ದೋಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ

0

ನೆಲ್ಯಾಡಿ: ಜೀರ್ಣೋದ್ದಾರಕ್ಕೆ ಸಂಕಲ್ಪ ಮಾಡಿರುವ ಕೌಕ್ರಾಡಿ ಗ್ರಾಮದ ದೋಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಮಾ.18ರಿಂದ ದೋಷಗಳ ಪರಿಹಾರ ಕಾರ್ಯಕ್ರಮ ನಡೆದು ಮಾ.20ರಂದು ಬೆಳಿಗ್ಗೆ ಅನುಜ್ಞಾ ಕಲಶ ನಡೆದು ಬಾಲಾಲಯದಲ್ಲಿ ಶ್ರೀ ಮಹಾವಿಷ್ಣು ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ ನಡೆಯಿತು.


ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ದೋಷಗಳ ಪರಿಹಾರಕ್ಕಾಗಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮಾ.18 ಹಾಗೂ ಮಾ.19ರಂದು ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು.

ಮಾ.20ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಸಂಹಾರತತ್ತ್ವ ಹೋಮ, ತತ್ತ್ವ ಕಲಶ ಪೂಜೆ, ಅನುಜ್ಞಾಕಲಶ ಪೂಜೆ, ಅನುಜ್ಞಾಕಲಶಾಭಿಷೇಕ, ಸಂಹಾರ ತತ್ತ್ವ ಕಲಶಾಭಿಷೇಕ, ಧ್ಯಾನ ಸಂಕೋಚ ಕ್ರಿಯೆ, ಜೀವಕಲಶ ಪೂಜೆ, ಜೀವೋದ್ವಾಸನ ಕ್ರಿಯೆ ನಡೆದು ಬಾಲಾಲಯದಲ್ಲಿ ಶ್ರೀ ಮಹಾವಿಷ್ಣು ಹಾಗೂ ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ ಮಾಡಲಾಯಿತು. ನಂತರ ಜೀವಕಲಶಾಭಿಷೇಕ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

ದೇವಸ್ಥಾನದ ಅರ್ಚಕರಾದ ಅನಂತ ಪದ್ಮನಾಭ ನೂಜಿನ್ನಾಯ, ಶ್ರೀಧರ ನೂಜಿನ್ನಾಯ, ದೇವಸ್ಥಾನದ ಆಡಳಿತ ಮೊಕ್ತೇಸರರೂ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರೂ ಆದ ಸುಬ್ರಹ್ಮಣ್ಯ ಬಾಳ್ತಿಲ್ಲಾಯ, ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಅನುದೀಪ್ ಬಾಳ್ತಿಲ್ಲಾಯ, ಕಾರ್ಯದರ್ಶಿ ರವಿಭಟ್ ಕೆಮ್ಮಣಮಕ್ಕಿ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ದೋಂತಿಲ, ಟ್ರಸ್ಟ್‌ನ ಅಧ್ಯಕ್ಷರಾದ ಮಹಾಬಲ ಶೆಟ್ಟಿ ದೋಂತಿಲ, ಕಾರ್ಯದರ್ಶಿ ಪದ್ಮಯ ಗೌಡ ತೋಟ, ಕೋಶಾಧಿಕಾರಿ ಸುಂದರ ಬಾಣಜಾಲು, ಸದಸ್ಯರಾದ ಸುಬ್ರಹ್ಮಣ್ಯ ಆಚಾರ್ಯ, ಉದಯಕುಮಾರ್ ದೋಂತಿಲ, ವಿಶ್ವನಾಥ ಗೌಡ ಕಾಂತುಪಳಿಕೆ, ಶೀನಪ್ಪ ಗೌಡ ಪಟ್ಟೆ, ಜಿ.ಪಂ.ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ನಿವೃತ್ತ ಮುಖ್ಯಶಿಕ್ಷಕರಾದ ರವೀಂದ್ರ ಟಿ., ಆರ್.ವೆಂಕಟ್ರಮಣ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಬಾಳ್ತಿಲ್ಲಾಯ ಕುಟುಂಬಸ್ಥರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಶಿಖರ ಅವರೋಹಣ:
ಬಾಲಾಲಯದಲ್ಲಿ ದೇವರ ಪ್ರತಿಷ್ಠೆಯ ಬಳಿಕ ಹಳೆಯ ದೇವಾಲಯದ ಶಿಖರ ಅವರೋಹಣ ಮಾಡಲಾಯಿತು. ಹೋರಿಯ ಕೊಂಬಿಗೆ ಹಗ್ಗಕಟ್ಟಿ ಎಳೆಯುವ ಮೂಲಕ ಶಿಖರ ಅವರೋಹಣ ಮಾಡಲಾಯಿತು. 28 ದಿನಗಳ ಬಳಿಕ ಗರ್ಭಗುಡಿ ಬಿಚ್ಚುವ ಕೆಲಸ ನಡೆಯಲಿದೆ. ದೇವಾಲಯವನ್ನು ಸಂಪೂರ್ಣ ಬಿಚ್ಚಿ ನೂತನ ದೇವಾಲಯ ಪುನರ್‌ನಿರ್ಮಾಣಗೊಳ್ಳಲಿದೆ.

LEAVE A REPLY

Please enter your comment!
Please enter your name here