ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀರಾಮ ಕೃಷ್ಣ ಪ್ರೌಢ ಶಾಲೆ ಕೊಂಬೆಟ್ಟು ಇದರ ವತಿಯಿಂದ ಪುತ್ತೂರಿನ ಬಂಟರ ಭವನದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರವು ಮಾ.23 ರಂದು ನಡೆಯಿತು.
ಕಾರ್ಯಾಗಾರವನ್ನು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಶಾಸಕರಾದ ಅಶೋಕ್ ರೈ ನೇತೃತ್ವದ ಟ್ರಸ್ಟ್ ಮೂಲಕ ಈ ಕಾರ್ಯಾಗಾರ ನಡೆಯುತ್ತಿದೆ. ಕಳೆದ ಹಲವು ವರ್ಷಗಳಿಂದ ಟ್ರಸ್ಟ್ ಮೂಲಕ ಸಮಾಜದಲ್ಲಿ ನೊಂದವರ ಕಣ್ಣೀರೊರೆಸುತ್ತಿದ್ದ ಶಾಸಕ ಅಶೋಕ್ ರೈ ಯವರು ಶಾಸಕರಾದ ಬಳಿಕ ಎಲ್ಲಾ ರಂಗದಲ್ಲೂ ತನ್ನ ಸೇವೆ ಯನ್ನು ಆರಂಭಿಸಿದ್ದಾರೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಇವತ್ತಿನ ಕಾರ್ಯಾಗಾರ ಮಾಡುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಮಾಹಿತಿ ಲಭ್ಯವಾಗಲಿದೆ. ನಾವು ಪೂರ್ವಾಪರ ತಿಳಿಯದೆ ಯಾವುದೇ ವೃತ್ತಿಪರ ಕೋರ್ಸನ್ನು ಆಯ್ಕೆ ಮಾಡಬಾರದು.ವಿದ್ಯೆಗೆ ನಮ್ಮ ಬದುಕನ್ನು ಬದಲಿಸುವ ತಾಕತ್ತು ಇದೆ. ಪ್ರತೀಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇದೆ ಆದರೆ ಪ್ರದರ್ಶಿಸಲು ಅವಕಾಶ ಸಿಗದೇ ಇರುವುದರಿಂದ ಆತನಲ್ಲಿರುವ ಪ್ರತಿಭೆ ಕುಂದುತ್ತಿದೆ ಎಂದರು.
ಶಾಸಕ ಅಶೋಕ್ ರೈ ಅವರು ಟ್ರಸ್ಟ್ ಮೂಲಕ ಬಡವರ ಸೇವೆ, ಅನಾರೋಗ್ಯ ಪೀಡಿತರ ಸೇವೆ, ನಿರ್ಗತಿಕರ ಸೇವೆ, ನಿರುದ್ಯೋಗಿಗಳಿಗೆ ಸಹಕಾರ, ವಿದ್ಯಾರ್ಥಿಗಳಿಗೆ ಮಾಹಿತಿ ಸೇರಿದಂತೆ ಎಲ್ಲಾ ವಿಚಾರದಲ್ಲೂ ಟ್ರಸ್ಟ್ ಮೂಲಕ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಟ್ರಸ್ಟ್ ಸದಸ್ಯ, ಪುಡಾ ಸದಸ್ಯ ನಿಹಾಲ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕಾರ್ಯವನ್ನು ಟ್ರಸ್ಟ್ ಮಾಡುತ್ತಿದೆ. ಕಲಿಯುವ ಮನಸ್ಸು ಇರುವ ಪ್ರತೀಯೊಬ್ಬರಿಗೂ ಸಾಕಷ್ಟು ಅವಕಾಶಗಳು ಇದೆ. ಮಾಹಿತಿಯ ಕೊರತೆಯಿಂದ ನಾವು ಕೆಲವೊಂದನ್ನು ಕಳೆದುಕೊಳ್ಳುತ್ತಿದ್ದೇವೆ. ಕಲಿಕೆಯ ವಿಚಾರದಲ್ಲಿ ನಾವು ಎಷ್ಟೇ ಮಾಹಿತಿ ಪಡೆದುಕೊಂಡರೂ ಅದು ಕಡಿಮೆಯೇ ಎಂದರು.
ಬೆಳ್ಳಾರೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿವಿ ಸೂರ್ಯನಾರಾಯಣ ಕಾರ್ಯಾಗಾರ ನಡೆಸಿದರು.ವೇದಿಕೆಯಲ್ಲಿ ಟ್ರಸ್ಟಿನ ಸದಸ್ಯರಾದ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ, ತರಬೇತು ದಾರೆ ಶ್ರದ್ದಾ ಉಪಸ್ಥಿತರಿದ್ದರು.
ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.