ಪುತ್ತೂರು: ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ, ಗೋಪಿನಾಥ ಶೆಟ್ಟಿ ನಡುಹಿತ್ಲುರವರ ಉತ್ತರ ಕ್ರಿಯೆಯು ಮಾ.23ರಂದು ಪುತ್ತೂರು ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ಜರಗಿತು. ಈ ಸಂದರ್ಭದಲ್ಲಿ ಜರಗಿದ ಶ್ರದ್ಧಾಂಜಲಿ ಸಲ್ಲಿಸುವ ನುಡಿ ನಮನ ಕಾರ್‍ಯಕ್ರಮ ಜರಗಿತು.
ಯುವ ಪೀಳಿಗೆಗೆ ಮಾದರಿ- ರವೀಂದ್ರ: ಪುತ್ತೂರು ವಿವೇಕಾನಂದ ಕಾಲೇಜಿನ ಪಿಯುಸಿ ವಿಭಾಗದ ಆಡಳಿತ ಸಮಿತಿಯ ಅಧ್ಯಕ್ಷ, ದಕ್ಷ ಕನ್‌ಸ್ಟ್ರಕ್ಷನ್‌ನ ರವೀಂದ್ರರವರು ಪ್ರಾಸ್ತಾವಿಕವಾಗಿ ಮಾತನಾಡಿ ಗೋಪಿನಾಥ ಶೆಟ್ಟಿಯವರು ತಮ್ಮ ಜೀವಿತಾವಽಯಲ್ಲಿ ಸಮಾಜಮುಖಿ ಕಾರ್‍ಯ ಹಾಗೂ ವೃತ್ತಿ ಬದುಕನ್ನು ಅತ್ಯಂತ ಯಶಸ್ಸಿಯಾಗಿ ಮುನ್ನಡೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರ ದಕ್ಷತೆ ಮತ್ತು ಪ್ರಾಮಾಣಿಕ ಬದುಕು ನಮ್ಮ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದರು.
ಶಿಸ್ತು ಬದ್ಧ ಜೀವನ- ರಂಗಮೂರ್ತಿ: ಕ್ಯಾಂಪ್ಕೋ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಪುಣಚರವರು ಮಾತನಾಡಿ ಗೋಪಿನಾಥ ಶೆಟ್ಟಿಯವರು ವಿವೇಕಾನಂದ ಪಾಲಿಟೆಕ್ನಿಕ್‌ನ್ನು ರಾಜ್ಯದ ನಂಬ್ರ ಒನ್ ಸಂಸ್ಥೆಯಾಗಿ ರೂಪಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ಪ್ರಾಂಶುಪಾಲರಾಗಿಯೂ ಶಿಸ್ತುಬದ್ಧ ಜೀವನವನ್ನು ರೂಪಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು. ಆರ್‌ಎಸ್‌ಎಸ್‌ನ ಪುತ್ತೂರು ನಗರ ಸಹ ಸಂಘ್ ಚಾಲಕನಾಗಿಯೂ ಸೇವೆಸಲ್ಲಿಸಿದ್ದ ಅವರು ತಮ್ಮ ಬದುಕಿನಲ್ಲಿ ಶ್ರದ್ಧೆಗೆ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ವಿವೇಕಾನಂದ ವಿದ್ಯಾ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನ ಕಟ್ಟಡ ನಿರ್ಮಾಣ ಕಾರ್‍ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು ಮತ್ತು ಕಟ್ಟಡ ಅತ್ಯಂತ ಅಚ್ಚುಕಟ್ಟಾಗಿ ಮೂಡಿಬರಲು ಶ್ರಮ ಪಟ್ಟಿದ್ದರು ಎಂದು ನೆನಪಿಸಿಕೊಂಡರು.
ಸೇವಾ ಕಾರ್‍ಯವನ್ನು ಮರೆಯಲು ಸಾಧ್ಯವಿಲ್ಲ- ಬಲರಾಮ್ ಆಚಾರ್ಯ: ಪುತ್ತೂರಿನ ಸ್ವರ್ಣೋದ್ಯಮಿ ಜಿ.ಎಲ್. ಬಲರಾಮ್ ಆಚಾರ್ಯರವರು ಮಾತನಾಡಿ ತಮ್ಮ ಬದುಕಿನಲ್ಲಿ ಶಿಸ್ತು, ಶ್ರದ್ಧೆಯನ್ನು ಮೈಗೂಡಿಸಿಕೊಂಡು, ಪುತ್ತೂರಿನ ವಿವೇಕಾನಂದ ಕಾಲೇಜಿನ ಪಾಲಿಟೆಕ್ನಿಕ್ ಸಂಸ್ಥೆಯ ಅಭಿವೃದ್ಧಿಗೆ ಅಹರ್ನಿಶಿಯಾಗಿ ದುಡಿದ್ದಾರೆ. ಅವರ ಸೇವಾ ಕಾರ್‍ಯವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ವೃತ್ತಿ ಬದ್ಧತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ – ಜಗದೀಶ್ ಶೆಟ್ಟಿ: ಪುತ್ತೂರು ನಗರ ಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿರವರು ಮಾತನಾಡಿ ಗೋಪಿನಾಥ ಶೆಟ್ಟಿಯವರು ತಮ್ಮ ಜೀವನದಲ್ಲಿ ಮಾಡಿದ ಸಾಧನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ತಮ್ಮ 35 ವರ್ಷಗಳ ಕಾಲೇಜಿನ ಪ್ರಾಂಶುಪಾಲ ಹುದ್ದೆಯಲ್ಲಿ ತೋರಿದ ವೃತ್ತಿ ಬದ್ಧತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ಸಮಾಜಮುಖಿ ಚಿಂತನೆಯ ವ್ಯಕ್ತಿ- ದೇವಿಪ್ರಸಾದ್: ಒಡಿಯಾರು ಸಂಸ್ಥಾನದ ದೇವಿ ಪ್ರಸಾದ್‌ರವರು ಮಾತನಾಡಿ ಗೋಪಿನಾಥ ಶೆಟ್ಟಿಯವರು ಸಮಾಜ ಮುಖಿ ಚಿಂತೆನೆಯ ವ್ಯಕ್ತಿಯಾಗಿದ್ದರು ಎಂದು ಹೇಳಿದರು. ಐಲ ದುರ್ಗಾಪರಮೇಶ್ವರಿ ದೇವಾಲಯದ ನಾರಾಯಣ ಹೆಗ್ಡೆರವರು ನುಡಿನಮನ ಸಲ್ಲಿಸಿದರು. ಆರ್‌ಎಸ್‌ಎಸ್‌ನ ಹಿರಿಯ ಸ್ವಯಂ ಸೇವಕ ಅಚ್ಚುತ್ ನಾಯಕ್‌ರವರು ಗೀತೆ ಹಾಡುವ ಮೂಲಕ ಗೋಪಿನಾಥ ಶೆಟ್ಟಿಯವರಿಗೆ ಶ್ರದ್ಧಾಂಜಲಿಗೈದರು.
ಗೋಪಿನಾಥ ಶೆಟ್ಟಿಯವರ ಪತ್ನಿ ಸುಧಾ ಜಿ.ಶೆಟ್ಟಿ, ಪುತ್ರ ಗೌರವ್ ಜಿ.ಶೆಟ್ಟಿ ಹಾಗೂ ನಡುಹಿತ್ಲು ಯಜಮಾನ್ ಮಹಾಬಲ ಶೆಟ್ಟಿ ಮತ್ತು ಸಹೋದರ, ಸಹೋದರಿ, ಡಾ. ಎ.ದೇವದಾಸ್ ರೈ ಮತ್ತು ತಮ್ಮಂದಿರು, ತಂಗಿಯಂದಿರು ಹಾಗೂ ನಡುಹಿತ್ಲು ಕುಟುಂಬಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಜನಪ್ರತಿನಿಧಿಗಳು, ಇಂಜಿನಿಯರ್‌ಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.