ಕಾವು ಪ್ರಾ.ಕೃ.ಪ.ಸ ಸಂಘದಿಂದ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ ಜಯರಾಮ ರೈಯವರಿಗೆ ಅಭಿನಂದನೆ

0

ಕಾವು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿಗೆ ಸತತ 3ನೇ ಬಾರಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಎಸ್.ಬಿ ಜಯರಾಮ ರೈ ಬಳಜ್ಜರವರಿಗೆ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಎ.18ರಂದು ಅಭಿನಂದನಾ ಕಾರ್ಯಕ್ರಮ ನಡೆಯಿತು.

ಎಲ್ಲರ ಸಹಕಾರದಿಂದ ಶೇ.100 ಫಲಿತಾಂಶ-ನನ್ಯ
ಸಭಾಧ್ಯಕ್ಷತೆ ವಹಿಸಿ ಅಭಿನಂದನೆ ಸಲ್ಲಿಸಿದ ಕಾವು ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಎಸ್.ಬಿ ಜಯರಾಮ ರೈಯವರು ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾಗಿ ಸಹಕಾರಿ ಸಂಘಗಳಿಗೆ ಬೇಕಾದ ಎಲ್ಲಾ ಅನುಕೂಲತೆಗಳನ್ನು ಮಾಡಿಕೊಟ್ಟಿದ್ದಾರೆ, ಅವರು 3ನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ನಮ್ಮ ಸಂಘದ ಬೆಳವಣಿಗೆಯಲ್ಲೂ ಎಸ್‌ಡಿಸಿಸಿ ಬ್ಯಾಂಕ್‌ನ ಪಾತ್ರ ಮಹತ್ತರವಾಗಿದೆ, ಪ್ರಮುಖವಾಗಿ ಈ ಬಾರಿ ಡಿಸಿಸಿ ಬ್ಯಾಂಕ್‌ನ ಸಹಕಾರದೊಂದಿಗೆ ನಮ್ಮ ಸಂಘದ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಮತ್ತು ಸದಸ್ಯರ, ಗ್ರಾಹಕರ ವಿಶ್ವಾಸದ ಸಹಕಾರದ ಮೂಲಕ ದಾಖಲೆಯ ವ್ಯವಹಾರದೊಂದಿಗೆ ರೂ.1.25ಕೋಟಿ ಲಾಭದೊಂದಿಗೆ ಶೇ.100 ಸಾಲ ವಸೂಲಾತಿಯನ್ನು ಸಾಧಿಸಿದೆ ಅದಕ್ಕಾಗಿ ಸಹಕರಿಸಿದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಶೇ.100 ಫಲಿತಾಂಶ ಕಷ್ಟದ ಕೆಲಸ-ಶಶಿಕುಮಾರ್ ರೈ ಬಾಲ್ಯೊಟ್ಟು
ಅಭಿನಂದನೆ ಸ್ವೀಕರಿಸಿದ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಕಾವು ಸಹಕಾರ ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ಉತ್ತಮ ವ್ಯವಹಾರದೊಂದಿಗೆ ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ ಮಾಡಿರುವುದು ಸಹಕಾರಿ ರಂಗಕ್ಕೆ ಸಂತಸದ ವಿಷಯವಾಗಿದೆ ಅದಕ್ಕಾಗಿ ಎಸ್‌ಸಿಡಿಸಿಸಿ ಬ್ಯಾಂಕ್ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ, ಸಾಲ ವಸೂಲಾತಿಯಲ್ಲಿ ಶೇ.100 ಫಲಿತಾಂಶ ಸಾಧಿಸುವುದು ಅಷ್ಟು ಸುಲಭದ ಕೆಲಸವಲ್ಲ, ನನ್ಯ ಅಚ್ಚುತ ಮೂಡೆತ್ತಾಯರು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ತೆಗೆದುಕೊಂಡ ನಿರ್ಣಯಗಳು ಮತ್ತು ಮಾರ್ಗದರ್ಶನ ಸಂಸ್ಥೆಯನ್ನು ಪ್ರಗತಿಯತ್ತ ಕೊಂಡೊಯ್ದಿದೆ ಜತೆಗೆ ಎಲ್ಲಾ ಸದಸ್ಯರ, ಗ್ರಾಹಕರ ಮೆಚ್ಚುಗೆಯನ್ನು ಪಡೆದಿದೆ, ಆ ಮೂಲಕ ಕಾವು ಸಹಕಾರ ಸಂಘವು ಸಹಕಾರಿ ರಂಗಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ, ಇನ್ನು ಮುಂದಕ್ಕೂ ಸಂಘಕ್ಕೆ ಬೇಕಾದ ಎಲ್ಲಾ ಸಹಕಾರದ ಜತೆಗೆ, ಏನಾದರೂ ಸಮಸ್ಯೆಯಾದರೂ ನಾನು ನಿಮ್ಮ ಜತೆ ಇದ್ದೇನೆ ಎಂದು ಹೇಳಿದರು.

ಮೂಡೆತ್ತಾಯರು ಸಹಕಾರಿ ರಂಗದಲ್ಲಿ ಇನ್ನು ಮುಂದುವರಿಯಬೇಕು-ಎಸ್.ಬಿ ಜಯರಾಮ ರೈ
ಅಭಿನಂದನೆ ಸ್ವೀಕರಿಸಿದ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಎಸ್.ಬಿ ಜಯರಾಮ ರೈ ಬಳಜ್ಜರವರು ಮಾತನಾಡಿ ಅವಿಭಜಿತ ಜಿಲ್ಲೆಯಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್‌ರವರ ನಾಯಕತ್ವದ ಮೂಲಕ ಸಹಕಾರಿ ರಂಗವು ಸದೃಢವಾಗಿ ಮುನ್ನಡೆಯುತ್ತಿದ್ದು, ಪೂರಕವಾಗಿ ಕಾವು ಸಹಕಾರ ಸಂಘವು ಆರ್ಥಿಕ ವರ್ಷದಲ್ಲಿ ಸಾಲ ಮರುಪಾವತಿಯಲ್ಲಿ ಶೇ.100 ಸಾಧನೆಯ ಮೂಲಕ ತಾಲೂಕಿನಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದೆ, ಯಾವುದೇ ಸಂಸ್ಥೆ ಪ್ರಗತಿಯಲ್ಲಿ ಮುನ್ನಡೆಯಾಗಬೇಕಾದರೆ ಅದರ ನಾಯಕತ್ವ ಪ್ರಮುಖವಾಗುತ್ತದೆ, ಹಾಗಾಗಿ ಸಹಕಾರಿ ರಂಗದಲ್ಲಿ ಅಪಾರ ಅನುಭವ ಹೊಂದಿ ಕಾವು ಸಹಕಾರ ಸಂಘವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಿರುವ ನನ್ಯ ಅಚ್ಚುತ ಮೂಡೆತ್ತಾಯರವರು ಇನ್ನು ಮುಂದೆಯೂ ಸಹಕಾರಿ ರಂಗದಲ್ಲಿ ಮುಂದುವರಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರಮೇಶ್ ಪೂಜಾರಿ ಮುಂಡ್ಯ, ನಿರ್ದೇಶಕರುಗಳಾದ ಲೋಕೇಶ್ ಚಾಕೋಟೆ, ಶ್ರೀಧರ್ ರಾವ್ ನಿಧಿಮುಂಡ, ರಾಮಣ್ಣ ನಾಯ್ಕ ಕುದ್ರೋಳಿ, ಶಿವಪ್ರಸಾದ್ ಕೊಚ್ಚಿ, ಹೇಮಾವತಿ ಚಾಕೋಟೆ, ಎಸ್‌ಸಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಶರತ್ ಡಿ, ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ ಸ್ವಾಗತಿಸಿದರು. ಸಿಬ್ಬಂದಿ ಸುನೀಲ್ ಎನ್. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಸನ್ಮಾನ:
ಎಸ್‌ಸಿಡಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಎಸ್.ಬಿ ಜಯರಾಮ ರೈ ಬಳಜ್ಜರವರಿಗೆ ನನ್ಯ ಅಚ್ಚುತ ಮೂಡೆತ್ತಾಯರವರು ಶಾಲು ಹೊದಿಸಿ, ಏಲಕ್ಕಿ ಹಾರ ಹಾಕಿ, ಪೇಟ ತೊಡಿಸಿ, ಫಲಪುಷ್ಫ, ಸ್ಮರಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here