ಉಪ್ಪಿನಂಗಡಿ: ನಮ್ಮ ಸಂಘಟನೆಯಿರುವುದು ಹಿಂದುತ್ವದ ಆಧಾರದಲ್ಲಿ. ಸಂಘಟನೆ ಬೆಳೆದಿರೋದು ಕಾರ್ಯಕರ್ತರನ್ನು ಮುಂದಿಟ್ಟುಕೊಂಡು. ಆದ್ದರಿಂದ ಹಿಂದುತ್ವದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ, ಕಾರ್ಯಕರ್ತರ ನೋವು- ನಲಿವಿನಲ್ಲಿ ಭಾಗಿಯಾಗಿ ಈ ಮಣ್ಣಿನ, ಜನರ, ಕಾರ್ಯಕರ್ತರ ಧ್ವನಿಯಾಗಿ ನಾನು ಕೆಲಸ ಮಾಡುವುದಾಗಿ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಉಪ್ಪಿನಂಗಡಿಯ ಸಿಎ ಬ್ಯಾಂಕ್‌ನ ಸಂಗಮ ಕೃಪಾ ಸಭಾಂಗಣದಲ್ಲಿ ಮಾ.23ರಂದು ನಡೆದ ಬಿಜೆಪಿಯ ಕಾರ್ಯಕ್ರರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕರ್ತರ ಪ್ರೀತಿ- ವಿಶ್ವಾಸ ನಮ್ಮಲ್ಲಿದ್ದಾಗ ನಾವು ಯಾವುದನ್ನೂ ಬೇಕಾದರೂ ಸಾಧಿಸಬಹುದು. ದ.ಕ. ಜಿಲ್ಲೆಯನ್ನು ವಿಕಸಿತ ಜಿಲ್ಲೆಯನ್ನಾಗಿಸುವ ಅನಿವಾರ್ಯತೆ ನಮ್ಮ ಮುಂದಿದ್ದು, ನನ್ನನ್ನು ಲೋಕಸಭಾ ಸದಸ್ಯನಾಗಿ ಗೆಲ್ಲಿಸಿ ಕಳುಹಿಸಿದರೆ, ಹಿಂದುತ್ವಕ್ಕೆ ಬದ್ಧನಾಗಿದ್ದುಕೊಂಡು, ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ನರೇಂದ್ರ ಮೋದಿಯವರ ವಿಕಸಿತ ಭಾರತ ಪರಿಕಲ್ಪನೆಯಡಿಯಲ್ಲಿ ದ.ಕ. ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಜಿಲ್ಲೆಯ ಜನರ ಆಕಾಂಕ್ಷೆಗಳನ್ನು ಆಗ್ರಹ ಪೂರ್ವಕವಾಗಿ ನಡೆಸಿಕೊಡುತ್ತೇನೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಈ ಬಾರಿಯ ಚುನಾವಣೆ ರಾಮ ಭಕ್ತರ ಮತ್ತು ರಾಮ ವಿರೋಧಿಗಳ ಮಧ್ಯೆ ನಡೆಯಲಿದ್ದು, ಇದಕ್ಕೆ ಬಿಜೆಪಿಯ ಎಲ್ಲಾ ಕಾರ್ಯಕರ್ತರು ಈಗಾಗಲೇ ತಯಾರಿಯಾಗಿದ್ದು ಕೊಂಡು ಬ್ರಿಜೇಶ್ ಚೌಟರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರ ಕೈ ಬಲಪಡಿಸುವ ಕಾರ್ಯ ಮಾಡಬೇಕು. ನರೇಂದ್ರ ಮೋದಿಯವರ ಆಡಳಿತದಲ್ಲಿ ಇಡೀ ಜಗತ್ತೇ ಭಾರತವನ್ನು ತಿರುಗಿ ನೋಡುವಂತಾಗಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟುವ ಮೂಲಕ ಹಿಂದೂಗಳನ್ನು ಒಟ್ಟಾಗಿಸುವ ಕಾರ್ಯ ನಡೆದಿದೆ. ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ನಡೆದಿದೆ. ಜನ್‌ಧನ್ ಖಾತೆಯ ಮೂಲಕ ಬೀದಿ ಬದಿ ವ್ಯಾಪಾರಿಗಳು, ಗ್ರಾಮೀಣರೂ ಪೇಟಿಎಂ, ಗೂಗಲ್ ಪೇ ಮೂಲಕ ವ್ಯವಹಾರ ನಡೆಸುತ್ತಿದ್ದು, ಆರ್ಥಿಕತೆಯಲ್ಲಿ ಭಾರತ ವಿಶ್ವದಲ್ಲಿ 5ನೇ ಸ್ಥಾನ ಪಡೆಯುವಂತಾಗಿದೆ. ಮುದ್ರಾ ಯೋಜನೆ, ವಿಶ್ವಕರ್ಮ ಯೋಜನೆಯ ಮೂಲಕ ವ್ಯಕ್ತಿಗೆ ಬದುಕು ಕೊಡುವ ಕೆಲಸ ನಡೆದಿದೆ. ಭೇಟಿ ಬಚಾವೋ, ಭೇಟಿ ಪಡಾವೋ ಆಂದೋಲನದ ಮೂಲಕ ಮಹಿಳೆಯರ ರಕ್ಷಣೆ ನಡೆಯುತ್ತಿದೆ. ನಳಿನ್ ಕುಮಾರ್ ಅವರು ಸಂಸದರಾಗಿ ಇಲ್ಲಿಯವರೆಗೆ ಸುಮಾರು 80 ಸಾವಿರ ಕೋ.ರೂ.ಗೂ ಮಿಕ್ಕಿ ಅನುದಾನವನ್ನು ತನ್ನ ಕ್ಷೇತ್ರಕ್ಕೆ ತಂದಿದ್ದಾರೆ. ಆದರೆ ಇತ್ತೀಚೆಗೆ ಆಡಳಿತಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರಕಾರವು ಮುಸ್ಲಿಂಮರ ತುಷ್ಟೀಕರಣಕ್ಕೆ ತೊಡಗಿದ್ದು, ಬಜೆಟ್‌ನಲ್ಲಿ ಮುಸ್ಲಿಮರಿಗೆ ಕೋಟಿ ಕೋಟಿ ರೂ. ಅನುದಾನ ನೀಡಿದರೆ, ಹಿಂದೂಗಳಿಗೆ ಮುಂಗೈನಲ್ಲಿ ಬೆಣ್ಣೆ ನೆಕ್ಕಿಸುವ ಕೆಲಸ ಮಾಡಿದೆ. ಕಾಂಗ್ರೆಸ್‌ನ 300 ದಿನಗಳ ಆಡಳಿತದಲ್ಲಿ ವಿಧಾನ ಸೌಧದಲ್ಲೇ ಪಾಕಿಸ್ತಾನಕ್ಕೆ ಜೈಕಾರ, ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ, ಕುಕ್ಕರ್ ಬಾಂಬ್ ಸ್ಫೋಟ ನಡೆದಿದೆ. ಇನ್ನು ಕಾಂಗ್ರೆಸ್‌ನವರಿದ್ರೆ ನಿಮ್ಮ ನಿಮ್ಮ ಮನೆಯ ಒಲೆಯಲ್ಲೂ ಕೂಡಾ ಬಾಂಬ್ ಸ್ಫೋಟಗಳಾಗಬಹುದು. ಆದ್ದರಿಂದ ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕಾಗಿದ್ದು, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿಸಲು ಪಣತೊಡಬೇಕು ಎಂದರು.
ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಟಿಕೇಟ್ ಘೋಷಣೆಯಾದ ಕೂಡಲೇ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿಯವರು ನಾನು ಮೋದಿಯವರ ವಿರುದ್ಧ ಸ್ಪರ್ಧೆ ಮಾಡುವುದಲ್ಲ. ನನ್ನ ಸ್ಪರ್ಧೆ ಬ್ರಿಜೇಶ್ ಚೌಟರ ವಿರುದ್ಧ ಎಂದು ಪತ್ರಿಕಾ ಹೇಳಿಕೆ ನೀಡುವ ಮೂಲಕ ಮೋದಿಯವರನ್ನು ಒಪ್ಪಿಕೊಂಡಿರುವುದರೊಂದಿಗೆ ಈ ಕ್ಷೇತ್ರದಲ್ಲಿ ಈಗಾಗಲೇ ತನ್ನ ಸೋಲನ್ನು ಒಪ್ಪಿಕೊಂಡಿದ್ದಾರೆ. ಮೋದಿಯವರ ಆಡಳಿತದ 10 ವರ್ಷದ ಅವಧಿಯಲ್ಲಿ ದೇಶದಲ್ಲಿ ಪರಿಣಾಮಕಾರಿ ಬದಲಾವಣೆಯಾಗಿದ್ದು, ಮುಂದಿನ ಅವಧಿಗೂ ಅವರನ್ನೇ ಪ್ರಧಾನಿಯಾಗಿ ಮಾಡಬೇಕಾಗಿದೆ. ಬುದ್ಧಿವಂತ, ಪ್ರಜ್ಞಾವಂತ ಜನ ನಮ್ಮ ಜಿಲ್ಲೆಯವರಾಗಿದ್ದು, ಇದರ ಅಭಿವೃದ್ಧಿಯ ಸಂಕಲ್ಪ ತೊಟ್ಟಿರುವ, ತುಳುವಿಗೆ ವಿಶೇಷ ಶಕ್ತಿ ತುಂಬುವ ಕನಸನ್ನು ಕಂಡಿರುವ ಬ್ರಿಜೇಶ್ ಚೌಟರನ್ನು ನಾವು ಗೆಲ್ಲಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಚುನಾವಣಾ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ, ಚುನಾವಣಾ ಸಹಸಂಚಾಲಕ ಉಮೇಶ ಗೌಡ, ಪುತ್ತೂರು ವಿಧಾನ ಸಭಾ ಕ್ಷೇತ್ರ ಪ್ರಭಾರಿ ಸುನೀಲ್ ಆಳ್ವ, ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಕೆ.ವಿ. ಪ್ರಸಾದ, ಬಿಜೆಪಿ ಮುಖಂಡರಾದ ಸುನೀಲ್ ಕುಮಾರ್ ದಡ್ಡು, ಉಮೇಶ್ ಶೆಣೈ, ದಯಾನಂದ ಸರೋಳಿ, ವಸಂತ ಪಿಜಕ್ಕಳ, ರಾಮಚಂದ್ರ ಮಣಿಯಾಣಿ, ಸಂತೋಷ್ ಕುಮಾರ್ ಪಂರ್ದಾಜೆ, ಚಂದಪ್ಪ ಮೂಲ್ಯ, ಮೋಹನ್ ಪಕಳ, ಪುರುಷೋತ್ತಮ ಮುಂಗ್ಲಿಮನೆ, ಸದಾನಂದ ನೆಕ್ಕಿಲಾಡಿ, ಪ್ರಶಾಂತ್ ನೆಕ್ಕಿಲಾಡಿ, ಸದಾನಂದ ಶೆಟ್ಟಿ ಅಡೆಕ್ಕಲ್, ಪ್ರಮುಖರಾದ ಜಯಗೋವಿಂದ ಶರ್ಮ, ಧರ್ನಪ್ಪ ನಾಯ್ಕ, ಧನಂಜಯ ನಟ್ಟಿಬೈಲು, ಹರೀಶ ದರ್ಬೆ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಹರೀಶ್ ನಾಯಕ್ ನಟ್ಟಿಬೈಲು, ಆದರ್ಶ ಕಜೆಕ್ಕಾರ್, ಲೊಕೇಶ್ ನೆಕ್ಕರೆ, ಗಿರೀಶ್ ಆರ್ತಿಲ, ರಾಮಣ್ಣ ಶೆಟ್ಟಿ, ಪ್ರಸಾದ್ ಬಂಡಾರಿ, ಶ್ಯಾಮಲಾ ಶೆಣೈ, ಸುಜಾತಕೃಷ್ಣ, ಮೀನಾಕ್ಷಿ ಬೀತಲಪ್ಪು, ಉದಯ ಅತ್ರೆಮಜಲು, ಸುಜಾತ ರೈ ಅಲಿಮಾರ್, ನವೀನ್ ಕುಮಾರ್ ಕಲ್ಯಾಟೆ, ಯಶವಂತ ಜಿ., ಚಿದಾನಂದ ಪಂಚೇರು, ಯೊಗೀಶ್ ಬೆತ್ತೋಡಿ, ರಾಜೇಶ್ ಕೊಡಂಗೆ, ಮಹೇಂದ್ರವರ್ಮ ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ. ಸದಸ್ಯೆ ಉಷಾ ಚಂದ್ರ ಮುಳಿಯ ಪ್ರಾರ್ಥಿಸಿದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು ವಂದಿಸಿದರು. ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು ಕಾರ್ಯಕ್ರಮ ನಿರೂಪಿಸಿದರು.