಧ್ಯಕ್ಷನಾಗಿ 4 ವರ್ಷ ಕೆಲಸ ಮಾಡುವ ದೊಡ್ಡ ಅವಕಾಶವನ್ನು ಪಾರ್ಟಿ ನೀಡಿದೆ. ಅತಿ ದೊಡ್ಡ ಜವಾಬ್ದಾರಿಯನ್ನು ನನ್ನ ಮೇಲೆ ಜವಾಬ್ದಾರಿ ಇಟ್ಟು ಕೊಟ್ಟಿದ್ದಾರೆ.ಹಿರಿಯರ ಅಪೇಕ್ಷೆ ಮತ್ತು ನಂಬಿಕೆಗೆ ಸರಿಯಾಗಿ ಕೆಲಸ ಮಾಡಿದ್ದೇನೆ ಎನ್ನುವ ವಿಶ್ವಾಸ ಇದೆ. ಕಾರ್ಯಕರ್ತರು ಮತ್ತು ಕ್ಷೇತ್ರದ ಜನ ಪೂರ್ಣ ಸಹಕಾರ ನೀಡಿದ್ದಾರೆ.ಅವರೆಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಪಾರ್ಟಿಯ ಎಲ್ಲಾ ಹಿರಿಯರು ಪೂರ್ಣ ಮಾರ್ಗದರ್ಶನ ಮಾಡಿದ್ದಾರೆ. ಕ್ಷೇತ್ರಕ್ಕೆ ಏನೆಲ್ಲಾ ಕೇಳಿದ್ದೇವೋ ಎಲ್ಲವನ್ನೂ ಕೊಡುವ ಕೆಲಸ ಆಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ವೇಗ ಪಡೆದಿದೆ. ಜಿಲ್ಲೆಯಲ್ಲಿ ಹಿಂದಿನ ಯಾವ ಲೋಕಸಭಾ ಸದಸ್ಯರು ಕೂಡ 15 ವರ್ಷಗಳ ಕಾಲ ಸಂಸದರಾಗಿ ಇರಲಿಲ್ಲ. ನನಗೆ ಸಹಕಾರ ನೀಡಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಪಾರ್ಟಿಯ ಹಿರಿಯರಿಗೆ, ಕಾರ್ಯಕರ್ತರಿಗೆ, ಮತದಾರ ದೇವರಿಗೆ, ಎಲ್ಲ ಇಲಾಖೆಯ ಅಽಕಾರಿಗಳಿಗೆ ಮತ್ತು ಮಾಧ್ಯಮ ಮಿತ್ರರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

6 ತಿಂಗಳ ಹಿಂದೆಯೇ ಹೇಳಿದ್ದೆ-ನಳಿನ್
ನಾನು ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದವನು. ಪಕ್ಷ ಏನು ಹೇಳುತ್ತದೋ ಅದನ್ನು ಮಾಡುವ ಜವಾಬ್ದಾರಿ ನನ್ನದು. 15 ವರ್ಷ ಕೊಟ್ಟಿರುವ ಅವಕಾಶವೇ ದೊಡ್ಡದು ಎಂದು ನಾನು ತಿಳಿದವನು.ಮುಂದಿನ ದಿನಗಳಲ್ಲಿ ಕಾಯಾ ವಾಚಾ ಮನಸಾ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತೇನೆ. ನಮ್ಮ ಮುಂದಿನ ಗುರಿ ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು, ಆ ನಿಟ್ಟಿನಲ್ಲಿ ಸಮರ್ಥ ಅಭ್ಯರ್ಥಿಯಾಗಿ ಬ್ರಿಜೇಶ್ ಚೌಟರನ್ನು ಆಯ್ಕೆ ಮಾಡಿದ್ದಾರೆ.ಅವರು ಸೇನೆಯಲ್ಲಿ ಕೆಲಸ ಮಾಡಿರುವವರು.ಯುವಕ, ನಮ್ಮ ಯೋಜನೆಗಳನ್ನು ಪೂರ್ಣ ಮಾಡುವ ಶಕ್ತಿ ಇರುವವರು. ಅವರನ್ನು ಗೆಲ್ಲಿಸಬೇಕು. ನನಗೆ ಯಾವ ರೀತಿಯ ಸಹಕಾರ ನೀಡಿದ್ದೀರೋ ಅದೇ ರೀತಿಯ ಸಹಕಾರವನ್ನು ಬ್ರಿಜೇಶ್ ಚೌಟರಿಗೂ ನೀಡಬೇಕು. ನಾನು ಅವರ ಜೊತೆಗೆ ನಿಂತು ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಓಡಾಟ ಮಾಡುತ್ತೇನೆ.ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಈ ಬಾರಿ 3 ಲಕ್ಷಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಬ್ರಿಜೇಶ್ ಚೌಟರನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದು ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here