ಆರೋಗ್ಯ ವಿಮಾ ಕಂಪನಿಯ ಸೇವಾ ನ್ಯೂನತೆ ಆರೋಪ-ಬಿಸಿಮುಟ್ಟಿಸಿದ ಗ್ರಾಹಕರ ನ್ಯಾಯಾಲಯ:ಪರಿಹಾರಕ್ಕೆ ಆದೇಶ

0

ಮಂಗಳೂರು:ಮಣಿಪಾಲ ಸಿಗ್ಮ ಹೆಲ್ತ್ ವಿಮಾ ಕಂಪೆನಿಯ ಸೇವಾ ನ್ಯೂನತೆ ಆರೋಪದ ಪ್ರಕರಣವೊಂದರ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ ಪರಿಹಾರಕ್ಕೆ ಆದೇಶ ನೀಡಿದೆ.
ಗೃಹಿಣಿಯಾಗಿರುವ ಬಂಟ್ವಾಳದ ಪೆರ್ನೆ ನಿವಾಸಿ ಗೀತಾ ಬಿ.ಎಸ್.ರವರು ಮಣಿಪಾಲ ಸಿಗ್ಮ ಹೆಲ್ತ್ ವಿಮಾ ಕಂಪನಿಯ ಪ್ರೊ-ಹೆಲ್ತ್ ಪ್ರೊಟೆಕ್ಟ್ ಮೆಡಿಕ್ಲೈಮ್ ಪಾಲಿಸಿಯನ್ನು ಹೊಂದಿದ್ದರು.ಸದ್ರಿ ಪಾಲಿಸಿ 06/05/2021 ರಿಂದ 05/05/2022ರವರೆಗೆ ಸಿಂಧುತ್ವ ಹೊಂದಿತ್ತು.ಸದ್ರಿ ಪಾಲಿಸಿ ಫ್ಯಾಮಿಲಿ ಫ್ಲೋಟರ್ ಆಗಿದ್ದು, ರೂ.32,102 ಪ್ರೀಮಿಯಂ ಅನ್ನು ಗೀತಾರವರು 05/05/2021ರಂದು ಪಾವತಿಸಿದ್ದರು.ಪಾಲಿಸಿಯನ್ನು ಮಂಜೂರು ಮಾಡುವ ಮೊದಲು ವೈದ್ಯಕೀಯ ಪರೀಕ್ಷೆಗಳು ಇತ್ಯಾದಿ ಅಗತ್ಯವಿರುವ ಎಲ್ಲಾ ಪೂರ್ವ ಅವಶ್ಯಕ ಪರೀಕ್ಷೆಗಳನ್ನು, ನಿಯಮಗಳನ್ನು ಅವರು ಅನುಸರಿಸಿದ್ದರಲ್ಲದೆ, ಅಗತ್ಯ ಷರತ್ತುಗಳನ್ನು ಪೂರೈಸಲಾಗಿತ್ತು .ಪ್ರಸ್ತುತ ಪಾಲಿಸಿಯನ್ನು 04/05/2016ರಂದು ಪ್ರಾರಂಭಿಸಲಾಗಿದ್ದು,ನಂತರ ಕಾಲಕಾಲಕ್ಕೆ ಅಗತ್ಯವಾದ ಪ್ರೀಮಿಯಂ ಅನ್ನು ಪಾವತಿಸುವ ಮೂಲಕ ಮುಂದುವರಿಸಲಾಗಿತ್ತು ಮತ್ತು ಪ್ರಸ್ತುತ ಪಾಲಿಸಿಯು ೫ನೇ ವರ್ಷದ ನಿರಂತರ ಕವರೇಜ್ ಆಗಿತ್ತು.ದಿನಾಂಕ 03/06/2021ರಂದು ಗೀತಾರವರು ಹೊಟ್ಟೆನೋವು ಇರುವುದಾಗಿ ಪುತ್ತೂರು ಬೊಳುವಾರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು.05/06/2021ರವರೆಗೆ ಅವರು ಆಸ್ಪತ್ರೆಯಲ್ಲಿದ್ದು,ವೈದ್ಯಕೀಯ ಸಲಹೆಯಂತೆ ಮಂಗಳೂರಿನ ಕೆ.ಎಮ್.ಸಿ.ಆಸ್ಪತ್ರೆಗೆ ಸ್ಥಳಾಂತರಿಸಿ ದಾಖಲು ಮಾಡಲಾಗಿತ್ತು.ವೈದ್ಯರ ರೋಗನಿರ್ಣಯದ ಮೇರೆಗೆ ಗೀತಾರವರಿಗೆ ಸೆಪ್ಸಿಸ್, ಹೆಪಟೈಟಿಸ್ ಖಾಯಿಲೆ ಇತ್ತು.

ಮೆಡಿಕ್ಲೈಮ್ ಪಾಲಿಸಿ ನಂಬಿ ಚಿಕಿತ್ಸೆ ಪಡೆದುಕೊಂಡಿದ್ದರು: ಆ ಸಮಯದಲ್ಲಿ ಅವರು ಮೆಡಿಕ್ಲೈಮ್ ಪಾಲಿಸಿಯನ್ನು ನಂಬಿ, ಸದ್ರಿ ವಿಮಾ ಪಾಲಿಸಿಯು ನಗದು ರಹಿತ ಸೇವಾ ಸೌಲಭ್ಯ ಹೊಂದಿದೆ ಎಂದು ಚಿಕಿತ್ಸೆಯನ್ನು ಪಡೆದುಕೊಂಡಿದ್ದರು.ಗೀತಾರವರು 11 /6/ 21ರವರೆಗೆ ಒಳ ರೋಗಿಯಾಗಿ ದಾಖಲಾಗಿದ್ದರು.ಆದರೆ, ವಿಮಾ ಪಾಲಿಸಿಯಲ್ಲಿ ತಿಳಿಸಿರುವಂತೆ ಕಂಪನಿಯವರು ನಗದು ರಹಿತ ಚಿಕಿತ್ಸೆಯನ್ನು ಒದಗಿಸದೇ, ಯಾವುದೇ ಕಾನೂನುಬದ್ಧ ಸಕಾರಣವಿಲ್ಲದೆ, ಸೇವಾ ಸೌಲಭ್ಯವನ್ನು ನಿರಾಕರಿಸಿರುತ್ತಾರೆ.ಅಲ್ಲದೇ, ಕ್ಲೇಮ್ ಹಣ ಮರುಪಾವತಿಯೂ ಮಾಡದೇ ನ್ಯೂನತಾಯುಕ್ತ ಸೇವೆಯನ್ನು ನೀಡಿದ್ದರಿಂದಾಗಿ ಗೀತಾರವರಿಗೆ ಸಾಕಷ್ಟು ಖರ್ಚು-ವೆಚ್ಚಗಳಾಗಿರುತ್ತದೆ ಹಾಗೂ ಸೇವೆಯ ಕೊರತೆಯಾಗಿದ್ದ ಕುರಿತು ಅವರು ತನ್ನ ಪರ ವಕೀಲರಾದ ಮಹೇಶ್ ಕಜೆ ಅವರ ಮುಖಾಂತರ ಆರಂಭದಲ್ಲಿ ವಿಮಾ ಕಂಪನಿಯವರಿಗೆ ನೋಟಿಸ್ ಜಾರಿ ಮಾಡಿದ್ದರು.ಆದರೆ, ಕಂಪನಿಯವರು ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇದ್ದಾಗ, ಅವರ ವಿರುದ್ಧ ಮಂಗಳೂರು ಗ್ರಾಹಕರ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.ಜಿಲ್ಲಾ ಗ್ರಾಹಕರ ಆಯೋಗ ವಿಚಾರಣೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ, ವಾದವನ್ನು ಆಲಿಸಿ,ದೂರನ್ನು ಪುರಸ್ಕರಿಸಿ, ಎದುರುದಾರರ ಕಂಪನಿಯವರು ಬಿಲ್ಲಿನ ಮೊತ್ತವಾದ ರೂ.2,16,590ಗಳನ್ನು ಶೇ.8% ಬಡ್ಡಿ ಸಹಿತ ಸೇರಿಸಿ ಪಾವತಿಸಲು ಬಾಧ್ಯಸ್ಥರಾಗಿರುತ್ತಾರೆ ಹಾಗೂ 35,000 ಪರಿಹಾರ ನೀಡಲು ಬದ್ದರು ಎಂದು ಆದೇಶ ಮಾಡಿತ್ತು.ಗ್ರಾಹಕರ ಆಯೋಗದ ಆದೇಶದ ನಂತರವೂ ಕಂಪನಿಯವರು ಹಣ ಪಾವತಿ ಮಾಡದೇ ಇದ್ದಾಗ ದೂರುದಾರರು ಮತ್ತೆ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದು, ಇದೀಗ ಕಂಪನಿಯವರು ಸದ್ರಿ ಮೊತ್ತವನ್ನು ನ್ಯಾಯಾಲಯಕ್ಕೆ ಠೇವಣಿ ಇರಿಸಿದ್ದಾರೆಂದು ವರದಿಯಾಗಿದೆ.ಅಪರೂಪದ ಈ ಪ್ರಕರಣದಲ್ಲಿ ಗ್ರಾಹಕರ ಹಕ್ಕಿನ ಮಹತ್ವ ಮತ್ತೊಮ್ಮೆ ಸಾಬೀತಾಗಿದೆ.

LEAVE A REPLY

Please enter your comment!
Please enter your name here