ಪಾಪೆಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0

ಸಮಾಜಕ್ಕೆ ಒಳಿತನ್ನು ಬಯಸಿದವರು ಕೋಟಿಚೆನ್ನಯರು – ವಿಖ್ಯಾತಾನಂದ ಶ್ರೀ
ಯುವಶಕ್ತಿ ಜಾಗೃತಿಯಾದರೆ ದೇಶ ಉಳಿದೀತು – ಒಡಿಯೂರು ಶ್ರೀ
ಇಂದಿನ ಸಮಾಜಕ್ಕೆ ಧಾರ್ಮಿಕ ಶಿಕ್ಷಣದ ಅವಶ್ಯಕತೆಯಿದೆ – ಡಾ. ಶೋಭಿತಾ ಸತೀಶ್
ನಿಸ್ವಾರ್ಥ ಸೇವೆ ಮಾಡಿದಾಗ ಪುಣ್ಯ ಪ್ರಾಪ್ತಿ – ಸಹಜ್ ಜೆ. ರೈ

ಅರಿಯಡ್ಕ: ಇಲ್ಲಿನ ಪಾಪೆಮಜಲು ಬೇಂಗತ್ತಡ್ಕ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಪ್ರತಿಷ್ಟಾ ಬ್ರಹ್ಮಕಲಶೋತ್ಸವವು ವೇಣೂರು ಶ್ರೀ ಪ್ರದೀಪ್ ಶಾಂತಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.22 ರಂದು ನಡೆದ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ 7.15ರ ಮುಹೂರ್ತದಲ್ಲಿ ನಾಗಬಿಂಬ ಪ್ರತಿಷ್ಟೆ, ಬ್ರಹ್ಮಬೆರ್ಮೆರ್ ಗುಂಡ ಪ್ರತಿಷ್ಠೆ, ಬ್ರಹ್ಮಬೈದೇರುಗಳ ಪ್ರತಿಷ್ಟೆ, ಕಲಶಾಭಿಷೇಕ,‌ ನಾಗನ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಮಹಾಪೂಜೆ, ತಂಬಿಲ ಸೇವೆಗಳು ನೆರವೇರಿದವು.

ಮಧ್ಯಾಹ್ನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ಮಾತನಾಡಿ, ಸತ್ಯ ನ್ಯಾಯ ನಿಷ್ಠೆಗಾಗಿ ಧರ್ಮಕ್ಕೋಸ್ಕರ ಹೋರಾಡಿದ ವೀರಪುರುಷರು ಕೋಟಿ‌ಚೆನ್ನಯರು, ಸಮಾಜಕ್ಕೆ ಒಳಿತನ್ನು ಬಯಸಿದವರು, ಕೇಡನ್ನು ಬಯಸಿದವರಲ್ಲ. ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರು, ಸ್ವಾಮಿ ನಿಷ್ಟೆಗೆ ಬೆಲೆ ಕೊಟ್ಟು, ಧರ್ಮದ ರಕ್ಷಣೆ ಮಾಡಿ ನಾಡಿನ ಜನರ ತನುಮನದಲ್ಲಿ ಜನಜನಿತರಾಗಿದ್ದಾರೆ. ಇಂದು ಈ ಕ್ಷೇತ್ರ ಏಳು ಜನ್ಮದ ಪುಣ್ಯದ ಫಲದಿಂದ ತ್ರಿವೇಣಿ ಪೆರ್ವೋಡಿಯವರಿಗೆ ಅದರ ನಿರ್ಮಾಣದ ಭಾಗ್ಯ ಒದಗಿಬಂದಿದೆ’ ಎಂದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ‘ಈ ಕ್ಷೇತ್ರ ಶ್ರೀ ಕ್ಷೇತ್ರ. ಹಿಂದಿನ ಕಾಲದ ಶೈಲಿಯಲ್ಲಿ ಸುಂದರವಾಗಿ ಮೂಡಿಬಂದಿದೆ. ಮಾನವ ಜನ್ಮದಲ್ಲಿ ಪುಣ್ಯದ ಕೆಲಸ ಕಾರ್ಯಗಳು ನಡೆಯಬೇಕು. ಮಾನವ ತಾನು ಬದುಕಿ ಇತರರನ್ನು ಬದುಕಲು ಬಿಡಬೇಕು. ಈ ಮಣ್ಣಿನಲ್ಲಿ ಧರ್ಮದ ಉಳಿವಿಗಾಗಿ ಹೋರಾಟ ಮಾಡಿದವರು ಕೋಟಿ ಚೆನ್ನಯರು. ಹೆತ್ತವರು ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರ ನೀಡಿದಾಗ ಸಮಾಜದಲ್ಲಿ ಗುರುತಿಸಲ್ಪಡುವ ವ್ಯಕ್ತಿಗಳಾಗಿ ಬಹು ಎತ್ತರಕ್ಕೆ ಬೆಳೆಯುತ್ತಾರೆ. ಇಂದು ಯುವ ಶಕ್ತಿ ಜಾಗೃತಗೊಂಡಾಗ ದೇಶ ಉಳಿದೀತು. ಕ್ಷೇತ್ರವು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲೆಂದು’ ಆಶಿಸಿದರು.

ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದ ಪುತ್ತೂರು ವಿವೇಕಾನಂದ ಬಿ.ಎಡ್. ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ರವರು ‘ನಾವು ಮುಂದಿನ ಪೀಳಿಗೆಗೆ ಧರ್ಮ ಉಳಿಸಬೇಕಾದರೆ ದೈವ ದೇವರನ್ನು ಉಳಿಸುವಂತಹ ಕಾರ್ಯವಾಗವೇಕು. ಧಾರ್ಮಿಕ ಕ್ಷೇತ್ರದಲ್ಲಿ ನಮ್ಮ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಿ, ಭಜನೆ, ಕಥೆ, ದೇಶಭಕ್ತ ವ್ಯಕ್ತಿಗಳ ಪರಿಚಯ ಮುಂತಾದವುಗಳ ಬಗ್ಗೆ ತಿಳಿಹೇಳಬೇಕು. ಪರಿಸರವನ್ನು ಉಳಿಸುವ ಸಂಕಲ್ಪ ತೊಟ್ಟು ಮಕ್ಕಳಲ್ಲಿ ಧನಾತ್ಮಕ ಚಿಂತನೆಯನ್ನು ರೂಢಿಸುವ ಕೆಲಸ ಕಾರ್ಯಗಳು ನಡೆಯಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಕಷ್ಟಕಾಲವನ್ನು ಎದುರಿಸಬೇಕಾದಿತು’ ಎಂದರು.

ಯುವ ಉದ್ಯಮಿ ಸಹಜ್ ಜೆ. ರೈ ಬಳಜ್ಜ ಮಾತನಾಡಿ ‘ಹಿಂದೂ ರಾಷ್ಟ್ರದ ಪರಿಕಲ್ಪನೆ ನಮ್ಮಲ್ಲಿರಲಿ. ದೇಶ ಕಟ್ಟಬೇಕಾದರೆ ಯುವಶಕ್ತಿಯ ಜೊತೆ ಮಹಿಳಾ ಶಕ್ತಿ ಜೊತೆಯಾಗಬೇಕು. ಭಾರತ ವಿಶ್ವಗುರುವಾಗುವ ದಿನ ಹತ್ತಿರದಲ್ಲಿಯೇ ಇದೆ. ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡುವ ಶಕ್ತಿ ಭಗವಂತ ಸರ್ವರಿಗೂ ಕರುಣಿಸಲೆಂದು ಹೇಳಿದರು.

ವೇದಿಕೆಯಲ್ಲಿ ಕುಂಬ್ರ ಮಾತೃಶ್ರೀ ಅರ್ಥ್ ಮೂವರ್ಸ್ ಮಾಲಕ ಮೋಹನ್ ದಾಸ್ ರೈ, ಚೆನ್ನಪ್ಪ ರೈ ದೇರ್ಲ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ದೇರ್ಲ ಅಮ್ಮಣ್ಣ ರೈ ಪಾಪೆಮಜಲು, ತಿಮ್ಮಪ್ಪ ರೈ ಅರಿಯಡ್ಕ, ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ರಾಜೀವ ರೈ ಕುತ್ಯಾಡಿ,ಬ್ರಹ್ಮಕಲಶ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಉಪಾಧ್ಯಕ್ಷ ರಾಘವ ಪೂಜಾರಿ ಮರತ್ತಮೂಲೆ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಚಿಕ್ಕಪ್ಪ ನಾಐಕ್ ಅರಿಯಡ್ಕ ಉಪಸ್ಥಿತರಿದ್ದರು. ಸ್ವಾಮೀಜಿಯವರಿಗೆ ಗರಡಿಯ ಮೊಕ್ತೇಸರ ಕೇಶವ ಎಂ.ಎಸ್. ಮತ್ತು ರತ್ನಾವತಿ ದಂಪತಿ, ತ್ರಿವೇಣಿ ಪೆರ್ವೋಡಿ, ಕೃತಿಕಾ ಪೆರ್ವೋಡಿ, ಕಾರ್ತಿಕ್ ಪೆರ್ವೋಡಿ ಫಲಪುಷ್ಪ ನೀಡಿ ಗೌರವಿಸಿದರು.

ವೇದಿಕೆಯಲ್ಲಿದ್ದ ಗಣ್ಯರಿಗೆ ಅಶೋಕ್ ಪೂಜಾರಿ ಬೊಳ್ಳಾಡಿ, ತುಳಸಿ ವಸಂತ್ ಪುತ್ತೂರು, ಪ್ರದೀಪ್ ಶಾಂತಿವನ, ಯಶವಂತ್, ದಿನೇಶ್ ಕುಮಾರ್ ಮರತ್ತಮೂಲೆ, ಗಂಗಾಧರ ಎಂ.ಎಸ್. ಶಾಂತಿವನ, ಅಮಿತಾ ರೋಶನ್, ಐಶ್ವರ್ಯ ಚಂದ್ರಶೇಖರ ಪುತ್ತೂರು ರವರು ಶಾಲು ಹಾಕಿ ಗೌರವಿಸಿದರು. ಯಕ್ಷಿತಾ ಮರತ್ತಮೂಲೆ ಪ್ರಾರ್ಥಿಸಿ, ಶ್ರೇಯ ಸ್ವಾಗತ ನೃತ್ಯ ಮಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಮಾನಾಥ ಮಂಗಳೂರು ಸ್ವಾಗತಿಸಿ, ಆಡಳಿತ ಮತ್ತು ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಕೆ. ಪೆರ್ವೋಡಿ ವಂದಿಸಿದರು. ಶಶಿಧರ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶ ಸಮಿತಿಯ ಪದಾಧಿಕಾರಿಗಳು, ಉಪಸಮಿತಿಗಳ ಸದಸ್ಯರು ವಿವಿಧ ರೀತಿಯಲ್ಲಿ ಸಹಕರಿಸಿದರು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆದು ಸಾವಿರಾರು ಭಕ್ತಾಭಿಮಾನಿಗಳು ಅನ್ನಪ್ರಸಾದ ಸ್ವೀಕರಿಸಿದರು.

ಕಳೆದ ಎರಡೂವರೆ ತಿಂಗಳಿನಿಂದ ನಿರಂತರವಾಗಿ ಕಾಮಗಾರಿ ನಡೆದು ಅತ್ಯಲ್ಪ ದಿನಗಳಲ್ಲಿ ಕ್ಷೇತ್ರದ ನಿರ್ಮಾಣವಾಗಿದೆ. ಊರ ಪರವೂರಿನ ದಾನಿಗಳ ಸಹಕಾರ, ವಿವಿಧ ಸಮಿತಿಗಳ ಮುತುವರ್ಜಿ, ದೈವ ದೇವರುಗಳ ಅನುಗ್ರಹದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದೆಯೂ ಕ್ಷೇತ್ರದ ಸಾನ್ನಿಧ್ಯ ವೃದ್ಧಿ ಮತ್ತು ಅಭಿವೃದ್ಧಿ ಯಲ್ಲಿ ಭಕ್ತಾಭಿಮಾನಿಗಳ ಸಹಕಾರವಿರಲಿ.
– ತ್ರಿವೇಣಿ ಕೆ. ಪೆರ್ವೋಡಿ 
ಪ್ರಧಾನ ಕಾರ್ಯದರ್ಶಿ, ಆಡಳಿತ ಸಮಿತಿ ಮತ್ತು ಬ್ರಹ್ಮಕಲಶ ಸಮಿತಿ

ಮೊಳಕೆಯೊಡೆದ ಭತ್ತ :

ಕ್ಷೇತ್ರದಲ್ಲಿ ಬಾಲಾಲಯ ಪ್ರತಿಷ್ಟೆಯ ವೇಳೆ ಹರಿವಾಣದಲ್ಲಿ ಇಟ್ಟಿದ್ದ ಭತ್ತವು ಮೊಳಕೆಯೊಡೆದಿರುವ ವಿಸ್ಮಯ ನಡೆದಿರುವುದು ಆಡಳಿತ ಸಮಿತಿ ಮತ್ತು ಭಕ್ತಾಭಿಮಾನಿಗಳಲ್ಲಿ ಭಕ್ತಿ ಶ್ರದ್ಧೆ ಹೆಚ್ಚಿಸಿದೆ. ‘ಭತ್ತ ಮೊಳಕೆಯೊಡೆದರೆ ಕೋಟಿ ಚೆನ್ನಯರ ಸಾನ್ನಿಧ್ಯವಿರುವುದು ಸತ್ಯ’ ಎಂಬ ನಂಬಿಕೆ ಹಿಂದಿನ ಕಾಲದಿಂದಲೂ ಇದೆ’ ಎಂದು ತ್ರಿವೇಣಿಯವರು ಈ ವೇಳೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here