ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜ್‌ನಲ್ಲಿ ದೇಸಿ ಜಗಲಿ ಕಥಾ ಕಮ್ಮಟ

0

ಸಾಹಿತ್ಯ ಅಭಿವ್ಯಕ್ತಿಗೆ ಮನುಷ್ಯನೊಳಗಿನ ಯಂತ್ರಗಳನ್ನು ಕಳಚುವ ಶಕ್ತಿ ಇದೆ: ದೇವು ಹಣೆಹಳ್ಳಿ

ಪುತ್ತೂರು: ಬರೀ ಪ್ರತಿಕ್ರಿಯೆ ಅಭಿವ್ಯಕ್ತಿಯಲ್ಲ. ಯುವ ಸಮುದಾಯ ಪ್ರತಿಕ್ರಿಯೆಯನ್ನೇ ಅಭಿವ್ಯಕ್ತಿ ಎಂದು ಭಾವಿಸಿದಂತಿದೆ. ಯಾವಾಗ ಕಥೆ ಕಾವ್ಯ ನಾಟಕ ಕಾದಂಬರಿಯಂಥ ಅಭಿವ್ಯಕ್ತಿ ಮಾಧ್ಯಮಗಳಲ್ಲಿ ಯುವ ಸಮುದಾಯ ತೊಡಗಿಕೊಳ್ಳುತ್ತೋ ಆಗ ಸಹಜವಾಗಿಯೇ ಪ್ರತಿಕ್ರಿಯೆ ಸೋಲುತ್ತದೆ. ಸಾಹಿತ್ಯ ಅಭಿವ್ಯಕ್ತಿಗೆ ಮನುಷ್ಯನೊಳಗಿನ ಯಂತ್ರಗಳನ್ನು ಕಳಚುವ ಶಕ್ತಿ ಇದೆ. ಯುವ ಸಮುದಾಯದ ಅಂತರಂಗ ಬರಡಾಗದ ರೀತಿಯಲ್ಲಿ ಸಾಹಿತ್ಯದ ಸಂವೇದನೆ ಅವರನ್ನು ಕಾಪಾಡಬಹುದೆಂದು ವಿಮರ್ಶಕ, ಲೇಖಕ, ಮಂಗಳೂರು ಆಕಾಶವಾಣಿಯ ದೇವು ಹಣೆಹಳ್ಳಿ ಹೇಳಿದರು. ಅವರು ವೀರಲೋಕ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ‘ ದೇಸಿ ಜಗಲಿ – ಕಥಾ ಕಮ್ಮಟ’ದಲ್ಲಿ ಮಾತನಾಡುತ್ತಿದ್ದರು. “ಹಿಂದೆ ಕೋಗಿಲೆ ಹಾಡುತ್ತಿತ್ತು. ಈಗಲೂ ಹಾಡುತ್ತಿದೆ. ಗಿಳಿ ಮಾತನಾಡುತ್ತಿತ್ತು, ಈಗಲೂ ಮಾತನಾಡುತ್ತಿದೆ .ನವಿಲು ನರ್ತಿಸುತ್ತಿದ್ದು ಈಗಲೂ ನರ್ತಿಸುತ್ತಿದೆ. ಆದರೆ ಮನುಷ್ಯ ಮಾತ್ರ ಹಿಂದೆ ಕಥೆ ಹೇಳುತ್ತಿದ್ದ ಮತ್ತೆ ಕಥೆ ಕೇಳುತ್ತಿದ್ದ. ಆದರೆ ಇವತ್ತು ಕಥೆ ಕೇಳುವ ಮತ್ತು ಕಥೆ ಕೇಳಿಸಿಕೊಳ್ಳುವ ಸಾಧ್ಯತೆಗಳನ್ನು ಕಳಚಿಕೊಂಡಿದ್ದಾನೆ. ಯಂತ್ರ ಸ್ಥಿತಿಯನ್ನು ಕಳಚಿಕೊಂಡಾಗ ಮತ್ತೆ ನಮ್ಮ ಒಳಗಡೆ ಮನುಷ್ಯತ್ವದ ಸಹಜ ಭಾವನೆ ಸಂವೇದನೆಗಳು ಸೃಷ್ಟಿಯಾಗಬಹುದು ಎಂದು ಅವರು ಹೇಳಿದರು. ಈ ಕಥಾ ಕಮ್ಮಟ ಪುತ್ತೂರು ಸುಳ್ಯ ಬೆಳ್ತಂಗಡಿ ಬಂಟ್ವಾಳ ತಾಲೂಕಿನ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಲ್ಪಟ್ಟಿತು. ಸುಮಾರು 50 ವಿದ್ಯಾರ್ಥಿನಿಯರು ಈ ಎರಡು ದಿವಸದ ಕಮ್ಮಟದಲ್ಲಿ ಭಾಗವಹಿಸಿದರು.

ಕಥೆ ಹುಟ್ಟುವುದು ಹೇಗೆ? ವಸ್ತು ಆಶಯ ಸಂದೇಶ, ಕಥೆಯ ಭಾಷೆ ಶೈಲಿ, ಕನ್ನಡದಲ್ಲಿ ಗ್ರಾಮೀಣ ಕಥೆ ಮತ್ತು ಕೃಷಿ ಬಿಕ್ಕಟ್ಟುಗಳು, ಗ್ರಾಮ ಪಲ್ಲಟದ ವಸ್ತುವನಾದರಿಸಿ ಕಥೆ ಬರೆಯುವ ಸಾಧ್ಯತೆಗಳು ಇತ್ಯಾದಿಗಳ ಬಗ್ಗೆ ಡಾ. ಪ್ರಭಾಕರ ಶಿಶಿಲ, ಡಾ. ರಾಜಶೇಖರ ಹಳೆಮನೆ, ರಾಜಶ್ರೀ ರೈ ಪೆರ್ಲ, ದೇವು ಹನೆಹಳ್ಳಿ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಶಿಬಿರವನ್ನು ಪುತ್ತೂರಿನ ವೈದ್ಯ ಲೇಖಕರಾದ ಡಾ. ಎ.ಪಿ ಭಟ್ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಗೋಪಾಲಕೃಷ್ಣ ಕೆ ಅಧ್ಯಕ್ಷತೆ ವಹಿಸಿದರು. ರೋಟರಿ ಅಧ್ಯಕ್ಷರಾದ ಜಯರಾಜ್ ಭಂಡಾರಿ ಮುಖ್ಯ ಅತಿಥಿಗಳಾಗಿದ್ದರು. ರಾಜ್ಯಶಾಸ್ತ್ರ ಮುಖ್ಯಸ್ಥರಾದ ಪ್ರೊ ಐವನ್ ಫ್ರಾನ್ಸಿಸ್ ಲೋಬೋ ಆಶಯ ಭಾಷಣ ಮಾಡಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಕ್ಷೇಮ ಪಾಲನೆ ಅಧಿಕಾರಿ ಸ್ಟೀವನ್ ಕ್ವಾಡರ್ಸ್ ವಹಿಸಿದ್ದರು. ಡಾ. ನರೇಂದ್ರ ರೈ ದೇರ್ಲ ಶಿಬಿರ ಸಂಯೋಜಕರಾದ ಈ ಕಮ್ಮಟವನ್ನು ಎರಡು ದಿನ ವಿದ್ಯಾರ್ಥಿನಿಯರೇ ನಿರ್ವಹಿಸಿದ್ದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here