ದೇವತಲಡ್ಕ ದೈವಸ್ಥಾನದಲ್ಲಿ ವರ್ಷಾವಧಿ ತಂಬಿಲ, ದುರ್ಗಾಪೂಜೆ

0

ಪಾಣಾಜೆ: ಇಲ್ಲಿನ ದೇವತಲಡ್ಕ ಶ್ರೀ ರಕ್ತೇಶ್ವರಿ, ಗುಳಿಗ, ಭೈರವ ಪರಿವಾರ ದೈವಸ್ಥಾನದಲ್ಲಿ ಶ್ರೀ ಗಣಪತಿ ಹವನ, ವರ್ಷಾವಧಿ ತಂಬಿಲ ಹಾಗೂ ಸಾರ್ವಜನಿಕ ಶ್ರೀ ದುರ್ಗಾಪೂಜೆಯು ಪುರೋಹಿತರಾದ ವೆಂಕಟೇಶ್‌ ಭಟ್‌ರವರ ನೇತೃತ್ವದಲ್ಲಿ ಮಾ.19ರಂದು ನೆರವೇರಿತು. ಬೆಳಿಗ್ಗೆ ಗಣಪತಿ ಹವನ ನಡೆದು ಸಂಜೆ ವಾರ್ಷಿಕ ತಂಬಿಲ ಸೇವೆ ನಡೆಯಿತು.

ಊರವರಿಂದ ಭಜನಾ ಕಾರ್ಯಕ್ರಮ ಬಳಿಕ ರಣಮಂಗಲ ಕುಣಿತ ಭಜನಾ ತಂಡದಿಂದ ʻಕುಣಿತಾ ಭಜನಾ ಕಾರ್ಯಕ್ರಮʼ ಜರಗಿತು. ಸಂಜೆ ದುರ್ಗಾಪೂಜೆ ಆರಂಭಗೊಂಡು ಬಳಿಕ ಕೇಸರಿ ಭಜನಾ ತಂಡ ಮಿತ್ತಡ್ಕ ಇವರಿಂದ ʻಕುಣಿತ ಭಜನೆʼ, ರಾತ್ರಿ ದುರ್ಗಾಪೂಜೆ ಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿ ಊರಪರವೂರ ಭಕ್ತಾಭಿಮಾನಿಗಳು ಅನ್ನಪ್ರಸಾದ ಸ್ವೀಕರಿಸಿದರು. ಇದೇ ವೇಳೆ ಶ್ರೀ ಶಾಸ್ತಾರ ಸಿಂಗಾರಿ ಮೇಳ ಮಣಿಯೂರು ದೇಲಂಪಾಡಿ ಇವರಿಂದ ಆಕರ್ಷಕ ʻಸಿಂಗಾರಿ ಮೇಳʼ ಕಾರ್ಯಕ್ರಮಕ್ಕೆ ಮೆರುಗು ನೀಡಿತು.


ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯರವರು ದೀಪ ಬೆಳಗಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಆರ್ಲಪದವು ಪೂಮಾಣಿ-ಕಿನ್ನಿಮಾಣಿ, ಪಿಲಿಭೂತ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗನ್ಮೋಹನ ರೈ ಸೂರಂಬೈಲು, ಶ್ರೀ ರಕ್ತೇಶ್ವರಿ, ಗುಳಿಗ, ಭೈರವ ಪರಿವಾರ ದೈವಸ್ಥಾನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಜಾಗದ ತಕರಾರು ಬಗೆಹರಿದಿರುವುದು ಸಂತೋಷವಾಗಿದೆ
7 ವರ್ಷಗಳ ಹಿಂದೆ ದೈವಗಳ ಪ್ರತಿಷ್ಠಾಪನೆ ನಡೆದಿದೆ. ಇಲ್ಲಿನ ಜಾಗದ ತಕರಾರುಗಳು ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ. ಎರಡೂ ಕಡೆಯವರನ್ನು ಮಾತನಾಡಿಸಿ ಜಾಗದ ಪರಿಧಿಯನ್ನು ಗುರುತಿಸಿ, ಮಾರ್ಕಿಂಗ್‌ ಮಾಡುವ ಮೂಲಕ ಒಳ್ಳೆಯ ರೀತಿಯಲ್ಲಿ ಸಮಸ್ಯೆ ಪರಿಹಾರಗೊಂಡಿದೆ. ದೈವಗಳ ಅನುಗ್ರಹದಿಂದ ಕ್ಷೇತ್ರವು ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿಯಾಗಲಿದೆ.
ಅಶೋಕ್‌ ಕುಮಾರ್‌ ರೈ ಶಾಸಕರು

ಭಕ್ತರಿಂದಲೇ ಸಾನ್ನಿಧ್ಯ ವೃದ್ಧಿ
ಜೀರ್ಣಾವಸ್ಥೆಯಲ್ಲಿದ್ದ ಈ ಸಾನ್ನಿಧ್ಯವನ್ನು ಜೀರ್ಣೋದ್ಧಾರ ಮಾಡಿ ಭಕ್ತಾಭಿಮಾನಿಗಳಿಗೆ ಬಿಟ್ಟುಕೊಟ್ಟಿರುತ್ತೇವೆ. ಭಕ್ತರಿಂದಲೇ ಈ ಸಾನ್ನಿಧ್ಯ ವೃದ್ದಿಯಾಗಿದೆ. ಎಷ್ಟೋ ಮಂದಿ ಇಲ್ಲಿ ಅಕ್ರಮಮಾಡಲು ಬಂದರೂ ಅದು ಅವರಿಗೆ ಫಲಪ್ರದವಾಗಿಲ್ಲ. ಊರಿನ ಬೆವರು ಸುರಿಸಿ ದುಡಿದು ತಿನ್ನುವ ವರ್ಗ ಇಲ್ಲಿ ಆರಾಧಿಸಿಕೊಂಡು ಬರುತ್ತಿದ್ದಾರೆ. ಶ್ರೀ ದೈವಗಳ ಸಂಪೂರ್ಣ ಅನುಗ್ರಹ ಅವರ ಮೇಲಿದೆ.
ಶ್ರೀಕೃಷ್ಣ ಬೋಳಿಲ್ಲಾಯ ಆಡಳಿತ ಮೊಕ್ತೇಸರರು ಶ್ರೀ ರಣಮಂಗಲ ಸುಬ್ರಹ್ಮಣ್ಯ ದೇವಸ್ಥಾನ ಪಾಣಾಜೆ

LEAVE A REPLY

Please enter your comment!
Please enter your name here