ಮುಂಡೂರು: 32 ವರ್ಷಗಳಿಂದ ಇದ್ದ ಕಾಡಬಾಗಿಲು-ಸರ್ವೆಬಾವ ಗ್ರಾಪಂ ರಸ್ತೆ ವಿವಾದ ಸುಖಾಂತ್ಯ

0

ಶಾಸಕ ಅಶೋಕ್ ಕುಮಾರ್ ರೈ ನಿರ್ದೇಶನದಂತೆ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣ

ಪುತ್ತೂರು: ಮುಂಡೂರು ಗ್ರಾಮದ ಕಾಡಬಾಗಿಲು-ಸರ್ವೆಬಾವ ಗ್ರಾಪಂ ರಸ್ತೆ ವಿವಾದ ಸುಖಾಂತ್ಯಗೊಂಡಿದ್ದು, ರಸ್ತೆ ನಿರ್ಮಾಣಕ್ಕೆ ನ್ಯಾಯಾಲಯದ ಆದೇಶ ಮತ್ತು ಶಾಸಕ ಅಶೋಕ್ ರೈ ನಿರ್ದೇಶನದಂತೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ಮೇ.7 ರಂದು ಪೂರ್ಣಗೊಳಿಸಲಾಗಿದೆ.‌ ಬೆಳಿಗ್ಗೆ ಆರಂಭಗೊಂಡ ಕಾಮಗಾರಿ ಸಂಜೆ ವೇಳೆ ಯಾವುದೇ ತಕರಾರಿಲ್ಲದೆ ಪೂರ್ಣಗೊಳಿಸಲಾಗಿದೆ.

ಏನಿದು ವಿವಾದ?
ಕಾಡಬಾಗಿಲಿನಿಂದ ಸರ್ವೆಬಾವಕ್ಕೆ ತೆರಳುವ ಸುಮಾರು 200 ಮೀಟರ್ ಉದ್ದದ ರಸ್ತೆ ವಿವಾದದ ಕೇಂದ್ರ ಬಿಂದುವಾಗಿತ್ತು. ಈ ರಸ್ತೆ ಸುಮಾರು 19 ಮನೆಯ ಪ್ರಮುಖ ಸಂಪರ್ಕ ರಸ್ತೆಯಾಗಿತ್ತು. ಈ ರಸ್ತೆ ದುರಸ್ಥಿ ಅಥವಾ ಅಗಲೀಕರಣ ಮಾಡದ ಕಾರಣ ಯಾವುದೇ ವಾಹನಗಳು ಸಂಚರಿಸುವಂತಿರಲಿಲ್ಲ. ಇಲ್ಲಿ ರಸ್ತೆ ನಿರ್ಮಾಣ ವಿಚಾರವಾಗಿ ಸ್ಥಳೀಯರು ನ್ಯಾಯಾಲಯದ ಮೊರೆ ಹೋಗಿದ್ದರು. ಸುಮಾರು 32 ವರ್ಷಗಳಿಂದ ಇಲ್ಲಿನ ರಸ್ತೆ ವಿವಾದ ವಿವಾದವಾಗಿಯೇ ಇತ್ತು. ರಸ್ತೆ ವಿಚಾರವಾಗಿ ಸಹಾಯಕ ಕಮಿಷನರ್ ನ್ಯಾಯಾಲಯ, ಜಿಲ್ಲಾಧಿಕಾರಿಗಳ ನ್ಯಾಯಾಲಯ ಮತ್ತು ಸಿವಿಲ್ ಕೋರ್ಟಿನಲ್ಲಿ ದಾವೆ ಹೂಡಲಾಗಿತ್ತು. ರಸ್ತೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮತ್ತು ಸಿವಿಲ್ ನ್ಯಾಯಾಲಯದಲ್ಲಿ ರಸ್ತೆ ಪರವಾಗಿ ತೀರ್ಪು ಬಂದಿತ್ತು. ಆದರೆ ತೀರ್ಪನ್ನು ಅನುಷ್ಠಾನಗೊಳಿಸುವಲ್ಲಿ ಮತ್ತೆ ಅಡ್ಡಿ ಉಂಟಾಗಿತ್ತು. ಈ ಕಾರಣ ನ್ಯಾಯಾಲಯದ ಆದೇಶವಿದ್ದರೂ ವಿವಾದ ಅಂತ್ಯ ಕಂಡಿರಲಿಲ್ಲ.

ಶಾಸಕರ ರಾಜಿ ಮಾತುಕತೆ
ರಸ್ತೆ ಪರವಾಗಿರುವ ಮತ್ತು ವಿರೋಧವಾಗಿರುವ ಎರಡೂ ಕಡೆಯವರನ್ನು ಕರೆಸಿ ಶಾಸಕ. ಅಶೋಕ್ ರೈ ಮಾತುಕತೆ ನಡೆಸಿದ್ದರು. ಎರಡೂ ಕಡೆಯವರ ಅಭಿಪ್ರಾಯವನ್ನು ಸಮಾನವಾಗಿ ಪರಿಗಣಿಸಿದ್ದ ಶಾಸಕರು ನ್ಯಾಯಾಲಯದ ತೀರ್ಪಿನ ಬಗ್ಗೆ ಎರಡೂ ಕಡೆಯವರಿಗೆ ವಿವರಣೆ ನೀಡಿದ್ದರು. ರಸ್ತೆ ಮೂಲಭೂತ ಸೌಕರ್ಯಗಳಲ್ಲಿ ಸೇರುವ ಕಾರಣ ಯಾವುದೇ ವಿರೋಧವನ್ನು ಮಾಡದೆ ನ್ಯಾಯಾಲಯದ ತೀರ್ಪಿಗೆ ಗೌರವ ಕೊಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದರು. ಶಾಸಕರ ಮನವಿಗೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆಯನ್ನು ಸೂಚಿಸಿದ್ದರು. ಅದರಂತೆ ಮೇ.7 ರಂದು ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ.

ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡೇ ಹೋಗಬೇಕಿತ್ತು
ರಸ್ತೆಗಾಗಿ ಬೇಡಿಕೆ ಇಟ್ಟಿದ್ದ ಸುಮಾರು 19 ಮನೆಯಲ್ಲಿ ಇಬ್ಬರು ಅನಾರೋಗ್ಯ ಪೀಡಿತರಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುಲು ಹೊತ್ತುಕೊಂಡೇ ಹೋಗಬೇಕಿತ್ತು. ಸುಮಾರು 32 ವರ್ಷಗಳಿಂದ ಇಲ್ಲಿನ ರಸ್ತೆ ಸಮಸ್ಯೆಯ ಬಗ್ಗೆ ಪರಿಹರಿಸಲು ಅನೇಕ ಮಂದಿ ಪ್ರಯತ್ನವನ್ನು ಮಾಡಿದ್ದರೂ ಅದು ಸಫಲವಾಗಿರಲಿಲ್ಲ.

32 ವರ್ಷಗಳ ವಿವಾದ ಸುಖಾಂತ್ಯ
ಸುಮಾರು 32 ವರ್ಷಗಳಿಂದ ಇದ್ದ ಇಲ್ಲಿನ ರಸ್ತೆ ವಿವಾದ ಕಾಮಗಾರಿ ಪೂರ್ಣಗೊಳ್ಳುವುದರೊಂದಿಗೆ ಸುಖಾಂತ್ಯ ಕಂಡಿದೆ. ಇದು ಮುಂಡೂರು ಗ್ರಾಪಂ ವ್ಯಾಪ್ತಿಗೊಳಪಟ್ಟ ಗ್ರಾಪಂ ರಸ್ತೆಯಾಗಿದ್ದು ಮುಂದಿನ ದಿನಗಳಲ್ಲಿ ಈ ರಸ್ತೆ ಕಾಂಕ್ರಿಟೀಕರಣಗೊಂಡು ಎಲ್ಲರಿಗೂ ಉಪಯುಕ್ತವಾದ ರಸ್ತೆಯಾಗಲಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಶಾಸಕರ ಕಾರ್ಯಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ. ರಸ್ತೆ ನಿರ್ಮಾಣ ಮಾಡುವ ವೇಳೆ ತಹಶಿಲ್ದಾರ್, ಎಡಿಎಲ್‌ಆರ್, ಕಂದಾಯ ನಿರೀಕ್ಷಕರು, ಗ್ರಾಪಂ ಪಿಡಿಒ, ಗ್ರಾಪಂ ಸದಸ್ಯರಾದ ಕಮಲೇಶ್, ಧಾರ್ಮಿಕ ದತ್ತಿ ಇಲಾಖೆಯ ಶಿವನಾಥ ರೈ ಮೇಗಿನಗುತ್ತು ಮತ್ತು ಸಂಪ್ಯ ಪೊಲೀಸರು ಉಪಸ್ಥಿತರಿದ್ದರು.

ಸುಮಾರು 32 ವರ್ಷಗಳಿಂದ ಇದ್ದ ರಸ್ತೆ ವಿವಾದ ಸುಖಾಂತ್ಯಕಂಡಿದೆ. ನ್ಯಾಯಾಲಯಗಳ ಆದೇಶವನ್ನು ಪಾಲಿಸುವುದರ ಜೊತೆ, ರಸ್ತೆಗೆ ಪರ ಮತ್ತು ವಿರೋಧವಿದ್ದ ಎರಡೂ ಕಡೆಯವರನ್ನು ಕರೆಸಿ ಮಾತುಕತೆ ನಡೆಸಿ ರಸ್ತೆ ವಿವಾದಕ್ಕೆ ತೆರೆ ಎಳೆಯುವಂತೆ ಕೇಳಿಕೊಂಡಿದ್ದೆ. ನನ್ನ ಕೋರಿಕೆಗೆ ಎರಡೂ ಕಡೆಯವರೂ ಪೂರ್ಣ ಒಪ್ಪಿಗೆಯನ್ನು ಸೂಚಿಸುವ ಮೂಲಕ ಶಾಸಕ ಸ್ಥಾನಕ್ಕೆ ಗೌರವ ಕೊಟ್ಟು ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ರಸ್ತೆ ನಿರ್ಮಾಣ ಕಾರ್ಯ ನಡೆದಿದೆ. ಈ ರಸ್ತೆ 13 ಮನೆಗಳಿಗೆ ಸಂಪರ್ಕ ರಸ್ತೆಯಾಗಲಿದೆ. ರಸ್ತೆ ಎಲ್ಲರಿಗೂ ಪ್ರಯೋಜನವಾಗುವಂತಾಗಲಿ ಮತ್ತು ಒಂದು ಒಳ್ಳೆಯ ಕೆಲಸಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.
-ಅಶೋಕ್ ಕುಮಾರ್ ರೈ‌, ಶಾಸಕರು, ಪುತ್ತೂರು

ಮೂಲಭೂತ ವ್ಯವಸ್ಥೆಗೆ ಅಡ್ಡಿ ಮಾಡದಿರಿ: ಶಾಸಕರ ಮನವಿ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಿಯೇ ಆಗಲಿ ಯಾರೂ ಕೂಡಾ ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕಕ್ಕೆ ಯಾರೂ ಅಡ್ಡಿ ಮಾಡಬಾರದು. ಇದು ಮಾನವನ ಮೂಲಭೂತ ಸೌಕರ್ಯವಾಗಿದ್ದು, ಯಾವುದೇ ಕಾರಣಕ್ಕೆ ಈ ಮೂರು ವಿಚಾರಗಳನ್ನು ಮುಂದಿಟ್ಟು ವಿವಾದವನ್ನು ಸೃಷ್ಟಿಮಾಡಬಾರದು, ಈ ವಿಚಾರಗಳನ್ನು ನ್ಯಾಯಾಲಯಕ್ಕೆ ಕೊಂಡೊಯ್ಯದೆ ನಮ್ಮೊಳಗೆ ಮಾತುಕತೆಯಲ್ಲಿ ಮುಗಿಸುವ ಮೂಲಕ ನಾವೆಲ್ಲರೂ ಸಮಾಜದಲ್ಲಿ ಸತ್ಪ್ರಜೆಗಳಾಗಿ, ಎಲ್ಲರಿಗೂ ಮಾದರಿ ವ್ಯಕ್ತಿಗಳಾಗಿ ಬಾಳುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.‌

LEAVE A REPLY

Please enter your comment!
Please enter your name here