ಹಿರೇಬಂಡಾಡಿ: ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ಸೀತಾರಾಮ ಗೌಡ ಬಿ.ಅವರು ಮಾ.30ರಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.
ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ಸೇವಾ ಅವಧಿಯಲ್ಲಿ ಪ್ರೌಢಶಾಲೆಗೆ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಸುಸಜ್ಜಿತ ಕ್ರೀಡಾಂಗಣವನ್ನು ಪಡೆದುದಲ್ಲದೆ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವ ಮೂಲಕ ಹಿರೇಬಂಡಾಡಿಯ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದಾರೆ. ಶಾಲೆಗೆ ಬೇಕಾದ ಭೌತಿಕ ಮೂಲಸೌಕರ್ಯಗಳನ್ನು ದೊರಕಿಸಿಕೊಡುವಲ್ಲಿ ಹಾಗೂ ಕ್ರೀಡಾ ಬೆಳವಣಿಗೆಯಲ್ಲಿ ಇವರ ತನು- ಮನ-ಧನದ ಪ್ರೋತ್ಸಾಹ ನೀಡಿದ್ದಾರೆ. ಇವರ ಕ್ರೀಡಾಗರಡಿಯಲ್ಲಿ ಪಳಗಿದ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸಿ ಉತ್ತಮ ಕ್ರೀಡಾಪಟುಗಳಾಗಿದ್ದಾರೆ.
ಸೀತಾರಾಮ ಗೌಡ ಬಿ ಇವರು ಹಿರೇಬಂಡಾಡಿ ಗ್ರಾಮದ ಬಂಡಾಡಿ ಮನೆತನದಲ್ಲಿ 15.೦3.1964ರಲ್ಲಿ ಬಾಬು ಯಾನೆ ಪದ್ಮಯ್ಯ ಗೌಡ ಹಾಗೂ ಶ್ರೀಮತಿ ಪೂವಕ್ಕ ದಂಪತಿಗಳ ಸುಪುತ್ರರಾಗಿ ಜನಿಸಿರುತ್ತಾರೆ. ಎಸ್.ಡಿ.ಎಂ ಕಾಲೇಜು ಉಜಿರೆ ಇಲ್ಲಿ ತಮ್ಮ ಬಿ.ಕಾಂ.ಪದವಿಯನ್ನು ಪಡೆದು, ಚನ್ನರಾಯಪಟ್ಟಣದ ಬಾರಳುವಿನಲ್ಲಿ ಬಿ.ಪಿ.ಎಡ್ ವೃತ್ತಿ ಶಿಕ್ಷಣವನ್ನು ಪೂರೈಸಿರುತ್ತಾರೆ. ನಂತರ ಬೆಂಗಳೂರಿನ ಸೀಯಾರಾಮ್ ಶೂಟಿಂಗ್ ಹಾಗೂ ಶಟಿಂಗ್ಸ್‌ನಲ್ಲಿ ಬ್ರಾಂಚ್ ಅಕೌಂಟೆಂಟ್ ಆಗಿ ಹಾಗೂ ನಂತರದಲ್ಲಿ ಉಪ್ಪಿನಂಗಡಿಯಲ್ಲಿ ತಮ್ಮದೇ ಆದ ಕನ್ನಡ ಇಂಗ್ಲಿಷ್ ಟೈಪಿಂಗ್ ಶಾಲೆಯಾದ “ಆಶಾ ವಾಣಿಜ್ಯ ಸಂಸ್ಥೆ”ಯನ್ನು ಹುಟ್ಟುಹಾಕಿ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಜೀವನಕ್ಕೆ ದಾರಿದೀಪವಾಗಿದ್ದರು. 11.೦3.1997ರಂದು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾಗಿ ಬೆಳ್ತಂಗಡಿ ತಾಲೂಕಿನ ಪುತ್ತಿಲ ಸರಕಾರಿ ಪ್ರೌಢಶಾಲೆಗೆ ನೇಮಕಗೊಂಡು 30.9.2005ರವರೆಗೆ ಸುಮಾರು 8 ವರ್ಷ 6 ತಿಂಗಳ ಕಾಲ ಸೇವೆ ಸಲ್ಲಿಸಿದರು. ಮುಂದೆ 7 ವರ್ಷ 10 ತಿಂಗಳ ಕಾಲ ಸರ್ಕಾರಿ ಪ್ರೌಢಶಾಲೆ ಕರಾಯ ಇಲ್ಲಿ ಸೇವೆ ಸಲ್ಲಿಸಿ ೦1.೦8.2013 ರಂದು ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿಗೆ ವರ್ಗಾವಣೆಗೊಂಡು ಆಗಮಿಸಿದ್ದರು. ತಮ್ಮ ಸ್ವಗ್ರಾಮವಾದ ಹಿರೇಬಂಡಾಡಿಯ ಕ್ರೀಡಾ ಪ್ರತಿಭೆಗಳಿಗೆ ತರಬೇತಿ ನೀಡಿ ಅಪಾರ ಕ್ರೀಡಾ ಪ್ರತಿಭೆಗಳ ಭವಿಷ್ಯದ ರೂವಾರಿಯಾಗಿರುತ್ತಾರೆ.
ಹಿರೆಬಂಡಾಡಿ ಗ್ರಾಮದ ಹುಟ್ಟು ಹೋರಾಟಗಾರನಾಗಿ ಗುರುತಿಸಲ್ಪಟ್ಟಿರುವ ಇವರು ಹಿರೆಬಂಡಾಡಿ ಹಾಲು ಉತ್ಪಾದಕರ ಸಹಕಾರ ಸಂಘ, ಸಾಕ್ಷರತಾ ಆಂದೋಲನ, ಪ್ರೌಢಶಾಲಾ ಹೋರಾಟ ಸಮಿತಿ, ಭಜನಾ ಸಮಿತಿ, ವಿವಿಧ ಧಾರ್ಮಿಕ ಸೇವಾ ಸಂಸ್ಥೆಗಳಲ್ಲಿ ದುಡಿದು ಗ್ರಾಮದ ಅಭಿವೃದ್ಧಿಯಲ್ಲಿಯೂ ತೊಡಗಿಸಿಕೊಂಡ ಸಾಮಾಜಿಕ ಧುರೀಣರು ಮತ್ತು ಪ್ರಗತಿಪರ ಕೃಷಿಕರೂ ಹೌದು. ಅನೇಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಶಿಕ್ಷಣ ಶುಲ್ಕವನ್ನು ನೀಡುತ್ತಾ ಕೊಡುಗೈ ದಾನಿಯಾಗಿಯೂ, ಅನೇಕ ಕ್ರೀಡಾಪಟುಗಳಿಗೆ ಕ್ರೀಡಾ ಪ್ರೋತ್ಸಾಹಕರಾಗಿಯೂ ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಪ್ರಸ್ತುತ ಪುತ್ತೂರು ತಾಲೂಕು ಸರಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಗ್ರೇಡ್1 ಸಂಘದ ಅಧ್ಯಕ್ಷರಾಗಿ, ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಮುಂದಾಳತ್ವ ವಹಿಸಿರುವ ಕ್ರೀಡಾ ತರಬೇತುದಾರರೂ ಆಗಿದ್ದಾರೆ.
ಪತ್ನಿ ಶಿಕ್ಷಕಿ ತಿಲಕ ಹಾಗೂ ಸುಪುತ್ರಿ ತೋಟಗಾರಿಕಾ ಸ್ನಾತಕೋತ್ತರ ಪದವಿಧರೆಯಾಗಿರುವ ಕುಮಾರಿ ವರ್ಷಿತಾ ಹಾಗೂ ಇ&ಅ ಇಂಜಿನಿಯರಿಂಗ್ ಕಲಿಯುತ್ತಿರುವ ಸುಪುತ್ರ ಅಮೋಘ್ ಇವರೊಂದಿಗೆ ಹಿರೇಬಂಡಾಡಿಯ ‘ಬಂಡಾಡಿ’ಯಲ್ಲಿ ಸಮೃದ್ಧ, ಸಂತ್ರಪ್ತ, ಸಮರಸ ಜೀವನವನ್ನು ಸಂಭ್ರಮಿಸುತ್ತಿದ್ದಾರೆ.