ಪುತ್ತೂರು: ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಶಾಖೆಗಳನ್ನನು ಹೊಂದಿರುವ ಕೃಷಿಕರ ಸಹಕಾರ ಸಂಘ ನಿಯಮಿತ ಮಂಗಳೂರು ಇದರ ನೂತನ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ಸವಣೂರು ಕೆ.ಸೀತಾರಾಮ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳೂರು ಕೃಷಿಕರ ಸಹಕಾರ ಸಂಘದ (ಮಾಸ್ ಲಿಮಿಟೆಡ್) ಅಧ್ಯಕ್ಷರಾಗಿದ್ದ ಭಾಸ್ಕರ್ ಕೋಟ್ಯಾನ್ ವೈಯುಕ್ತಿಕ ಕಾರಣಗಳಿಂದ ಎರಡು ತಿಂಗಳ ಹಿಂದೆ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸವಣೂರು ಕೆ.ಸೀತಾರಾಮ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಎಲ್ಲಾ ನಿರ್ದೇಶಕರ ಉಪಸ್ಥಿತಿಯಲ್ಲಿ ಅಧ್ಯಕ್ಷರಾಗಿ ಸವಣೂರು ಕೆ.ಸೀತಾರಾಮ ರೈ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಚುನಾವಣಾಧಿಕಾರಿಯಾಗಿದ್ದ ಸಹಕಾರಿ ಇಲಾಖೆಯ ಮಂಗಳೂರಿನ ಸಹಾಯಕ ನಿಬಂಧಕ ವಿಲಾಸ್ ಉಪಸ್ಥಿತಿಯಲ್ಲಿ ಈ ಆಯ್ಕೆ ನಡೆದಿದ್ದು, ಮುಂದಿನ 4 ವರ್ಷಗಳ ಅವಧಿಗೆ ಸವಣೂರು ಸೀತಾರಾಮ ರೈ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಾಲಿ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದ ಸವಣೂರು ಸೀತಾರಾಮ ರೈ ತಮ್ಮ ಪದವಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸವಣೂರು ಕೆ.ಸೀತಾರಾಮ ರೈ ಈ ಹಿಂದೆ 2022ರ ನ.21 ರಂದು ಮಾಸ್‌ಗೆ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ನಿತ್ಯಾನಂದ ಮುಂಡೋಡಿ ಸೇರಿದಂತೆ ಸಂಘದ ನಿರ್ದೇಶಕರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.