ಪುರಾತನ ಬಲಮುರಿ ಮಹಾಗಣಪತಿ, ಶ್ರೀ ಶಾಸ್ತಾರ, ಶ್ರೀ ಪಾರ್ಥಸಾರಥಿ ಸಾನಿಧ್ಯವಿರುವ ಏಕೈಕ ಕ್ಷೇತ್ರ
800 ವರ್ಷಗಳ ಪುರಾತನ ಸರ್ವಜ್ಞಪೀಠವಿರುವ ಕ್ಷೇತ್ರ
80ವರ್ಷಗಳ ಹಿಂದೆ ನಡೆದ ವೈಭವದ ಜಾತ್ರೆಗೆ ಮತ್ತೊಮ್ಮೆ ಮೆರಗು
8 ದಿನ ಬ್ರಹ್ಮಕಲಶೋತ್ಸವ – 5 ದಿನ ಜಾತ್ರೋತ್ಸವ
ಪುತ್ತೂರು: ಶ್ರೀಮದ್ ಜಗದ್ಗುರು ಶ್ರೀ ಮಧ್ವಾಚಾರ್ಯರು ಚಾತುರ್ಮಾಸ ಆಚರಿಸಿದ ಪುಣ್ಯಕ್ಷೇತ್ರವಾಗಿರುವ ಸುಮಾರು 3ಸಾವಿರ ವರ್ಷಗಳ ಇತಿಹಾಸ ಇರುವ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಶ್ರೀ ಜನಾರ್ದನ ದೇವರ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ನೂತನ ಧ್ವಜಸ್ಥಂಭ, ಬ್ರಹ್ಮರಥ ಸಮರ್ಪಣೆ ಮತ್ತು ಬ್ರಹ್ಮರಥೋತ್ಸವವು ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಮತ್ತು ಮಾರ್ಗದರ್ಶಕ ಶ್ರೀ ಪೇಜಾವರ ಅಧೋಕ್ಷಜ ಮಾಧೀಶ ಶ್ರೀ ವಿಶ್ವಪ್ರಸನ್ನ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮಾ.20 ರಿಂದ ಏ.2ರ ತನಕ ಜರುಗಲಿದೆ.
ಪತ್ರಿಕಾಗೋಷ್ಟಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣರಾಜ ಎರ್ಕಡಿತ್ತಾಯ ಮಾತನಾಡಿ, ಸುಮಾರು 3ಸಾವಿರ ವರ್ಷಗಳ ಇತಿಹಾಸವುಳ್ಳ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಈ ಭಾರಿ 8 ದಿನಗಳ ಬ್ರಹ್ಮಕಲಶೋತ್ಸವ ಮತ್ತು 5 ದಿನ ಜಾತ್ರೆ ಕಾರ್ಯಕ್ರಮ ವೈಭವದಿಂದ ನಡೆಯಲಿದೆ ಎಂದು ಹೇಳಿದ ಅವರು ಮಾ.20 ರಿಂದ ಏ.2 ತನಕ ಪ್ರತಿ ದಿನ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಮಾ.20ಕ್ಕೆ ಕ್ಷೇತ್ರ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ಬಳಿಕ ವಾಸ್ತು ಪೂಜಾ ಬಲಿ ಸಹಿತ ವಿವಿಧ ಹೋಮಾಧಿಗಳು ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆ ಮಹಾಗಣಪತಿ ಹೋಮ ನಡೆಯಲಿದೆ. ಮಾ.21ಕ್ಕೆ ಹೋಮ ಕಲಶಾಭಿಷೇಕ, ಸಂಜೆ ದುರ್ಗಾಪೂಜೆ ಸುದರ್ಶನ ಹೋಮ ನಡೆಯಲಿದೆ. ಮಾ.22ಕ್ಕೆ ಸಂಜೆ ಶ್ರೀಚಕ್ರಪೂಜೆ ಸಹಿತ ವಿವಿಧ ಹೋಮಾದಿಗಳು ನಡೆಯಲಿದೆ. ಮಾ.23 ಮತ್ತು 24ರಂದು ವಿವಿಧ ಹೋಮಾಧಿಗಳು ನಡೆಯಲಿದೆ. ಮಾ.25ಕ್ಕೆ ಶ್ರೀ ಜನಾರ್ದನ ದೇವರ ಪುನಃಪ್ರತಿಷ್ಠೆ, ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠೆ ಅಷ್ಟಬಂಧಕ್ರಿಯೆ ಕಲಶಾಭಿಷೇಕ, ಶಿಖರ ಪ್ರತಿಷ್ಠೆ ನಡೆಯಲಿದೆ. ಮಾ.26ಕ್ಕೆ ದಿಕ್ಪಾಲ ದೇವತೆಗಳ ಪ್ರತಿಷ್ಠೆ, ಮಹಾಬಲಿ ಪೀಠ ಪ್ರತಿಷ್ಠೆ, ಸಂಜೆ ಸೋಮಾನಪೂಜೆ ನಡೆಯಲಿದೆ. ಮಾ.27ಕ್ಕೆ ವಿವಿಧ ಹೋಮಾದಿಗಳು ನಡೆಯಲಿದೆ. ಮಾ.28ಕ್ಕೆ ಧ್ವಜ ಸ್ಥಂಭ ಮತ್ತು ವಾಹನ ಪ್ರತಿಷ್ಠೆ, ಶ್ರೀ ಜನಾರ್ದನ ದೇವರಿಗೆ ಬ್ರಹ್ಮಕಲಶಾಭಿಷೇಕ, ನೂತನ ಬ್ರಹ್ಮರಥ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಮಾ.29 ರಿಂದ ಜಾತ್ರೋತ್ಸವ ಆರಂಭಗೊಂಡು ಶ್ರೀ ದೇವರ ಬಲಿ ಹೊರಟು ಶ್ರೀ ಭೂತಬಲಿ ಉತ್ಸವ, ನೃತ್ಯ ಬಲಿ ನಡೆಯಲಿದೆ ಮಾ.30ಕ್ಕೆ ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಶ್ರೀ ದೆವರ ಬಲಿ ಉತ್ಸವ ಬ್ರಹ್ಮರಥೋತ್ಸವ ನಡೆಯಲಿದೆ. ಏ.1ಕ್ಕೆ ಸಂಜೆ ಶ್ರೀ ದೇವರ ಬಲಿ ಹೊರಟು ಆರಾಟ ಮಹೋತ್ಸವ, ಬಟ್ರುಪ್ಪಾಡಿ ಕೆರೆಯಲ್ಲಿ ಅವಭೃತ ಸ್ನಾನ, ಧ್ವಜಾವರೋಹಣ ನಡೆಯಲಿದೆ. ರಾತ್ರಿ ದೈವಗಳ ಭಂಡಾರ ತೆಗೆದು ಏ.2ರಂದು ಪಿಲಿಚಾಮುಂಡಿ ದೈವದ ನೇಮ ನಡೆಯಲಿದೆ. ಸಂಜೆ ಶ್ರೀ ರಕ್ತೇಶ್ವರಿ ದೈವಕ್ಕೆ ತಂಬಿಲ ಸೇವೆ ನಡೆಯಲಿದೆ ಎಂದವರು ಹೇಳಿದರು.
ಸಾಂಸ್ಕೃತಿ, ಸಭಾ ಕಾರ್ಯಕ್ರಮ:
ಮಾ.20ಕ್ಕೆ ರಾತ್ರಿ ಗಂಟೆ 7 ರಿಂದ ಜಗದೀಶ ಆಚಾರ್ಯ ಪುತ್ತೂರು ಇವರಿಂದ ಭಕ್ತಿ ರಸಮಂಜರಿ, ಮಾ.21ಕ್ಕೆ ಸಂಜೆ ಗಂಟೆ 6 ರಿಂದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ಮಠ ಶ್ರೀ ಮಧ್ವಾಚಾರ್ಯ ಮೂಲ ಸಂಸ್ಥಾನದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ರಾತ್ರಿ ಗಂಟೆ 8 ರಿಂದ ಸಾಂಸ್ಕೃತಿಕ ವೈಭವದಲ್ಲಿ ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ಪುತ್ತೂರು ಇವರಿಂದ ಭರತನಾಟ್ಯ – ನೃತ್ಯಾರ್ಪಣಂ ಮತ್ತು ನೃತ್ಯ ರೂಪಕ ‘ಶ್ರೀನಿವಾಸ ಕಲ್ಯಾಣ’ ನಡೆಯಲಿದೆ. ಮಾ.22ಕ್ಕೆ ರಾತ್ರಿ ಗಂಟೆ 7ರಿಂದ ಯಕ್ಷಸಾರಥಿ ಯಕ್ಷಕಲಾ ಬಳಗದಿಂದ ಶ್ರೀ ಏಕಾದಶಿ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ. ಮಾ.23ಕ್ಕೆ ಸಂಜೆ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ರಾತ್ರಿ ಗಂಟೆ 8 ರಿಂದ ಡಾ| ಕಿರಣ್ ಕುಮಾರ್ ಗಾನಸಿರಿ ಕಲಾಕೇಂದ್ರ ಇವರಿಂದ ಗಾನಸಿರಿ ಸ್ವರ ಮಾಧುರ್ಯ ಕಾರ್ಯಕ್ರಮ ನಡೆಯಲಿದೆ. ಮಾ.24ಕ್ಕೆ ಸಂಜೆ ‘ಶಶಿಪ್ರಭೆ ಪರಿಣಯ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಮಾ.25ಕ್ಕೆ ಬೆಳಿಗ್ಗೆ ಗಂಟೆ 9.30 ರಿಂದ ಶ್ರೀ ಮದ್ವಾಧೀಶ ಬಿರುದಾಂಕಿತ ಕಾಟುಕುಕ್ಕೆ ರಾಮಕೃಷ್ಣ ಭಟ್ ಮತ್ತು ಬಳಗದಿಂದ ಸಾವಿತ್ರಿ ಭಜನಾ ಮಂಡಳಿ ಕೊಡಿಪಾಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಅಶೀರ್ವಚನ ನೀಡಲಿದ್ದಾರೆ. ರಾತ್ರಿ ಗಂಟೆ 8 ರಿಂದ ಸಾಂಸ್ಕೃತಿಕ ವೈವಿಧ್ಯ ಕೊಡಿಪಾಡಿ ಗ್ರಾಮದ ಸ್ಥಳೀಯ ಕಲಾವಿದರಿಂದ ನಡೆಯಲಿದೆ. ಮಾ.26ಕ್ಕೆ ರಾತ್ರಿ ಗಂಟೆ 7ರಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ಯಕ್ಷಗಾನ ಬಯಲಾಟ ‘ನಾಡೂರ ನಾಗಬನ’ ಪ್ರದರ್ಶನಗೊಳ್ಳಲಿದೆ. ಮಾ.27ಕ್ಕೆ ರಾತ್ರಿ ಗಂಟೆ 7 ರಿಂದ ಅಮ್ಮ ಕಲಾವಿದೆರ್ ಕುಡ್ಲ ಅಭಿನಯದ ತುಳು ಹಾಸ್ಯಮಯ ನಾಟಕ ‘ಅಮ್ಮೆರ್’ ಪ್ರದರ್ಶನಗೊಳ್ಳಲಿದೆ. ಮಾ.30ಕ್ಕೆ ಸಂಜೆ ಗಂಟೆ 5ಕ್ಕೆ ಧೀಶಕ್ತಿ ಮಹಿಳಾ ಯಕ್ಷಗಾನ ಬಳಗದಿಂದ ‘ಯಕ್ಷಗಾನ ತಾಳಮದ್ದಳೆ’ ನಡೆಯಲಿದೆ. ರಾತ್ರಿ ಗಂಟೆ 7.30 ರಿಂದ ಶಿವಮಣಿ ಕಲಾ ತಂಡ ಶಿವನನಗರ ಇವರಿಂದ ಸಾಂಸ್ಕೃತಿಕ ವೈವಿಧ್ಯ ಪ್ರದರ್ಶನಗೊಳ್ಳಲಿದೆ. ಮಾ.31ಕ್ಕೆ ವಿಠಲ ನಾಯಕ್ ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ ಎಂದು ಕೆ.ಕೃಷ್ಣರಾಜ ಎರ್ಕಡಿತ್ತಾಯ ಹೇಳಿದರು.
ಸುಮಾರು ರೂ. 2.5ಕೋಟಿ ವೆಚ್ಚ:
ಕ್ಷೇತ್ರದ ಅಭಿವೃದ್ದಿ ಸಮಿತಿ ಕಾರ್ಯದರ್ಶಿ ಮನೋಹರ ನಾೖಕ್ ಕೊಳಕ್ಕಿಮಾರ್ ಮಾತನಾಡಿ, 12 ವರ್ಷದ ಹಿಂದೆ ಬ್ರಹ್ಮಕಲಶ ಆಗಿದೆ. ಕಳೆದ 5 ವರ್ಷದಿಂದ ಒಳಾಂಗಣ, ಸುತ್ತುಪೌಳಿ ತಡೆಗೋಡೆ, ಮುಂಭಾಗದ ಪೌಳಿಯ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ. ಇದರೊಂದಿಗೆ ನೂತನ ಬ್ರಹ್ಮರಥವನ್ನು ಮಾಡಲಾಗಿದ್ದು, ಅದಕ್ಕೆ ಪ್ರತ್ಯೇಕ 450 ಅಡಿ ಉದ್ದದ ರಥಬೀದಿಯನ್ನು ನಿರ್ಮಾಣ ಮಾಡಲಾಗಿದೆ. ಒಟ್ಟಾಗಿ ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಈ ಹಿಂದೆ ಎರಡು ದಿನದ ಜಾತ್ರೆ ನಡೆಯುತ್ತಿದ್ದು, ಮುಂದೆ 5ದಿನದ ವಿಶೇಷ ವೈಭವದ ಜಾತ್ರೆ ನಡೆಯಲಿದೆ. ಶ್ರೀ ದೇವರ ಆರಾಟ ಮಹೋತ್ವವಕ್ಕೆ ಕ್ಷೇತ್ರದಲ್ಲಿ ಕಂಡು ಬಂದ ಪ್ರಶ್ನಾಚಿಂತನೆಯಂತೆ ಬಟ್ರುಪ್ಪಾಡಿ ಕೆರೆಯಲ್ಲಿ ಅವಭೃತ ಸ್ನಾನ ನಡೆಯಲಿದೆ. ಸುಮಾರು 3ಕಿ.ಮೀ ಹೋಗುವ ದಾರಿಯುದ್ದಕ್ಕೂ 9ಹೊಸ ಕಟ್ಟೆ ನಿರ್ಮಾಣ ಆಗಿದೆ. ಕ್ಷೇತ್ರದ ಒಳಗೆ ವಸಂತಕಟ್ಟೆ ಮತ್ತು ಪುಷ್ಕರಣಿಯ ಬಳಿಯ ಕಟ್ಟೆ ಸೇರಿ ಒಟ್ಟು 11 ಕಟ್ಟೆಗಳಲ್ಲಿ ಶ್ರೀ ದೇವರಿಗೆ ಪೂಜೆ ನಡೆಯಲಿದೆ. ಅವಭೃತ ಸ್ನಾನದ ಕೆರೆಯನ್ನು ಸುಂದರಗೊಳಿಸಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧೀರಜ್ ಗೌಡ ಹಿರ್ಕುಡೇಲು, ಉತ್ಸವ ಸಮಿತಿ ಅಧ್ಯಕ್ಷ ಸುಧೀರ್ ಪ್ರಸಾದ್ ಆನಾಜೆ, ಪ್ರಚಾರ ಸಮಿತಿ ಸಹಸಂಚಾಲಕ ಮನ್ಮಥ ಶೆಟ್ಟಿ ಶ್ಯಾನ ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ 800 ವರ್ಷಗಳ ಹಿಂದೆ ಶ್ರೀ ಮಧ್ವಾಚಾರ್ಯರು ತಪ್ಪಸನ್ನು ಆಚರಿಸಲು ಕುಳಿತ ಕಲ್ಲಿನ ಪೀಠ ಈಗಲೂ ಈ ಕ್ಷೇತ್ರದಲ್ಲಿದೆ. ಸರ್ವಜ್ಞರ ಪೀಠ ಉಡುಪಿಯಲ್ಲಿ ಬಿಟ್ಟರೆ ಮತ್ತೊಂದು ಇರುವುದು ಕೊಡಿಪಾಡಿ ಕ್ಷೇತ್ರದಲ್ಲಿ ಮಾತ್ರ. ಶ್ರೀ ಕ್ಷೇತ್ರದಲ್ಲಿ ಜನಾರ್ದನ ದೇವರು, ಶ್ರೀ ಶಾಸ್ತಾರ ದೇವರು, ಶ್ರೀ ಪಾರ್ಥಸಾರಥಿ ದೇವರ ವಿಗ್ರಹವಿರುವುದು ವಿಶೇಷ. ಅದರಲ್ಲೂ ಅಪರೂಪದ ಪುರಾತನ ಬಲಮುರಿ ಮಹಾಗಣಪತಿ ವಿಗ್ರಹ ವಿಶೇಷತೆಯನ್ನು ಪಡೆದಿದೆ. ಕ್ಷೇತ್ರದಲ್ಲಿರುವ ಪುಷ್ಕರಣಿಯಲ್ಲಿ ಗಂಗಾ ಮಾತೆಯೆ ಪ್ರತ್ಯಕ್ಷಳಾಗುತ್ತಾಳೆ ಎಂಬುದು ನಂಬಿಕೆ. ಈ ತೀರ್ಥವೇ ಕೊಡಿಪಾಡಿ ತೀರ್ಥವೆಂದು ಬಹುಪ್ರಸಿದ್ಧಿಯನ್ನು ಹೊಂದಿದೆ. ಆದ್ದರಿಂದ ಪ್ರತೀ ವರ್ಷ ಶ್ರಾವಣಮಾಸದ ಅಮವಾಸ್ಯೆಯಂದು ಸಾವಿರಾರು ಭಕ್ತರು ಶ್ರೀ ಕ್ಷೇತ್ರದಲ್ಲಿ ಪವಿತ್ರ ತೀರ್ಥ ಸ್ನಾನ ಮಾಡುತ್ತಾರೆ. ಈ ಕುಂಡಿಗೆಯಲ್ಲಿ ತೀರ್ಥ ಸ್ನಾನ ಮಾಡಿದರೆ ಕಾಲಿನ ಆಣಿ, ಕೆಡು ಹಾಗೂ ಅನೇಕ ವಿಧದ ಚರ್ಮ ವ್ಯಾಧಿ ನಿವಾರಣೆಯಾಗುತ್ತದೆ. ಇಲ್ಲಿ ಹರಕೆ ಹೇಳಿಕೊಳ್ಳುವವರು ದೇವಾಲಯಕ್ಕೆ ಆಗಮಿಸಿ ಚರ್ಮರೋಗ ನಿವಾರಣೆಯಾದರೆ ದೇವಾಲಯದ ಕೆರೆಗೆ ಮೂಡೆ ಅಕ್ಕಿ ಅರ್ಪಿಸಿ ಕುಂಡಿಗೆಯಲ್ಲಿ ತೀರ್ಥ ಸ್ನಾನ ಮಾಡುತ್ತೇವೆ ಎಂದು ಅರ್ಚಕರ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.
– ಕೆ.ಕೃಷ್ಣರಾಜ ಎರ್ಕಾಡಿತ್ತಾಯ, ಪ್ರಧಾನ ಕಾರ್ಯದರ್ಶಿ ಬ್ರಹ್ಮಕಲಶೋತ್ಸವ ಸಮಿತಿ