ಪುತ್ತೂರು ಬಿಜೆಪಿ ಕಾರ್ಯಕರ್ತರ ಸಮಾವೇಶ

0

‘400 ಸ್ಥಾನಗಳನ್ನು ಗೆದ್ದು ಬಿಡ್ತೀವಿಯೆಂಬ ಅತ್ಯುತ್ಸಾಹ ಮುಳುವಾಗದಿರಲಿ’-ದಾಕ್ಷಿಣ್ಯವಿಲ್ಲದೆ ದಿನಾ ನಳಿನಣ್ಣನಿಗೆ ಬೈದಿರಿ ಸಂಸದ ಪ್ರತಾಪ್‌ಸಿಂಹ

ಪುತ್ತೂರು:ಇವತ್ತು ದೇಶಾದ್ಯಂತ ಉತ್ತಮ ವಾತಾವರಣ ಕಾಣಿಸಿಕೊಂಡಿದೆ.ಚಾರ‍್ಸೋಬಾರ್ ಎಂದು ನಾವೇ ಹೇಳುತ್ತಿದ್ದೇವೆ.ಅದು ಖರ್ಗೆಯವರ ಬಾಯಿಂದಲೂ ಬಂದಿದೆ.ಆದರೆ ನಾವು 400ಕ್ಕಿಂತ ಜಾಸ್ತಿ ಗೆದ್ದು ಬಿಡುತ್ತೀವಿ ಎನ್ನುವ ಅತ್ಯುತ್ಸಾಹ ಮುಳುವಾಗಬಾರದು.ಯಾಕೆಂದರೆ 2004ರಲ್ಲಿ ಹಲವು ಯೋಜನೆಗಳ ಮೂಲಕ ಜನಪ್ರಿಯರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಂದು ನಮ್ಮ ಕಾರ್ಯಕರ್ತರು ಉದಾಸೀನ ಪ್ರವೃತ್ತಿ ಮೆರೆದುದು ನಮ್ಮನ್ನು 10 ವರ್ಷಗಳ ಕಾಲ ವನವಾಸವನ್ನು ಮಾಡಿಸಿತು.ಅಂತಹ ತಪ್ಪು 2024ರಲ್ಲಿ ಮತ್ತೊಮ್ಮೆ ಆಗಬಾರದು ಎಂದು ಕೊಡಗು ಮೈಸೂರು ಸಂಸದ ಪ್ರತಾಪ್‌ಸಿಂಹ ಅವರು ಹೇಳಿದರು.


ಲೋಕಸಭಾ ಚುನಾವಣೆಗೆ ಸಂಬಂಧಿಸಿ ತೆಂಕಿಲ ಬೈಪಾಸ್ ಸ್ವಾಮಿ ಕಲಾಮಂದಿರದಲ್ಲಿ ಏ.2ರಂದು ಮಧ್ಯಾಹ್ನ ನಡೆದ ಪುತ್ತೂರು ಬಿಜೆಪಿ ವಿಧಾನಸಭಾ ಕ್ಷೇತ್ರದ 221 ಬೂತ್‌ಗಳ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಟಲ್ ಬಿಹಾರಿ ವಾಜಪೇಯಿ ಅವರು 2004ರಲ್ಲಿ ದೇಶಾದ್ಯಂತ ನ್ಯೂಕ್ಲಿಯರ್ ಪರೀಕ್ಷೆ ಮಾಡಿ ಜಗತ್ತಿನಲ್ಲಿ ನಾವು ಯಾರಿಗಿಂತಲೂ ಕಡಿಮೆ ಇಲ್ಲ ಎಂದು ತೋರಿಸಲಾಯಿತು.ಸರ್ವಶಿಕ್ಷಣ ಅಭಿಯಾನ ಮಾಡಲಾಯಿತು.ಚತುಷ್ಪಥ ಹೆದ್ದಾರಿಯನ್ನು ನಿರ್ಮಾಣ ಮಾಡಲಾಯಿತು.ಹಸಿವು, ಶಿಕ್ಷಣ, ಆರೋಗ್ಯದ ಮೂಲಕ ಅಂತ್ಯೋದಯ ಅನ್ನ ಯೋಜನೆ ಪ್ರಾರಂಭ ಮಾಡಲಾಯಿತು.ಈ ಎಲ್ಲ ಸಾಧನೆಗಳ ಹಿನ್ನೆಲೆಯಲ್ಲಿ ನಮ್ಮ ವಾಜಪೇಯಿ ಅವರೇ ಮತ್ತೆ ಗೆಲ್ಲುತ್ತಾರೆಂಬ ಅತಿ ವಿಶ್ವಾಸದಿಂದ ನಮ್ಮ ಕಾರ್ಯಕರ್ತರು ಉದಾಸೀನ ಮನೋಭಾವ ತೋರಿದರು.ಇಂತಹ ಉದಾಸೀನ ಮನೋಭಾವದಿಂದ ಅಟಲ್ ಬಿಹಾರಿ ವಾಜಪೇಯಿ ಅವರು ಮತ್ತೊಂದು ಅವಧಿಗೆ ಪ್ರಧಾನಿ ಆಗುವುದನ್ನು ನಾವು ಕಳೆದುಕೊಂಡು ಸುಮಾರು 10 ವರ್ಷಗಳ ಕಾಲ ವನವಾಸವನ್ನು ಅನುಭವಿಸಿದ್ದೆವು.ನಮ್ಮ ಕಾರ್ಯಕರ್ತರು ಮಾಡಿದ ತಪ್ಪಿಗೆ ದೇಶ 10 ವರ್ಷ ವನವಾಸ ಅನುಭವಿಸಿತು.ಈ ತಪ್ಪು 2024ರಲ್ಲಿ ಆಗಬಾರದು.ಈ ನಿಟ್ಟಿನಲ್ಲಿ ನಾವೆಲ್ಲ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು ಎಂದ ಅವರು, ಇವತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆಲ್ಲುತ್ತಾರೆ.ಎಲ್ಲಾ ಶಾಸಕರು ಜೊತೆಗಿದ್ದಾರೆ.ಕಾರ್ಯಕರ್ತರು ಇದ್ದಾರೆ ಏನೂ ತೊಂದರೆ ಇಲ್ಲ ಎಂದು ಹೇಳಿ ಮೈಮರೆಯದಿರಿ.ಯಾಕೆಂದರೆ ದಕ್ಷಿಣ ಕನ್ನಡದಲ್ಲೂ ಕಾಸರಗೋಡಿನ ತರಹದ ಅಪಾಯಕಾರಿ ವಾತಾವರಣವಿದೆ. ಹಾಗಾಗಿ ಮೈ ಮತ್ತು ಎಚ್ಚರವನ್ನು ತಪ್ಪಬೇಡಿ ಎಂದು ಹೇಳಿದರು.ಇವತ್ತು ಮೋದಿಜೀಯಂತಹ ಜಾಗತಿಕ ನಾಯಕತ್ವವನ್ನು ಉಳಿಸಬೇಕಾದರೆ ನಾವು ಅವರನ್ನು ಗೆಲ್ಲಿಸಬೇಕು.ವಿವೇಕಾನಂದರು ಮುಂದೊಂದು ದಿನ ಭಾರತ ವಿಶ್ವಗುರು ಆಗುತ್ತದೆ ಎಂದು ಹೇಳಿರುವುದನ್ನು ಮೋದಿಯವರು ಸಾಬೀತು ಮಾಡಲಿದ್ದಾರೆ ಎಂದು ಸಿಂಹ ಹೇಳಿದರು.


ಪಕ್ಷ ತಾಯಿ ರೀತಿ ನಮ್ಮನ್ನು ಕಂಡಿದೆ:
ಮೋದಿಯವರ ಬಗ್ಗೆ ಪುಸ್ತಕ ಬರೆದೆ, ಅವರೊಂದಿಗೆ ಸಂಸತ್ ಪ್ರವೇಶ ಮಾಡಿದೆ.ಅಂತಹ ಅವಕಾಶ 15 ವರ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಲಭಿಸಿತ್ತು.ನನಗೂ 10 ವರ್ಷ ಸಂಸದನ ಅವಕಾಶ ಸಿಕ್ಕಿತ್ತು.ಪಕ್ಷ ತಾಯಿ ರೀತಿ ನಮ್ಮನ್ನು ಕಂಡಿದೆ.ಹಾಗಾಗಿ ಈ ಪಕ್ಷ ಯಾರನ್ನು ತೀರ್ಮಾನ ಮಾಡಿ ಟಿಕೆಟ್ ಕೊಟ್ಟರೂ ಅವರ ಗೆಲುವಿಗೆ ಹೋರಾಟ ಮಾಡುವುದು ನಮ್ಮ ಕರ್ತವ್ಯ ಎಂದು ಪ್ರತಾಪಸಿಂಹ ಹೇಳಿದರು.


ದ.ಕ.ದಲ್ಲಿ ಮೂರೂವರೆ ಲಕ್ಷ ಮತಗಳ ಅಂತರದಿಂದ ಬಿಜೆಪಿಗೆ ಗೆಲುವು:
ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ನಾವು ಸ್ವಯಂ ಸೇವಕರು, ನಾವು ಆದರ್ಶದ ವಿಚಾರ ಹಿಡಿದುಕೊಂಡು ಬಂದಿದ್ದೇವೆ ಹೊರತು ನಾವು ಪ್ರಚಾರ ಹೇಳಿಕೊಂಡು ಬಂದಿಲ್ಲ.ವಿಚಾರಧಾರೆಗೆ, ಸಿದ್ದಾಂತಕ್ಕೆ ನಮ್ಮ ಜೀವನ ಅರ್ಪಣೆ ಮಾಡಿದ್ದೇವೆ.ಅಽಕಾರಕ್ಕಾಗಿ ಅಲ್ಲ,ನಾವು ಅಽಕಾರಕ್ಕಾಗಿ ಹೋರಾಟ ಮಾಡುವವರಲ್ಲ.ನಾವು ಭಾರತಕ್ಕಾಗಿ ಹೋರಾಟ ಮಾಡುವವರು,ಹಿಂದುತ್ವಕ್ಕಾಗಿ, ರಾಷ್ಟ್ರೀಯ ವಿಚಾರಧಾರೆಗಾಗಿ ಹೋರಾಟ ಮಾಡುವವರು.ಹಾಗಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಅಭ್ಯರ್ಥಿ ಆದ ಕ್ಷಣ ನಾನು ಕರೆದು ಸ್ವಾಗತಿಸಿ, ನಿಮ್ಮ ಜೊತೆ ನಾನಿದ್ದೇನೆ.ಮೂರೂವರೆ ಲಕ್ಷ ಮತಗಳ ಅಂತರದಿಂದ ನಿಮ್ಮನ್ನು ಗೆಲ್ಲಿಸಲು ನಾವು ಪ್ರಾಮಾಣಿಕವಾದ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇನೆ ಎಂದರು.ಸಂಘದ ಸ್ವಯಂಸೇವಕನಾಗಿದ್ದ ಸಂದರ್ಭ ನಾನು ಎಂ.ಪಿ, ಎಂಎಲ್‌ಎ ಆಗುತ್ತೇನೆಂಬ ಕನಸು ಇರಲಿಲ್ಲ.ಸಂಸದನಾದ ಬಳಿಕ ರೂ.1 ಲಕ್ಷದ 13 ಸಾವಿರ ಕೋಟಿಯ ಯೋಜನೆ ರೂಪುಗೊಳ್ಳಲು ಸಾಕಾರವಾಯಿತು.ಇವತ್ತು ಮತ್ತೊಮ್ಮೆ ನರೇಂದ್ರ ಮೋದಿ ಈ ದೇಶದ ಪ್ರಧಾನಿ ಆಗಬೇಕಾಗಿದೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದಂತೆ ದೇಶದಲ್ಲಿ 400 ಸ್ಥಾನಗಳನ್ನು ಪಡೆದಾಗ ಅದು ಬಿಜೆಪಿ ಗೆಲುವಲ್ಲ.10 ಮಂತ್ರಿಗಳನ್ನು ಪಡೆದಾಗಲೂ ಅದು ಬಿಜೆಪಿಯ ಗೆಲುವಲ್ಲ.ಒಂದೂವರೆ ಸಾವಿರ ಶಾಸಕರನ್ನು ಗೆದ್ದಾಗಲು ಅದು ಬಿಜೆಪಿ ಗೆಲುವಲ್ಲ.ಮತಗಟ್ಟೆಯನ್ನು ಗೆದ್ದು ದೇಶವನ್ನು ಗೆದ್ದಾಗಲೇ ಅದು ಬಿಜೆಪಿ ಗೆಲುವು.ಅದು ಶಾಶ್ವತ ಗೆಲುವು.ಹಾಗಾಗಿ ಮತಗಟ್ಟೆಯನ್ನು ಗೆಲ್ಲುವ ಕೆಲಸ ಆಗಬೇಕು.ಒಬ್ಬೊಬ್ಬ ಕಾರ್ಯಕರ್ತ ಮತಗಟ್ಟೆಯಲ್ಲಿ ಲೀಡ್ ತರುವ ನಿಶ್ಚಯ ಮಾಡಬೇಕೆಂದು ಹೇಳಿದ ನಳಿನ್,ಈ ಬಾರಿ ದೇಶ, ರಾಜ್ಯ, ಜಿಲ್ಲೆಯಲ್ಲಿ ವಾತಾವರಣ ನಮ್ಮ ಪರವಾಗಿದೆ.ಹಾಗಾಗಿ ಕಾರ್ಯಕರ್ತರು ಇವತ್ತಿನಿಂದಲೇ ವಿರಮಿಸದೆ ಮನೆ ಮನೆಗೆ ತೆರಳಿ ನರೇಂದ್ರ ಮೋದಿಯವರ ಯೋಜನೆಗಳನ್ನು ತಿಳಿಸುವ ಕೆಲಸ ಆಗಬೇಕು ಎಂದು ಕರೆ ನೀಡಿದರು.


ಕಾಂಗ್ರೆಸ್ ಹಿಂದುತ್ವಕ್ಕೆ ಕೈ ಹಾಕಿದರೆ ಸರ್ವನಾಶ ಆಗುವುದು ಶತ ಸಿದ್ದ:
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮಾತನಾಡಿ ಚುನಾವಣಾ ಸಂದರ್ಭ ಮನೆ ಮನೆ ಸಂಪರ್ಕ ವೇಳೆ ಕೇಂದ್ರದ ಹಲವು ಯೋಜನೆಗಳನ್ನು ತಿಳಿಸುವ ಕೆಲಸ ಮಾಡಬೇಕು.ಅದೇ ರೀತಿ ಹಲವು ಯೋಜನೆಗಳನ್ನು ನಿಲ್ಲಿಸಿರುವ ಬಗ್ಗೆ ಕಾಂಗ್ರೆಸ್‌ನವರಿಗೆ ಪ್ರಶ್ನೆಗಳ ಸುರಿಮಳೆ ಹಾಕಬೇಕು.ಕೇಂದ್ರದ ಸಾಧನೆ ಜೊತೆಗೆ ರಾಜ್ಯದ ಕಾಂಗ್ರೆಸ್ ಸರಕಾರದ ಅನಾಚಾರವನ್ನು ತಿಳಿಸಬೇಕು. ಯಡಿಯೂರಪ್ಪ ಅವರ ಸರಕಾರ ಇರುವಾಗ ಕೃಷಿಕರಿಗೆ ಕೊಟ್ಟ ರೂ.4 ಸಾವಿರವನ್ನು ಕಾಂಗ್ರೆಸ್ ನಿಲ್ಲಿಸಿದ್ದು ಯಾಕೆ, ಹೈನುಗಾರಿಕೆಗೆ ಪ್ರೋತ್ಸಾಹಧನ ಎಲ್ಲಿ ಹೋಗಿದೆ?. ಕಳೆದ ಆರು ತಿಂಗಳಿಂದ ವೃದ್ದಾಪ್ಯ ವೇತನ, ವಿಧವಾವೇತನ, ವಿಆರ್‌ಡಬ್ಲ್ಯೂ ಅವರಿಗೆ 6 ತಿಂಗಳಿನಿಂದ ವೇತನವೇ ಇಲ್ಲ.ಅದಲ್ಲದೆ ಇವತ್ತು ಡಿ.ಕೆ.ಸುರೇಶ್ ಅವರು ದೇಶ ವಿಭಜನೆಗೆ ಹೊರಟಿರುವುದು,ರಾಜ್ಯ ಸಭೆಯಲ್ಲಿ ಗೆಲುವಾದಾಗ ಪಾಕಿಸ್ತಾನಕ್ಕೆ ಜೈಕಾರ ಹಾಕಿರುವುದು ಇದು ಕಾಂಗ್ರೆಸ್‌ನ ಮನಸ್ಥಿತಿಯನ್ನು ಹೇಳುತ್ತಿದೆ.ಇವತ್ತು ಕಾಂಗ್ರೆಸ್‌ನ ಅಭ್ಯರ್ಥಿ ಪದ್ಮರಾಜ್ ಅವರು ಹಿಂದುತ್ವನ್ನು ಛಿದ್ರಗೊಳಿಸುತ್ತೇವೆ ಎಂದು ಹೇಳಿದ್ದಾರೆ.ಆದರೆ ಈ ದೇಶದ ಹಿಂದುಗಳ ನಾಲಗೆಯಲ್ಲಿ ಅಲ್ಲ ಹೃದಯದಲ್ಲಿ ಹಿಂದುತ್ವ ಇದೆ.ಅದನ್ನು ಅಳಿಸಿ ಹಾಕಲು ಸಾಧ್ಯವಿಲ್ಲ.ಈ ಜಿಲ್ಲೆಯ ಹಿಂದುತ್ವದ ಬಗ್ಗೆ ಮಾತನಾಡಿದರೆ ನಿಮ್ಮ ಅಜ್ಜಿ ಇಂದಿರಾಗಾಂಧಿ, ರಾಜೀವ ಗಾಂಽಯನ್ನು ಹೇಗೆ ಬಿಡಲಿಲ್ಲವೋ ನಿಮ್ಮ ಸೋನಿಯಗಾಂಧಿಗೂ ಹಿಂದುತ್ವವನ್ನು ಒಡೆಯಲು ಸಾಧ್ಯ ಆಗಿಲ್ಲ.ಇವತ್ತು ರಾಹುಲ್ ಗಾಂಽ ಹಿಂದಿನ ಕಾಲದಲ್ಲಿ ಚಾರ್ಲಿ ಚಾಪ್ಲಿನ್, ಮಿಸ್ಟರ್ ಬೀನ್ ಇದ್ದಂತೆ ಪ್ರಸ್ತುತ ಮಕ್ಕಳಿಗೆ ಜೋಕರ್ ಆಗಿ ಕಾಣುತ್ತಿದ್ದಾರೆ.ಅಂತಹ ಜೋಕರ್ ಅನ್ನು ಹಿಡಿದು ನೀವು ಹಿಂದುತ್ವವನ್ನು ಒಡೆಯಲು ನೋಡಿದರೆ ಅದು ಮೂರ್ಖತನದ ಪರಮಾವಧಿ.ಈ ಜಿಲ್ಲೆಯಲ್ಲಿ ಹಿಂದುತ್ವಕ್ಕೆ ಕೈ ಹಾಕಿದರೆ ಸರ್ವನಾಶ ಅಗುವುದು ಶತ: ಸಿದ್ದ ಎಂದರು.


ಚೆಂಡೆ ಬೊಟ್ಟಿ ಪ್ರಚಾರ:
ಕ್ಯಾ|ಬ್ರಿಜೇಶ್ ಚೌಟ ಅವರ ಚುನಾವಣಾ ಪ್ರಚಾರ ಹೇಗೆ ಆರಂಭಿಸಬೇಕೆಂದರೆ ಚೆಂಡೆ ಬೊಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಲೀಡ್ ತರುವ ಕೆಲಸ ಆಗಬೇಕು.ಅಭಿವೃದ್ಧಿ ಮಾಡಿದ್ದೇವೆಂದು ಚೆಂಡೆ ಬೊಟ್ಟಿದರೆ ಸಾಕಾಗುವುದಿಲ್ಲ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಮತಗಳನ್ನು ಪಡೆಯುವ ಮೂಲಕ ದಕ್ಷಿಣ ಕನ್ನಡದಲ್ಲಿ ಹಿಂದುತ್ವದ ಭದ್ರಕೋಟೆಯಾಗಿರುವ ಪುತ್ತೂರಿನಲ್ಲಿ ಪಕ್ಷಕ್ಕೆ ದೊಡ್ಡ ಲೀಡ್ ತರುವ ಕೆಲಸವಾಗಬೇಕು ಎಂದು ಹೇಳಿದ ಪೂಂಜ,ಜೊತೆಗೆ ಅರುಣ್ ಕುಮಾರ್ ಪುತ್ತಿಲ ಕೂಡಾ ಬಿಜೆಪಿಯ ಜೊತೆಗಿದ್ದಾರೆ ಎಂದು ಹೇಳಿದರು.


ಏ.26ಕ್ಕೆ ಚೆಂಡೆ ಬಡಿಯಲು, ಜೂ.4ಕ್ಕೆ ಬ್ಯಾಂಡ್ ಭಾರಿಸಲು ಸಿದ್ದ:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಕಾಂಗ್ರೆಸ್‌ನವರು ದಕ್ಷಿಣ ಕನ್ನಡದ ಅಭಿವೃದ್ದಿಯ ಬಗ್ಗೆ ಕಾಮಾಲೆ ಕಣ್ಣಿನಿಂದ ನೋಡುವ ಕೆಲಸ ಮಾಡುತ್ತಿದ್ದಾರೆ.ಸ್ವಾತಂತ್ರ್ಯ ಬಂದು 75 ವರ್ಷದಲ್ಲಿ ಸುಮಾರು 60 ವರ್ಷ ಆಡಳಿತ ಮಾಡಿದವರು ಕಾಂಗ್ರೆಸ್‌ನವರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 40 ವರ್ಷ ಸಂಸರಾಗಿದ್ದವರು ಕಾಂಗ್ರೆಸ್‌ನವರು.ಪುತ್ತೂರಿನಲ್ಲಿ 33 ವರ್ಷ ಕಾಂಗ್ರೆಸ್ ಶಾಸಕರಿದ್ದರು.ಪುತ್ತೂರಿನ ಇತಿಹಾಸದಲ್ಲಿ ಯಾವುದಾದರೂ ಒಂದು ಕಾಮಗಾರಿಯನ್ನು ಮಾಡಿದ್ದೇವೆ ಎಂದು ಕಾಂಗ್ರೆಸ್‌ನವರು ತೋರಿಸಿ ಕೊಡಲಿ ಎಂದರು.ದಕ್ಷಿಣ ಕನ್ನಡ ಜಿಲ್ಲೆಯ ನೆಲ,ಜಲ, ಸಂಸ್ಕೃತಿ, ಭಾಷೆಗಾಗಿ ಹೋರಾಟ ಮಾಡಿದ ಇತಿಹಾಸ ಇದ್ದರೆ ಅದು ಬಿಜೆಪಿಯಿಂದ ಮಾತ್ರ.ಅಡಿಕೆ ಬೆಳಗಾರರ ಸಂಕಷ್ಟಕ್ಕೆ ಪಾದಯಾತ್ರೆ, ಎತ್ತಿನಹೊಳೆಗೆ ಪಾದಯಾತ್ರೆ, ನಮ್ಮ ಕಾರ್ಯಕರ್ತರ ಬರ್ಬರ ಹತ್ಯೆಯಾದಾಗ ಪಾದಯಾತ್ರೆ, ಗೆಜ್ಜೆಗಿರಿಯಲ್ಲಿ ತಾಯಿಗೆ ಅವಮಾನ ಆದಾಗ ಪಾದಯಾತ್ರೆ ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸಮಸ್ಯೆಗೆ ಸ್ಪಂದನೆ ಕೊಟ್ಡಿದ್ದರೆ ಅದು ಬಿಜೆಪಿ ಮಾತ್ರ.ಅದೇ ರೀತಿ ಅಭಿವೃದ್ದಿಯಲ್ಲೂ ಪುತ್ತೂರು ಬಸ್ ನಿಲ್ದಾಣಕ್ಕೆ ಕೋಟಿಚೆನ್ನಯರ ಹೆಸರು, ಪಡುಮಲೆ ಅಭಿವೃದ್ಧಿಗೆ ಅನುದಾನ, ಗರಡಿ ದೇವಸ್ಥಾನದ ಅಭಿವೃದ್ದಿ, ಮಿನಿವಿಧಾನಸೌಧ ನಿರ್ಮಾಣ, ಬಸ್‌ನಿಲ್ದಾಣ ನಿರ್ಮಾಣ, ಅಗ್ನಿಶಾಮಕದಳ ನಿರ್ಮಾಣ, ಜಿಲ್ಲಾ ನ್ಯಾಯಾಲಯಕ್ಕೆ ಅನುದಾನ, ಬಿಳಿಯೂರು ಡ್ಯಾಮ್ ಆಗಿರುವುದು ಬಿಜೆಪಿಯಿಂದ ಆದರೆ ಕಾಂಗ್ರೆಸ್‌ನವರು ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತು ಪುತ್ತೂರಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಮಠಂದೂರು,ಕೇವಲ ಚೆಂಡೆ ಭಾರಿಸುವುದಲ್ಲ.ಅಭಿವೃದ್ದಿಯನ್ನು ತೋರಿಸಬೇಕು.ನಾವು ಏ.26ಕ್ಕೆ ಚೆಂಡೆ ಬಡಿಯಲು ಬದ್ದರಾಗಿದ್ದೇವೆ.ಜೂನ್ 4ಕ್ಕೂ ಬ್ಯಾಂಡ್ ಬಡಿಯಲು ಸಿದ್ದರಾಗಿದ್ದೇವೆ ಎಂಬ ಸಂದೇಶವನ್ನು ನಮ್ಮ ಕಾರ್ಯಕರ್ತರು ನೀಡಲಿದ್ದಾರೆ.ಹಾಗಾಗಿ ನಮ್ಮೆಲ್ಲರ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಆಯ್ಕೆ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಜೊತೆಗೆ ಬಿಜೆಪಿಯ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ತೋರಿಸುವ ಕೆಲಸ ಮಾಡೋಣ ಎಂದರು.


ಕಾಂಗ್ರೆಸ್ ಅಭ್ಯರ್ಥಿ ತಾಕತ್ತಿದ್ದರೆ ಶಕ್ತಿ ಪ್ರದರ್ಶನ ಮಾಡಲಿ:
ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಸಂಸ್ಕೃತಿ, ಪರಂಪರೆ, ಇತಿಹಾಸ ಇವೆಲ್ಲದಕ್ಕೂ ಮಾದರಿಯಾಗಿ ಭಾರತ ಮೆರೆಯುತ್ತಿದೆ.ಕಾಂಗ್ರೆಸ್‌ನದ್ದು ವಿದೇಶಿ ಸಿದ್ಧಾಂತ. ರಾಷ್ಟ್ರೀಯತೆಯನ್ನು ಮರೆತು ವಿದೇಶಿ ಸಂಸ್ಕೃತಿಯೊಂದಿಗೆ ಕಾಂಗ್ರೆಸ್ ಸಾಗಿ ಬಂದಿರುವುದರಿಂದ ಇಂದು ನೆಲಕಚ್ಚಿದೆ.ಅಭಿವೃದ್ಧಿಯ ಜತೆಗೆ ರಾಷ್ಟ್ರೀಯತೆ ಮೌಲ್ಯಗಳ ಸಿದ್ಧಾಂತಕ್ಕೆ ಅನುಗುಣವಾಗಿ ಮುನ್ನಡೆಯುತ್ತಿರುವ ಬಿಜೆಪಿ ಇಂದು ವಿಶ್ವದಲ್ಲೇ ನಂ.1 ಪಕ್ಷವಾಗಿ ಗುರುತಿಸಿಕೊಂಡಿದೆ.ಶ್ಯಾಮ್‌ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ, ಅಟಲ್‌ಜೀ ಅವರ ಕಲ್ಪನೆಗಳನ್ನು ಸಾಕಾರಗೊಳಿಸುತ್ತಾ ಬಿಜೆಪಿಯ ಆಡಳಿತ ಇರಬೇಕು.2046ರ ತನಕ ಬಿಜೆಪಿಯ ಆಡಳಿತವೇ ಇರಬೇಕೆಂದು ಈ ಬಾರಿಯ ಚುನಾವಣೆಯನ್ನು ಸವಾಲಿನ ಚುನಾವಣೆಯಾಗಿ ಸ್ವೀಕಾರ ಮಾಡಿದ್ದೇವೆ ಎಂದರು. ಅಯೋಧ್ಯೆಯಲ್ಲಿ ಶ್ರೀರಾಮಂದಿರ ಲೋಕಾರ್ಪಣೆ, 370ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರಕ್ಕೆ ನ್ಯಾಯ ಕೊಡಿಸಿದ ಸಂಗತಿ, ಸಿಎಎ ಅನುಷ್ಟಾನ ಮುಂದಿನ ಒಂದಷ್ಟು ವರ್ಷಗಳ ಕಾಲ ಬಿಜೆಪಿ ಸರಕಾರ ಇರಬೇಕು.ಹಿಂದು ಸಮಾಜವನ್ನು ದಮನಗೊಳಿಸುವ ಕಾಂಗ್ರೆಸ್ ಆಡಳಿತ ಸಮಾಜಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡಿದೆ.ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಾ ಬಹುಸಂಖ್ಯಾತರ ವಿರುದ್ಧ ಅನ್ಯಾಯ ಮಾಡುತ್ತಿದೆ.ಹಿಂದು ಕಾರ್ಯಕರ್ತರು ಬೀದಿ ಹೆಣವಾಗಿ ಬಿದ್ದ ಅನೇಕ ಸಂಗತಿಯ ನಡುವೆ ಈ ಬಾರಿಯ ಚುನಾವಣೆಯನ್ನು ಎದುರಿಸಬೇಕಾಗಿದೆ.ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಬಹುಸಂಖ್ಯಾತರ ವಿರುದ್ಧ ಮಾತನಾಡಿದ್ದಾರೆ.ಪದ್ಮರಾಜ್ ಅವರು ಕೂಡಾ ಒಬ್ಬ ಹಿಂದು ಅಗಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಜನರು ಪ್ರಜ್ಞಾವಂತರು, ವಿದ್ಯಾವಂತರಿದ್ದಾರೆ.ಹಿಂದುತ್ವಕ್ಕೆ ತ್ಯಾಗ ಬಲಿದಾನ ಮಾಡಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ, ಧರ್ಮದ ಜಿಲ್ಲೆಯನ್ನಾಗಿ ಸಾಬೀತು ಮಾಡುತ್ತೇವೆ.ತಾಕತ್ತಿದ್ದರೆ ನಿಮ್ಮ ಶಕ್ತಿಪ್ರದರ್ಶನ ಮಾಡಿ ಎಂದು ಸವಾಲು ಹಾಕಿದರು.


ಏ.4ಕ್ಕೆ ಮಂಗಳೂರಿನಲ್ಲಿ ಹಿಂದುತ್ವದ ಶಕ್ತಿಯನ್ನು ತೋರಿಸೋಣ:
ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆ ಸಂಘಟನಾತ್ಮಕ ಜಿಲ್ಲೆ.ಇಲ್ಲಿ ಕಾರ್ಯಕರ್ತರ ಪ್ರೀತಿ ವಿಶ್ವಾಸ ಮುಖ್ಯ.ನಮ್ಮ ಪಾರ್ಟಿಯನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ.ಇದು ಕಾರ್ಯಕರ್ತರ ಪ್ರೀತಿ ವಿಶ್ವಾಸದಿಂದ ಸಾಧ್ಯ ಆಗಿದೆ.ಅತ್ಯಂತ ಶ್ರೀಮಂತಿಕೆಯ ನಾಡು ನಮ್ಮ ತುಳುನಾಡು. ಹೆಮ್ಮೆಯ ಪ್ರದೇಶದಲ್ಲಿ ನನಗೆ ಪ್ರತಿನಿಧಿಸಲು ಅವಕಾಶ ಸಿಕ್ಕಿರುವುದು ನನಗೆ ಪುಣ್ಯದ ಕೆಲಸ.ನನ್ನ ಬದ್ಧತೆ ಸದಾ ಹಿಂದುತ್ವಕ್ಕೆ ಇರುತ್ತದೆ.ನಿಮ್ಮ ಪ್ರೀತಿ ವಿಶ್ವಾಸಕ್ಕೆ ಒಂದಷ್ಟು ಚ್ಯುತಿ ಬಾರದಂತೆ ನಾನು ಕೆಲಸ ಮಾಡಲಿದ್ದೇನೆ. 2024ರ ಚುನಾವಣೆ ನಿರ್ಣಾಯಕ ಚುನಾವಣೆಯಾಗಿದ್ದು ಹಿಂದು ಸಮಾಜದ ಜಾಗೃತಿ, ಹಿಂದು ಜೀವನಪದ್ದತಿಗೆ, ಸಂಸ್ಕೃತಿಗೆ ಅಗತ್ಯವಾಗಿ ಯುಗ ಪುರುಷ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ ಎಂದರು.ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರಕೋಟೆಯಾಗಿತ್ತು.ಮುಂದೆಯೂ ಆಗಲಿದೆ.ಇವತ್ತು ಕಾಂಗ್ರೆಸ್‌ಗೆ ಸುಳ್ಳೇ ಬಂಡವಾಳ ಆಗಿದೆ.ನಮಗೆ ಅಭಿವೃದ್ದಿ ಮತ್ತು ಯೋಜನಯೆ ಬಂಡವಾಳ.ಹಾಗಾಗಿ ದೇಶದ ಪ್ರಧಾನಿ ವಿಕಸಿತ ಭಾರತ ಮಾಡಿದರೆ ನಾನು ವಿಕಸಿತ ದಕ್ಷಿಣ ಕನ್ನಡ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಅದೇ ರೀತಿ ಹಿಂದುತ್ವದ ಭದ್ರಕೋಟೆಯ ಕುರಿತು ಸಂಶಯ ಇದ್ದವರಿಗೆ ಏ.4ರಂದು ನಾಮಪತ್ರ ಸಲ್ಲಿಸುವ ಸಂದರ್ಭ ಮಂಗಳೂರುನಲ್ಲಿ ಹಿಂದುತ್ವದ ಶಕ್ತಿಯನ್ನು ತೋರಿಸೋಣ ಎಂದರು.


ಕ್ಯಾಪ್ಟನ್ ಬ್ರಿಜೇಶ್ ಚೌಟ ದಕ್ಷಿಣ ಕನ್ನಡದ ಕ್ಯಾಪ್ಟನ್:
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮಾತನಾಡಿ ಕೆಲವರಿಗೆ ಜಿಲ್ಲೆಯಲ್ಲಿ ಹಿಂದುತ್ವದ ಬಗ್ಗೆ ಸಂಶಯವಿದೆ.ಕೆಲವರು ಜಾತಿಯ ಅಮಲಿನಲ್ಲಿ ಇದ್ದಾರೆ. ಅವರಿಗೆಲ್ಲ ಈ ಬಾರಿಯ ಚುನಾವಣೆಯಲ್ಲಿ ಸರಿಯಾದ ಉತ್ತರ ಕೊಡಲಿದ್ದೇವೆ.ಮುಂದೆ ಕಾಂಗ್ರೆಸ್ ಈ ಜಿಲ್ಲೆಯಲ್ಲಿ ಓಟಿಗೆ ನಿಲ್ಲಬೇಕಾದರೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಬರುವಂತೆ ಈ ಚುನಾವಣೆಯಲ್ಲಿ ನಾವು ಗೆಲ್ಲಬೇಕಾಗಿದೆ.ಈ ಚುನಾವಣೆ ದೇಶದ, ನರೇಂದ್ರ ಮೋದಿಯವರ ಮತ್ತು ಆತ್ಮಶಕ್ತಿಯನ್ನು ವೃದ್ಧಿಸುವ ಚುನಾವಣೆ ಆಗಿದೆ.ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಮುಂದಿನ ಕ್ಯಾಪ್ಟನ್ ಮಾಡುವುದಕ್ಕೆ ಕಾರ್ಯಕರ್ತರು ಕೆಲಸ ಮಾಡಬೇಕಾಗಿದೆ.ದೇಶದ ಕ್ಯಾಪ್ಟನ್ ನರೆಂದ್ರ ಮೋದಿಯಾದರೆ ಮುಂದೆ ೧೦ ವರ್ಷಗಳ ಕಾಲ ಜಗತ್ತಿನಲ್ಲಿ ಭಾರತ ಅತ್ಯಂತ ದೊಡ್ಡ ಶಕ್ತಿಶಾಲಿಯಾಗುವುದಕ್ಕೆ ನಿಮ್ಮ ಮತ ಅಗತ್ಯವಾಗಿ ಬೇಕು.ಮುಂದೆ ಸಮಯ ಬಹಳ ಕಡಿಮೆ ಇದೆ.ಒಂದು ನಿಮಿಷವೂ ವ್ಯರ್ಥ ಮಾಡದೆ ಮನೆ ಮನೆ ಸಂಪರ್ಕ ಮಾಡಿ ನರೇಂದ್ರ ಮೋದಿಯವರ ಸಾಧನೆ ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು.ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಹೇಳಿದರು.ಏ.೪ರಂದು ನಾಮಪತ್ರ ಸಲ್ಲಿಕೆ ವೇಳೆ ಪುತ್ತೂರಿನಿಂದ ಬಹೃತ್ ಸಂಖ್ಯೆಯಿಂದ ಸೇರಬೇಕೆಂದವರು ಸೂಚನೆ ನೀಡಿದರು.


ಸಮಾವೇಶದ ಬಳಿಕ ಮನೆ ಮನೆ ಭೇಟಿ ಆರಂಭ;
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಒಂದು ಸುತ್ತಿನ ಬೂತ್ ಸಭೆಗಳು ಮುಗಿದಿವೆ.ಮುಂದೆ ಈ ಸಮಾವೇಶದ ಬಳಿಕ ಮನೆ ಮನೆ ಭೇಟಿ ಆರಂಭಗೊಳ್ಳಲಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು.


ರಾಜ್ಯ ಹಿರಿಯರ ಪ್ರಕೋಷ್ಠದ ಸಂಚಾಲಕರಾಗಿರುವ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್,ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ದ.ಕ.ಜಿಲ್ಲೆ ಬಿಜೆಪಿ ಸಹಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ್, ಕಿಶೋರ್ ಬೊಟ್ಯಾಡಿ, ಪ್ರೇಮಾನಂದ ಶೆಟ್ಟಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಸುಲೋಚನಾ ಜಿ.ಕೆ.ಭಟ್, ದ.ಕ ಲೋಕಸಭಾ ಕ್ಷೇತ್ರ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ನಿತಿನ್ ಕುಮಾರ್, ಪುತ್ತೂರು ಸಹಸಂಚಾಲಕ ಉಮೇಶ್ ಕೋಡಿಬೈಲ್,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಆರ್.ಸಿ ನಾರಾಯಣ, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ಮಹೇಶ್ ಜೋಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ರೋಡಿ, ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಶೆಟ್ಟಿ, ಇಂದುಶೇಖರ್, ಮುಕುಂದ ಬಜತ್ತೂರು, ವಿಜಯ ಕುಮಾರ್ ರೈ ಕೊರಂಗ, ಹರೀಶ್ ಆಚಾರ್ಯ, ಸೀತಾರಾಮ ರೈ ಕೆದಂಬಾಡಿಗುತ್ತು ಅತಿಥಿಗಳಿಗೆ ಶಲ್ಯ ಹಾಕಿ ಗೌರವಿಸಿದರು.ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಮಾಧ್ಯಮ ನಿರ್ವಹಣೆಯಲ್ಲಿ ಸಹಕರಿಸಿದರು.ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷೆ ಉಷಾಚಂದ್ರ ಮುಳಿಯ ವಂದೇ ಮಾತರಂ ಹಾಡಿದರು.ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ವಂದಿಸಿದರು.ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು.

ದಾಕ್ಷಿಣ್ಯವಿಲ್ಲದೆ ದಿನಾ ನಳಿನಣ್ಣನಿಗೆ ಬೈದಿರಿ
ಅತ್ಯಂತ ಕಷ್ಟದ ದಿನಗಳಲ್ಲಿ ಕೂಡ ಪಕ್ಷವನ್ನು ಕಟ್ಟಿದವರು ನಳಿನ್ ಕುಮಾರ್ ಕಟೀಲ್.ಅಂಥವರ ವಿರುದ್ಧ ಪಂಪ್‌ವೆಲ್ ಸೇತುವೆ ಆಗಿಲ್ಲ.ಪಂಪ್‌ವೆಲ್ ಓವರ್‌ಬ್ರಿಜ್ ಮಾಡಿಲ್ಲ ಎಂದು ಟ್ರೋಲ್ ಮಾಡಿದಿರಿ.ಮೊದಲ ಬಾರಿ ನಳಿನಣ್ಣ ಎಂಪಿಯಾದಾಗ ಮನಮೋಹನ ಸಿಂಗ್ ಸರಕಾರವಿತ್ತು.ಆಗ ಇವರಿಗೆ ಕರಾಳ ದಿನಗಳಾಗಿದ್ದವು.2013ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ಶಾಸಕರನ್ನು ಕಳೆದುಕೊಳ್ಳಬೇಕಾಯಿತು.ಒಬ್ಬ ಸಂಸದನಾಗಿ ಇಡೀ ಜಿಲ್ಲೆ ಸುತ್ತಿ ಒಬ್ಬನೇ ಕೆಲಸ ಮಾಡಿದ್ದಲ್ಲದೆ, ಪಕ್ಷವನ್ನೂ ಕಟ್ಟಬೇಕಾಗಿತ್ತು.2018ರಲ್ಲಿ ಮತ್ತೆ ಶಾಸಕ ಸ್ಥಾನಗಳನ್ನು ತುಂಬಿಸಿಕೊಂಡು, 2019ರಲ್ಲಿ ತಾನೂ ಗೆದ್ದರು.ಸಂಘದ ಸ್ವಯಂ ಸೇವಕನಾಗಿದ್ದವನನ್ನು ಪಕ್ಷಕ್ಕೆ ತಂದು ಸಂಸದನಾಗಿ ಮಾಡಲಾಯಿತು.ಆಮೇಲೆ ಪಕ್ಷದ ರಾಜ್ಯಾಧ್ಯಕ್ಷ ಮಾಡಲಾಯಿತು.ಬಳಿಕ ಇಡೀ ರಾಜ್ಯ ಸುತ್ತುತ್ತಾ ಪಕ್ಷ ಕಟ್ಟಿದರು.ಸಂಸದನಾಗಿ ಕೆಲಸ ಮಾಡಲು ಸಮಯ ಸಿಗದಂತಾಯಿತು.ಆದರೂ ಅವರನ್ನು ಬೈದಿರಿ.ಪಂಪ್‌ವೆಲ್ ಸೇತುವೆ ವಿಳಂಬವಾಗಲು ಯುಪಿಎ ಸರಕಾರದ ನೀತಿ ಕಾರಣವಾಗಿದ್ದರೂ ನೀವೆಲ್ಲ ನಳಿನಣ್ಣನಿಗೆ ಬೈದಿರಿ.ಹಾಸನದಲ್ಲಿ ಬೇರೆ ಪಕ್ಷದ ಸಂಸದರಿದ್ದಾರೆ ಎಂಬುದನ್ನೂ ಮರೆತು ಹಾಸನ- ಮಂಗಳೂರು ಹೆದ್ದಾರಿಯಲ್ಲಿ ಒಂದು ಗುಂಡಿ ಬಿದ್ದರೂ ನಳಿನಣ್ಣನಿಗೆ ಬೈದಿರಿ.ಒಬ್ಬ ಶಾಸಕ, ಸಂಸದನ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಅವರ ಹೆಂಡ್ತಿ, ಮಕ್ಕಳಿಗೆ ಚೆನ್ನಾಗಿ ಗೊತ್ತಿರುತ್ತದೆ.ಬೇರೆಯವರಿಗೆ ಅರ್ಥವೇ ಆಗೋದಿಲ್ಲ.ನಾವಾದ್ರೂ ಸಮಯ ಸಿಕ್ಕಾಗ ಒಂದು ಪಾರ್ಟಿಯಾದ್ರೂ ಮಾಡ್ತೀವಿ.ಆದರೆ ನಳಿನಣ್ಣ ಮಾತ್ರ ಮಂಗಳೂರಿನಲ್ಲಿರಲಿ, ಬೆಂಗಳೂರಿನಲ್ಲಿರಲಿ, ಕಡೆಗೆ ಮೈಸೂರಿಗೆ ಬಂದರೂ ಗಂಜಿ ಊಟ ತರಿಸಿ ಊಟ ಮಾಡ್ತಾರೆ.ಹೀಗಿದ್ದರೂ ದಾಕ್ಷಿಣ್ಯ ಇಲ್ಲದೆ ದಿನಾ ನಳಿನಣ್ಣನಿಗೆ ಬೈದಿರಿ.ಇಷ್ಟೆಲ್ಲ ಯಾಕೆ ಹೇಳಿದೆನೆಂದರೆ ನಾಳೆ ಬ್ರಿಜೇಶ್ ಚೌಟ ಗೆದ್ದಾದ ಮೇಲೂ ಒಮ್ಮೆಲೇ ಜಡ್ಜ್‌ಮೆಂಟ್ ಕೊಡೋದಕ್ಕಿಂತ ಅವರಿಗೆ ಕೆಲಸ ಮಾಡಲು ಸ್ವಲ್ಪ ಸಮಯ ಕೊಡಿ.ಅವರಿಗೆ ಸಹಾನುಭೂತಿ ತೋರಿಸಿ-
ಪ್ರತಾಪ್‌ಸಿಂಹ, ಸಂಸದರು ಮೈಸೂರು

ಅರುಣ್ ಕುಮಾರ್ ಪುತ್ತಿಲರಂತೆ ಶಕ್ತಿ ಪ್ರದರ್ಶನ ನಾನು ಮಾಡಿಲ್ಲ
ನಾವೆಲ್ಲ ಪಕ್ಷಕ್ಕೆ ಕೆಲಸ ಮಾಡುವವರು.ನಾವೆಲ್ಲ ಪಕ್ಷಕ್ಕಿಂತ ದೊಡ್ಡವರಲ್ಲ. ವೈಯುಕ್ತಿಕ ಇಟ್ಟುಕೊಂಡು ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಾದರೆ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರಿನಲ್ಲಿ ಏನು ಮಾಡಿದ್ದರೋ ನನಗೂ ಮೈಸೂರಿನಲ್ಲಿ ಮಾಡಬಹುದಿತ್ತು.
ಆದರೆ ನಾನು ಶಕ್ತಿ ಪ್ರದರ್ಶನ ಮಾಡಲು ಹೋಗಿಲ್ಲ ಯಾಕೆಂದರೆ ಪಕ್ಷ ನಿಷ್ಟೆಯಿಂದ.ಎಷ್ಟೋ ಸಾರಿ ಸಂಘಟನೆಯಲ್ಲಿ ಎಲ್ಲೋ ನ್ಯಾಯ ಸಿಕ್ಕಿಲ್ಲ ಎಂದು ಪ್ರಶ್ನೆ ಬಂದಾಗ ಸಂಘಟನೆಯೇ ಸೆಟೆದು ನಿಂತು ಒಬ್ಬ ವ್ಯಕ್ತಿಯ ಪರವಾಗಿ ನಿಂತು ಕೇಳಿದ ಕ್ಷೇತ್ರವಿದ್ದರೆ ಅದು ಪುತ್ತೂರು ಕ್ಷೇತ್ರ.ಅಷ್ಟು ಪ್ರೀತಿ ವಿಶ್ವಾಸವನ್ನು ನಿಮ್ಮ ಕಾರ್ಯಕರ್ತರು ತೋರಿಸಿದ್ದಾರೆ.ಮುಂದೆ ಆ ವೈಯಕ್ತಿಕ ಶಕ್ತಿಯನ್ನು ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲು ಕಾರ್ಯಗತಗೊಳಿಸಿ-
| ಪ್ರತಾಪ್‌ಸಿಂಹ, ಸಂಸದರು ಮೈಸೂರು

ಪುತ್ತಿಲರನ್ನು ಎದುರು ಸೀಟ್‌ಗೆ ಕರೆಸಿಕೊಂಡ ಪ್ರತಾಪ್‌ಸಿಂಹ
ಕಾರ್ಯಕ್ರಮದ ವೇದಿಕೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಹಿಂದಿನ ಆಸನದಲ್ಲಿ ಕುಳಿತುಕೊಳ್ಳುತ್ತಿದ್ದಂತೆ ವೇದಿಕೆಯ ಮುಂಭಾಗದ ಅಸನದಲ್ಲಿದ್ದ ಸಂಸದ ಪ್ರತಾಪ್‌ಸಿಂಹ ಅವರು ಅರುಣ್ ಕುಮಾರ್ ಪುತ್ತಿಲ ಅವರನ್ನು ಎದುರಿಗೆ ಕರೆಸಿ ತನ್ನ ಪಕ್ಕದಲ್ಲೇ ಕುಳ್ಳಿರಿಸಿದರು.ಅರುಣ್ ಕುಮಾರ್ ಪುತ್ತಿಲ ಅವರು ಬೇಡ ಹಿಂದೆ ಸಾಕು ಎಂದು ಹೇಳಿದರೂ ಪ್ರತಾಪ್‌ಸಿಂಹ ಅವರು ಒತ್ತಾಯ ಪೂರ್ವಕವಾಗಿ ತಾನೇ ಚಯರ್ ಎಳೆದು ತನ್ನ ಪಕ್ಕದಲ್ಲೇ ಕುಳ್ಳಿರಿಸಿಕೊಂಡರು.ಇದು ಎಲ್ಲರ ಗಮನ ಸೆಳೆಯಿತಲ್ಲದೆ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

LEAVE A REPLY

Please enter your comment!
Please enter your name here