ಪಾಲ್ತಾಡಿ ಇಲ್ಲಾರೆಗುಡ್ಡೆ ಮಂಜಕೊಟ್ಯ ಶ್ರೀ ಮೊಗೇರ್ಕಳ ಗರಡಿ ಪ್ರವೇಶೋತ್ಸವ-ಸ್ವಾಮಿ ಕೊರಗಜ್ಜ, ಶ್ರೀ ಗುಳಿಗ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಅನ್ನಸಂತರ್ಪಣೆ

0

ಪುತ್ತೂರು: ಹಲವು ವರ್ಷಗಳ ಇತಿಹಾಸವಿರುವ ನಂಬಿದ ಭಕ್ತರ ಸಲಹುತ್ತಿರುವ ತುಳುನಾಡಿನ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಗಳ ನೂತನ ಗರಡಿ ನಿರ್ಮಾಣಗೊಂಡು ಶ್ರೀ ದೈವಗಳ ಪ್ರತಿಷ್ಠೆಯೊಂದಿಗೆ ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಕಾರ್ಯಕ್ರಮ ಪಾಲ್ತಾಡಿ ಗ್ರಾಮದ ಇಲ್ಲಾರೆಗುಡ್ಡೆಯಲ್ಲಿ ಏ.4 ರಂದು ಜರಗಿತು.

ಪುರೋಹಿತರಾದ ಗಣೇಶ್ ಭಟ್ ಮಾಡಾವುರವರ ನೇತೃತ್ವದಲ್ಲಿ ಶ್ರೀ ಮೊಗೇರ್ಕಳ ದೈವಗಳ ಹಾಗೂ ಶ್ರೀ ಸ್ವಾಮಿ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವದ ಪ್ರತಿಷ್ಠೆಯು ಬೆಳಿಗ್ಗೆ ಗಂಟೆ 10.30 ರ ಮಿಥುನ ಲಗ್ನದ ಸುಮುಹೂರ್ತದಲ್ಲಿ ನೆರವೇರಿತು. ಬೆಳಿಗ್ಗೆ ಗಣಪತಿ ಹವನ ನಡೆದು ನವಕ ಕಲಶ ಪ್ರತಿಷ್ಠೆ ನಡೆಯಿತು. ಬೆಳಿಗ್ಗೆ 10.30 ಕ್ಕೆ ದೈವಗಳ ಪ್ರತಿಷ್ಠಾ ಕಾರ್ಯಗಳು ನಡೆದು ಕಲಶಾಭಿಷೇಕ ಬಳಿಕ ದೈವಗಳಿಗೆ ತಂಬಿಲ ಸೇವೆ ನಡೆಯಿತು.

ಇದೇ ಸಂದರ್ಭದಲ್ಲಿ ಸ್ಥಳೀಯರಿಂದ ಭಜನಾ ಸೇವೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಊರಪರವೂರ ನೂರಾರು ಭಕ್ತರು ಆಗಮಿಸಿ ಶ್ರೀ ದೈವಗಳ ಗಂಧ ಪ್ರಸಾದ, ಅನ್ನ ಪ್ರಸಾದ ಸ್ವೀಕರಿಸಿದರು. ಏ.3 ರಂದು ಸಂಜೆ ಸ್ವಸ್ತಿ ಪುಣ್ಯವಾಚನ, ವಾಸ್ತು ಪೂಜೆ, ವಾಸ್ತು ಬಲಿ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ರಾತ್ರಿ ಮಂಗಳಾರತಿ ಬಳಿಕ ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.


ಪಾಲ್ತಾಡಿ ಇಲ್ಲಾರೆಗುಡ್ಡೆ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಗರಡಿಯ ಕಾಪಾಡ ಚೋಮ ಬೇರಿಕೆ, ಗೌರವಾಧ್ಯಕ್ಷ ಪ್ರವೀಣ್ ರೈ ನಡುಕೂಟೇಲು, ಗೌರವಾಧ್ಯಕ್ಷ ಜಯರಾಮ ಗೌಡ ದೊಡ್ಡಮನೆ, ಅಧ್ಯಕ್ಷ ಬಾಬು ಬಿ.ಕೆ ಪಾಲ್ತಾಡಿ, ಪ್ರಧಾನ ಕಾರ್ಯದರ್ಶಿ ಆನಂದ ನಿಲಾವುರವರುಗಳು ಭಕ್ತಾಧಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರುಗಳಾದ ಚಂದ್ರಶೇಖರ ಉಪ್ಪಳಿಗೆ, ಗಿರೀಶ ಹಸಂತಡ್ಕ ಮತ್ತು ಮಾಧವ ಕಾಯರ್‌ಗುರಿ, ಕೋಶಾಧಿಕಾರಿ ರಮೇಶ್ ನಿಲಾವು, ಜತೆ ಕಾರ್ಯದರ್ಶಿ ಸುಂದರ ಪಿ.ಎಂ, ಜತೆ ಕೋಶಾಧಿಕಾರಿ ದಿನೇಶ್ ಬೇರಿಕೆ ಸಹಿತಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು. ಇದಲ್ಲದೆ ಗ್ರಾಮದ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನ ಚಾಕೊಟೆತ್ತಡ್ಕ ಮಾಡ ಪಾಲ್ತಾಡಿ ಇದರ ಗೌರವಾಧ್ಯಕ್ಷರಾದ ಸಂತೋಷ್ ಕುಮಾರ್ ನಳೀಲು, ಅಧ್ಯಕ್ಷ ಸಂಜೀವ ಗೌಡ ಪಾಲ್ತಾಡಿ ಹಾಗೂ ಪದಾಧಿಕಾರಿಗಳು, ಸದಸ್ಯರುಗಳು, ಗ್ರಾಮದ ಆರು ಮನೆಯವರಾದ ನರಸಿಂಹ ಪಕ್ಕಳ ಪಾಲ್ತಾಡಿ ಗುತ್ತಿನಮನೆ, ಜನಾರ್ದನ ಗೌಡ ಕೆಳಗಿನಮನೆ, ಮೋನಪ್ಪ ಗೌಡ ದೊಡ್ಡಮನೆ, ಅಶೋಕ್ ಗೌಡ ಖಂಡಿಗೆ, ರಾಮಕೃಷ್ಣ ಗೌಡ ಅಂಗಡಿಹಿತ್ಲು, ಮುಂಡಪ್ಪ ಪೂಜಾರಿ ಬೊಳಿಯಾಲ ಸೇರಿದಂತೆ ಊರ ಹತ್ತು ಸಮಸ್ತರು ಭಾಗವಹಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾದರು.

ಶಾಲು,ಪ್ರಸಾದದೊಂದಿಗೆ ಗೌರವಾರ್ಪಣೆ
ಪಾಲ್ತಾಡಿ ಸರಕಾರಿ ಶಾಲೆಯ ಪಕ್ಕದಲ್ಲೇ ಸಂಪೂರ್ಣ ಪ್ರಕೃತಿದತ್ತವಾದ ಪ್ರದೇಶದಲ್ಲಿ ಗರಡಿ ನಿರ್ಮಾಣ ಮಾಡಲಾಗಿದೆ. ಮೊಗೇರ್ಕಳ ಗರಡಿ ನಿರ್ಮಾಣ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ದುಡಿದ ಕಾರ್ಯಕರ್ತರನ್ನು, ಗರಡಿ ನಿರ್ಮಾಣಕ್ಕೆ ವಿವಿಧ ರೂಪದಲ್ಲಿ ದೇಣಿಗೆ ನೀಡಿದವರನ್ನು ಹಾಗೂ ಸಮಿತಿಯವರನ್ನು ಈ ಸಂದರ್ಭದಲ್ಲಿ ಶಾಲು ಹಾಕಿ, ಶ್ರೀ ದೈವದ ಪ್ರಸಾದ ನೀಡಿ ಸತ್ಕರಿಸಲಾಯಿತು.


ಅತ್ಯಂತ ಕಾರಣಿಕ ಜಾಗ
ಇಲ್ಲಾರೆಗುಡ್ಡೆಯಲ್ಲಿ ನೆಲೆಯಾಗಿರುವ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಗಳು ಅತ್ಯಂತ ಪುರಾತನ ಇತಿಹಾಸವನ್ನು ಹೊಂದಿದ್ದು ಅತ್ಯಂತ ಕಾರಣಿಕತೆಯುಳ್ಳ ಜಾಗವಾಗಿದೆ. ಇಲ್ಲೇ ಪಕ್ಕದಲ್ಲಿ ಅತ್ಯಂತ ಕಾರಣಿಕತೆಯನ್ನು ಹೊಂದಿರುವ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನ ಕೂಡ ಇದೆ.


‘ ಇಲ್ಲಾರೆಗುಡ್ಡೆಯಲ್ಲಿ ಅನಾದಿ ಕಾಲದಿಂದಲೂ ನೆಲೆಯಾಗಿರುವ ಶ್ರೀ ಮೊಗೇರ್ಕಳ ದೈವಗಳ ಸಾನಿಧ್ಯವೂ ಊರಪರವೂರ ಭಕ್ತಾಧಿಗಳ, ದಾನಿಗಳ ಸಹಕಾರದೊಂದಿಗೆ ಜೀರ್ಣೋದ್ದಾರಗೊಂಡು ನೂತನ ಗರಡಿ ನಿರ್ಮಾಣದೊಂದಿಗೆ ಪರಿವಾರ ದೈವಗಳ ಪ್ರತಿಷ್ಠೆ ನಡೆದಿದೆ. ಸಹಕರಿಸಿದ ಸಮಸ್ತ ಭಕ್ತಾಧಿಗಳಿಗೂ ಶ್ರೀ ದೈವಗಳು ಒಳ್ಳೆಯದನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.’
ಬಾಬು ಬಿ.ಕೆ ಪಾಲ್ತಾಡಿ, ಅಧ್ಯಕ್ಷರು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಗರಡಿ ಇಲ್ಲಾರೆಗುಡ್ಡೆ ಪಾಲ್ತಾಡಿ

LEAVE A REPLY

Please enter your comment!
Please enter your name here