ನೀತಿ ಸಂಹಿತೆ ಜಾರಿ ಹಿನ್ನೆಲೆ-ಗ್ರಾ.ಪಂ.ನೌಕರರ ಪ್ರತಿಭಟನೆ ಹಿಂತೆಗೆತ

0

ಪುತ್ತೂರು: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ(ಆರ್‌ಡಿಪಿಆರ್)ರಾಜ್ಯ ಸಮಿತಿ ಬೆಂಗಳೂರು ಇವರ ಕರೆಯಂತೆ ಗ್ರಾಮ ಪಂಚಾಯತ್ ನೌಕರರು ತಮ್ಮ ಮೂಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾ.1ರಿಂದ ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ನಡೆಸುತ್ತಿದ್ದ ಪ್ರತಿಭಟನೆಯನ್ನು ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಹಿಂತೆಗೆದುಕೊಂಡಿದ್ದಾರೆ.

ಗ್ರಾ.ಪಂ.ನೌಕರರಿಗೆ ಸಿ ಮತ್ತು ಡಿ ದರ್ಜೆಯ ವೇತನ ಶ್ರೇಣಿ ಜಾರಿಗೆ ತರಬೇಕು, ಜಿ.ಪಂ.ನಿಂದ ಅನುಮೋದನೆಗೆ ಬಾಕಿ ಇರುವ ನೌಕರರಿಗೆ ಅನುಮೋದನೆ ನೀಡಬೇಕು, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ನೇರ ನೇಮಕಾತಿ ಮಾಡದೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಆಯ್ಕೆ ಮಾಡಬೇಕು, ಪಂಚಾಯತ್ ನೌಕರರು ಮತ್ತು ಅವರ ಅವಲಂಬಿತರಿಗೆ ಸೂಕ್ತ ವೈದ್ಯಕೀಯ ಸವಲತ್ತು ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾ.1ರಿಂದ ರಾಜ್ಯಾದ್ಯಂತ ಗ್ರಾ.ಪಂ. ನೌಕರರು ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಸಾರ್ವಜನಿಕ ಕೆಲಸಗಳಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದರು. ಮಾ.16ರಿಂದ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ನೌಕರರು ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಕಳೆದ 16 ದಿನಗಳಿಂದ ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ನಡೆಸುತ್ತಿದ್ದ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಮುಂದಿನ ಹೋರಾಟದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.
-ಪುಷ್ಪಾ ಜಯಂತ್
ಅಧ್ಯಕ್ಷರು, ಆರ್‌ಡಿಪಿಆರ್ ಕಡಬ ತಾಲೂಕು ಸಮಿತಿ

LEAVE A REPLY

Please enter your comment!
Please enter your name here