ಉದ್ಯಮ ಕ್ಷೇತ್ರದಲ್ಲಿ ಲಿಖಿತಾ ಕುಸುಮ್ ಮಹಿಳೆಯ ಸಾಧನೆ | 100 ಫ್ರಾಂಚೈಸಿಗಳ ಗುರಿ
ಪುತ್ತೂರು:ಪ್ರತಿಯೋರ್ವ ವ್ಯಕ್ತಿಯಲ್ಲೂ ಪ್ರತಿಭೆ ಅನ್ನೋದು ಇದ್ದೇ ಇದೆ. ಆದರೆ ಅದನ್ನು ಓರೆಗೆ ಹಚ್ಚಿದರಷ್ಟೇ ತನ್ನ ಪ್ರತಿಭೆಗೆ ಮನ್ನಣೆ ಸಿಗುವುದು. ಅದರಲ್ಲೂ ಹೆಣ್ಣು ಸಮಾಜದಲ್ಲಿ ವಿಶಿಷ್ಟ ಸಾಧನೆಗೈಯುವ ಮೂಲಕ ತಾನೋರ್ವ ಅಸಾಧಾರಣ ಮಹಿಳೆ ಎಂಬುದನ್ನು ತೋರಿಸಿಕೊಟ್ಟಿರುವುದು ಮಾತ್ರವಲ್ಲ ಇತರ ಮಹಿಳೆಯರಿಗೆ ಸಾಧನೆ ಮಾಡುವಲ್ಲಿ ಮಾದರಿಯಾಗಿ ಕಾಣಿಸಿರುವುದು ಮಾತ್ರ ನಿಜ.
ಹೌದು, ಹೆಣ್ಣು ಅಬಲೆಯಲ್ಲ, ಸಬಲೆ ಎಂದು ಸಮಾಜಕ್ಕೆ ತೋರಿಸಿಕೊಟ್ಟಿರುವುದು ಬೇರಾರೂ ಅಲ್ಲ. ಇಲ್ಲಿನ ಅರುಣಾ ಕಲಾ ಮಂದಿರದ ಬಳಿಯ, ಕೆ.ವಿ ಶೆಣೈ ಪೆಟ್ರೋಲ್ ಪಂಪಿನ ಎದುರುಗಡೆ ಲಹರಿ ಡ್ರೈಫ್ರುಟ್ ಆಂಡ್ ಮೋರ್ ಬ್ರ್ಯಾಂಡ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಇದೀಗ ಸಂಸ್ಥೆಯು ದಶಮಾನೋತ್ಸವದ ಸಂಭ್ರಮಾಚರಣೆಯ ಜೊತೆಗೆ ಸಂಸ್ಥೆಯನ್ನು ರಾಜ್ಯಮಟ್ಟದತ್ತ ಕೊಂಡೊಯ್ಯುವ ಮೂಲಕ ಸಾಧನೆ ಮಾಡಿರುವ ಸ್ವಾವಲಂಭಿ ಮಹಿಳೆಯ ಹೆಸರೇ ಶ್ರೀಮತಿ ಲಿಖಿತಾ ಕುಸುಮ್ ಆಗಿದ್ದಾರೆ. ಹೆಣ್ಣು ಇಂದು ಗಂಡ, ಮನೆ, ಮಕ್ಕಳು ಅಂತ ಸೀಮಿತವಾಗಿಲ್ಲ. ಮನೆಯಲ್ಲಿ ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುವುದರ ಜತೆಗೆ ಗಂಡಸರಿಗೆ ಸರಿಸಮವಾಗಿ ವ್ಯವಹಾರಿಕ ಔದ್ಯೋಗಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ವ್ಯವಹಾರ ಕ್ಷೇತ್ರದಲ್ಲಿನ ಇವರ ಸಾಧನೆ ಅನೇಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ.
ತಿಂಗಳಿಗೆ ರೂ.3 ಲಕ್ಷ ಸಂಪಾದನೆ:
10 ವರ್ಷಗಳ ಹಿಂದೆ ಕೇವಲ ಸಣ್ಣ ಬಂಡವಾಳ ಹೂಡಿಕೆ ಮಾಡಿ ಈ ಸಾಧಕಿ ಮಹಿಳೆ ಲಿಖಿತಾ ಕುಸುಮ್‌ರವರು ಆರಂಭಿಸಿದ ಉದ್ಯಮ ಇಂದು ಕೇವಲ 200 ಚದರ ಅಡಿ ಜಾಗದಲ್ಲಿ ತಿಂಗಳಿಗೆ ಬರೋಬ್ಬರಿ ರೂ 3 ಲಕ್ಷ ಸಂಪಾದಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪರಿಸರವೆನಿಸಿದ ಪುತ್ತೂರು ಬಲ್ನಾಡುವಿನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಲಿಖಿತರವರು ತನ್ನ ಪದವಿ ಶಿಕ್ಷಣ ಮುಗಿಸಿದ ಬಳಿಕ ಒಂದಷ್ಟು ಸಮಯ ಮನೆಯಲ್ಲೆ ಕಾಲ ಕಳೆದರು. ಆದರೆ ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂಬ ತುಡಿತದಲ್ಲಿದ್ದ ಈಕೆ ಪುತ್ತೂರಿನ ಖಾಸಗಿ ಸಂಸ್ಥೆಯಲ್ಲಿ ರೂ.3 ಸಾವಿರ ಸಂಬಳದಲ್ಲಿ ವೃತ್ತಿ ಜೀವನ ಆರಂಭಿಸಿದರು. ಇದೇ ಸಮಯದಲ್ಲಿ ಕುಸುಮ್‌ರಾಜ್ ಜತೆ ವೈವಾಹಿಕ ಜೀವನಕ್ಕೂ ಕಾಲಿಟ್ಟರು. ತನ್ನದೇ ಒಂದು ಉದ್ಯಮವನ್ನು ಆರಂಭಿಸಬೇಕೆಂಬ ಕನಸ್ಸು ಹೊತ್ತಿದ್ದ ಆಕೆಗೆ ಗಂಡನ ಪ್ರೋತ್ಸಾಹವು ದೊರಕಿತ್ತು. ಪತಿ ಕುಸುಮ್‌ರವರೂ ಕೂಡ ಪ್ರತಿಷ್ಠಿತ ಜೇಸಿಐ, ರೋಟರಿ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಛಲ, ಹುಟ್ಟು ಹೋರಾಟದ ಯಶಸ್ವಿ ಉದ್ಯಮಿ:
ರೂ.3 ಸಾವಿರ ಸಂಬಳದ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಅವರು ಸರ್ಕಾರದ ಯೋಜನೆಯೊಂದರ ನೆರವಿನಿಂದ ರೂ.4 ಲಕ್ಷ ಸಾಲ ಪಡೆದು ಲಹರಿ ಡ್ರೈ ಫ್ರೂಟ್ಸ್‌ಗಳ ಮಾರಾಟ ಮಳಿಗೆಯನ್ನು ಆರಂಭಿಸಿದರು. ಪುತ್ತೂರಿನಂತಹ ಬೆಳೆಯುತ್ತಿರುವ ನಗರಕ್ಕೆ 2014ರಲ್ಲಿ ಡ್ರೈ ಫ್ರೂಟ್ಸ್ ಮಾರಾಟದ Exclusive ಶೋರೂಂ ಹೊಸ ಕಲ್ಪನೆಯಾಗಿತ್ತು. ಹೀಗಾಗಿ ಆರಂಭದಲ್ಲಿ ಈ ಉದ್ಯಮದಲ್ಲಿ ಅವರು ಹಲವು ಏಳುಬೀಳುಗಳನ್ನು ಎಡರು ತೊಡರುಗಳನ್ನು ಎದುರಿಸಿದ್ದರು. ಆದರೇ ಈ ಯಾವುದೇ ಸವಾಲಿಗೆ ಅವರು ಎದೆಗುಂದಲಿಲ್ಲ, ಉದ್ಯಮಕ್ಕೆ ಬೆನ್ನು ಹಾಕಲಿಲ್ಲ. ಅವರ ಆ ಸಾಧಿಸಲೇಬೇಕು ಎನ್ನುವ ಛಲ, ಹುಟ್ಟು ಹೋರಾಟದ ಮನೋಭಾವ ಅವರನ್ನಿಂದು ಯಶಸ್ವಿ ಉದ್ಯಮಿಯನ್ನಾಗಿಸಿದೆ.
ಗುಣಮಟ್ಟದಲ್ಲಿ ರಾಜಿಯಿಲ್ಲ:
ಆರಂಭದಿಂದಲೇ ವಿದೇಶದಿಂದ ಉತ್ಪಾದಕರಿಂದಲೇ ಪ್ರಿಮೀಯಂ ಬ್ರ್ಯಾಂಡ್‌ನ ಡ್ರೈ ಫ್ರುಟ್ಸ್‌ಗಳನ್ನು ನೇರ ಖರೀದಿ ಮಾಡಿ ತಂದು ಮಾರಾಟ ಮಾಡಲು ಆರಂಭಿಸಿದರಿಂದ ಲಹರಿ ಡ್ರೈ ಫ್ರುಟ್ಸ್ ಬಹಳ ಬೇಗ ಗ್ರಾಹಕರ ಪ್ರೀತಿ ಪಾತ್ರ ಮಳಿಗೆಯಾಯಿತು. ಆರಂಭದಲ್ಲಿ ಬಂಡವಾಳದ ಕೊರತೆ ಇದುದ್ದರಿಂದ ಹೆಚ್ಚು ಹೆಚ್ಚು ಉತ್ಪನ್ನಗಳನ್ನು ಏಕಕಾಲದಲ್ಲಿ ತರಿಸಲು ಸಾಧ್ಯವಾಗದಿದ್ದರೂ, ಗುಣಮಟ್ಟದಲ್ಲಿ ರಾಜಿ ಮಾಡದೇ ಪ್ರಿಮೀಯಂ ಡ್ರೈ ಫ್ರುಟ್ಸ್‌ಗಳಿಗೆ ಗಮನ ಹರಿಸಿದ್ದು ಯಶಸ್ಸಿನಲ್ಲಿ ಪ್ರಧಾನ ಪಾತ್ರವಹಿಸಿದೆ ಎನ್ನುತ್ತಾರೆ ಲಿಖಿತಾಕುಸುಮ್.
ಡ್ರೈಫ್ರುಟ್ಸ್ ಗಿಫ್ಟ್ ಪರಿಕಲ್ಪನೆಗೆ ನಾಂದಿ:
ವ್ಯವಹಾರ ಆರಂಭಿಸಿ 2 ವರ್ಷದ ಬಳಿಕ ಉದ್ಯಮ ಲಾಭದ ಮುಖ ನೋಡಲು ಆರಂಭಿಸಿದಾಗ ಅದನ್ನು ಇನ್ನಷ್ಟು ವಿಸ್ತರಿಸಲು ಬಯಸಿದ ಲಿಖಿತಾ ಅವರು, ಸ್ಮರಣಿಕೆ ಬದಲು ಡ್ರೈಫ್ರುಟ್ಸ್ ಗಿಫ್ಟ್ ನೀಡುವ ಪರಿಕಲ್ಪನೆಯನ್ನು ಪರಿಚಯಿಸಿದರು. ಭಾರತೀಯ ಸಂಸ್ಕೃತಿ ಯಲ್ಲಿ ಡ್ರೈ ಫ್ರೂಟ್ಸ್ ಸಮೃದ್ಧತೆಯ ಸಂಕೇತ. ಹೀಗಾಗಿ ಈ ಪರಿಕಲ್ಪನೆ ಜನರಿಗೆ ಅಚ್ಚುಮೆಚ್ಚು ಎನಿಸಿತು. ಹೀಗಾಗಿ ಬಹಳ ಬೇಗ ಸಭೆ ಸಮಾರಂಭಗಳಲ್ಲಿ ವುಡನ್ ಸ್ಮರಣಿಕೆ ಜಾಗವನ್ನು ಡ್ರೈಫ್ರೂಟ್ಸ್ ಗಿಪ್ಟ್‌ಗಳು ಅಲಂಕರಿಸಿದವು.
ಫ್ರಾಂಚೈಸಿಗೆ ಆರ್ಥಿಕ ನೆರವು:
ನಮ್ಮಲ್ಲೀಗ ಒಂದು ಯಶಸ್ವಿ ಬ್ಯುಸಿನೆಸ್ ಮೊಡ್ಯೂಲ್ (Business Module) ಇದೆ. ನಗರದ ಪ್ರೈಮ್ ಲೊಕೇಶನ್‌ನಲ್ಲಿ ಕೇವಲ 200 ಚ.ಅಡಿ ಜಾಗ ಇದ್ದರೇ ಸಾಕು. ಸ್ವಾವಲಂಬಿ ವಿದ್ಯಾವಂತ ಮಹಿಳೆಯರು ಈ ವ್ಯವಹಾರವನ್ನು ಆರಂಭಿಸಬಹುದು. ಆಸಕ್ತ ಮಹಿಳೆಯರಿಗೆ ಫ್ರಾಂಚೈಸಿ ನೀಡಲು ನಾವು ಸಿದ್ದರಿದ್ದೇವೆ. ಫ್ರಾಂಚೈಸಿ ಬಯಸುವ ಮಹಿಳಾ ಉದ್ಯಮಿಗಳಿಗೆ ರಾಷ್ಟ್ರೀಯ ಬ್ಯಾಂಕ್‌ಗಳ ಮೂಲಕ ಅಡಮಾನ ರಹಿತ ಆರ್ಥಿಕ ಸಹಕಾರವನ್ನು ನೀಡುವ ಕಾರ್ಯವನ್ನು ಲಹರಿ ಡ್ರೈಫ್ರುಟ್ಸ್ ಮಾಡಲಿದೆ. ಈಗಾಗಲೇ ಹಲವರು ನಮ್ಮನ್ನು ಸಂಪರ್ಕಿಸಿದ್ದು 3-4 ಮಳಿಗೆಗಳು ಮುಂದಿನ ಕೆಲವೇ ತಿಂಗಳುಗಳಲ್ಲಿ ಕಾರ್ಯಾರಂಭ ಮಾಡಲಿದೆ ಅಲ್ಲದೆ ಫ್ರಾಂಚೈಸಿಗಾಗಿ ಮೊ:7624957763, [email protected] www.laharidryfruits.comಸಂಪರ್ಕಿಸಬಹುದು ಎಂದು ಶ್ರೀಮತಿ ಲಿಖಿತಾ ಕುಸುಮ್‌ರವರು ತಿಳಿಸಿರುತ್ತಾರೆ.
ಆ ಒಂದು ನಿರ್ಧಾರ ಇಂದು ನನ್ನ ಬದುಕನ್ನೆ ಬದಲಾಯಿಸಿದೆ..
ಕಳೆದ 10 ವರ್ಷಗಳಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದೇನೆ. ಸಂತ್ರಪ್ತ ಗ್ರಾಹಕರ ಪುನರಾವರ್ತಿತ ವ್ಯವಹಾರ ನಮ್ಮ ಸಂಸ್ಥೆಯ ಆಸ್ತಿ. ಮಹಿಳೆಯರು ತಮ್ಮನ್ನು ತಾವು ಸ್ವ ಉದ್ಯಮದಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ಆರಂಭಿಸಬೇಕು. ನಾನು ವೃತ್ತಿ ಜೀವನ ಆರಂಭಿಸಿದ ಉದ್ಯೋಗದಲ್ಲೆ ಮುಂದುವರಿಯುತ್ತಿದ್ದರೇ ಈಗ ಹೆಚ್ಚು ಎಂದರೇ ರೂ ೧೫ ಸಾವಿರ ಸಂಬಳ ಗಳಿಸಬಹುದಿತ್ತು. ನಾನು ಅಂದು ತೆಗೆದುಕೊಂಡ ಒಂದು ನಿರ್ಧಾರ ಇಂದು ನನ್ನ ಬದುಕನ್ನೆ ಬದಲಾಯಿಸಿದೆ. ಅಲ್ಲದೇ ನಾನೇ ಈಗ ಹಲವರಿಗೆ ಉದ್ಯೋಗ ನೀಡುತ್ತಿದ್ದೇನೆ ಎಂದು ಲಿಖಿತಾರವರು ಹೆಮ್ಮೆಯಿಂದ ಹೇಳಿಕೊಂಡರು.
ಉತ್ಪನ್ನಗಳು..
ಮಳಿಗೆಯಲ್ಲಿ ಅತ್ಯುತ್ತಮ ಗುಣಮಟ್ಟದ ವಿವಿಧ ಡ್ರೈಪ್ರುಟ್ಸ್ ಗಳು, ಇಂಪೋರ್ಟೆಡ್ ಚಾಕಲೆಟ್ಸ್, ಹೆಲ್ತ್ ಸೀಡ್ಸ್ ಕುಲ್ಫಿ, ಸನ್ಮಾನಕ್ಕೆ ಬೇಕಾಗುವ ಹಾರ, ಪೇಟ, ಡ್ರೈಫುಟ್ಸ್ ಸ್ಮರಣಿಕೆ, ಡೇಟ್ಸ್ & ನಟ್ಸ್, ಹುಟ್ಟುಹಬ್ಬದ ಗಿಫ್ಟ್‌ಗಳು ಸೇರಿದಂತೆ 670ಕ್ಕೂ ಮಿಕ್ಕಿ ವಸ್ತುಗಳು ಸದ್ಯ ಮಳಿಗೆಯಲ್ಲಿ ಲಭ್ಯವಿದೆ.
ಶೀಘ್ರ 100 ಫ್ರಾಂಚೈಸಿಗಳ ಗುರಿ..
ಸಾಮಾಜಿಕ ಜಾಲತಾಣ ಹಾಗೂ ಸಂತ್ರಪ್ತ ಗ್ರಾಹಕರ ಮಾತಿನ ಪ್ರಚಾರದಿಂದಾಗಿ ರಾಜ್ಯದ ನಾನಾ ಜಿಲ್ಲೆಗಳಿಂದ ‘ಲಹರಿ’ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿದ್ದು, ಸಕಾಲದಲ್ಲಿ ಪೂರೈಸಲು ಕಷ್ಟ ಸಾಧ್ಯವಾಗುತ್ತಿರುವುದರಿಂದ ಫ್ರಾಂಚೈಸಿಗಳನ್ನು ನೀಡಲು ನಿರ್ಧರಿಸಿದ್ದೇವೆ. ಈಗಾಗಲೇ ಪುತ್ತೂರು, ಕಡಬ, ಹುಬ್ಬಳ್ಳಿ, ಮಡಿಕೇರಿ ಹೀಗೆ ಹಲವೆಡೆ ಫ್ರಾಂಚೈಸಿಗಳನ್ನು ತೆರೆದಿದ್ದು ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಸುಮಾರು 100ಕ್ಕೂ ಮಿಕ್ಕಿ ಫ್ರಾಂಚೈಸಿಗಳನ್ನು ತೆರೆಯಲು ಮತ್ತು ಆ ಮೂಲಕ ಗ್ರಾಹಕರಿಗೆ ಗುಣಮಟ್ಟದ ವ್ಯವಹಾರ ನೀಡಲು ಉದ್ಧೇಶವನ್ನು ಹೊಂದಲಾಗಿದೆ ಎಂದು ಮಳಿಗೆಯ ಮಾಲಕಿ ಶ್ರೀಮತಿ ಲಿಖಿತಾ ಕುಸುಮ್‌ರವರ ಪತಿ ಕುಸುಮ್‌ರಾಜ್‌ರವರು ‘ಸುದ್ದಿ’ಗೆ ಪ್ರತಿಕ್ರಿಯಿಸಿದ್ದಾರೆ.