ಕಡಬ, ಪುತ್ತೂರು ತಾಲೂಕಿನ 43ರೈತರ ಸಹಿತ ದ.ಕ.ಜಿಲ್ಲೆಯ 196 ಮಂದಿಗೆ ಆಯುಧ ಠೇವಣಿಯಿಂದ ವಿನಾಯಿತಿ

0

ನೆಲ್ಯಾಡಿ: ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲದ ಹಾಗೂ ಕೃಷಿ ಹಾನಿಯಾಗುತ್ತಿರುವ ಬಗ್ಗೆ ಸೂಕ್ತ ದಾಖಲೆ ನೀಡಿರುವ ಕಡಬ, ಸುಳ್ಯ ತಾಲೂಕಿನ ಸಹಿತ ದ.ಕ.ಜಿಲ್ಲೆಯ 196 ಮಂದಿಗೆ ಆಯುಧ ಠೇವಣಿ ಇರಿಸುವುದರಿಂದ ವಿನಾಯಿತಿ ನೀಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಒಳಗೊಂಡ ದ.ಕ.ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿ ಎ.18ರಂದು ಆದೇಶ ಹೊರಡಿಸಿದೆ.


ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚುನಾವಣೆಯ ಅವಧಿಯಲ್ಲಿ ಶಾತಿ ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಎಲ್ಲಾ ಆಯುಧ ಪರವಾನಿಗೆದಾರರಿಗೆ ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಸಮೀಪದ ಪೊಲೀಸ್ ಠಾಣೆ ಅಥವಾ ಅಧಿಕೃತ ಕೋವಿ ಮುದ್ದುಗುಂಡು ವ್ಯಾಪಾರಿಗಳಲ್ಲಿ ಠೇವಣಿ ಇಡುವಂತೆ ಮಾ.18ರಂದು ಆದೇಶ ಹೊರಡಿಸಲಾಗಿತ್ತು. ಈ ಮಧ್ಯೆ ದ.ಕ.ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಠೇವಣಿ ಇಡುವುದರಿಂದ ವಿನಾಯಿತಿ ಕೋರಿ ಪರವಾನಿಗೆದಾರರು ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ದ.ಕ.ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಒಳಗೊಂಡ ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಆಯುಧಗಳ ಠೇವಣಾತಿಯಿಂದ ವಿನಾಯಿತಿ ಕೋರಿ ಬಂದ ಅರ್ಜಿಗಳನ್ನು ನಾಲ್ಕು ಹಂತಗಳಲ್ಲಿ ಪರಿಶೀಲಿಸಿ ನಿಗದಿತ ಸಮಯದೊಳಗೆ ವಿಲೇವಾರಿಯನ್ನು ಮಾಡಿದೆ. ಈ ನಡುವೆ ಸ್ಕ್ರೀನಿಂಗ್ ಸಮಿತಿಯ ಆದೇಶದ ವಿರುದ್ಧ ಜಿಲ್ಲೆಯ ಹಲವಾರು ಆಯುಧ ಪರವಾನಿಗೆದಾರರೂ ಹೈಕೋರ‍್ಟ್‌ನಲ್ಲಿ ದಾವೆಯನ್ನು ಹೂಡಿದ್ದರು.


ಮನೆಯ ಸುತ್ತ ಕಾಡುಪ್ರಾಣಿಗಳ ಹಾವಳಿ ಹೆಚ್ಚಿರುವುದರಿಂದ ಸ್ಕ್ರೀನಿಂಗ್ ಕಮಿಟಿಯ ಆದೇಶದ ವಿರುದ್ಧ ಹೈಕೋರ‍್ಟ್‌ನಲ್ಲಿ ರಿಟ್ ಪಿಟಿಷನ್ ಮೂಲಕ ಆಯುಧ ಠೇವಣಿಯಿಂದ ವಿನಾಯಿತಿ ಕೋರಿ ಕಡಬ, ಸುಳ್ಯ ತಾಲೂಕಿನ ಸಹಿತ ದ.ಕ.ಜಿಲ್ಲೆಯ 196 ಮಂದಿ ಪರವಾನಿಗೆದಾರರು ದಾವೆ ಹೂಡಿದ್ದರು. ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಕೋರಿಕೆಯನ್ನು 18-4-2024ರಂದು ದ.ಕ.ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿಯಲ್ಲಿ ಮರು ಪರಿಶೀಲನೆ ಮಾಡಿ ಆದೇಶ ಹೊರಡಿಸಲಾಗಿದೆ.


ಅರ್ಜಿದಾರರ ಮನವಿ ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸಿ ಕಾಡು ಪ್ರಾಣಿಗಳಾದ ಹಂದಿ, ಚಿರತೆ, ಮಂಗ ಹಾಗೂ ಕಾಡಾನೆಗಳ ಹಾವಳಿಯಿಂದ ಆಗಿರುವ ಜೀವ ಹಾನಿಯ ಬಗ್ಗೆ ಹಾಗೂ ಕೃಷಿ ನಾಶವಾಗಿರುವ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಿ ಸದ್ರಿ ಪರವಾನಿಗೆದಾರರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗದೇ ಇರುವುದರಿಂದ ಹಾಗೂ ಕೃಷಿ ಹಾನಿಯಾಗುತ್ತಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿರುವ ಕಾರಣ ಜಿಲ್ಲಾ ಸ್ಕ್ರೀನಿಂಗ್ ಸಮಿತಿಯಲ್ಲಿ ಆಯುಧವನ್ನು ಠೇವಣಿ ಇರಿಸುವುದರಿಂದ ಷರತ್ತು ವಿಧಿಸಿ ವಿನಾಯಿತಿ ನೀಡಿ ಆದೇಶಿಸಲಾಗಿದೆ. ಈ ಆದೇಶದ ಅನ್ವಯ ಕಡಬ, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ 196 ಮಂದಿ ಆಯುಧ ಪರವಾನಿಗೆದಾರರು ಆಯುಧ ಠೇವಣಿಯಿಂದ ವಿನಾಯಿತಿ ಪಡೆದುಕೊಂಡಿದ್ದಾರೆ.

ಕಡಬದ ರೈತರಿಂದ ಹೈಕೋರ್ಟ್ ಮೊರೆ:
ಚುನಾವಣೆ ಸಂದರ್ಭದಲ್ಲಿ ರೈತರ ಪರವಾನಿಗೆ ಇರುವ ಬಂದೂಕುಗಳನ್ನು ಠೇವಣಿ ಇಡುವುದರ ವಿರುದ್ಧ ಕಾನೂನು ಹೋರಾಟ ನಡೆಸುವ ಸಲುವಾಗಿ ಕೃಷಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ನೇತೃತ್ವದಲ್ಲಿ ಎ.3ರಂದು ಕಡಬ ಒಕ್ಕಲಿಗ ಸಮುದಾಯ ಭವನದಲ್ಲಿ ಕಡಬ ಭಾಗದ ರೈತರು ಸಮಾಲೋಚನಾ ಸಭೆ ನಡೆಸಿ ಹೈಕೋರ‍್ಟ್ ಮೊರೆ ಹೋಗುವ ತೀರ್ಮಾನ ಕೈಗೊಂಡಿದ್ದರು. ಅದರಂತೆ ನ್ಯಾಯವಾದಿ ಪ್ರದೀಪ್ ಕುಮಾರ್ ಕೆ.ಎಲ್. ಅವರ ಮೂಲಕ ಬಂದೂಕು ಠೇವಣಿ ಇಡುವುದರಿಂದ ವಿನಾಯಿತಿ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

LEAVE A REPLY

Please enter your comment!
Please enter your name here