ಇಂದು ಅಧಿಸೂಚನೆ ಪ್ರಕಟ
ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ
ಮಾ.29,31 ಸರಕಾರಿ ರಜಾದಿನ ನಾಮಪತ್ರ ಸಲ್ಲಿಕೆಗಿಲ್ಲ ಅವಕಾಶ
ಪುತ್ತೂರು: 2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿ ರಾಜ್ಯದಲ್ಲಿ ಮೊದಲ ಹಂತದಲ್ಲಿ ಏ.26ರಂದು ಚುನಾವಣೆ ನಡೆಯಲಿರುವ ದ.ಕ.ಸಹಿತ 14 ಕ್ಷೇತ್ರಗಳಿಗೆ ಸಂಬಂಧಿಸಿ ಮಾ.28ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ.ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಾ.28ರಂದೇ ಆರಂಭಗೊಳ್ಳಲಿದ್ದು ಏ.4ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ.ಮಾ.29 ಹಾಗೂ 31ರಂದು ಸರಕಾರಿ ರಜಾ ದಿನ ಆಗಿರುವ ಕಾರಣ ಆ ದಿನಗಳಂದು ನಾಮಪತ್ರ ಸಲ್ಲಿಸಲು ಅವಕಾಶವಿಲ್ಲ.ಉಳಿದ ದಿನಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿಯ ಮೂರನೆ ಮಹಡಿಯ ಕೋರ್ಟ್ ಹಾಲ್‌ನಲ್ಲಿ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ.ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅಥವಾ ಸಹಾಯಕ ಚುನಾವಣಾಽಕಾರಿಯಾಗಿರುವ ಅಪರ ಜಿಲ್ಲಾಧಿಕಾರಿಯವರಿಗೆ ನಾಮಪತ್ರ ಸಲ್ಲಿಸಬಹುದು.
ಏ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ಏ.8 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ.ಏ.26ರಂದು ಮತದಾನ ನಡೆದು ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಪುತ್ತೂರು,ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಮಂಗಳೂರು ನಗರ, ಮಂಗಳೂರು ದಕ್ಷಿಣ ಮತ್ತು ಮೂಡಬಿದ್ರೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ.
ಅಭ್ಯರ್ಥಿಗಳಿಗೆ ಸೂಚನೆ:
ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಯು ರಾಷ್ಟ್ರೀಯ ಅಥವಾ ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದಿರುವ ಪಕ್ಷದಿಂದ ಸ್ಪಽಸುತ್ತಿದ್ದರೆ ಕ್ಷೇತ್ರದ ಒಬ್ಬ ಮತದಾರ ಸೂಚಕನಾಗಿ ಸಹಿ ಮಾಡಿರಬೇಕು.ಮಾನ್ಯತೆ ಪಡೆಯದ ರಾಜಕೀಯ ಪಕ್ಷದಿಂದ ಸ್ಪಽಸುತ್ತಿದ್ದರೆ, ಕ್ಷೇತ್ರದ 10 ಮತದಾರರು ಸೂಚಕರಾಗಿ ಸಹಿ ಮಾಡಿರಬೇಕು.ನಾಮಪತ್ರ ಸಲ್ಲಿಕೆಯ ಸಂದರ್ಭ ಚುನಾವಣಾಧಿಕಾರಿ ಕಚೇರಿಯ 100 ಮೀಟರ್ ವ್ಯಾಪ್ತಿಯೊಳಗೆ ಮೂರು ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿದೆ.ಆರ್‌ಒ ಕೊಠಡಿಗೆ ಅಭ್ಯರ್ಥಿ ಸೇರಿ ಐದು ಮಂದಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಬಹುದು.ನಾಮಪತ್ರದ ಜತೆ ಅಭ್ಯರ್ಥಿ ಫಾರಂ 26ರಲ್ಲಿ ತನ್ನ ವೈಯಕ್ತಿಕ ವಿವರವನ್ನು ಅಫಿದವಿತ್‌ನೊಂದಿಗೆ ಒದಗಿಸಬೇಕು.ಯಾವುದೇ ಕಾಲಂ ಖಾಲಿ ಬಿಡುವಂತಿಲ್ಲ.ಜತೆಗೆ ಯಾವುದೇ ಸರಕಾರಿ ಲೆಕ್ಕಶೀರ್ಷಿಕೆ ಬಾಕಿ ಇಲ್ಲ ಎಂಬ ಪ್ರಮಾಣಪತ್ರವನ್ನೂ ನೀಡಬೇಕು.ಅಭ್ಯರ್ಥಿ ನಾಮಪತ್ರ ಸಲ್ಲಿಕೆಯ ಸಮಯದಿಂದೇ ಆತನ ಚುನಾವಣಾ ಖರ್ಚು ವೆಚ್ಚಗಳ ಲೆಕ್ಕಾಚಾರ ಆರಂಭವಾಗಲಿದ್ದು, ಒಂದೇ ಬ್ಯಾಂಕ್ ಖಾತೆಯ ಮೂಲಕ ಎಲ್ಲಾ ರೀತಿಯ ಆರ್ಥಿಕ ವ್ಯವಹಾರವನ್ನು ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಽಕಾರಿಯೂ ಆಗಿರುವ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಸುದ್ದಿಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಉಪಸ್ಥಿತರಿದ್ದರು.
ಮನೆಯಿಂದ ಮತದಾನ ಆಯ್ದುಕೊಂಡರೆ ಮತಗಟ್ಟೆಯಲ್ಲಿ ಇಲ್ಲ ಅವಕಾಶ:
ಕಳೆದ ವಿಧಾನಸಭಾ ಚುನಾವಣೆಯಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ, 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ (ಶೇ.40ಕ್ಕಿಂತ ಹೆಚ್ಚಿನ ವಿಕಲಚೇತನರಿಗೆ)ಮನೆಯಿಂದಲೇ ಮತದಾನ ಮಾಡುವ ಅವಕಾಶವಿದೆ.ಈ ರೀತಿ ಮತದಾನ ಮಾಡಲು ಆಯ್ದುಕೊಂಡಲ್ಲಿ ಅವರ ಮನೆಗಳಿಗೆ ಸಂಬಂಧಪಟ್ಟ ಚುನಾವಣಾ ಅಧಿಕಾರಿ ಹಾಗೂ ಸಿಬ್ಬಂದಿ ಎರಡು ಬಾರಿ ಭೇಟಿ ನೀಡಿ ಮತದಾನ ಪ್ರಕ್ರಿಯೆ ನಡೆಸಲಿದ್ದಾರೆ.ಈ ರೀತಿ ಮನೆಯಿಂದಲೇ ಮತದಾನ ಆಯ್ಕೆ ಮಾಡುವವರಿಗೆ ನಿಗದಿತ ದಿನಾಂಕವನ್ನು ಅವಕಾಶ ನೀಡಲಾಗುತ್ತದೆ.ಆ ರೀತಿ ಎರಡು ಸಂದರ್ಭಗಳಲ್ಲಿ ಮತದಾರರು ಲಭ್ಯವಿಲ್ಲದಿದ್ದರೆ ಅವರು ಮತ್ತೆ ಮತಗಟ್ಟೆಗೆ ಬಂದು ಮತದಾನ ಮಾಡುವ ಅರ್ಹತೆ ಹೊಂದಿರುವುದಿಲ್ಲ.ಪ್ರಜಾಪ್ರಭುತ್ವದ ಹಬ್ಬವಾದ ಮತದಾನವನ್ನು ಮತಗಟ್ಟೆಗಳಲ್ಲಿಯೇ ಬಂದು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಸ್ವೀಪ್ ಮೂಲಕ ಮತದಾನಕ್ಕೆ ಪ್ರೋತ್ಸಾಹ:
ದ.ಕ.ಜಿಲ್ಲೆಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಶೇ.77.9ರಷ್ಟು ಮತದಾನವಾಗಿದೆ.ಆದರೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ರಾಜ್ಯದ ಶೇಕಡಾವಾರು (ಶೇ.68)ಕ್ಕಿಂತಲೂ ಕಡಿಮೆ ಇದೆ. ಈ ರೀತಿ ಒಟ್ಟು 57 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ವಿಶೇಷ ಸ್ವೀಪ್ ಕಾರ್ಯಕ್ರಮದ ಮೂಲಕ ಈ ಬಾರಿ ಮತದಾರರನ್ನು ಮತ ಚಲಾವಣೆಗೆ ಪ್ರೋತ್ಸಾಹಿಸಲು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಮತದಾರರನ್ನು ಮತದಾನಕ್ಕೆ ಪ್ರೇರೇಪಿಸಲು 14 ಮಂದಿ ಜಿಲ್ಲಾ ಐಕಾನ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಽಕಾರಿ ಡಾ.ಆನಂದ್ ತಿಳಿಸಿದರು.
ಬಿಜೆಪಿಯಿಂದ ಕ್ಯಾ|ಬ್ರಿಜೇಶ್ ಚೌಟ, ಕಾಂಗ್ರೆಸ್‌ನಿಂದ ಪದ್ಮರಾಜ್ ಆರ್.ಕೆಆರ್‌ಎಸ್‌ನಿಂದ ರಂಜಿನಿ, ಬಿಎಸ್‌ಪಿಯಿಂದ ಕಾಂತಪ್ಪ ಆಲಂಗಾರ್
ದ.ಕ.ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯ ಬಿಜೆಪಿಯ ಕಾರ್ಯದರ್ಶಿಗಳಾಗಿರುವ ಮಾಜಿ ಯೋಧ ಕ್ಯಾ|ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ನ್ಯಾಯವಾದಿ ಪದ್ಮರಾಜ್ ಆರ್.ಅವರನ್ನು ಕಣಕ್ಕಿಳಿಸಿದ ಬೆನ್ನಲ್ಲಿಯೇ, ಭ್ರಷ್ಟಾಚಾರದ ವಿರುದ್ಧ ರವಿಕೃಷ್ಣ ರೆಡ್ಡಿಯವರ ನೇತೃತ್ವದಲ್ಲಿ ಸಮರ ಸಾರುತ್ತಿರುವ ಕೆಆರ್‌ಎಸ್ ಪಕ್ಷ ತನ್ನ ಅಭ್ಯರ್ಥಿಯಾಗಿ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಮೊಟ್ಟೆಮನೆಯ ಶಿವಪ್ಪ ಗೌಡ ಮತ್ತು ಸುಶೀಲ ದಂಪತಿಯ ಪುತ್ರಿಯಾಗಿರುವ ರಂಜಿನಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಮಂಗಳೂರಿನ ಕಾಂತಪ್ಪ ಆಲಂಗಾರ್ ಸ್ಪರ್ಧಿಸಲಿದ್ದಾರೆ.ಎನ್‌ಎಂಪಿಟಿಯಲ್ಲಿ ಉದ್ಯೋಗಿಯಾಗಿದ್ದ ಕಾಂತಪ್ಪ ಅವರು 2020ರಲ್ಲಿ ವೃತ್ತಿಯಿಂದ ನಿವೃತ್ತರಾಗಿದ್ದು ಜಿಲ್ಲೆಯಲ್ಲಿ ಅಂಬೇಡ್ಕರ್‌ವಾದಿ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿದ್ದಾರೆ.ಬಿಜೆಪಿ, ಕಾಂಗ್ರೆಸ್, ಕೆಆರ್‌ಎಸ್ ಮತ್ತು ಬಿಎಸ್‌ಪಿ ಅಭ್ಯರ್ಥಿಗಳ ಹೆಸರು ಈಗಾಗಲೇ ಅಧಿಕೃತವಾಗಿ ಘೋಷಣೆಯಾಗಿದ್ದು ಚುನಾವಣಾ ಅಖಾಡದಲ್ಲಿ ಯಾರೆಲ್ಲಾ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎಂದು ಕಾದು ನೋಡಬೇಕಿದೆ.
ಪದ್ಮರಾಜ್-ಏ.3.,ಬ್ರಿಜೇಶ್ ಚೌಟ-ಏ.4 ನಾಮಪತ್ರ ಸಲ್ಲಿಕೆ
ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಅವರು ಏ.೩ರಂದು ನಾಮಪತ್ರ ಸಲ್ಲಿಸಲಿದ್ದಾರೆ.ಅದೇ ದಿನ ಬೆಳಿಗ್ಗೆ ಮಂಗಳೂರು ಪುರಭವನದಲ್ಲಿ ಸಮಾವೇಶ ನಡೆದ ಬಳಿಕ ಅವರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.ಬಿಜೆಪಿ ಅಭ್ಯರ್ಥಿ ಕ್ಯಾ|ಬ್ರಿಜೇಶ್ ಚೌಟರವರು ಏ.4ರಂದು ನಾಮಪತ್ರ ಸಲ್ಲಿಸಲಿದ್ದಾರೆ.ಪಕ್ಷದ ಚುನಾವಣಾ ಕಚೇರಿ ಬಳಿಯಿಂದ ರ‍್ಯಾಲಿಯಲ್ಲಿ ತೆರಳಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಸ್ಪರ್ಧೆಯಿಂದ ಹಿಂದೆ ಸರಿದ ಸತ್ಯಜಿತ್ ಸುರತ್ಕಲ್
ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಹಾಗೂ ಹಿಂದೂ ಜಾಗರಣ ವೇದಿಕೆಯ ರಾಜ್ಯ ಮುಖಂಡರಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುವಂತೆ ಮನವಿ ಮಾಡಿರುವ ಪಕ್ಷದ ನಾಯಕರು ಚುನಾವಣೆ ಬಳಿಕ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿರುವುದರಿಂದ ಸತ್ಯಜಿತ್ ಸುರತ್ಕಲ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಸತ್ಯಜಿತ್ ಸುರತ್ಕಲ್ ಅಭಿಮಾನಿ ಬಳಗ ಮತ್ತು ಪ್ರಮುಖ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ ಬಳಿಕ ಸತ್ಯಜಿತ್ ಸುರತ್ಕಲ್ ಅವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದು ಬಿಜೆಪಿ ಪರ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆಯೇ ಅಥವಾ ತಟಸ್ಥ ಧೋರಣೆ ಅನುಸರಿಸಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.
ತಮ್ಮ ಬಿಲ್ಲವ ಸಮುದಾಯದವರಾಗಿರುವ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಸತ್ಯಜಿತ್ ಸುರತ್ಕಲ್ ಅವರು ಚುನಾವಣಾ ಪ್ರಚಾರಕ್ಕೆ ಇಳಿಯುವುದು ಬಹುತೇಕ ಖಚಿತ ಎಂದು ಅವರ ಆಪ್ತಮೂಲಗಳಿಂದ ತಿಳಿದು ಬಂದಿದೆ.ತಮ್ಮ ನಿಲುವಿನ ಕುರಿತು ತಿಳಿಸಲು ಸತ್ಯಜಿತ್ ಅವರು ಪತ್ರಿಕಾಗೋಷ್ಠಿ ನಡೆಸುವುದು ಎಂದು ನಿರ್ಧರಿಸಲಾಗಿತ್ತು.ತುರ್ತಾಗಿ ಅವರು ಮಾ.೨೭ರಂದು ಬೆಂಗಳೂರಿಗೆ ತೆರಳಿರುವುದರಿಂದ ಪತ್ರಿಕಾಗೋಷ್ಠಿ ನಡೆಸಿಲ್ಲ.ಎರಡು ದಿನದಲ್ಲಿ ಅವರ ನಿರ್ಧಾರ ಪ್ರಕಟವಾಗಲಿದೆ ಎಂದು ಮಾಹಿತಿ ಲಭ್ಯವಾಗಿದೆ.ಇನ್ನೋರ್ವ ಬಂಡಾಯ ನಾಯಕರಾಗಿದ್ದ ಪುತ್ತಿಲ ಪರಿವಾರದ ಮುಖ್ಯಸ್ಥರಾದ ಹಿಂದು ಸಂಘಟನೆಗಳ ಮುಂದಾಳು ಅರುಣ್ ಕುಮಾರ್ ಪುತ್ತಿಲ ಅವರು ಈಗಾಗಲೇ ನಿಶ್ಯರ್ಥವಾಗಿ ಪಕ್ಷಕ್ಕೆ ಸೇರಿರುವುದರಿಂದ ಬಿಜೆಪಿ ಬಂಡಾಯದ ಭೀತಿಯಿಂದ ಪಾರಾಗಿದೆ.
ಆನ್‌ಲೈನ್ ಮೂಲಕವೂ ಅವಕಾಶ
ಅಭ್ಯರ್ಥಿಯ 4 ಫೋಟೋಗಳು ಮತ್ತು 25000 ರೂ.ಠೇವಣಿ ಇಡಬೇಕು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಾದರೆ ರೂ.12500 ಠೇವಣಿ ಇಡಬೇಕು,ಹೊಸ ಬ್ಯಾಂಕ್ ಖಾತೆಯನ್ನೂ ಪ್ರಾರಂಭಿಸಿ ಚುನಾವಣೆಯ ಎಲ್ಲಾ ಖರ್ಚುಗಳನ್ನು ಆ ಖಾತೆಯ ಮೂಲಕವೇ ವ್ಯವಹರಿಸಬೇಕು, ಚುನಾವಣಾ ಏಜೆಂಟ್ ಹಾಗೂ ಚುನಾವಣಾ ವ್ಯವಹಾರಗಳ ಏಜೆಂಟ್‌ಗಳನ್ನು ಕಾನೂನು ಬದ್ಧವಾಗಿ ನೇಮಿಸಿಕೊಳ್ಳಬೇಕು,ಆನ್‌ಲೈನ್ ಮೂಲಕವೂ ಅಭ್ಯರ್ಥಿಯು ಚುನಾವಣೆಗೆ ನಾಮಪತ್ರ ಸಲ್ಲಿಸಬಹುದಾಗಿದ್ದು ಅದರ ಪ್ರತಿಯನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ತಿಳಿಸಿದರು.ಸೆಕ್ಷನ್ 127ಎ ಪ್ರಕಾರ ಯಾವುದೇ ಪೋಸ್ಟರ್ಸ್,ಪಾಂಪ್ಲೆಟ್ಸ್ ಜನರೇಟ್ ಮಾಡಿದರೂ ಅದರಲ್ಲಿ ಪ್ರಿಂಟರ್ ಮತ್ತು ಪಬ್ಲಿಷರ್‌ನ ಹೆಸರು ಮತ್ತು ವಿಳಾಸ ಕಡ್ಡಾಯ.ನಾಮಪತ್ರ ಸಲ್ಲಿಕೆಗೂ ಮುನ್ನ ಅನುಮತಿ ಪಡೆದು ಮೆರವಣಿಗೆ ನಡೆಸಬಹುದು,ಮೆರವಣಿಗೆಯ ವೆಚ್ಚವು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರ್ಪಡೆ ಆಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.