ನೆಲ್ಯಾಡಿ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಎನ್‌ ಎಸ್‌ ಎಸ್ ಶಿಬಿರದ ಸಮಾರೋಪ ಸಮಾರಂಭ

0

ನೆಲ್ಯಾಡಿ: ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಮಾ.30ರಮದು ನೇರ್ಲ ಇಚ್ಲಂಪಾಡಿಯ ಸ.ಉ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಡಬ ತಾಲ್ಲೂಕು ಉಪ ತಹಸೀಲ್ದಾರರಾದ ಗೋಪಾಲ ಕೆ. ಭಾಗವಹಿಸಿ ಮಾತನಾಡಿ ಕೌಟುಂಬಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಸಂಸ್ಕಾರಯುತ ಜೀವನ ರೂಪಿಸಿಕೊಳ್ಳುವ ಮೂಲಕ ಭಾರತಮಾತೆಯ ಪುಣ್ಯಭೂಮಿಯಲ್ಲಿ ಎಲ್ಲರೂ ಒಂದೇ ತಾಯಿಯ ಮಕ್ಕಳಾಗಿ ಜೀವನ ನಡೆಸಲು ಈ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಮಹತ್ವದ ಪಾತ್ರ ವಹಿಸುತ್ತದೆ. ತಾಯ್ತನದ ಪ್ರೀತಿ, ತಂದೆಯ ಮಮತೆಯ ಮಹತ್ವ, ಕೂಡು ಕುಟುಂಬದ, ಸರ್ವ ಸದಸ್ಯರನ್ನು ಒಳಗೊಂಡ ಸಹಬಾಳ್ವೆಯ ಬದುಕಿನ ಕಲೆಯನ್ನು ಈ ಏಳು ದಿನದ ಶಿಬಿರದಲ್ಲಿ ಶಿಬಿರಾರ್ಥಿಗಳು ಪಡೆದುಕೊಂಡಿದ್ದೀರಿ. ಈ ನಡತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾರಂಪರಿಕ ಕೌಟುಂಬಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಾ ದೇಶದ ಅಭಿವೃದ್ಧಿಗೆ ಶ್ರಮಿಸಿ ಎಂದರು.

ಮತ್ತೋರ್ವ ಅತಿಥಿ ನೆಲ್ಯಾಡಿ ಮೆಸ್ಕಾಂನ ಶಾಖಾಧಿಕಾರಿ ರಮೇಶ್ ಬಿ. ಮಾತನಾಡಿ ಭಾರತದ ನಮ್ಮ ಈ ಯುವ ಸಮುದಾಯವೆಂಬ ಸಂಪತ್ತು ಸಮಾಜದ ಸಂಪತ್ತಾಗಿ ಪರಿವರ್ತನೆಯಾಗಬೇಕು. ಕಚ್ಚಾ ವಸ್ತುಗಳೆಲ್ಲ ಸೇರಿ ಒಂದು ಬೆಲೆಬಾಳುವ ಸಿದ್ಧ ವಸ್ತುವಾಗಿ ಹೇಗೆ ರೂಪಗೊಳ್ಳುತ್ತದೆಯೋ ಹಾಗೆ ಇಂದಿನ ವಿದ್ಯಾರ್ಥಿಗಳು ಮೌಲ್ಯಯುತ ವ್ಯಕ್ತಿತ್ವದ ಮೂಲಕ ದೇಶದ ಸಂಪತ್ತಾಗಿ ಬೆಳೆಯಬೇಕು. ಈ ಬೆಳವಣಿಗೆಯಲ್ಲಿ ಎನ್.ಎಸ್.ಎಸ್ ಶಿಬಿರವು ಮಹತ್ವದ ಮಾರ್ಗವಾಗಿದೆ ಎಂದರು.

ನೆಲ್ಯಾಡಿ-ಕೌಕ್ರಾಡಿ ವರ್ತಕರ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್ ಏಳು ದಿನದ ಶಿಬಿರವನ್ನು ಮುಗಿಸಿ ಮರಳಿ ಹೋಗುವ ಈ ಸಂದರ್ಭದಲ್ಲಿ ಎಲ್ಲರ ಮುಖದಲ್ಲಿ ಆವರಿಸಿರುವ ಈ ಬೇಸರ, ದುಃಖವನ್ನು ಗಮನಿಸಿದ್ದೇನೆ. ನೀವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇಲ್ಲಿ ಅನ್ಯೋನ್ಯವಾಗಿ ನಡೆದುಕೊಂಡು ಶ್ರಮದಾನದಲ್ಲಿ ತೊಡಗಿಕೊಂಡಿರುವ ಕಾರಣದಿಂದ ಮಾತ್ರ ಈ ಭಾವ ಉಕ್ಕಿ ಬರಲು ಕಾರಣವಾಗಿದೆ. ಆದರೆ ಇಂತಹ ಅವಕಾಶಗಳನ್ನು ನೀವೆಲ್ಲ ಮತ್ತೆ ಮತ್ತೆ ಸಮಾಜದಲ್ಲಿ ಸೃಷ್ಟಿಸಿಕೊಳ್ಳುವ ಮೂಲಕ ಈ ಶಿಬಿರದಲ್ಲಿ ಪಡೆದುಕೊಂಡ ಕಲಿಕೆಗಳನ್ನು ಜೀವನದುದ್ದಕ್ಕೂ ಬೆಳೆಸಿಕೊಂಡು ಹೋಗಲು ಅವಕಾಶವಿದೆ ಎಂದರು.

ನೆಲ್ಯಾಡಿಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಜಯಾನಂದ್ ಬಂಟ್ರಿಯಾಲ್ ಮಾತನಾಡಿ ಶಾಲೆಯಲ್ಲಿ ಏಳು ದಿನಗಳು ನೀವೆಲ್ಲ ಕೂಡಿಕೊಂಡು ಮಾಡಿದ ಶ್ರಮದಾನ ಎಷ್ಟು ಮುಖ್ಯವೋ ಆ ಶ್ರಮದಾನದ ಅನುಭವವು ಶಿಬಿರಾರ್ಥಿಗಳಲ್ಲಿ ರೂಪಿಸಿದ ವ್ಯಕ್ತಿತ್ವ ಎಲ್ಲಕ್ಕಿಂತ ಮುಖ್ಯವಾದದ್ದು. ಯಾಕೆಂದರೆ ಶಿಬಿರಾರ್ಥಿಗಳಲ್ಲಿ ಈ ಸೇವಾ ಮನೋಭಾವವೆಂಬ ವ್ಯಕ್ತಿತ್ವವು ಸಮಾಜಕ್ಕೆ ಅರ್ಪಿತವಾಗಲು ರೂಪಿತಗೊಂಡಿರುತ್ತದೆ ಎಂದರು.

ನೇರ್ಲ ಇಚಲಂಪಾಡಿ ಸ.ಉ.ಹಿ.ಪ್ರಾ. ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ್ ಬಿಜೇರು ಮಾತನಾಡಿ, ಈ ಶಿಬಿರವು ನಮ್ಮ ಶಾಲೆಯ ಪರಿಸರ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಧನಾತ್ಮಕವಾದ ವಾತಾವರಣವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಿದೆ ಹಾಗಾಗಿ ಈ ಶಿಬಿರವು ಸಾರ್ಥಕತೆಯನ್ನು ಸಾಧಿಸಿದೆ ಜೀವನದ ಸಣ್ಣ ಪ್ರಾತ್ಯಕ್ಷಿಕೆಯಂತೆ ಈ ಶಿಬಿರವು ಕಾರ್ಯನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಉತ್ತಮ ಸಮಾಜದ ನಿರ್ಮಾಣಕ್ಕೆ ಹೀಗೆ ಜೊತೆಯಾಗಿರೋಣ ಎಂದರು.

ನೆಲ್ಯಾಡಿ-ಕೌಕ್ರಾಡಿ ಗ್ರಾಮದ ಕಟ್ಟಡ ಮಾಲೀಕರ ಸಂಘದ ಕಾರ್ಯದರ್ಶಿ ರವಿಚಂದ್ರ ಹೊಸವಕ್ಲು ಅವರು ಮಾತನಾಡಿ ಬದುಕಿನಲ್ಲಿ ಸಂಸ್ಕಾರಯುತ ಜೀವನ ನಡೆಸುವಲ್ಲಿ ಈ ಶಿಬಿರ ಮಹತ್ವದ ಪಾತ್ರವಹಿಸುತ್ತದೆ ಎಂದರು.

ಶಾಲೆಯ ಮುಖ್ಯ ಗುರು ಜಯಶ್ರೀ ಮಾತನಾಡಿ ಈ ಶಿಬಿರದಲ್ಲಿ ಪಡೆದುಕೊಂಡ ಕೌಟುಂಬಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವ್ಯಕ್ತಿತ್ವವನ್ನು ನಿಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಯಶಸ್ವಿಯಾಗಿರಿ ಎಂದು ಹಾರೈಸಿದರು.

ಶಿಬಿರದ ಸ್ವಾಗತ ಸಮಿತಿಯ ಅಧ್ಯಕ್ಷ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್. ಗೌಡ , ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ ಬಿಜೇರು, ಹಾಗೂ ಸದಸ್ಯರಾದ ಸತೀಶ್ ಪಳಿಕೆ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಸಚಿನ್ ಎನ್.ಟಿ ಕಾಲೇಜಿನ ಪರವಾಗಿ ಗೌರವ ಸನ್ಮಾನವನ್ನು ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾಸ್ಕರ ಎಸ್. ಗೌಡ ಅನಿರೀಕ್ಷಿತವಾಗಿ ಈ ಗೌರವಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದರೂ ಕೂಡ ಈ ಶಾಲೆಯ ಮತ್ತು ಕಾಲೇಜಿನ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುವ ಈ ಶಿಬಿರದ ಉನ್ನತ ಧ್ಯೇಯ, ಆಶೋತ್ತರಗಳನ್ನು ಈಡೇರಿಸಲು ನನಗೆ ದೇವರು ನೀಡಿದ ಅವಕಾಶವೆಂದು ಭಾವಿಸಿ ಆರಂಭದಿಂದ ಇಲ್ಲಿಯವರೆಗೂ ಜೊತೆಯಾಗಿ ನಿಂತಿದ್ದೇನೆ. ಈ ಶಿಬಿರವು ಯಶಸ್ವಿಯಾಗಲು ಶಾಲಾ ಕಾಲೇಜಿನ ಆಡಳಿತ ಮಂಡಳಿಯ ಜವಾಬ್ದಾರಿ ಎಷ್ಟು ಮಹತ್ವವೋ ಹಾಗೆಯೇ ಈ ಗ್ರಾಮದ ಎಲ್ಲ ಗ್ರಾಮಸ್ಥರ ಸಹಕಾರ ಮತ್ತು ಭಾಗವಹಿಸುವಿಕೆಯು ಅಷ್ಟೇ ಮಹತ್ವವಾಗಿತ್ತು. ಗ್ರಾಮಸ್ಥರು ಕೈಜೋಡಿಸುವಂತೆ ಮಾಡುವ ಮೂಲಕ ಶಿಬಿರದ ಧ್ಯೇಯ ಉದ್ದೇಶಗಳನ್ನು ಈಡೇರಿಸುವಲ್ಲಿ ಕ್ರಿಯಾಶೀಲವಾಗುವುದು ನನ್ನ ಬಹುದೊಡ್ಡ ಜವಾಬ್ದಾರಿಯಾಗಿತ್ತು. ನಿರೀಕ್ಷೆಗೂ ಮೀರಿ ಗ್ರಾಮಸ್ಥರ ಸಹಕಾರ ಸಿಕ್ಕಿದ್ದು ನನ್ನ ಮೇಲೆ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜಿನವರು ಇಟ್ಟಿರುವ ಅಪಾರ ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜಿನ ಸಹ ಸಂಯೋಜಕ ಡಾ. ಸೀತಾರಾಮ್ ಪಿ. ಮಹಾತ್ಮ ಗಾಂಧಿಯವರ ನೂರನೇ ವರ್ಷದ ಜನ್ಮದಿನದ ಸವಿನೆನಪಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ಥಾಪನೆ ಅದರ ಧ್ಯೇಯ ಆಶೋತ್ತರಗಳನ್ನು ಕುರಿತು ಪ್ರಸ್ತಾಪಿಸುತ್ತಾ ಈ ಶಿಬಿರಕ್ಕೆ ಕಳೆದ ಒಂದು ತಿಂಗಳಿನಿಂದ ನಿರಂತರ ಸಿದ್ಧತಾ ಚಟುವಟಿಕೆಗಳೊಂದಿಗೆ ಶಿಬಿರಾಧಿಕಾರಿಗಳು, ಶಾಲಾ ಆಡಳಿತ ಮಂಡಳಿ, ಸ್ವಾಗತ ಸಮಿತಿಯ ಎಲ್ಲರೂ ಕ್ರಿಯಾಶೀಲರಾಗಿ ಪಾಲ್ಗೊಂಡ ಕಾರಣ ಅಭೂತಪೂರ್ವವಾಗಿ ಯಶಸ್ವಿಯಾಗಿದೆ. ಶಿಬಿರದುದ್ದಕ್ಕೂ ಅತ್ಯಂತ ಮಹತ್ವಪೂರ್ಣವಾದ ವಿಷಯಗಳ ಕುರಿತು ಮೌಲ್ಯಯುತ ಶೈಕ್ಷಣಿಕ ಉಪನ್ಯಾಸ, ವ್ಯಕ್ತಿತ್ವ ವಿಕಸನ ತರಬೇತಿಗಳು ನಡೆದವು. ಇಂತಹ ಮೌಲ್ಯಯುತ ಚಟುವಟಿಕೆಗಳೊಂದಿಗೆ ಪ್ರತಿ ಸಂಜೆಯನ್ನು ಅತ್ಯುತ್ತಮ ಸಾಂಸ್ಕೃತಿಕ ಸಂಜೆಯನ್ನಾಗಿ ಪರಿವರ್ತಿಸಿ ಅವಲೋಕನವೆಂಬ ಸ್ವ ವಿಮರ್ಶೆಯೊಂದಿಗೆ ಪ್ರತಿದಿನ ಮೌಲ್ಯಯುತ ದಿನವನ್ನಾಗಿ ಶಿಬಿರಾರ್ಥಿಗಳು ಪರಿವರ್ತಿಸಿದ್ದಾರೆ ಎಂದರು.ಶಿಬಿರಾರ್ಥಿಗಳಾದ ಯಕ್ಷಿತಾ, ಶಿಬಿರಾರ್ಥಿ ನಾಯಕ ವಿನಯ್, ಶಿಬಿರಾರ್ಥಿ ನಾಯಕಿ ಕಾವ್ಯ ಅನಿಸಿಕೆ ವ್ಯಕ್ತಪಡಿಸಿದರು.

ಶಿಬಿರಾಧಿಕಾರಿ ಶ್ರುತಿ ವರದಿ ವಾಚಿಸಿದರು. ಕನ್ನಡ ವಿಭಾಗದ ಉಪನ್ಯಾಸಕಡಾ. ನೂರಂದಪ್ಪ ಸ್ವಾಗತಿಸಿ,ಸಹ ಶಿಬಿರಾಧಿಕಾರಿ ಚಂದ್ರಕಲಾ ಬಿ. ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ದಿವ್ಯಶ್ರೀ ಜಿ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here