ಬೆಟ್ಟಂಪಾಡಿ:ಸರಪಳಿಯಿಂದ ಬಿಗಿದು ಯುವಕನ ಕೊಲೆ-ಮೃತನ ತಾಯಿ ಸಹಿತ ಇಬ್ಬರು ಆರೋಪಿಗಳ ಬಂಧನ:ಮದ್ಯವ್ಯಸನಿ ಪುತ್ರ ಸರಪಳಿಯಿಂದ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ದೂರು ನೀಡಿದ್ದ ತಾಯಿ

0

ಪುತ್ತೂರು:ನಾಯಿಯನ್ನು ಕಟ್ಟಿ ಹಾಕುವ ಸರಪಳಿಯನ್ನು ಬಿಗಿದು ಯುವಕನೋರ್ವನನ್ನು ಅಮಾನುಷ ರೀತಿಯಲ್ಲಿ ಎಳೆದೊಯ್ದು ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಬೆಟ್ಟಂಪಾಡಿ ಗ್ರಾಮದ ಕಾನುಮೂಲೆ ಎಂಬಲ್ಲಿ ನಡೆದಿದೆ.ಮೃತನ ತಾಯಿ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಾಗಿದ್ದು ಮೃತ ಯುವಕನ ತಾಯಿ ಹಾಗೂ ನೆರೆ ಮನೆಯ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಕಾನುಮೂಲೆ ಚೇತನ್ ಕುಮಾರ್(33ವ.)ಕೊಲೆಯಾದವರು.ಮೃತನ ತಾಯಿ ಉಮಾವತಿ ಕೆ. ಶೆಟ್ಟಿ ಮತ್ತು ನೆರೆ ಮನೆಯ ಇಸುಬು ಬಂಧಿತ ಆರೋಪಿಗಳು.

ಮದ್ಯ ವ್ಯಸನಿಯಾಗಿದ್ದ ಚೇತನ್ ಕುಮಾರ್(33ವ.)ನಿತ್ಯ ಮನೆ ಮಂದಿಯೊಂದಿಗೆ ಗಲಾಟೆ ನಡೆಸುತ್ತಿದ್ದರಲ್ಲದೆ ತಾಯಿಗೂ ಹಲ್ಲೆ ನಡೆಸುತ್ತಿದ್ದರು.ನೆರೆ ಮನೆಯ ಇಸುಬು ಎಂಬವರ ಮನೆಗೂ ಹೋಗಿ ಅಲ್ಲಿಯೂ ಗಲಾಟೆ ಮಾಡಿದ್ದರು.ಮೇ 10ರಂದು ಮುಂಜಾನೆ 5 ಗಂಟೆಯ ವೇಳೆಗೆ ಇಸುಬುರವರು ಚೇತನ್ ಕುಮಾರ್ ಅವರ ತಾಯಿ ಉಮಾವತಿಯವರಿಗೆ ಕರೆ ಮಾಡಿ ಚೇತನ್ ತನ್ನ ಮನೆಯಲ್ಲಿ ಗಲಾಟೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.ಉಮಾವತಿಯವರು ಇಸುಬುರವರ ಮನೆಗೆ ಬಂದು, ನಾಯಿಯನ್ನು ಕಟ್ಟಿ ಹಾಕುವ ಸರಪಳಿಯಲ್ಲಿ ಮಗ ಚೇತನ್ ಕುಮಾರ್‌ನ ಬೆನ್ನಿಗೆ ಮತ್ತು ಕುತ್ತಿಗೆಗೆ ಬಿಗಿದು ಮನೆಗೆ ಎಳೆದುಕೊಂಡು ಹೋಗುತ್ತಿದ್ದಾಗ ಸಾಧ್ಯವಾಗದೇ ಇದ್ದುದರಿಂದ ಸರಪಳಿಯನ್ನು ಇಸುಬು ಅವರ ಕೈಗೆಕೊಟ್ಟರು.ಬಳಿಕ ಅವರೀರ್ವರೂ ಸರಪಳಿಯನ್ನು ಹಿಡಿದುಕೊಂಡು ಚೇತನ್ ಕುಮಾರ್ ಅವರನ್ನು ಎಳೆದುಕೊಂಡು ಬಂದು ಸರಪಳಿಯನ್ನು ಬಿಗಿದು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಮಗನ ಆತ್ಮಹತ್ಯೆ ಎಂದು ಕಥೆ ಕಟ್ಟಿದ ತಾಯಿ: ಮಗ ಚೇತನ್ ಕುಮಾರ್ ಸರಪಳಿಯನ್ನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ತಾಯಿ ಉಮಾವತಿಯವರು ಆರಂಭದಲ್ಲಿ ಪೊಲೀಸರಿಗೆ ದೂರು ನೀಡಿದ್ದರು.ಆದರೆ ಸಂಶಯಗೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಇದೊಂದು ಕೊಲೆ ಎನ್ನುವುದು ಬೆಳಕಿಗೆ ಬಂದಿದೆ.ಆರಂಭದಲ್ಲಿ ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬಳಿಕ ಕೊಲೆ ಆರೋಪದಲ್ಲಿ ಸುಮೊಟೋ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಮೃತನ ತಾಯಿ ನೀಡಿದ್ದ ದೂರು: ಮಗ ಚೇತನ್ ಕುಮಾರ್ ಜೊತೆ ನಾನು ವಾಸವಿದ್ದು ಕೂಲಿ ಕೆಲಸ ಮಾಡಿಕೊಂಡಿರುತ್ತೇನೆ.ಮಗಳು ಸುಚಿತ್ರಾಳನ್ನು ಮದುವೆ ಮಾಡಿಕೊಡಲಾಗಿದೆ.ಆಕೆ ಕಳೆದ ಶನಿವಾರ ಗಂಡನ ಮನೆಯಿಂದ ನನ್ನ ಮನೆಗೆ ಬಂದಿರುತ್ತಾಳೆ.ಮಗ ಚೇತನ್ ಕುಮಾರ್ ಕಳೆದ 5 ವರ್ಷಗಳಿಂದ ವಿಪರೀತ ಮದ್ಯ ಸೇವನೆ ಮಾಡಿಕೊಂಡಿದ್ದ.ಆರ್ಲಪದವಿನ ತಿರುಮಲ ಎಂಬವರೊಂದಿಗೆ ಸೆಂಟ್ರಿಂಗ್ ಕೆಲಸಕ್ಕೆ ಹೋಗುತ್ತಿದ್ದ ಆತ ನಿನ್ನೆ ದಿನ ಸಹಾ ಕೆಲಸಕ್ಕೆ ಹೋಗಿ ಸಂಜೆ 5 ಗಂಟೆಗೆ ಮನೆಗೆ ಬಂದಿದ್ದ.ಆ ಸಮಯ ವಿಪರೀತ ಮದ್ಯ ಸೇವಿಸಿದ್ದ.ಮದ್ಯದ ನಶೆಯಲ್ಲಿ ತೂರಾಡುತ್ತಾ ಮನೆಯ ಒಳಗೆ,ಹೊರಗೆ ಹೋಗುತ್ತಿದ್ದ.ನಂತರ,ಆತ ತಂದಿದ್ದ ಮದ್ಯವನ್ನು ಪದೇ ಪದೇ ಸೇವಿಸುವಾಗ ಆತನಿಗೆ ಬುದ್ದಿ ಮಾತು ಹೇಳಿದರೂ ಕೇಳುತ್ತಿರಲಿಲ್ಲ.ಯಾಕೆ ಮದ್ಯ ಸೇವಿಸುತ್ತೀಯಾ ಎಂದು ಕೇಳಿದಾಗ, ನನಗೆ ಜೀವನ ಸಾಗಿಸಲು ಸಾಧ್ಯವಿಲ್ಲ.ನಾನು ಸಾಯುತ್ತೇನೆ ಎಂದು ಹೇಳಿದಾಗ ನಾವು ಸಮಾಧಾನ ಮಾಡಿ ಮಲಗಿದ್ದೆವು.ಆತನೂ ಮಲಗಿದ್ದ. ಮೇ 10ರಂದು ಬೆಳಿಗ್ಗೆ ಸುಮಾರು 5 ಗಂಟೆಗೆ ನಮ್ಮ ಕೊಟ್ಟಿಗೆ ಬಳಿ ಶಬ್ದ ಬಂದುದರಿಂದ ಹೋಗಿ ನೋಡಿದಾಗ ಮಗ ಚೇತನ್ ಕುಮಾರ್ ನಾಯಿಗೆ ಕಟ್ಟುವ ಸರಪಳಿಯನ್ನು ಆತನ ಕುತ್ತಿಗೆಗೆ ಸುತ್ತಿಕೊಂಡು ಸರಪಳಿಯ ಎರಡೂ ತುದಿಯು ಆತನ ಕೈಯಲ್ಲಿದ್ದು ಅಂಗಾತ ಮಲಗಿದ್ದವನನ್ನು ನಾನು ಮತ್ತು ಮಗಳು ಸೇರಿಕೊಂಡು ಎಳೆದುಕೊಂಡು ಹೋಗಿ ಆತನ ಕುತ್ತಿಗೆಯಲ್ಲಿದ್ದ ಸರಪಳಿಯನ್ನು ತೆಗೆದೆವು.ನಂತರ ಆತನ ಕುತ್ತಿಗೆಗೆ ಕೈಯಿಂದ ಉಜ್ಜಿ ನೀರನ್ನು ಕುಡಿಸಲು ಪ್ರಯತ್ನಿಸಿದಾಗ ಕುಡಿಯಲಿಲ್ಲ.ಅಲ್ಲದೇ ದೇಹದಲ್ಲಿ ಯಾವುದೇ ಚಲನವಲನಗಳು ಇಲ್ಲದೇ ಇದ್ದ ಕಾರಣ ಮನೆಯ ಹತ್ತಿರದ ಪ್ರವೀಣ್ ಸೂರ್ಯನಾರಾಯಣ ಭಟ್, ವೀಣಾರವರನ್ನು ಕರೆದಿದ್ದು ಅವರು ಮನೆಗೆ ಬಂದಿದ್ದರು.ನಂತರ ಸೂರ್ಯನಾರಾಯಣ ಭಟ್ ಅವರು ಆಂಬುಲೆನ್ಸ್‌ಗೆ ಕರೆ ಮಾಡಿದ್ದರು.ಆಂಬುಲೆನ್ಸ್‌ನಲ್ಲಿ ಮಗನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ ಬೆಳಿಗ್ಗೆ 6.30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಮಗ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದವನು, ಜೀವನದಲ್ಲಿ ಜಿಗುಪ್ಸೆ ಹೊಂದಿ ಸರಪಳಿಯನ್ನು ಕುತ್ತಿಗೆಗೆ ಸುತ್ತಿಕೊಂಡು ಎರಡೂ ಕೈಗಳಿಂದ ಬಿಗಿಯಾಗಿ ಎಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.ಆತನ ಸಾವಿನಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂದು ಆರಂಭದಲ್ಲಿ ಮೃತ ಚೇತನ್ ಕುಮಾರ್ ತಾಯಿ ಉಮಾವತಿಯವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.ಪೊಲೀಸರು ಅದರಂತೆ ಯುಡಿಆರ್ ಸಂಖ್ಯೆ 18/2024 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದರು.

ದೇಹದ ವಿವಿಧ ಭಾಗಗಳಲ್ಲಿ ಗಾಯ ಸಾವಿನಲ್ಲಿ ಸಂಶಯ-ಬಯಲಾಯ್ತು ಕೊಲೆ: ಮೃತನ ತಾಯಿ ನೀಡಿದ್ದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬಳಿಕದ ಪ್ರಕ್ರಿಯೆಗಳನ್ನು ನಡೆಸುತ್ತಿದ್ದ ವೇಳೆ ಪೊಲೀಸರಿಗೆ, ಚೇತನ್ ಕುಮಾರ್ ಕುಮಾರ್ ಅವರ ಮೃತದೇಹದ ಕುತ್ತಿಗೆ, ಬೆನ್ನು,ಸೊಂಟ, ಎಡಕಾಲು ಮತ್ತು ತೋಳು,ಬಲ ಭುಜದ ಮೇಲೆ ಗಾಯಗಳು ಇರುವುದು ಕಂಡು ಬಂತು.ಇದನ್ನು ಪರೀಕ್ಷಿಸಿದಾಗ ಮೃತನ ಸಾವಿನಲ್ಲಿ ಪೊಲೀಸರಿಗೆ ಸಂಶಯ ವ್ಯಕ್ತವಾಗಿತ್ತು.ಆ ಬಳಿಕ ದೂರುದಾರೆ, ಮೃತನ ತಾಯಿಯನ್ನು ತೀವ್ರ ರೀತಿಯಲ್ಲಿ ವಿಚಾರಣೆಗೊಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಉಮಾವತಿಯವರು ನೀಡಿದ ಹೇಳಿಕೆ: ಮೇ 9ರಂದು ರಾತ್ರಿ ಮಗ ಚೇತನ್ ಕುಮಾರ್ ಊಟ ಮಾಡಿದ ಬಳಿಕ ಮನೆಯಲ್ಲಿ ಗಲಾಟೆ ಮಾಡಿದ್ದು ನಾವು ಆತನಿಗೆ ಬೈದು ಮಲಗಲು ತಿಳಿಸಿ ನಾವೂ ಹೋಗಿ ಮಲಗಿದ್ದೆವು.ಮೇ 10ರ ಬೆಳಿಗ್ಗೆ ಸುಮಾರು 5 ಗಂಟೆ ಸಮಯ ನಮ್ಮ ನೆರೆ ಮನೆಯ ಇಸುಬು ಕೆ.ತಂದೆ ಕುಂಞಲಿ ಬ್ಯಾರಿ,ಗುತ್ತು ಕೂಟತ್ತಾನರವರು ನನಗೆ ದೂರವಾಣಿ ಕರೆ ಮಾಡಿ, ನಿಮ್ಮ ಮಗ ಚೇತನ್ ಕುಮಾರ್ ನಮ್ಮ ಮನೆಗೆ ಬಂದು ಗಲಾಟೆ ಮಾಡುತ್ತಿದ್ದು ಬಾಗಿಲಿಗೆಲ್ಲ ಕಲ್ಲಿನಿಂದ ಹೊಡೆದು ನಮಗೆ ಕೆಟ್ಟ ಪದಗಳಿಂದ ಬೈಯುತ್ತಿದ್ದು ನೀವು ಆತನನ್ನು ಕರೆದುಕೊಂಡು ಹೋಗಿ ಎಂದು ತಿಳಿಸಿದ್ದರು.ನಾನು ಎದ್ದು ಹೋಗಿದ್ದು, ಮಗ ಚೇತನ್ ಕುಮಾರ್ ಕುಡಿದ ನಶೆಯಲ್ಲಿ ಇಸುಬುರವರ ಮನೆಯ ಮುಂದೆ ಗಲಾಟೆ ಮಾಡುತ್ತಿದ್ದುದನ್ನು ನೋಡಿ ಸಮಾಧಾನ ಮಾಡಿ ಮನೆಗೆ ಬರುವಂತೆ ತಿಳಿಸಿದೆ.ಆದರೆ ಆತ ಬಾರದೇ ಇದ್ದುದರಿಂದ ಇಸುಬುರವರು, ಹೇಗಾದರೂ ಮಾಡಿ ಆತನನ್ನು ಇಲ್ಲಿಂದ ಕರೆದುಕೊಂಡು ಹೋಗಿ,ಇಲ್ಲವಾದರೆ ನಮಗೆ ಏನಾದರೂ ಮಾಡುತ್ತಾನೆ ಎಂದು ತಿಳಿಸಿದಾಗ ನಾನು ನನ್ನ ಕೈಲಿದ್ದ, ನಾಯಿಯನ್ನು ಕಟ್ಟುವ ಸರಪಳಿಯನ್ನು ಆತನ ಬೆನ್ನಿಗೆ ಮತ್ತು ಕುತ್ತಿಗೆಗೆ ಬಿಗಿದು ಬಾ ಮನೆಗೆ ಎಂದು ಹೇಳುತ್ತಾ ಆತನನ್ನು ಎಳೆದುಕೊಂಡು ಹೋಗುತ್ತಿದ್ದಾಗ, ನನಗೆ ಆತನನ್ನು ಎಳೆದುಕೊಂಡು ಹೋಗಲು ಅಸಾಧ್ಯವಾದಾಗ ಸರಪಳಿಯನ್ನು ಇಸುಬುರವರ ಕೈಯಲ್ಲಿ ಕೊಟ್ಟೆ.ನಾವೀರ್ವರು ಸರಪಳಿಯನ್ನು ಹಿಡಿದು ಎಳೆದುಕೊಂಡು ನಮ್ಮ ಮನೆಯ ಮುಂದಿನ ಸಿಮೆಂಟಿನ ಚಿಟ್ಟೆಗೆ ಎಳೆದುಕೊಂಡು ಬಂದು ಕೆಳಗೆ ಬೀಳಿಸಿ, ನನಗೆ ಎಷ್ಟು ತೊಂದರೆ ನೀಡುತ್ತೀಯಾ, ನಿನ್ನಿಂದ ಅಕ್ಕಪಕ್ಕದ ಮನೆಯವರಿಗೂ ತೊಂದರೆ ಆಗುತ್ತಿದೆ.ನೀನು ಬದುಕಿದರೆ ನನಗೆ ಕಷ್ಟ ನೀನು ಸಾಯಿ ಎಂದು ನಾನು ಹೇಳಿದ್ದು, ಆಗ ಸರಪಳಿಯನ್ನು ಇಸುಬುರವರ ಕೈಯಲ್ಲಿ ಕೊಟ್ಟು ನಾನು ಚೇತನ್‌ನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ಇಸುಬುರವರು ಸರಪಳಿಯನ್ನು ಆತನ ಕುತ್ತಿಗೆಗೆ ಹಾಕಿ ಜೋರಾಗಿ ಎಳೆದಾಗ ಮಗನ ಉಸಿರು ನಿಂತಂತೆ ಕಂಡು ಬಂದಿರುತ್ತದೆ.ನಾವು ಕೊಲೆ ಮಾಡಿರುವುದು ತಿಳಿಯುವುದು ಬೇಡ ಎಂಬ ಉzಶದಿಂದ ನೆರೆ ಮನೆಯವರನ್ನು ಕರೆದು ಅವರಲ್ಲಿ ಸುಳ್ಳು ಹೇಳಿ, 108 ಆಂಬುಲೆನ್ಸ್‌ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಆತ್ಮಹತ್ಯೆ ಎಂದು ಬಿಂಬಿಸಲು ಸುಳ್ಳು ದೂರನ್ನು ನೀಡಿದ್ದೆೞಎಂದು ಉಮಾವತಿಯವರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು.

ಸುಮೋಟೋ ಕೇಸು ದಾಖಲು:
ಉಮಾವತಿಯವರ ಹೇಳಿಕೆ ಬಳಿಕ ಎಸ್.ಐ.ಜಂಬೂರಾಜ್ ಮಹಾಜನ್ ಅವರ ದೂರಿನ ಮೇರೆಗೆ ಪೊಲೀಸರು(ಅ.ಕ್ರ.59/2024)ಕಲಂ 302,201, ರ/ಡ 34 ಐಪಿಸಿಯಡಿ ಮೇ 10ರಂದು ಮಧ್ಯಾಹ್ನ 1 ಗಂಟೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಉಮಾವತಿ ಮತ್ತು ಇಸುಬು ಅವರನ್ನು ಬಂಧಿಸಿದ್ದಾರೆ.

ಅವಿವಾಹಿತನಾಗಿದ್ದ ಮೃತ ಚೇತನ್ ಕುಮಾರ್ ಈ ಹಿಂದೆ ಪುತ್ತೂರಿನಲ್ಲಿ ಹೊಟೇಲ್ ಕಾರ್ಮಿಕನಾಗಿದ್ದು ಬಳಿಕ, ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲ ನಿರ್ವಹಿಸಿದ್ದರು.ಇತ್ತೀಚೆಗೆ ಕಟ್ಟಡ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದರು.ಈ ಹಿಂದೆ ಕೆಲವು ಸಲ ಅವರು ಆತ್ಮಹತ್ಯೆಗೆ ಯತ್ನಿಸಿದ್ದರೆಂದು ಸ್ಥಳೀಯವಾಗಿ ಸುದ್ದಿಯಾಗಿದೆ.ಆರೋಪಿ ಇಸುಬು ಅವರು ಪುತ್ತೂರಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಉದ್ಯೋಗಿ ಎಂದು ಮಾಹಿತಿ ಲಭಿಸಿದೆ.

ಎಸ್.ಪಿ.ಭೇಟಿ: ಘಟನೆಯ ಬಗ್ಗೆ ಮಾಹಿತಿ ಪಡೆದ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ.ಘಟನೆ ನಡೆದ ಸ್ಥಳ ಹಾಗೂ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಪೊಲೀಸರಿಗೆ ನಿರ್ದೇಶನ ನೀಡಿದರು.

LEAVE A REPLY

Please enter your comment!
Please enter your name here