ಪುತ್ತೂರು:ಚೆಂಡೆ,ವಾದ್ಯದೊಂದಿಗೆ,ಶಾಸಕರು ತಂದಿರುವ ಅನುದಾನದಲ್ಲಿನ ಕಾಮಗಾರಿಗಳ ಮಾಹಿತಿಯ ಬ್ಯಾನರೊಂದನ್ನು ತೋರಿಸುತ್ತಾ ಶಾಸಕರ ವಾರಿಯರ‍್ಸ್ ತಂಡ ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಕೋಷ್ಟದ ಸದಸ್ಯ ತಾರಿಗುಡ್ಡೆಯ ಜಯಾನಂದ ಕೆ.ಎಂಬವರ ಮನೆಗೆ ತೆರಳಿ ಶಾಸಕರು ತಂದ ಅನುದಾನ, ನಡೆದಿರುವ ಕಾಮಗಾರಿಗಳ ವಿವರಣೆ ನೀಡಿದ ವೇಳೆ ಅಲ್ಲಿ ಚರ್ಚೆ ಉಂಟಾಗಿ,ಮಾತಿನ ಚಕಮಕಿ ನಡೆದ ಘಟನೆ ಮಾ.17ರಂದು ಸಂಜೆ ನಡೆದಿದೆ.ಈ ಘಟನೆಗೆ ಸಂಬಂಧಿಸಿ ಜಯಾನಂದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪುತ್ತೂರು ಕ್ಷೇತ್ರಕ್ಕೆ ಶಾಸಕ ಅಶೋಕ್ ಕುಮಾರ್ ರೈಯವರು ಸುಮಾರು 1400 ಕೋಟಿ ರೂ.ಅನುದಾನ ತಂದು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೂ ಜಯಾನಂದ ಅವರು, ಕಾಮಗಾರಿ ನಡೆದಿಲ್ಲ.ಅನುದಾನ ಬಂದಿಲ್ಲ ಎಂದೆಲ್ಲ ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ಈ ಕುರಿತು ನಿರಂತರವಾಗಿ ವ್ಯಂಗ್ಯವಾಗಿ ಬರೆಯುತ್ತಿರುವುದಾಗಿ ವಾರಿಯರ್ಸ್ ತಂಡ ಅವರ ಮನೆಗೆ ಬ್ಯಾಂಡ್,ವಾದ್ಯದೊಂದಿಗೆ ತೆರಳಿ ಶಾಸಕರು ತಂದ ಅನುದಾನ,ನಡೆದ ಕಾಮಗಾರಿಗಳ ಬ್ಯಾನರ್ ಪ್ರದರ್ಶಿಸಿ ಮಾಹಿತಿ ನೀಡಲಾರಂಭಿಸಿದ ವೇಳೆ ಜಯಾನಂದ ಮತ್ತು ತಂಡದಲ್ಲಿದ್ದವರ ಮಧ್ಯೆ ಚರ್ಚೆ,ಮಾತಿನ ಚಕಮಕಿ ನಡೆಯಿತು.ಈ ವೇಳೆ ಮನೆಯಲ್ಲಿದ್ವವರು, ಮನೆಗೆ ಬಂದು ಏನು ನಿಮ್ಮ ದರ್ಬಾರು,ಫೇಸ್ ಬುಕ್‌ನಲ್ಲಿ ಬರೆದಿದ್ದರೆ ಅಲ್ಲಿಯೇ ಹೋಗಿ ಕೇಳಿ ಎಂದು ಹೇಳಿದ ಘಟನೆಯೂ ನಡೆಯಿತು.ಶಾಸಕರು ತಂದ ಅನುದಾನ ಮತ್ತು ಕಾಮಗಾರಿ ಕುರಿತು ಮಾಹಿತಿ ನೀಡಿದ ವಾರಿಯರ‍್ಸ್ ತಂಡ ಬಳಿಕ ಅಲ್ಲಿಂದ ನಿರ್ಗಮಿಸಿತು.
ಮನೆಗೆ ಅಕ್ರಮ ಪ್ರವೇಶಿಸಿ ಬೆದರಿಕೆ ಆರೋಪ ಜಯಾನಂದರಿಂದ ಪೊಲೀಸರಿಗೆ ದೂರು: ಈ ಘಟನೆ ಬಳಿಕ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಱಶ್ರೀ ಗುರುಕೃಪಾೞದ ಕೃಷ್ಣಪ್ಪ ಪೂಜಾರಿಯವರ ಪುತ್ರ ಜಯಾನಂದ ಕೆ.(41ವ.)ಅವರು ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ತಾನು ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಜಿಲ್ಲಾ ಸದಸ್ಯನಾಗಿದ್ದು ಮಾ.17ರಂದು ಸಂಜೆ 4.30ರ ವೇಳೆಗೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಂದರ್ಭದಲ್ಲಿ ನನ್ನ ಮನೆಯೊಳಗೆ ಏಕಾಏಕಿಯಾಗಿ ಪ್ರಜ್ವಲ್ ರೈ,ಸನತ್ ರೈ ಸಹಿತ ಸುಮಾರು 15 ಮಂದಿ, ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಬರೆದಿರುವ ಬ್ಯಾನರ್ ಪ್ರದರ್ಶಿಸುತ್ತಾ, ಚೆಂಡೆಗಳನ್ನು ಜೋರಾಗಿ ಬಡಿಯುತ್ತಾ ಅಕ್ರಮ ಪ್ರವೇಶ ಮಾಡಿ ನನಗೆ ಹಾಗೂ ನನ್ನ ವೃದ್ಧ ತಾಯಿ, ಪತ್ನಿ ಹಾಗೂ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಮನೆಯ ಗೋಡೆಗಳಿಗೆ ಕಾಲಿನಿಂದ ಒದ್ದು ಅಸಭ್ಯ ವರ್ತನೆ ತೋರಿದ್ದಾರೆ.ನೀನು ಭಾರೀ ಫೇಸ್‌ಬುಕ್‌ನಲ್ಲಿ ಬಿಜೆಪಿ ಬಗ್ಗೆ ಬರೆಯುತ್ತೀಯಾ ಎಂದು ಗದರಿಸಿ, ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆಯೊಡ್ಡಿದ್ದಾರೆ.ಇದರಿಂದಾಗಿ ನಾನು ಮಾನಸಿಕವಾಗಿ ನೊಂದುದಲ್ಲದೆ,ಜೀವಭಯದಿಂದ ಬದುಕುವಂತಾಗಿದೆಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ದೂರು ಸ್ವೀಕರಿಸಿರುವ ಪೊಲೀಸರು ಸೆಕ್ಷನ್ 448,143,147,504,506,149ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತಿಲ, ಬಿಜೆಪಿ ನಾಯಕರ ಭೇಟಿ: ಜಯಾನಂದ ಅವರ ಮನೆಗೆ ಅರುಣ್ ಕುಮಾರ್ ಪುತ್ತಿಲ, ಪಿ.ಜಿ.ಜಗನ್ನಿವಾಸ್ ರಾವ್ ಸಹಿತ ಬಿಜೆಪಿ ಪ್ರಮುಖರು ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಘಟನೆಯನ್ನು ಖಂಡಿಸಿದರು.
ಶಾಸಕರು ತಂದ ಅನುದಾನ, ಕಾಮಗಾರಿಗಳ ವಿವರ ಫ್ಲೆಕ್ಸ್ ಓದಿಸಿ ಎಚ್ಚರಿಕೆ ನೀಡಿ ಬಂದಿದ್ದಾರೆ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಶೋಕ್ ಕುಮಾರ್ ರೈಯವರು ಶಾಸಕರಾದ 10 ತಿಂಗಳಿನಲ್ಲಿ ಅಭಿವೃದ್ಧಿಯ ಪರ್ವವನ್ನೇ ನಡೆಸಿದ್ದಾರೆ.ಸುಮಾರು 1474.29 ಕೋಟಿ ರೂಪಾಯಿಗಳ ದಾಖಲೆಯ ಅನುದಾನವನ್ನು ಪುತ್ತೂರು ಕ್ಷೇತ್ರಕ್ಕೆ ಬಿಡುಗಡೆ ಮಾಡಿಸಿದ್ದಾರೆ.ಈ ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ವ್ಯಕ್ತಪಡಿಸುವ ರೀತಿಯಲ್ಲಿ ತಾರಿತ್ತಡಿ ನಿವಾಸಿ ಜಯಾನಂದ ಬಂಗೇರ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ವ್ಯಂಗ್ಯ ರೀತಿಯಲ್ಲಿ ಬರಹಗಳನ್ನು ಬರೆದು ಅನುದಾನ ಬಿಡುಗಡೆ ಆಗಿಲ್ಲ,ಕಾಮಗಾರಿಗಳ ವಿವರ ಕೊಡಿ ಎಂಬುದಾಗಿ ಪೋಸ್ಟ್‌ಗಳನ್ನು ಹಾಕುತ್ತಿದ್ದುದನ್ನು ಗಮನಿಸಿದ ಶಾಸಕರ ಅಭಿಮಾನಿ ಬಳಗದ ಸದಸ್ಯರು ಬ್ಯಾಂಡ್ ಮೂಲಕ ಜಯಾನಂದರ ಮನೆಗೆ ತೆರಳಿ ಕಾಮಗಾರಿಗಳ ವಿವರದ ಫ್ಲೆಕ್ಸ್ ಅನ್ನು ಓದಿಸಿ,ಇನ್ನು ಮುಂದೆ ಅಪಪ್ರಚಾರ ಮಾಡಬಾರದು ಎಂಬುದಾಗಿ ಎಚ್ಚರಿಕೆ ನೀಡಿ ಬಂದಿರುತ್ತಾರೆ ಎಂದು, ಜಯಾನಂದ ಅವರ ಮನೆಗೆ ಹೋದ ತಂಡದವರ ಪರವಾಗಿ ಸಾಮಾಜಿಕ ಜಾಲ ತಾಣದಲ್ಲಿ ವರದಿ ಪ್ರಸಾರವಾಗಿದೆ.