ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರಾಗಿ ಶಕುಂತಳಾ ಟಿ.ಶೆಟ್ಟಿ, ಸಂಯೋಜಕರಾಗಿ ಚಂದ್ರಹಾಸ ಶೆಟ್ಟಿ, ಜಿಲ್ಲಾಧ್ಯಕ್ಷರಾಗಿ ರಮಾನಾಥ ರೈ

0

ಪುತ್ತೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಗೆ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದ್ದು ಪುತ್ತೂರಿನ ಮಾಜಿ ಶಾಸಕರಾಗಿರುವ ಶಕುಂತಳಾ ಟಿ.ಶೆಟ್ಟಿಯವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಮಾಜಿ ಸಚಿವರಾಗಿರುವ ಬೆಳ್ಳಿಪ್ಪಾಡಿ ರಮಾನಾಥ ರೈಯವರನ್ನು ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಹಾಗೂ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್‌.ಚಂದ್ರಹಾಸ ಶೆಟ್ಟಿಯವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕರಾಗಿ ನೇಮಕಗೊಳಿಸಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಆದೇಶಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ, ಉಡುಪಿಯ ಮಾಜಿ ಸಂಸದರೂ ಆಗಿರುವ ಪುತ್ತೂರಿನ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಅವರನ್ನು ಎಐಸಿಸಿ ಇತ್ತೀಚೆಗಷ್ಟೆ ನೇಮಕ ಮಾಡಿತ್ತು. ಇದೀಗ ವಿನಯ ಕುಮಾರ್ ಸೊರಕೆ ಅವರು ಸಮಿತಿಗೆ ಪದಾಧಿಕಾರಿಗಳನ್ನು ನೇಮಕಗೊಳಿಸಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿಗೆ ಶಕುಂತಳಾ ಟಿ.ಶೆಟ್ಟಿಯವರ ಸಹಿತ ಹೊಸದಾಗಿ 10 ಜನ ಸಹ ಅಧ್ಯಕ್ಷರು, 9 ಮುಖ್ಯ ಸಂಯೋಜಕರು, ಎನ್.ಚಂದ್ರಹಾಸ ಶೆಟ್ಟಿ ಸಹಿತ ಹೊಸದಾಗಿ 38 ಮಂದಿ ಸಂಯೋಜಕರು ಹಾಗೂ ಸಂವಹನ ಮತ್ತು ಸಾಮಾಜಿಕ ಜಾಲತಾಣಕ್ಕೆ 2 ಮತ್ತು ಮಾಧ್ಯಮ ಸಂಯೋಜಕರಾಗಿ ಇಬ್ಬರನ್ನು ಮತ್ತು ದ.ಕ.ಜಿಲ್ಲೆಗೆ ಬಿ.ರಮಾನಾಥ ರೈ ಸೇರಿದಂತೆ 36 ಜಿಲ್ಲೆಗಳಿಗೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರ ನೇಮಕಾತಿ ಮಾಡಿದ್ದಾರೆ.

ನೂತನವಾಗಿ ನೇಮಕಗೊಂಡಿರುವ ಎಲ್ಲಾ ಪದಾಧಿಕಾರಿಗಳು ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷದ ಸಂಘಟನೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಆದೇಶದಲ್ಲಿ ಕೋರಲಾಗಿದೆ. ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಕೆಲಸ ಮಾಡುವುದರ ಜೊತೆಗೆ ಈ ಬಾರಿಯ ಲೋಕಸಭಾ ಚುನಾವಣೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಶಕ್ತಿಯನ್ನು ಹೆಚ್ಚಿಸಲು ನೂತನ ಪದಾಧಿಕಾರಿಗಳಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಪ್ರಸಕ್ತ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತೊಡಗಿಸಿಕೊಳ್ಳಲು ಮತ್ತು ಪ್ರದೇಶ ಕಾಂಗ್ರೆಸ್ ಪಕ್ಷದ ಇತರ ಘಟಕಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಪಕ್ಷದ ಸಂಘಟನೆಯೊಂದಿಗೆ ಕೆಲಸ ಮಾಡಲು ನೂತನ ಪದಾಧಿಕಾರಿಗಳಿಗೆ ಕೋರಲಾಗಿದೆ ಎಂದು ವಿನಯ ಕುಮಾರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here