ನಾನು ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋದದ್ದಲ್ಲ-ಕಾಂಗ್ರೆಸ್ ಮುಖಂಡರು ಮಾತುಕತೆಗೆಂದು ಕರೆದುಕೊಂಡು ಹೋದದ್ದು

0

ಬಿಜೆಪಿ ಪ್ರಮುಖರಿಗೆ ಸೋಮಪ್ಪ ಪೂಜಾರಿಯವರಿಂದ ಸ್ಪಷ್ಟನೆ

ಪುತ್ತೂರು:ಏ.18ರಂದು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ನಾನು ಏ.19ರಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋದದ್ದಲ್ಲ.ನಾನು ಬಿಜೆಪಿಗೆ ಸೇರ್ಪಡೆಗೊಂಡದ್ದಕ್ಕೆ ಕಾಂಗ್ರೆಸ್ ಮುಖಂಡರು ಮಾತುಕತೆಗೆ ಕರೆದುಕೊಂಡು ಹೋಗಿರುವುದು.ನಾನು ನನ್ನಿಷ್ಟ ಪ್ರಕಾರ ಬಿಜೆಪಿಗೆ ಸೇರ್ಪಡೆಗೊಂಡಿರುವುದು.ಕಾಂಗ್ರೆಸ್ ಪಕ್ಷದವರು ಇನ್ನು ನನಗೆ ಕರೆ ಮಾಡುವುದು ಬೇಡ ಎಂದು ಹೇಳಿದ್ದಾರೆ.


ಬಜತ್ತೂರು ತನ್ನ ಮನೆಯಲ್ಲಿ ಏ.19ರಂದು ಸಂಜೆ ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಸಂಚಾಲಕ ಮುಕುಂದ ಬಜತ್ತೂರು ಮತ್ತು ಸುರೇಶ್ ಅತ್ರಮಜಲು ಅವರ ಉಪಸ್ಥಿತಿಯಲ್ಲಿ ಅವರು ತನ್ನ ಸೇರ್ಪಡೆ ವಿಚಾರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ವಿಚಾರವನ್ನು ತಿಳಿಸಿದರು.ನಾನು ಈ ಹಿಂದೆ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತನಾಗಿ ಬೂತ್ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ್ದೇನೆ. ಮೊನ್ನೆ ಮೊನ್ನೆ ಬೂತ್ ಕಮಿಟಿ ಸಭೆಗೆ ಹೋಗಿದ್ದೆ. ಆದರೆ ಅಲ್ಲಿ ಅವರು ನನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಆಗ ನನಗೆ ಮನಸ್ಸಿಗೆ ಬೇಸರ ಆಗಿತ್ತು. ಆಗ ನಾನು ಉಮೇಶ್‌ರಿಗೆ ಫೋನ್ ಮಾಡಿದ್ದೆ. ಎಲ್ಲಿಯಾದರೂ ಮೀಟಿಂಗ್ ಇದ್ದರೆ ಹೇಳಿ ನಾನು ಬಿಜೆಪಿ ಪಕ್ಷಕ್ಕೆ ಬರುತ್ತೇನೆ ಎಂದಿದ್ದೆ.ಅದೇ ಪ್ರಕಾರ ನಿನ್ನೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ನಾನು ಮತ್ತು ನನ್ನ ಪತ್ನಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೆವು. ಹಾಗೆ ನಾವು ಸೇರ್ಪಡೆಗೊಂಡ ನ್ಯೂಸ್ ಮಾಧ್ಯಮಗಳಲ್ಲಿ ಬಂದ ತಕ್ಷಣ ಡಾ.ರಾಜರಾಮ್ ಅವರಿಗೆ ಗೊತ್ತಾಗಿ ರಾತ್ರಿಯೇ ಕರೆ ಮಾಡಿದ್ದರು.ನಾನು ಫೋನ್ ಕಟ್ ಮಾಡಿದ್ದೆ. ಮತ್ತೆ ರಾತ್ರಿ ಮನೆಯಲ್ಲಿದ್ದಾಗ ಕರೆ ಬಂದಾಗ ತೆಗೆದು ಮಾತನಾಡಿದ್ದೆ.ಬಿಜೆಪಿ ಪಕ್ಷ ಸೇರ್ಪಡೆಗೊಂಡ ವಿಚಾರವನ್ನು ಪ್ರಶ್ನಿಸಿದರು. ಆಗ ನಾನು, ಬಿಜೆಪಿಗೆ ಹೋದದ್ದು ಹೌದು. ನನಗೆ ನಿಮ್ಮಿಂದ ಅನ್ಯಾಯ ಆಗಿದೆ. ನೀವು ಫೀಲ್ಡ್ ಮಾಡಿದ್ದೀರಿ.ನನ್ನನ್ನು ಕರೆಯಲಿಲ್ಲ. ಆದರೆ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಸೋಂಪಣ್ಣನ ನೆನಪಾಗಿದೆ.ಬಿಜೆಪಿಗೆ ಹೋದ ಕಾರಣ ಸೋಂಪಣ್ಣ ನಿಮಗೆ ಬೇಕೆಂದು ಆಗಿದಾ ಎಂದು ಪ್ರಶ್ನಿಸಿದ್ದೆ.ನಾನು ಮತ್ತು ಪತ್ನಿ ಬಿಜೆಪಿಗೆ ಹೋಗಿದ್ದೇವೆ. ಈ ಕುರಿತು ನೀವು ಮಾತನಾಡುವುದು ಬೇಡ ಎಂದಿದ್ದೆ.ಆಗ ಅವರು ರಾತ್ರಿಯೇ ಮನೆಗೆ ಬರುತ್ತೇನೆ ಎಂದು ಹೇಳಿದಾಗ ರಾತ್ರಿ ಮನೆಗೆ ಬರುವುದು ಬೇಡ ಎಂದಿದ್ದೆ.ಏ.19ರ ಬೆಳಿಗ್ಗೆ ಗಂಟೆ 6ಕ್ಕೆ ಅವರು ಮನೆಗೆ ಕಾರಿನಲ್ಲಿ ಬಂದು ನಾವು ಹೋಗುವ ಎಂದರು.ನನಗೆ ದೇವರ ದೀಪ ಇಟ್ಟು ಆಗಿಲ್ಲ ಎಂದಾಗ ಅವರು ಕಾದು ಕುಳಿತು ನನ್ನನ್ನು ಕರೆದುಕೊಂಡು ಹೋದರು.ಅಲ್ಲೊಂದು ಮನೆಯಲ್ಲಿ ಬಸ್ತಿಕಾರ್ ಮತ್ತಿತರರಿದ್ದು ನನ್ನನ್ನಲ್ಲಿ ವಿಚಾರಿಸಿದರು.ಅದಕ್ಕೆ ನಾನು, ನೀವು ಮಾಡಿದ ತಪ್ಪಿಗೆ ನಾನು ಬಿಜೆಪಿಗೆ ಸೇರ್ಪಡೆಗೊಂಡದ್ದು ಎಂದಿದ್ದೆ.ನಾನು ಇಷ್ಟು ವರ್ಷ ಕಾಂಗ್ರೆಸ್‌ಗೆ ದುಡಿದಿದ್ದೇನೆ. ಆದರೆ ನನಗೆ ಅನ್ಯಾಯಾಗಿದೆ.ಮೋದಿಯವರ ತತ್ವ ನೋಡಿ ನನಗೆ ಬಿಜೆಪಿ ಸೇರ್ಪಡೆಗೊಳ್ಳುವ ಕುರಿತು ನನಗೆ ಹಿಂದೆಯೇ ಇಷ್ಟ ಇತ್ತು ಎಂದಿದ್ದೆ.ಆದರೂ ಕಾಂಗ್ರೆಸ್‌ನ ಪ್ರಮುಖರು ಅಲ್ಲಿ ನನಗೆ ಕಾಂಗ್ರೆಸ್‌ನ ಶಾಲು ಹಾಕಿದರು.ನೀವು ನನಗೆ ಶಾಲು ಹಾಕಿದರೂ ನಾನು ಬಿಜೆಪಿಯೇ ಎಂದು ಹೇಳಿದ್ದೆ. ನನಗೆ ಮಾಡಿದ ಅನ್ಯಾಯಕ್ಕಾಗಿ ನಾನು ಬಿಜೆಪಿಗೆ ಸೇರ್ಪಡಗೊಂಡಿದ್ದು. ಇನ್ನು ನೀವು ಅದರ ಕುರಿತು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಅಲ್ಲಿಂದ ನಾನು ಬಂದಿದ್ದೆ. ಆದರೆ ಬಳಿಕದ ಬೆಳವಣಿಗೆಯಲ್ಲಿ ನಿನ್ನೆ ಬಿಜೆಪಿಗೆ ಸೇರ್ಪಡೆ ಇಂದು ಕಾಂಗ್ರೆಸ್‌ಗೆ ಸೇರ್ಪಡೆ ಸೇರಿದ್ದಾರೆಂದು ಹೇಳಿ ನನ್ನನ್ನು ಏನು ಒಂದು ಪಕ್ಷದಿಂದ ಪಕ್ಷಕ್ಕೆ ಹಾರುವಂತೆ ಬಿಂಬಿಸಿದ್ದಾರೆ.ಕಾಂಗ್ರೆಸ್ ಪಕ್ಷದವರು ಇನ್ನು ನನಗೆ ಕರೆ ಮಾಡುವುದು ಬೇಡ.ನನ್ನ ಇಷ್ಟ ಪ್ರಕಾರ ನಾನು ಬಿಜೆಪಿಗೆ ಹೋಗಿದ್ದು ಎಂದು ಸೋಮಪ್ಪ ಪೂಜಾರಿಯವರು ಮನೆಯಲ್ಲಿ ಬಿಜೆಪಿ ಪ್ರಮುಖರಿಗೆ ಸ್ಪಷ್ಟನೆ ನೀಡಿರುವ ವೀಡಿಯೋ ವೈರಲ್ ಆಗಿದೆ.

ಸೇರ್ಪಡೆ ರಾಜಕೀಯ….
ಸೋಮಪ್ಪ ಪೂಜಾರಿ ಮತ್ತವರ ಪತ್ನಿ ಏ.18ರಂದು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು.ಏ.19ರಂದು ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರಲ್ಲದೆ ತಾನು ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.ಈ ಬೆಳವಣಿಗೆಯ ಬೆನ್ನಲ್ಲೇ ಏ.19ರಂದು ಸಂಜೆ, ತಾನು ತನ್ನಿಷ್ಟ ಪ್ರಕಾರ ಬಿಜೆಪಿಗೆ ಹೋಗಿರುವುದು.ಇನ್ನು ಈ ವಿಚಾರದಲ್ಲಿ ಕಾಂಗ್ರೆಸ್‌ನವರು ನನಗೆ ಕರೆ ಮಾಡುವುದು ಬೇಡ ಎಂದು, ಬಜತ್ತೂರು ತನ್ನ ಮನೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಬಿಜೆಪಿ ಪ್ರಮುಖರಿಗೆ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.ಒಟ್ಟಾರೆ ಸೋಮಪ್ಪ ಪೂಜಾರಿಯವರ ಸೇರ್ಪಡೆ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಹಿಂದಿನ ವರದಿ

LEAVE A REPLY

Please enter your comment!
Please enter your name here