ಮರ್ದಾಳ: ರಬ್ಬರ್ ನಿಗಮದಿಂದ ಅನ್ಯಾಯ ಆರೋಪ- ಕಾರ್ಮಿಕರಿಂದ ದಿಢೀರ್ ಪ್ರತಿಭಟನೆ

0

ಕಡಬ: ರಾಜ್ಯ ರಬ್ಬರ್ ನಿಗಮದ ಸುಬ್ರಹ್ಮಣ್ಯ ವಿಭಾಗದ ಕಾರ್ಮಿಕರಿಗೆ ನಿಗಮದಿಂದ ಅನ್ಯಾಯವಾಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕಾರ್ಮಿಕರು ಕರ್ತವ್ಯ ಮುಗಿದ ಕೂಡಲೇ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಮರ್ದಾಳ ಸಮೀಪದ ಕಲ್ಲಾಜೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.


ಜವಾಬ್ದಾರಿ ವಹಿಸಿಕೊಟ್ಟ ರಬ್ಬರ್ ತೋಟಗಳ ಕಾರ್ಮಿಕರಿಗೆ ಹಾಲು ಕಡಿಮೆ ಬಂದಲ್ಲಿ ಪ್ರತೀ ಕೆಜಿಗೆ ಸಂಬಳದಲ್ಲಿ ಕಡಿತ ಮಾಡುವುದು ನಿಗಮದ ನಿಯಮವಾಗಿತ್ತು. ಆದರೆ ಇದೀಗ ಹಾಲು ಕಡಿಮೆ ಇರುವ ಪ್ರದೇಶದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವುದನ್ನೇ ಸ್ಥಗಿತಗೊಳಿಸಿ ಅಲ್ಲಿನ ಖಾಯಂ ನೌಕರರನ್ನು, ವಿಭಾಗದ ಬೇರೆ ಬೇರೆ ಸ್ಥಳಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಬದಲಿಗೆ ವರ್ಗಾಯಿಸಿ ಮೇಲಾಧಿಕಾರಿಗಳು ಮೌಖಿಕ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಅದರಂತೆ ಸೋಮವಾರದಂದು ಬೆಳಿಗ್ಗೆ ಖಾಯಂ ಕಾರ್ಮಿಕರನ್ನು ವರ್ಗಾವಣೆ ಮಾಡಲಾಗಿದ್ದು, ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆಯುವಂತೆ ತಿಳಿಸಲಾಗಿತ್ತು. ಆದರೆ ಖಾಯಂ ಕಾರ್ಮಿಕರು ಎಂದಿನಂತೆ ಏ. 15ರಂದು ಕೂಡಾ ಟ್ಯಾಪಿಂಗ್ ಮಾಡಿದ್ದರು. ಅವರು ಸಂಗ್ರಹಿಸಿದ ಹಾಲನ್ನು ‘ಅಕ್ರಮ ಶೇಖರಣೆ’ ಎಂದು ಅಧಿಕಾರಿಗಳು ನಿಗಮಕ್ಕೆ ವರದಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶಗೊಂಡು ಕಾರ್ಮಿಕರು ಸಂಜೆ ವೇಳೆಗೆ ದಿಢೀರ್ ಪ್ರತಿಭಟನಾ ಸಭೆ ನಡೆಸಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುವುದಾಗಿ ತೀರ್ಮಾನ ಕೈಗೊಂಡಿದ್ದಾರೆ. ಲೋಕಸಭಾ ಚುನಾವಣಾ ನೀತಿ ಸಂಹಿತೆಯ ಮಧ್ಯೆ ಅಽಕಾರಿಗಳು ಕಿರುಕುಳ ನೀಡಿದಲ್ಲಿ ಮುಂದಿನ ಹಂತದಲ್ಲಿ ಉಗ್ರ ಹೋರಾಟದ ಹಾದಿ ಹಿಡಿಯುವುದಾಗಿ ಕಾರ್ಮಿಕ ಸಂಘಟನೆಗಳು ನಿಗಮವನ್ನು ಎಚ್ಚರಿಸಿದೆ.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮನವಿ-ಪ್ರತಿಭಟನೆ ವಾಪಸ್:
ಸ್ಥಳಕ್ಕೆ ಭೇಟಿ ನೀಡಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಽರ್ ಕುಮಾರ್ ಶೆಟ್ಟಿ ಮಾತನಾಡಿ, ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದು, ಚುನಾವಣೆ ಮುಗಿದ ನಂತರ ಕಾರ್ಮಿಕರ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರುವುದಾಗಿ ಮನವಿ ಮಾಡಿದ್ದರಿಂದಾಗಿ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಚಂದ್ರಲಿಂಗಂ, ರಾಮಸ್ವಾಮಿ ಅನಂದ, ಜೀವರತ್ನಂ, ಪ್ರಮುಖರಾದ ಶಿವ ಕೊಂಬಾರು, ಸೆಲ್ವಕುಮಾರ್, ರಾಜಕೃಷ್ಣ, ಸುಂದರಂ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here