ಉಪ್ಪಿನಂಗಡಿ: ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪಕರ ದಿನಾಚರಣೆ

0

ಉಪ್ಪಿನಂಗಡಿ: ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಆಶಯದೊಂದಿಗೆ 1915ರ ಮೇ.5ರಂದು ಮೈಸೂರು ಅರಸರಾದ ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರಿಂದ ಸ್ಥಾಪನೆ ಕಂಡ ಕರ್ಣಾಟಕ ಸಾಹಿತ್ಯ ಪರಿಷತ್ ಇಂದು ಕನ್ನಡ ಸಾಹಿತ್ಯ ಪರಿಷತ್ ಆಗಿ ರಾಜ್ಯ ಮತ್ತು ಹೊರನಾಡಿನಲ್ಲಿ ಕನ್ನಡದ ಸೇವೆಯನ್ನು ನಡೆಸುತ್ತಿದೆ ಎಂದು ಸಾಹಿತಿ ಎಸ್. ಅಬೂಬಕ್ಕರ್ ಆರ್ಲಪದವು ತಿಳಿಸಿದರು.


ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪುತ್ತೂರು ಕಸಾಪ ಕಚೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.


ಸಾಹಿತ್ಯ ಸೇವೆಗಾಗಿ ರಾಜ್ಯ ಘಟಕವಲ್ಲದೆ, ಜಿಲ್ಲಾ ಘಟಕ, ತಾಲೂಕು ಘಟಕ ಹಾಗೂ ಪ್ರಸಕ್ತ ಹೋಬಳಿ ಘಟಕಗಳನ್ನು ಹೊಂದಿದ್ದು, ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಕಾರ್ಯ ಚಟುವಟಿಕೆಗಳನ್ನು ಪರಿಷತ್ ನಡೆಸಿಕೊಂಡು ಬರುತ್ತಿದೆ. ಈ ಎಲ್ಲಾ ಸಾಧನೆಗಳ ಮೂಲ ಕಾರಣಕರ್ತರಾದ ಪರಿಷತ್‌ನ ಸಂಸ್ಥಾಪಕರನ್ನು ಪ್ರತಿವರ್ಷ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಸ್ವತಃ ದೃಷ್ಠಿ ದೋಷದಿಂದ ಬಳಲುತ್ತಿದ್ದರೂ, ಬಡ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುವ ಎಚ್. ಎಸ್. ಮನುಕುಮಾರ್ ಶಿವನಗರ ಇವರ ‘ಶಿವಮಣಿ ಕಲಾರಂಗ’ ಎಂಬ ಅನಿಯಮಿತ ಪತ್ರಿಕೆಯ ಪ್ರಥಮ ಸಂಚಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಇದರ ಗೌರವ ಕೋಶಾಧಿಕಾರಿ ಬಿ. ಐತ್ತಪ್ಪ ನಾಯ್ಕ ರವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅನಾವಶ್ಯಕ ವೆಚ್ಚವಿಲ್ಲದೆ ಕನ್ನಡ ಸಾಹಿತ್ಯದ ಕಿಚ್ಚು ಹೆಚ್ಚಿಸುವ ಕಾರ್ಯಕ್ರಮಗಳ ಮೂಲಕ ಹಿರಿಯ ಕಿರಿಯರಲ್ಲಿ ಸಾಹಿತ್ಯದ ಒಲವು ಮೂಡಿಸುವ ಕಾರ್ಯದತ್ತ ನಮ್ಮ ಚಿತ್ತ ಹರಿಸಬೇಕು. ಪುತ್ತೂರು ಹಾಗೂ ತಾಲೂಕಿನ ಎರಡು ಹೋಬಳಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಗೆ ನಿವೇಶನ ಮತ್ತು ಕಟ್ಟಡ ನಿರ್ಮಾಣದತ್ತ ನಮ್ಮೆಲ್ಲರ ಸಂಘಟಿತ ಪ್ರಯತ್ನ ನಡೆಯಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷ ಕರುಣಾಕರ ಸುವರ್ಣ, ಪುತ್ತೂರು ಹೋಬಳಿ ಘಟಕದ ಅಧ್ಯಕ್ಷ ಕಡಮಜಲು ಸುಭಾಸ್ ರೈ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಂದರ್ ನಾಯ್ಕ್, ಡಾ. ಪೀಟರ್ ವಿಲ್ಸನ್ ಪ್ರಭಾಕರ್ , ಶ್ರೀಧರ್ ಹೆಚ್ ಜಿ, ಶಂಕರಿ ಶರ್ಮಾ, ವಿಜಯ ಮೊಳೆಯಾರ, ಶಾಂತಾ ಕುಂಟಿನಿ, ಡಾ. ಹರ್ಷ ಕುಮಾರ್ ರೈ , ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here