ಪುತ್ತೂರು:2020ರಲ್ಲಿ ಪಾಣಾಜೆಯಲ್ಲಿ ಅಟೋ ರಿಕ್ಷಾ ಮತ್ತು ಮಾರುತಿ ಒಮ್ನಿ ನಡುವೆ ಅಪಘಾತ ಸಂಭವಿಸಿ ರಿಕ್ಷಾ ಪ್ರಯಾಣಿಕರೋರ್ವರು ಓರ್ವ ಮೃತಪಟ್ಟು ಕೆಲವರು ಗಾಯಗೊಂಡಿದ್ದ ಪ್ರಕರಣದ ಆರೋಪಿ ಅಟೋ ರಿಕ್ಷಾ ಚಾಲಕನಿಗೆ ನ್ಯಾಯಾಲಯ ಜೈಲುಶಿಕ್ಷೆ, ದಂಡ ವಿಧಿಸಿ ತೀರ್ಪು ನೀಡಿದೆ.
2020ರ ದಶಂಬರ್ 5ರಂದು ಬೆಳಿಗ್ಗೆ ಪಾಣಾಜೆ ಗ್ರಾಮದ ಸೂರಂಬೈಲು ಎಂಬಲ್ಲಿ,ಆರ್ಲಪದವು ಕಡೆಯಿಂದ ಪಾಣಾಜೆ ಕಡೆಗೆ ಸಂಚರಿಸುತ್ತಿದ್ದ ಅಟೋ ರಿಕ್ಷಾ (ಕೆ.ಎಲ್.14 ಜೆ.6951)ಮತ್ತು ಆರ್ಲಪದವು ಕಡೆಗೆ ಸಂಚರಿಸುತ್ತಿದ್ದ ಮಾರುತಿ ಒಮ್ನಿ ಕಾರು(ಕೆ.ಎ.21-ಪಿ:2807)ಮಧ್ಯೆ ಅಪಘಾತ ಸಂಭವಿಸಿತ್ತು.ಪರಿಣಾಮ ಒಮ್ನಿ ಚಾಲಕ ಕೃಷ್ಣಪ್ರಕಾಶ್, ಅಟೋ ರಿಕ್ಷಾದಲ್ಲಿದ್ದ ರಾಮ, ವಿಶ್ವನಾಥ, ರಾಘವೇಂದ್ರ ಎಂಬವರಿಗೆ ಗಾಯಗಳಾಗಿತ್ತು.ರಿಕ್ಷಾ ಚಾಲಕ ಮೊಹಮ್ಮದ್ ಎಂಬವರಿಗೂ ಗಾಯವಾಗಿತ್ತು.ರಿಕ್ಷಾದಲ್ಲಿದ್ದು, ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ರಾಮ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತರುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದರು.ಇತರ ಗಾಯಾಳುಗಳು ಬಳಿಕ ಚೇತರಿಸಿಕೊಂಡಿದ್ದರು.
ಘಟನೆಗೆ ಸಂಬಂಧಿಸಿ ರಿಕ್ಷಾ ಚಾಲಕ ಮೊಹಮ್ಮದ್ ಎಂ.ಕೆ.ಕರ್ಮಂತೋಡಿ,ಕಾರಡ್ಕ ಎಂಬಾತನ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಕರ್ನಾಟಕದ ಪರವಾನಿಗೆ ಇಲ್ಲದೆ ತನ್ನ ಅಟೋ ರಿಕ್ಷಾವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಮಾರುತಿ ಒಮ್ನಿಗೆ ಡಿಕ್ಕಿ ಹೊಡೆದ ಪರಿಣಾಮ ಅನಾಹುತ ಸಂಭವಿಸಿರುವುದಾಗಿ ಆರೋಪಿ ವಿರುದ್ಧ ಪೊಲೀಸರು ಕಲಂ 279,338,304(ಎ)ಐಪಿಸಿ ಮತ್ತು ಆರ್‌ಆರ್ ರೂಲ್ 7 ಜೊತೆಗೆ 177 ಐಎಂವಿ ಆ್ಯಕ್ಟ್ ಹಾಗೂ ಕಲಂ 66 ಜೊತೆಗೆ 192(ಎ)ಐಎಂವಿ ಆ್ಯಕ್ಟ್‌ನಡಿ ಆರೋಪಿ ಶಿಕ್ಷಾರ್ಹ ಅಪರಾಧವೆಸಗಿರುವುದಾಗಿ ಪುತ್ತೂರು ಗ್ರಾಮಾಂತರ ಠಾಣೆಯ ಆಗಿನ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಿಯಾರವಿ ಜೊಗ್ಲೇಕರ್ ಅವರು ಆರೋಪಿ ರಿಕ್ಷಾ ಚಾಲಕನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಸೆಕ್ಷನ್ 279 ಐಪಿಸಿಯಡಿಯ ಅಪರಾಧಕ್ಕಾಗಿ 6 ತಿಂಗಳ ಸಾದಾ ಸೆರೆಮನೆ ವಾಸ ಮತ್ತು 1 ಸಾವಿರ ರೂ.ದಂಡ ವಿಧಿಸಲಾಗಿದೆ.ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಜೈಲು ಶಿಕ್ಷೆ ಅನುಭವಿಸಬೇಕು.ಸೆಕ್ಷನ್ 338 ಐಪಿಸಿಯಡಿಯ ಅಪರಾಧಕ್ಕಾಗಿ 1 ವರ್ಷ ಸಾದಾ ಸೆರೆಮನೆ ವಾಸ ಮತ್ತು 1 ಸಾವಿರ ರೂ.ದಂಡ.ದಂಡ ತೆರಲು ತಪ್ಪಿದರೆ ಮತ್ತೆ ಮೂರು ತಿಂಗಳ ಸೆರೆಮನೆ ವಾಸ ಅನುಭವಿಸಬೇಕು.ಸೆಕ್ಷನ್ 304(ಎ)ಅಪರಾಧಕ್ಕಾಗಿ ಒಂದು ವರ್ಷ ಸಾದಾ ಸೆರೆಮನೆ ವಾಸ ಮತ್ತು 5 ಸಾವಿರ ರೂ.ದಂಡ ವಿಧಿಸಲಾಗಿದೆ.ದಂಡ ತೆರಲು ತಪ್ಪಿದಲ್ಲಿ ಮತ್ತೆ ಮೂರು ತಿಂಗಳ ಸೆರೆಮನೆ ವಾಸ ಅನುಭವಿಸಬೇಕು.
ಸೆಕ್ಷನ್ 66 ಜೊತೆಗೆ 192(ಎ)ಐಎಂವಿ ಆ್ಯಕ್ಟ್ನಡಿ 6 ತಿಂಗಳ ಸೆರೆಮನೆ ವಾಸ ಮತ್ತು 10 ಸಾವಿರ ರೂ.ದಂಡ ವಿಧಿಸಲಾಗಿದೆ.ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸೆರೆಮನೆ ವಾಸ ಅನುಭವಿಸಬೇಕು.ಆರ್‌ಆರ್ ರೂಲ್ 7 ಜೊತೆಗೆ 111 ಐಎಂವಿ ಆ್ಯಕ್ಟ್‌ನಡಿಯ ಅಪರಾಧಕ್ಕಾಗಿ ರೂ.500 ದಂಡ ವಿಧಿಸಲಾಗಿದ್ದು ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಸೆರೆಮನೆ ವಾಸ ಅನುಭವಿಸಬೇಕು.ಎಲ್ಲ ಶಿಕ್ಷೆಗಳನ್ನೂ ಏಕಕಾಲದಲ್ಲಿ ಅನುಭವಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಚೇತನಾದೇವಿ ಅವರು ವಾದಿಸಿದ್ದರು.