ಹತ್ತೂರಲ್ಲೂ ಪ್ರಸಿದ್ಧಿ ಪುತ್ತೂರು ಜಾತ್ರೆ -ಜಾತ್ರೆ ಗದ್ದೆಗೊಂದು ರೌಂಡಪ್

0

ಬರಹ: ಸಿಶೇ ಕಜೆಮಾರ್

ಜಿಲ್ಲೆಯಲ್ಲೇ ಅತೀ ಹೆಚ್ಚು ಸಂತೆ ವ್ಯಾಪಾರ ಸೇರುವ ಜಾತ್ರೆ ಇದ್ದರೆ ಅದು ನಮ್ಮೂರಿನ ಪುತ್ತೂರು ಜಾತ್ರೆ. ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಎಂದರೆ ಅದು ಹತ್ತೂರ ಜನರು ಸೇರುವ ಜಾತ್ರೆಯಾಗಿದೆ. ಇಲ್ಲಿರುವಷ್ಟು ಗೌಜಿ ಗಮ್ಮತ್ತು ಇನ್ನೆಲ್ಲಿ ಸಿಗಲು ಸಾಧ್ಯ. ಪುತ್ತೂರು ಜಾತ್ರೆ ಇಷ್ಟೊಂದು ಪ್ರಸಿದ್ಧಿ ಪಡೆಯಲು ಇಲ್ಲಿ ನೆಲೆಯಾಗಿರುವ ಶ್ರೀ ಮಹಾಲಿಂಗೇಶ್ವರ ದೇವರು ಮುಖ್ಯ ಶಕ್ತಿಯಾದರೆ ದೇವಸ್ಥಾನದ ಎದುರು ಸುಮಾರು 2 ಎಕರೆಗೂ ಅಧಿಕ ವಿಸ್ತೀರ್ಣದ ಗದ್ದೆ ಇರುವುದು ಪುತ್ತೂರಿನಲ್ಲಿ ಮಾತ್ರ ಎನ್ನಬಹುದು. ರಥಬೀದಿಯ ಎರಡೂ ಬದಿಗಳಲ್ಲಿ ಹರಡಿಕೊಂಡಿರುವ ಸಂತೆ ವ್ಯಾಪಾರವನ್ನು ನೋಡುವುದೇ ಸೊಗಸು. ಮಕ್ಕಳ ಆಟಿಕೆಗಳಿಂದ ಹಿಡಿದು ಬೃಹತ್ ಗಾತ್ರದ ಉಯ್ಯಾಲೆಯ ತನಕ ಎಲ್ಲವೂ ಇಲ್ಲಿದೆ. ಏನಿಲ್ಲ ಏನಿದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ನೀವು ಒಂದ್ಸಲ ಜಾತ್ರಾ ಗದ್ದೆಯನ್ನು ಸುತ್ತುಹೊಡೆಯಲೇಬೇಕು. ಬನ್ನಿ ಅಕ್ಷರದ ಮೂಲಕ ಗದ್ದೆಯನ್ನೊಮ್ಮೆ ಸುತ್ತು ಬರೋಣ…
ಏನೇನಿದೆ ಗೊತ್ತಾ…?


ಈ ಸಲದ ಜಾತ್ರಾ ಗದ್ದೆಯಲ್ಲಿ ಏನಿದೆ ಏನಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕಾದರೆ ಗದ್ದೆಗೆ ಹತ್ತು ಸುತ್ತು ಬರಬೇಕಾಗಬಹುದು. ಎಂದಿನಂತೆ ಈ ಸಲವು ಜಾತ್ರಾ ಗದ್ದೆಯಲ್ಲಿ ಮಕ್ಕಳ ಆಟಿಕೆ ಸಾಮಾಗ್ರಿಗಳಿಂದ ಹಿಡಿದು ಫ್ಯಾಷನ್ ಐಟಂಗಳು, ಗೃಹೋಪಯೋಗಿ ವಸ್ತುಗಳು, ಆಲಂಕಾರಿಕಾ ವಸ್ತುಗಳು, ಎಲೆಕ್ಟ್ರಾನಿಕ್ಸ್ ಐಟಂಗಳು ಹೀಗೆ ಎಲ್ಲವೂ ಇದೆ. ಕಳೆದ ವರ್ಷದಂತೆ ಈ ಸಲವು ಜಾತ್ರೆಗೆ ಬರುವ ಜನರಿಗೆ ವಸ್ತುಗಳನ್ನು ಖರೀದಿಸಲು ಅನುಕೂಲವಾಗುವಂತೆ ಸಂತೆ ಸ್ಟಾಲ್‌ಗಳನ್ನು ಬಹಳ ನೀಟಾಗಿ ಜೋಡಿಸಲಾಗಿದೆ. ಇದರಿಂದಾಗಿ ಎಲ್ಲಾ ಸ್ಟಾಲ್‌ಗಳಿಗೂ ಭೇಟಿ ಮಾಡಲು ಸಾಧ್ಯವಾಗುತ್ತದೆ. ವಸ್ತುಗಳ ಜೊತೆಯಲ್ಲಿ ಭರಪೂರ ಮನರಂಜನೆಯೂ ಗದ್ದೆಯಲ್ಲಿ ಇದೆ. ಬೃಹತ್ ಗಾತ್ರದ ಜೋಕಾಲಿ (ಜಾಯಿಂಟ್ ವೀಲ್)ಯಿಂದ ಹಿಡಿದು ಜಾರುಬಂಡಿ ತನಕ ಎಲ್ಲವೂ ಗದ್ದೆಯಲ್ಲಿ ನಮ್ಮನ್ನು ಮನರಂಜಿಸುವ ಜೊತೆಗೆ ಮನಸ್ಸಿಗೆ ಮುದ ನೀಡಲಿವೆ. ಗದ್ದೆಗೆ ಸುತ್ತು ಬಂದು ಬಾಯಾರಿಕೆಯಾದರೆ ಅಲ್ಲಲ್ಲಿ ಕಬ್ಬಿನ ಹಾಲು, ಲೈಮ್ ಸೋಡಾದಂತಹ ತಂಪು ಪಾನೀಯಗಳು, ತಂಪು ತಂಪಾದ ಐಸ್‌ಕ್ರೀಮ್‌ಗಳ ಗಾಡಿಗಳು ಇದೆ. ಇದಲ್ಲದೆ ಗೋಬಿ ಮಂಚೂರಿಯನ್, ಚರುಂಬುರಿ ಸ್ಟಾಲ್‌ಗಳು, ಪಾಪ್‌ಕಾರ್ನ್, ಬೇಯಿಸಿದ ಜೋಳ ಹೀಗೆ ಎಲ್ಲವೂ ಇದೆ.

ಚಿತ್ರ: ಪ್ರಸನ್ನ ರೈ ಮಜಲುಗದ್ದೆ, ರಿಪ್ಲೆಕ್ಷನ್


ನೀವು ಶ್ರೀ ವೆಂಕಟರಮಣ ದೇವಸ್ಥಾನದ ಎದುರಿನಿಂದ ಗದ್ದೆಗೆ ಬರುವುದಾದರೆ ಈ ಸಲ ರಾಮ ಹೊಟೇಲ್‌ನ ಹಿಂಬದಿಯ ಕಾರು ಪಾರ್ಕಿಂಗ್ ಏರಿಯಾದಲ್ಲಿ ಬೃಹತ್ ಗಾತ್ರದ ಜಾಯಿಂಟ್ ವೀಲ್‌ನಿಂದ ಹಿಡಿದು ಹಲವು ಆಟಿಕೆ ಐಟಮ್‌ಗಳು ಇವೆ. ಇದೇ ದಾರಿಯಲ್ಲಿ ಕಂಬಳದ ಗದ್ದೆಗೆ ನೀರು ಹಾಯಿಸುವ ಕೆರೆಯ ಹತ್ತಿರದಿಂದ ಮುಂದುವರಿದರೆ ಅಲ್ಲೂ ಕೂಡ ಸ್ಟಾಲ್‌ಗಳನ್ನು ಕಾಣಬಹುದು. ಚರುಂಬುರಿ ಸ್ಟಾಲ್‌ನಿಂದ ಹಿಡಿದು ಗೋಬಿ ಮಂಚೂರಿ, ಕಬ್ಬಿನ ಹಾಲು, ಐಸ್‌ಕ್ರೀಮ್ ಸ್ಟಾಲ್‌ಗಳು ಇವೆ. ಯುವತಿಯರ ಕಣ್ಮನ ಸೆಳೆಯುವ ಫ್ಯಾನ್ಸಿ ಸ್ಟಾಲ್‌ಗಳ ರಾಶಿಯೆ ಇದೆ. ಈ ಸಲವೂ ರಥಬೀದಿ ದಾರಿ- ಗೊಂಬೆ, ಮಣಿಸರಕ್ಕು, ಫ್ಲವರ್ ಬೊಕೆಗಳ ಏರಿಯಾ. ಸ್ಮಶಾನದ ಕಡೆಯಿಂದ ರಥಬೀದಿಗೆ ಎಂಟ್ರಿಯಾದರೆ ನಿಮಗೆ ಎಡಬದಿಯಲ್ಲಿ ಚಂದನೆ ಪ್ಲಾಸ್ಟಿಕ್ ಹೂಗಳ ಸ್ಟಾಲ್, ಮುದ್ದು ಮುದ್ದಾದ ಡಾಲ್(ಗೊಂಬೆ)ಗಳ ಸ್ಟಾಲ್, ನಡುನಡುವೆ ಐಸ್‌ಕ್ರೀಮ್, ಕಬ್ಬಿನ ಹಾಲಿನ ಸ್ಟಾಲ್ ಸಿಗುತ್ತದೆ. ಅಲ್ಲದೆ ನಂಬರ್ ಗೇಮ್‌ಗಳ ಮೂಲಕ ವಸ್ತುಗಳನ್ನು ಪಡೆಯುವ ಗೇಮ್ ಸ್ಟಾಲ್‌ಗಳು ಕೂಡ ಇದೆ. ಇದಲ್ಲದೆ ಕೆಲವೊಂದು ಗೃಹೋಪಯೋಗಿ ವಸ್ತುಗಳ ಮಾರಾಟ ಸ್ಟಾಲ್‌ಗಳು ಇವೆ. ಇನ್ನು ಮಣಿಸರಕ್ಕು ಸ್ಟಾಲ್‌ಗಳು ಒಂದೇ ಲೈನ್‌ನಲ್ಲಿ ನಮ್ಮನ್ನು ಕೈ ಬೀಸಿ ಕರೆಯುತ್ತವೆ. ರಥ ಬೀದಿಯ ಬಲಬದಿಯಲ್ಲಿ ಅಲ್ಲಲ್ಲಿ ಚರುಂಬುರಿ, ಐಸ್‌ಕ್ರೀಮ್ ಸ್ಟಾಲ್, ಗೋಬಿ ಮಂಚೂರಿ ಸ್ಟಾಲ್‌ಗಳು ಅಲ್ಲದೆ ಜೇಸಿಯವರ ನಳಪಾಕ ಈ ಸಲ ಜಾತ್ರೆಯಲ್ಲಿ ನಮ್ಮ ಬಾಯಿ ರುಚಿ ಹೆಚ್ಚಿಸಲಿದೆ. ಇನ್ನುಳಿದಂತೆ ಜಾಯಿಂಟ್ ವೀಲ್, ಟೊರೊಟೊರೊ ಇತ್ಯಾದಿ ಆಟಿಕೆಗಳು ಇವೆ.


ಸ್ಮಶಾನದ ಎದುರಿನ ದಾರಿ-ಇದು ಜಾಯಿಂಟ್ ವೀಲ್ ಏರಿಯಾ
ನೀವು ಖಾಸಗಿ ಬಸ್ಸು ನಿಲ್ದಾಣದಲ್ಲಿ ಇಳಿದು ಸ್ಮಶಾನದ ಕಡೆಯಿಂದ ದೇವಸ್ಥಾನಕ್ಕೆ ಹೋಗುವುದಾದರೆ ಈ ವರ್ಷವೂ ದೊಡ್ಡದಾದ ಸ್ವಾಗತ ಕಮಾನೊಂದು ನಿಮ್ಮನ್ನು ಸ್ವಾಗತಿಸುತ್ತದೆ. ನೀವು ರಥಬೀದಿಯಲ್ಲಿ ನಡೆದುಕೊಂಡು ಹೋಗುವುದಾದರೆ ನಿಮ್ಮ ಬಲ ಬದಿಯಲ್ಲಿ, ದೇವಸ್ಥಾನದ ಎಡಬದಿಯಲ್ಲಿ ವಿಸ್ತಾರವಾದ ಜಾಗದಲ್ಲಿ ಜಾಯಿಂಟ್ ವೀಲ್‌ನಿಂದ ಹಿಡಿದು ಎಲ್ಲಾ ಬಗೆಯ ಆಟಿಕಾ ವಸ್ತುಗಳು ಸಿಗುತ್ತದೆ. ದೂರದಿಂದಲೇ ಕಾಣುವ ಬೃಹತ್ ಗಾತ್ರದ ಜೋಕಾಲಿ ನಮ್ಮನ್ನು ಸೆಳೆಯುತ್ತದೆ. ಇದರೊಂದಿಗೆ ಚಿಕ್ಕ ಗಾತ್ರದ ಜೋಕಾಲಿಗಳು ಇವೆ. ಇದರ ಪಕ್ಕದಲ್ಲೆ ಬ್ರೇಕ್ ಡ್ಯಾನ್ಸ್ ಇದೆ. ಜೊತೆ ಜೊತೆಯಾಗಿ ತಿರುಗುವ ಚೆಯರ್‌ನಲ್ಲಿ ಕುಳಿತುಕೊಂಡು ಎದುರಿಗಿರುವ ಸಿನಿಮಾ ತಾರೆಯರ ಫೋಟೋ ನೋಡಿಕೊಂಡಿದ್ದರೆ ಸಾಕು ನಾವು ಬ್ರೇಕ್ ಡ್ಯಾನ್ಸ್ ಆಡಿ ಬಿಡುತ್ತೇವೆ. ಇನ್ನುಳಿದಂತೆ ಟೊರೋಟೊರೋ ಇದೆ. ಮಕ್ಕಳೊಂದಿಗೆ ಕುಳಿತುಕೊಂಡು ಒಂದು ಸುತ್ತು ತಿರುಗಿ ಕೆಳಕ್ಕೆ ಇಳಿದರೆ ಕ್ರಾಸ್‌ವೆಲ್ ಕಣ್ಮನ ಸೆಳೆಯುತ್ತದೆ. ಕ್ರಾಸ್ ಆಗಿ ತಿರುಗುವ ಜಾಯಿಂಟ್ ವೀಲ್‌ನಲ್ಲಿ ಕುಳಿತುಕೊಂಡರೆ ಮಜಾನೆ ಬೇರೆ. ಇನ್ನುಳಿದಂತೆ ಮಕ್ಕಳಿಗೆ ಖುಷಿ ಕೊಡುವ ಬಹಳಷ್ಟು ಆಟಿಕೆಗಳು, ಚಿಕ್ಕ ಉಯ್ಯಾಲೆಗಳು ಇನ್ನು ಏನೇನೋ ಆಟಿಕೆಗಳು ಈ ಏರಿಯಾದಲ್ಲಿವೆ. ಪುಟ್ಟ ಮಕ್ಕಳಿಂದ ಹಿಡಿದು ವಯೋಮಾನದವರಿಗೆ ಹೊಂದಿಕೆಯಾಗುವಂತಹ ಮನಸ್ಸಿಗೆ ಖುಷಿ ಕೊಡುವ ಆಟಿಕಾ ಸಾಮಾಗ್ರಿಗಳನ್ನು ಈ ಸಲ ನಾವು ಕಾಣಬಹುದು.


ಕಂಬಳ ಕರೆಗಳ ದಾರಿ-ಇದು ಅಪಾಯಕಾರಿ ಏರಿಯಾ
ಕಳೆದ ವರ್ಷದಂತೆ ಈ ಸಲವೂ ಕಂಬಳ ಕರೆಗಳ ಒಂದು ಬದಿಯ ಜಾಗದಲ್ಲಿ ಸುಡುಮದ್ದು ಪ್ರದರ್ಶನಕ್ಕೆ ಬಳಸಿಕೊಳ್ಳಲಾಗಿದೆ. ಪುತ್ತೂರು ಬೆಡಿ ಎಂದೇ ರಾಜ್ಯದಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ಬೆಡಿ ಮದ್ದುಗಳನ್ನು ಇಲ್ಲಿ ಸುಡಲಾಗುತ್ತದೆ. ಆದ್ದರಿಂದ ಈ ಏರಿಯಾಕ್ಕೆ ಜನರು ಹೋಗುವುದನ್ನು ನಿಷೇಧಿಸಲಾಗಿದೆ.ಸುಡುಮದ್ದು ಸುಡುವ ಜಾಗಕ್ಕೆ ಬೇಲಿ ಅಳವಡಿಸಲಾಗಿದ್ದು ಸೂಕ್ತ ಭದ್ರತೆ ಒದಗಿಸಲಾಗಿದೆ. ಆದ್ದರಿಂದ ಯಾರೂ ಕೂಡ ಇದರೊಳಗೆ ಹೋಗುವ ಸಾಹಸ ಮಾಡಬಾರದು.


ದೇವಳದ ಎದುರಿನ ಭಾಗ-ಕುಳಿತುಕೊಂಡು ರಥೋತ್ಸವ ನೋಡುವ ಏರಿಯಾ
ನೀವು ನೇರವಾಗಿ ಅಂಚೆಕಛೇರಿಯ ಭಾಗದಿಂದ ದೇವಳದ ದಾರಿ ಮೂಲಕ ಬಂದರೆ ದೇವಸ್ಥಾನದ ಎದುರು ಬ್ರಹ್ಮರಥದ ಸುತ್ತಲಿನ ಜಾಗ ಸಂಪೂರ್ಣ ಭಕ್ತರಿಗೆ ಕುಳಿತು ರಥೋತ್ಸವ ವೀಕ್ಷಣೆ ಮಾಡುವ ಏರಿಯಾವಾಗಿದೆ.ಈ ಭಾಗದಲ್ಲಿ ಭಕ್ತಾಧಿಗಳು ಕುಳಿತುಕೊಂಡು ಅಥವಾ ನಿಂತುಕೊಂಡು ರಥೋತ್ಸವ ವೀಕ್ಷಣೆ ಮಾಡಬಹುದು. ಇಲ್ಲಿ ಸಾಕಷ್ಟು ಜಾಗವನ್ನು ಭಕ್ತರಿಗೆ ರಥೋತ್ಸವ ನೋಡಲೆಂದೆ ಮೀಸಲಿರಿಸಲಾಗಿದೆ. ರಾಜ್ಯದಲ್ಲೆ ಹೆಸರು ಪಡೆದುಕೊಂಡಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವವನ್ನು ವೀಕ್ಷಣೆ ಮಾಡುವ ಮೂಲಕ ನಾವು ಶ್ರೀ ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗೋಣ.

ಹಣದ ವ್ಯವಹಾರ, ಚಿನ್ನದ ಒಡವೆಗಳ ಬಗ್ಗೆ ಇರಲಿ ಎಚ್ಚರ…!
ಜಾತ್ರೆ ಎಂದರೆ ಗೌಜಿ ಗದ್ದಲ ಇದ್ದದ್ದೆ. ನೂಕುನುಗ್ಗಲು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಜನರು ಹುಷಾರಾಗಿರಬೇಕಾಗುತ್ತದೆ. ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗೃತೆ ಇರಬೇಕು. ಜಾತ್ರೆಗೆ ಬರುವಾಗ ಬೇಕಾಬಿಟ್ಟಿ ಚಿನ್ನದ ಆಭರಣಗಳನ್ನು ಧರಿಸಿಕೊಂಡು ಬರದಿರುವುದೇ ಉತ್ತಮ. ಸಂತೆ ವ್ಯಾಪಾರ ಮಾಡುವಾಗ ಹಣದ ವಿಷಯದಲ್ಲಿ ಭಾರಿ ಜಾಗೃತೆ ಇರಬೇಕು. ವಸ್ತುಗಳನ್ನು ಖರೀದಿಸಿದಾಗ ನಾವು ಕೊಡುವ ಹಣಕ್ಕೆ ಸರಿಯಾದ ಚಿಲ್ಲರೆಯನ್ನು ಕೊಟ್ಟಿದ್ದಾರೆಯೇ ಎಂದು ಗಮನಿಸುವುದು ಸೂಕ್ತ. ನಮ್ಮನ್ನು ಮೋಸ, ಮಂಗ ಮಾಡುವ ಜನರೂ ಇರಬಹುದು. ಈ ಬಗ್ಗೆ ಎಚ್ಚರವಿರಲಿ…


LEAVE A REPLY

Please enter your comment!
Please enter your name here