ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಮಾ.15ರಂದು ಜರಗಿದ ಅಂತರ್ ಕಾಲೇಜು ಮಹಿಳೆಯರ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ್ ವಿನ್ನರ್ಸ್ ಆಗಿ ಹೊರ ಹೊಮ್ಮಿದರೆ, ಆಳ್ವಾಸ್ ಕಾಲೇಜು ಮೂಡಬಿದ್ರೆ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಮೂರನೇ ಸ್ಥಾನಿಯಾಗಿ ಸಂತ ಅಲೋಶಿಯಸ್ ಕಾಲೇಜು ಮಂಗಳೂರು, ಚತುರ್ಥ ಸ್ಥಾನಿಯಾಗಿ ಯೂನಿವರ್ಸಿಟಿ ಕ್ಯಾಂಪಸ್ ಗುರುತಿಸಿಕೊಂಡಿತು.
ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನ್ಯಾಯವಾದಿ ಹಾಗೂ ಮಾಜಿ ಕ್ರಿಕೆಟ್ ಆಟಗಾರ ನರಸಿಂಹ ಪ್ರಸಾದ್ ಮಾತನಾಡಿ, ಪ್ರತಿಭೆಗಳು ಎಳವೆಯಿಂದಲೇ ಉತ್ತಮ ತರಬೇತಿಯೊಂದಿಗೆ ಶಿಸ್ತನ್ನು ಮೈಗೂಡಿಸಿಕೊಂಡು ಕಠಿಣ ಪರಿಶ್ರಮಪಟ್ಟು ಆಭ್ಯಾಸ ಮಾಡಿದಾಗ ಯಶಸ್ಸು ಸಾಧ್ಯ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ|ಜೆರಾಲ್ಡ್ ಸಂತೋಷ್ ಡಿ’ಸೋಜ ಮಾತನಾಡಿ, ಕ್ರಿಕೆಟ್ ಪಟುಗಳಲ್ಲಿ ಫಿಟ್ನೆಸ್, ಟೆಕ್ನಿಕ್, ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಂಡಾಗ ಯಶಸ್ಸು ಸಾಧ್ಯ. ಮಹಿಳಾ ಕ್ರೀಡಾಪಟುಗಳು ಕೇವಲ ಅಂತರ್ ವಿಶ್ವವಿದ್ಯಾಲಯ ವನ್ನು ಪ್ರತಿನಿಧಿಸಿ ಸುಮ್ಮನಾಗುವುದಲ್ಲ.ತಮ್ಮ ಕನಸುಗಳನ್ನು ವಿಸ್ತರಿಸಿ, ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಭಾಗವಹಿಸಿ ಉತ್ತಮ ಭವಿಷ್ಯವನ್ನು ನಿಮ್ಮದಾಗಿಸಿಕೊಂಡು ಮೈಲಿಗಲ್ಲನ್ನು ಸ್ಥಾಪಿಸಿ ಎಂದರು.
ಅಧ್ಯಕ್ಷತೆ ವಹಿಸಿದ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೊ ಮಾತನಾಡಿ, ಯಾವುದೇ ಕ್ರೀಡೆ ಇರಲಿ, ಕ್ರೀಡಾಪಟುಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಬೇಕು. ಮಂಗಳೂರು ವಿ.ವಿ ಈ ಕ್ರಿಕೆಟ್ ಕೂಟವನ್ನು ಏರ್ಪಡಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತಮ ಅವಕಾಶವನ್ನು ಮಾಡಿ ಕೊಟ್ಟಿದೆ. ಕ್ರೀಡಾಪಟುಗಳು ಕಠಿಣ ಪರಿಶ್ರಮದೊಂದಿಗೆ ಯಶಸ್ವಿದೆಡೆಗೆ ಸಾಗುವತ್ತ ಮುಂದಡಿಯಿಡಿ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ವೀಕ್ಷಕ ಡಾ|ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಡಾ.ವಿಜಯ ಕುಮಾರ್ ಮೊಳೆಯಾರು ಸ್ವಾಗತಿಸಿದರು. ಫಿಲೋಮಿನಾ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಎಲ್ಯಾಸ್ ಪಿಂಟೊರವರು ವಿಜೇತರ ಪಟ್ಟಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ಸಹಕರಿಸಿದರು.
ಪುತ್ತೂರಿಗೆ ಶೀಘ್ರದಲ್ಲಿಯೇ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ..
ಕ್ರಿಕೆಟ್ ಅಂದರೆ ಫ್ಯಾಶನ್. ಪ್ರಸ್ತುತ ದಿನಗಳಲ್ಲಿ ಐಪಿಎಲ್ ನಂತಹ ಪಂದ್ಯಾಟಗಳಲ್ಲಿ ಮಿಂಚಲು ಸಾಕಷ್ಡು ಅವಕಾಶವಿದೆ. ಕ್ರೀಡಾಪಟುವಾಗಿ ಮಿಂಚಬೇಕಾದರೆ ಕ್ರೀಡಾಪಟುಗಳಲ್ಲಿ ಕಠಿಣ ಪರಿಶ್ರಮ ಹಾಗೂ ಬದ್ಧತೆಯನ್ನು ಮೈಗೂಡಿಸಿಕೊಳ್ಳಿ. ಕ್ರಿಕೆಟ್ ಪಟುಗಳಿಗೆ ಪೂರಕವಾಗಲೆಂದು ಪುತ್ತೂರಿನಲ್ಲಿ ಶೀಘ್ರದಲ್ಲಿ ಸುಸಜ್ಜಿತ ಕ್ರಿಕೆಟ್ ಮೈದಾನವು ಸ್ಥಾಪನೆಯಾಗಲಿದ್ದು ಇದಕ್ಕಾಗಿ ಸುಮಾರು 24 ಎಕರೆಯಷ್ಟು ಜಾಗವನ್ನು ಈಗಾಗಲೇ ಕಾದಿರಿಸಿದೆ. ಮುಂದಿನ ದಿನಗಳಲ್ಲಿ ಕೆ.ಎಸ್.ಸಿ.ಎ ಈ ಯೋಜನೆಯನ್ನು ಪರಿಪೂರ್ಣಗೊಳಿಸಲಿದೆ.
-ವಿಶ್ವನಾಥ ನಾಯಕ್, ಕಾರ್ಯದರ್ಶಿ,
ಯೂನಿಯನ್ ಕ್ರಿಕೆಟರ್ಸ್, ಪುತ್ತೂರು
ಪಂದ್ಯಾಕೂಟದ ಸರ್ವಾಂಗೀಣ ಆಟಗಾರ್ತಿಯಾಗಿ ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜಿನ ಲಕ್ಷ್ಮೀ, ಉತ್ತಮ ಬ್ಯಾಟರ್ ಆಗಿ ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜಿನ ಸ್ವರ್ಣಗೌರಿ, ಉತ್ತಮ ಬೌಲರ್ ಆಗಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸ್ನೇಹ ಹೊರಹೊಮ್ಮಿದರು.