ಅಮೈ ಬಾರಿಕೆ ತರವಾಡು ದೈವಸ್ಥಾನದಲ್ಲಿ ಕುಟುಂಬ ದೈವಗಳ ವೈಭವದ ನೇಮೋತ್ಸವ

0

ಪುತ್ತೂರು: ಅರಿಯಡ್ಕ ಗ್ರಾಮದ ಅಮೈ ಬಾರಿಕೆ ತರವಾಡು ಕುಟುಂಬ ದೈವಗಳ ನೇಮೋತ್ಸವವು ಏ.20 ಮತ್ತು 21 ರಂದು ಅಮೈ ಬಾರಿಕೆ ಕುಟುಂಬಸ್ಥರ ತರವಾಡು ದೈವಸ್ಥಾನದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.

ಚಿತ್ರ: ನಿಶು ಕೌಡಿಚ್ಚಾರ್

ಪುತ್ತೂರು-ಕುಂಬ್ರ-ಬೆಳ್ಳಾರೆ ರಾಜ್ಯ ರಸ್ತೆಯಲ್ಲಿ ಕುಂಬ್ರದಿಂದ 2.5 ಕಿ.ಮೀ ದೂರದಲ್ಲಿರುವ ಅಮೈ ಬಾರಿಕೆ ತರವಾಡು ದೈವಸ್ಥಾನ ಸಂಪೂರ್ಣ ಪ್ರಕೃತಿಯ ಮಧ್ಯದಲ್ಲಿದೆ. ಈ ದೈವಸ್ಥಾನದಲ್ಲಿ ಏ.20 ರಂದು ಬೆಳಿಗ್ಗೆ ಶ್ರೀ ಗಣಪತಿ ಹೋಮ, ಶುದ್ಧಿಕಲಶ ನಡೆದು ನಾಗ ದೇವರಿಗೆ ತಂಬಿಲ ಬಳಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ವೆಂಕಟರಮಣ ದೇವರಿಗೆ ಹರಿಸೇವೆ ನಡೆಯಿತು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಸಂಜೆ ಅಮೈ ತರವಾಡು ದೈವಸ್ಥಾನದಿಂದ ಧರ್ಮದೈವ ಪರಿವಾರ ದೈವಗಳ ಭಂಡಾರ ಕೋಡಿಯಾಡಿಗೆ ಬರುವುದು ಹಾಗೇ ಕುತ್ಯಾಡಿ ಗ್ರಾಮ ದೈವಸ್ಥಾನದಿಂದ ಗ್ರಾಮ ದೈವ ಧೂಮಾವತಿಯ ಭಂಡಾರ ತಂದು ಅಮೈ ತರವಾಡು ಕೋಡಿಯಾಡಿಯಲ್ಲಿ ಏರಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕುಣಿತ ಭಜನೆ ಗಮನ ಸೆಳೆಯಿತು. ರಾತ್ರಿ ನೇಮೋತ್ಸವ ಆರಂಭದೊಂದಿಗೆ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಆರಂಭದಲ್ಲಿ ಧರ್ಮದೈವ (ಪಿಲಿಭೂತ) ಮತ್ತು ರುದ್ರಾಂಡಿ ಪರಿವಾರ ದೈವಗಳ ನೇಮೋತ್ಸವ ನಡೆಯಿತು.

ಏ.21 ರಂದು ಬೆಳಿಗ್ಗೆ ವರ್ಣರ ಪಂಜುರ್ಲಿ, ಲೆಕ್ಕೆಸಿರಿ ಬಾವನ ದೈವದ ನೇಮೋತ್ಸವ ನಡೆದು ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಗ್ರಾಮ ದೈವದ ನೇಮೋತ್ಸವ ನಡೆಯಿತು. ಸಂಜೆ ಅಮೈ ತರವಾಡು ಮನೆಯಿಂದ ಕಲ್ಲುರ್ಟಿ ದೈವಗಳ, ಕೊರತ್ತಿ, ಕುಪ್ಪೆಪಂಜುರ್ಲಿ ಮತ್ತು ಗುಳಿಗ ದೈವದ ಭಂಡಾರವನ್ನು ಕೋಡಿಯಾಡಿಯಲ್ಲಿ ಏರಿಸುವ ಕಾರ್ಯಕ್ರಮದ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆದು ರಾತ್ರಿ ಕಲ್ಲುರ್ಟಿ ದೈವಗಳ, ಕೊರತ್ತಿ, ಕುಪ್ಪೆ ಪಂಜುರ್ಲಿ ಮತ್ತು ಗುಳಿಗ ದೈವಗಳ ನೇಮೋತ್ಸವ ಬಹಳ ವಿಜೃಂಭಣೆಯಿಂದ ಜರಗಿತು. ಎರಡು ದಿನಗಳ ಕಾಲ ನಿರಂತರ ಅನ್ನಸಂತರ್ಪಣೆ ನಡೆಯಿತು. ನೂರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

ಕುಟುಂಬದ ಯಜಮಾನ ಸೋಮಪ್ಪ ರೈ ಅಮೈ ಮಿತ್ತಂಡ, ಅಮೈ ಬಾರಿಕೆ ತರವಾಡು ಕುಟುಂಬ ಆಡಳಿತ ಮಂಡಳಿದ ಅಧ್ಯಕ್ಷ ಲೋಕೇಶ್ ರೈ ಅಮೈ, ಗೌರವಾಧ್ಯಕ್ಷ ಪದ್ಮನಾಭ ರೈ ಅಗೋಳಿಗುತ್ತು, ಸಂಚಾಲಕ ಚಂದ್ರಶೇಖರ ರೈ ಅಮೈ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬಸ್ಥರು ಭಕ್ತಾಧಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು.


ʼಅಮೈ ಬಾರಿಕೆ ತರವಾಡು ದೈವಸ್ಥಾನದಲ್ಲಿ ಎರಡು ದಿನಗಳ ಕಾಲ ಪೂಜೆ ಪುನಸ್ಕಾರದೊಂದಿಗೆ ಬಹಳ ವಿಜೃಂಣೆಯಿಂದ ದೈವಗಳ ನೇಮೋತ್ಸವ ನಡೆದಿದೆ. ನೇಮೋತ್ಸವದಲ್ಲಿ ಪಾಲ್ಗೊಂಡು ದೈವಗಳ ಪ್ರಸಾದ ಸ್ವೀಕರಿಸಿದ ಸರ್ವರಿಗೂ ಹಾಗೇ ಸಹಕರಿಸಿದ ಎಲ್ಲರಿಗೂ ದೈವ ದೇವರು ಒಳ್ಳೆಯದನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.’
ಲೋಕೇಶ್ ರೈ ಅಮೈ, ಅಧ್ಯಕ್ಷರು ಅಮೈ ಬಾರಿಕೆ ತರವಾಡು ಕುಟುಂಬ ಆಡಳಿತ ಮಂಡಳಿ

LEAVE A REPLY

Please enter your comment!
Please enter your name here