ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯ ಮತ್ತು ಭಕ್ತರ ಮಧ್ಯೆ ಭಾಂಧವ್ಯದ ಕಾರ್ಯ

0

ಸೀಮೆಯವರೊಟ್ಟಿಗೆ ಸೇರಿಕೊಂಡು ಸ್ವಚ್ಛತೆಗೆ ಯೋಜನೆ : ಕೆ. ರಾಧಾಕೃಷ್ಣ ನಾೖಕ್‌

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯವು ಸೀಮೆ ದೇವಾಲಯವಾಗಿದ್ದು, ಇದಕ್ಕೆ ಸಂಬಂಧಿಸಿದ ಭಕ್ತರನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಯೋಜನೆ ರೂಪಿಸಿದ್ದು, ಈ ಮೂಲಕ ದೇವಾಲಯ ಮತ್ತು ಭಕ್ತರ ನಡುವೆ ಉತ್ತಮ ಭಾಂಧವ್ಯವೇರ್ಪಡಿಸುವ ಕಾರ್ಯವನ್ನು ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿಯು ಮಾಡಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾೖಕ್‌ ತಿಳಿಸಿದರು.

ದೇವಾಲಯದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯವು ಸೀಮೆ ದೇವಾಲಯವಾಗಿದ್ದು, ಇದರ ವ್ಯಾಪ್ತಿಗೆ ಹಲವು ಗ್ರಾಮಗಳು ಸೇರುತ್ತವೆ. ಈ ಕ್ಷೇತ್ರವು ಪ್ರಾಚೀನ ತೀರ್ಥಕ್ಷೇತ್ರಗಳಲ್ಲೊಂದಾಗಿದ್ದು, ನೇತ್ರಾವತಿ- ಕುಮಾರಧಾರ ಸಂಗಮ ತೀರದಲ್ಲಿ ನೆಲೆಗೊಂಡಿರುವ ಪರಶಿವನ ಪವಿತ್ರ ತಾಣ ಇದಾಗಿದೆ. ಉತ್ತರದಲ್ಲಿ ಕಾಶಿ ವಿಶ್ವನಾಥ, ಮಹಾಕಾಳಿ ವೀರಭದ್ರ ಸನ್ನಿಧಿಯಿದ್ದು, ಅದು ಉತ್ತರಕಾಶಿ ಎಂದು ಪ್ರಸಿದ್ಧವಾದರೆ, ದಕ್ಷಿಣದ ಇಲ್ಲಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ, ಕಾಲಭೈರವರಿದ್ದು, ಇದು ದಕ್ಷಿಣ ಕಾಶಿಯೆಂದು ಪ್ರಸಿದ್ಧವಾಗಿದೆ. ಗಂಗೆ – ಯಮುನೆಯರ ಸಂಗಮವಾಗಿ ಪ್ರಯಾಗವೆಂದು ಪ್ರಸಿದ್ಧವಾದ ಉತ್ತರ ಕಾಶಿಯಷ್ಟೇ, ನೇತ್ರಾವತಿ ಕುಮಾರಧಾರ ತಾಣವಾಗಿ ಗಯಾಪದ ಕ್ಷೇತ್ರವೆಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರನ ಸನ್ನಿಧಿ ಪ್ರಸಿದ್ಧಿಯಾಗಿದೆ. ಭಕ್ತಿ – ಮುಕ್ತಿಗಳೆರಡನ್ನು ಕರುಣಿಸುವ ಸಹಸ್ರಲಿಂಗೇಶ್ವರ ಸನ್ನಿಧಿಯು ಸದ್ಗತಿದಾಯಕ ಕ್ರಿಯೆಗಳ ಮೂಲಕ ಮೋಕ್ಷಧಾಮವೆನಿಸಿದೆ.

ಈ ಕ್ಷೇತ್ರವನ್ನು ನಮ್ಮ ಆಡಳಿತಾವಧಿಯಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಬೇಕೆಂದು ನಾವು ಯೋಚಿಸಿದ್ದು, ಸ್ವಚ್ಚತೆಗೆ ಮೊದಲ ಆದ್ಯತೆಯನ್ನು ನೀಡಲಿದ್ದೇವೆ. ಈ ದೇವಾಲಯದ ಸೀಮೆಯ ವ್ಯಾಪ್ತಿಗೊಳಪಟ್ಟ ಎಲ್ಲಾ ಭಕ್ತಾಧಿಗಳನ್ನು ಒಗ್ಗೂಡಿಸಿಕೊಂಡು ಗ್ರಾಮವಾರು ಸಮಿತಿ ರಚಿಸಿ, ಪ್ರತಿ ಸಂಕ್ರಮಣದಂದು ಭಕ್ತಾದಿಗಳೊಂದಿಗೆ ಸೇರಿ ದೇವಾಲಯದ ಸ್ವಚ್ಚತೆಯನ್ನು ನಡೆಸಲು ಸಂಕಲ್ಪಿಸಲಾಗಿದೆ. ಇಲ್ಲಿಗೆ ಸದ್ಗತಿದಾಯಕ ಕ್ರಿಯೆಗಳಿಗೆ ದೂರ ದೂರದ ಊರಿನಿಂದ ಭಕ್ತರು ಬರುತ್ತಿದ್ದು, ಅವರಿಗೆ ಬೇಕಾದ ವ್ಯವಸ್ಥೆ, ಸ್ತ್ರೀಯರಿಗೆ ಪ್ರತ್ಯೇಕ ಶೌಚಾಲಯ, ಸ್ನಾನಗೃಹ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದನ್ನು ಮೊದಲ ಆದ್ಯತೆಯಾಗಿ ಮಾಡಲಿದ್ದೇವೆ. ಇಲ್ಲಿ ಅರ್ಚಕರಿಗೂ ಕೂಡಾ ತಂಗಲು ವ್ಯವಸ್ಥೆ ಇಲ್ಲ. ಅವರಿಗೂ ತಂಗಲು ಕೊಠಡಿ ವ್ಯವಸ್ಥೆಗಳು ಆಗಬೇಕಿದೆ. ಇದರೊಂದಿಗೆ ಸಮುದಾಯ ಭವನದ ಮೇಲಂತಸ್ತಿನ ಕಾಮಗಾರಿಯನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಿದ್ದೇವೆ. ಪಿಂಡ ಪ್ರಧಾನ ಸಂದರ್ಭ ಇಲ್ಲಿ ಶ್ರೀಮಂತ – ಬಡವನೆಂಬ ತಾರತಮ್ಯ ಆಗಬಾರದು. ಯಾರಿಗೂ ಕಾಯುವಿಕೆಗೆ ಅವಕಾಶ ನೀಡದೇ, ಎಲ್ಲರ ಸಮಯಕ್ಕೂ ಬೆಲೆ ಕೊಟ್ಟು ಸಮಾನವಾಗಿ ಈ ಕ್ರಿಯೆಗಳನ್ನು ಮಾಡಿ ಮುಗಿಸುವ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗುವುದು. ಇನ್ನಷ್ಟು ಸರಕಾರದ ನೆರವಿನೊಂದಿಗೆ ಇಲ್ಲಿ ಇನ್ನಷ್ಟು ದೊಡ್ಡ ದೊಡ್ಡ ಯೋಜನೆಗಳನ್ನು ಅನುಷ್ಠಾನಿಸುವ ಯೋಚನೆ ನಮ್ಮದಾಗಿದ್ದು, ಆದರೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯು ಇದಕ್ಕೆ ಅಡ್ಡಿಯಾಗುವುದರಿಂದ ಅದು ಮುಗಿದ ಬಳಿಕ ಭಕ್ತರ ಸಭೆಯನ್ನು ಕರೆದು, ಸಲಹೆ ಸೂಚನೆಗಳನ್ನು ಪಡೆದು, ಮುಂದಿನ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮುಂದುವರಿಯಲಾಗುವುದು. ವ್ಯವಸ್ಥಾಪನಾ ಸಮಿತಿಗೆ ನಾವು ಬಂದಿರುವುದು ಅಧಿಕಾರಕ್ಕಾಗಿ ಅಲ್ಲ. ಬದಲಾಗಿ ಸೇವೆಗಾಗಿ. ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಭಕ್ತರೆಲ್ಲರ ಸಹಕಾರವೂ ಬೇಕು ಎಂದರು.

ವ್ಯವಸ್ಥಾಪನಾ ಸಮಿತಿಯ ಸದಸ್ಯ ಜಿ. ಕೃಷ್ಣರಾವ್ ಆರ್ತಿಲ ಮಾತನಾಡಿ, ದೇವಾಲಯದಿಂದ ಬರುವ ಬಾಳೆಎಲೆ, ಹೂ, ಸೀಯಾಳ ಮುಂತಾದ ತ್ಯಾಜ್ಯಗಳನ್ನು ಯಾವುದೇ ಕಾರಣಕ್ಕೂ ನದಿಗೆ ಬೀಳದಂತೆ ಕ್ರಮ ಕೈಗೊಳ್ಳಲಾಗಿದೆ. ಈ ತ್ಯಾಜ್ಯವನ್ನು ಹಾಕಲೆಂದೇ ಟ್ಯಾಂಕ್‌ವೊಂದನ್ನು ನಿರ್ಮಿಸಿ, ಅದಕ್ಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ದೇವಾಲಯದ ಹಿಂಭಾಗದಲ್ಲಿ ನದಿಯಲ್ಲಿ ಕುರುಚಲು ಗಿಡ-ಗಂಟಿಗಳಿಂದ ಕೂಡಿದ ದಿಣ್ಣೆಗಳು ನಿರ್ಮಾಣವಾಗಿದ್ದು, ಇವುಗಳು ನೀರಿನ ಸರಾಗ ಹರಿಯುವಿಕೆಗೆ ತಡೆಯನ್ನೊಡ್ಡುತ್ತವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅದನ್ನು ತೆರವುಗೊಳಿಸುವ ಕೆಲಸವೂ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಾ.ರಮ್ಯ ರಾಜಾರಾಮ್, ವೇ.ಮೂ ಹರೀಶ್ ಉಪಾಧ್ಯಾಯ, ಬಿ. ಗೋಪಾಲಕೃಷ್ಣ ರೈ ಬೆಳ್ಳಿಪ್ಪಾಡಿ, ಬಿ. ದೇವಿದಾಸ ರೈ ಬೆಳ್ಳಿಪ್ಪಾಡಿ, ಎಂ. ವೆಂಕಪ್ಪ ಪೂಜಾರಿ ಮರುವೇಲು, ಸೋಮನಾಥ, ಕರ್ನಾಟಕ ರಾಜ್ಯ ರೈತ ಸಂಘದ ದ.ಕ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here