ಕೆಲಸದ ಆಮಿಷವೊಡ್ಡಿ ಯುವತಿಯ ಅತ್ಯಾಚಾರ-ಪ್ರಕರಣದ ಓರ್ವ ಆರೋಪಿಗೆ ಜಾಮೀನು

0

ಪುತ್ತೂರು: ಕೆಲಸದ ಆಮಿಷವೊಡ್ಡಿ ಯುವತಿಯನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರಗೈದ ಘಟನೆಗೆ ಸಂಬಂಧಿಸಿ ಬಂಧಿತ ಓರ್ವ ಆರೋಪಿಯನ್ನು ಜಿಲ್ಲಾ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಬನ್ನೂರು ಗ್ರಾಮದ ಬನ್ನೂರು ಬೈಲು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಮಾ.13ರಂದು ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

ವಾಮಂಜೂರು ಮೂಲದ ಯುವತಿಗೆ ಪುತ್ತೂರಿನ ಯುವಕನೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕವಿದ್ದು, ಆಕೆಯ ಕೋರಿಕೆಯಂತೆ ಯುವಕ ಪುತ್ತೂರಿನಲ್ಲಿ ಆಕೆಗೆ ಉದ್ಯೋಗಕ್ಕಾಗಿ ತನ್ನ ಸ್ನೇಹಿತರಿಗೆ ತಿಳಿಸಿದ್ದ. ಯುವಕನ ಸ್ನೇಹಿತರಾದ ಕರ್ವೇಲು ಮತ್ತು ಕಡೇಶಿವಾಲಯದ ಇಬ್ಬರು ಇದನ್ನು ದುರುಪಯೋಗಪಡಿಸಿಕೊಂಡು ವಾಮಂಜೂರಿನ ಆತನ ಸ್ನೇಹಿತೆಯ ನಂಬರ್ ಪಡೆದು ಆಕೆಗೆ ಉದ್ಯೋಗ ಕೊಡಿಸುವುದಾಗಿ ಪುತ್ತೂರಿಗೆ ಕರೆಸಿದ್ದರು. ಯುವತಿಯು ತನ್ನ ಸ್ನೇಹಿತೆಯ ಜೊತೆಗೆ ಮಾ.13ರಂದು ಪುತ್ತೂರಿಗೆ ಬಂದಾಗ ಕರ್ವೇಲು ಮತ್ತು ಕಡೇಶಿವಾಲಯದ ಆಪಾದಿತ ಯುವಕರಿಬ್ಬರು ಆಕೆಗೆ ಪ್ರೊಫೈಲ್ ಬರೆಯಲೆಂದು ಹೇಳಿ ಆಕೆಯನ್ನು ಬನ್ನೂರು ಗ್ರಾಮದ ಬನ್ನೂರು ಬೈಲು ಬಾಲಏಸು ಮಂದಿರ ಬಳಿಯ ನಿರ್ಜನ ಮನೆಯೊಂದಕ್ಕೆ ಕರೆದೊಯ್ದರು. ಅಲ್ಲಿ ಒಬ್ಬಾತ ಯುವತಿಯನ್ನು ಹೊರಗೆ ಕುಳ್ಳಿರಿಸಿ ಇನ್ನೋರ್ವ ಯುವತಿಯನ್ನು ಮನೆಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ.

ಘಟನೆಯ ಬಳಿಕ ಆರೋಪಿ ಯುವಕರಿಬ್ಬರೂ ಅಲ್ಲಿಂದ ಪರಾರಿಯಾಗಿದ್ದು, ಸಂತ್ರಸ್ತೆ ಯುವತಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ, ಪುತ್ತೂರು ಮಹಿಳಾ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಆರಂಭದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳಿಗೆ ಬಾಡಿಗೆ ಮನೆ ನೀಡಿ ಆಶ್ರಯ ನೀಡಿದ್ದ ಇಬ್ಬರನ್ನು ಬಳಿಕ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಪೈಕಿ ಮನು ಯಾನೆ ಮನ್ವಿತ್ ಎಂಬವರಿಗೆ ಆರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿಯ ಪರವಾಗಿ ನ್ಯಾಯವಾದಿ ಮಹೇಶ್ ಕಜೆ ಅವರು ವಾದಿಸಿದ್ದರು.

LEAVE A REPLY

Please enter your comment!
Please enter your name here