





ಒಂದೂವರೆಯಿಂದ ಎರಡು ಲಕ್ಷ ನೋಟಾ ಮತ ನಿರೀಕ್ಷೆ-ತಿಮರೋಡಿ


ಪುತ್ತೂರು:ಸುಮಾರು ಹನ್ನೆರಡು ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷದಿಂದಲೂ ನ್ಯಾಯ ಸಿಗಲಿಲ್ಲ.ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯಲು ನೋಟಾ ಮತದಾನ ಅಭಿಯಾನ ಮಾಡಲಿದ್ದೇವೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.ಇದೇ ಸಂದರ್ಭದಲ್ಲಿ ನೋಟ ಜಾಗೃತಿ ಅಭಿಯಾನದ ಕರ ಪತ್ರವನ್ನು ಬಿಡುಗಡೆಗೊಳಿಸಲಾಯಿತು.






ನಾವು ಯಾವುದೇ ಪಕ್ಷವನ್ನು ದೂಷಣೆ ಮಾಡುವುದಿಲ್ಲ.ಯಾವುದೇ ರಾಜಕೀಯ ಪಕ್ಷವನ್ನು ಸೋಲಿಸಲು ಮತ್ತು ಯಾರನ್ನೋ ತೇಜೋವಧೆ ಮಾಡಲು ನೋಟಾ ಅಭಿಯಾನ ಮಾಡುತ್ತಿಲ್ಲ. ಧರ್ಮದ ಸತ್ಯದ ಚುನಾವಣೆಯಾಗಿ ನೋಟಾ ಅಭಿಯಾನ ಮಾಡಲಿದ್ದೇವೆ.ನಮಗೆ ಮೇಲಿನವರು ಯಾರೂ ಅರ್ಹರಲ್ಲ ಎಂಬ ಉದ್ದೇಶದಿಂದ ನೋಟಾ ಅಭಿಯಾನ ಮಾಡುತ್ತಿದ್ದೇವೆ. 12 ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಹಲವು ಕೇಸು ಹಾಕಿದ್ದಾರೆ. ಇಲ್ಲಿ ಶಾಸಕಾಂಗ ಸತ್ತಿದೆ.ಹಾಗಾಗಿ ನಾವು ನೋಟಾಕ್ಕೆ ಮತ ಚಲಾಯಿಸಲಿದ್ದೇವೆ.ನೋಟಾ ಬಗ್ಗೆ ಜನ ಜಾಗೃತಿ ಅಗತ್ಯವಿದೆ ಎಂದು ನ್ಯಾಯಾಲಯವೇ ಹೇಳಿದೆ ಎಂದು ತಿಳಿಸಿದ ತಿಮರೋಡಿ, ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಪ್ರಾಧಾನ್ಯತೆ ನೀಡುವ ಈ ಅಭಿಯಾನಕ್ಕೆ ಜನರು ಸಹಕಾರ ನೀಡಬೇಕು.ದ.ಕ. ಹಾಗೂ ಉಡುಪಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಅಭಿಯಾನ ಹಮ್ಮಿಕೊಳ್ಳುತ್ತಿದ್ದು,ಸುಳ್ಯದಲ್ಲಿ ಏ.24ರಂದು ನೋಟಾ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದರಲ್ಲದೆ, ಈ ಬಾರಿ ಸುಮಾರು ಒಂದೂವರೆಯಿಂದ ಎರಡು ಲಕ್ಷ ನೋಟಾ ಮತ ಬರುವ ನಿರೀಕ್ಷೆಯಿದೆ ಎಂದರು.
ಧಾರ್ಮಿಕ ಚಿಂತಕ ತಮ್ಮಣ್ಣ ಶೆಟ್ಟಿ ಅವರು ಮಾತನಾಡಿ ನಾವು ನ್ಯಾಯಾಕ್ಕಾಗಿ ನೋಟಾ ಅಭಿಯಾನ ಮಾಡುತ್ತಿದ್ದೇವೆ. ಅನ್ಯಾಯ ಮಾಡುವುದು ಅಪರಾಧ.ಆದರೆ ಅನ್ಯಾಯವನ್ನು ಸಹಿಸುವುದು ಮಹಾ ಅಪರಾಧ’ ಎಂಬ ಭಗವದ್ಗೀತೆಯ ಸಂದೇಶವನ್ನು ಕರಪತ್ರದಲ್ಲಿ ಹಾಕಿಕೊಂಡು ಅಭಿಯಾನ ನಡೆಸಲಿದ್ದೇವೆ.ಇಲ್ಲಿನ ತನಕ ರಾಜಕೀಯ ಪಕ್ಷಗಳು ಹೆಣಗಳ ಮೇಲೆ ರಕ್ತಪಾತದ ಮೂಲಕ ಅಧಿಕಾರಕ್ಕೆ ಬಂದಿದೆ ಹೊರತು ಅಭಿವೃದ್ಧಿಯ ದೂರದೃಷ್ಟಿತ್ವದಿಂದ ಯಾರೂ ಗೆದ್ದಿಲ್ಲ. ಹಾಗಾಗಿ ನೋಟಾ ಅಭಿಯಾನದಿಂದ ದೇಶ ನಮ್ಮನ್ನು ನೋಡುವಂತಾಗುತ್ತದೆ.ಸೌಜನ್ಯಳ ಕೊಲೆಗೆ ನ್ಯಾಯಕ್ಕಾಗಿ ಕಳೆದ 11 ವರ್ಷಗಳಿಂದ ಮಹೇಶ್ ಶೆಟ್ಟಿ ತಿಮರೋಡಿ ಮುಂದಾಳತ್ವದಲ್ಲಿ ಅನೇಕ ಸಭೆ, ಹೋರಾಟ ನಡೆದರೂ ಪ್ರಮುಖ ರಾಜಕೀಯ ಪಕ್ಷಗಳಿಂದ ಸೂಕ್ತ ಸ್ಪಂದನೆ ಸಿಗದ ಕಾರಣ ನೋಟಾ ಅಭಿಯಾನ ಪ್ರಾರಂಭಿಸಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಭರತ್ ಕಮ್ಮಾರ, ಜಯನ್ ಉಪಸ್ಥಿತರಿದ್ದರು.








