ಪುತ್ತೂರು: ಪ್ರಾಕೃತ ಭಾಷೆಯು ನಮ್ಮ ದೇಶದ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಸಂಸ್ಕೃತ ಸಹಿತವಾಗಿ ಎಲ್ಲಾ ಭಾರತೀಯ ಭಾಷೆಗಳಿಗೆ ಮಾತೃಸ್ಥಾನದಲ್ಲಿದೆ. ಅವುಗಳಿಗೆ ಜೀವಸತ್ವವನ್ನಿತ್ತು ಶೈಶವಾವಸ್ಥೆಯಲ್ಲಿ ಅವುಗಳನ್ನು ಚೆನ್ನಾಗಿ ಬೆಳೆಸಿದೆ. ವ್ಯಾಕರಣ, ಛಂದಸ್ಸಿನ ಸಂಸ್ಕಾರವನ್ನಿತ್ತು ಸಂಸ್ಕೃತವನ್ನು ಬೆಳೆಸಿದೆ. ಬೌದ್ಧ ತತ್ವಗಳನ್ನು ಸೇರಿಸಿ, ಅದನ್ನು ಪಾಲಿ ಭಾಷೆಯನ್ನಾಗಿ ರೂಪಿಸಿದೆ. ತುಳು ಭಾಷೆಯ ‘ಪಾಕ್‌ತ’ (ಬಹಳ ಹಿಂದಿನ ಕಾಲದ) ಭಾಷೆಯೇ ಪ್ರಾಕೃತ ಭಾಷೆ ಎಂದು ಪುತ್ತೂರು ರಾಮನಗರದ ನಿವಾಸಿ ಡಾ. ವೈ ಉಮಾನಾಥ ಶೆಣೈಯವರು ವಿಶ್ಲೇಷಿಸಿದರು.
ಏ.14ರಂದು ಶ್ರವಣಬೆಳಗೊಳದ ಪ್ರಾಕೃತ ವಿದ್ಯಾಪೀಠ (ಯನಿವರ್ಸಿಟಿ)ದ 18ನೇ ಘಟಿಕೋತ್ಸವದಲ್ಲಿ ಅದರ ಘಟಿಕೋತ್ಸವ ಭಾಷಣ ಮಾಡಿದರು. ಈಶಾನ್ಯ ಭಾರತ ಸಹಿತವಾಗಿ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಪ್ರಾಕೃತದಲ್ಲಿ ಪದವಿಗಳನ್ನು ಪಡೆದುಕೊಳ್ಳಲು ಇಲ್ಲಿಗೆ ಆಗಮಿಸಿದ್ದರು. ಒಂದು, ಎರಡು ಹಾಗೂ ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿ, ವಿಭಿನ್ನ ಪದವಿಗಳನ್ನು ಪಡೆದುಕೊಳ್ಳುತ್ತಾರೆ. ಎಂದಿನಂತೆ ಪುತ್ತೂರಿನ ವಿವೇಕಾನಂದ, ಸುಬ್ರಹ್ಮಣ್ಯದ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸಹಿತವಾಗಿ ರಾಜ್ಯದ ಹಾಗೂ ದೇಶದ ವಿವಿಧ ಕಾಲೇಜುಗಳಿಂದ ಹಾಗೂ ವಿಶ್ವವಿದ್ಯಾಲಯಗಳಿಂದ ಪ್ರಾಕೃತ ವಿದ್ಯಾರ್ಥಿಗಳು ಆಗಮಿಸಿ ಪದವಿಗಳನ್ನು ಸ್ವೀಕರಿಸಿದರು.
ಈ ಸಮಾರಂಭದಲ್ಲಿ ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಮಲ್ಲೇಪುರಂ ಜಿ ವೆಂಕಟೇಶ್ವರ ಅವರು ಆಹ್ವಾನಿತ ಅತಿಥಿಗಳಾಗಿ ಆಗಮಿಸಿದ್ದರು. ಹಾಗೂ ನಿವೃತ್ತ ನ್ಯಾಯಮೂರ್ತಿ ಎ.ಸಿ ವಿದ್ಯಾಧರ್‌ರವರು ಈ ಪದವಿದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರವಣಬೆಳಗೊಳದ ಈ ವಿದ್ಯಾಪೀಠ ಜಾಗತಿಕ ಮಟ್ಟದಲ್ಲೇ ಪ್ರಾಕೃತ ಅಧ್ಯಯನಕ್ಕೆ ಮೀಸಲಾಗಿರು ಏಕಮೇವ ಸರಕಾರದಿಂದ ಸಹಾಯಧನ ಪಡೆಯುವ ಸಂಸ್ಥೆಯಾಗಿದೆ.