ಕಡಬ: ರೆಂಜಿಲಾಡಿ ಗ್ರಾಮದ ಎಂಡೋ ಪೀಡಿತ ಯುವಕ ತನ್ನ ಮೂಗಿನ ಶಸ್ತ್ರ ಚಿಕಿತ್ಸೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.
ರೆಂಜಿಲಾಡಿ ಗ್ರಾಮದ ಪಲ್ಲತ್ತಡ್ಕ ನಿವಾಸಿ ಭಾಸ್ಕರ ಗೌಡ ಹಾಗೂ ರೇವತಿ ದಂಪತಿಯ ಏಕೈಕ ಪುತ್ರ ಎಂಡೋ ಪೀಡಿತ ಯುವಕ ಮನೋಜ್(24) ಮೃತಪಟ್ಟವರು.
ಮನೋಜ್ಗೆ ಮೂಗಿನಲ್ಲಿ ದುರ್ಮಾಂಸ ಬೆಳೆದು ಆಗಾಗ ತೊಂದರೆ ಉಂಟಾಗುತ್ತಿತ್ತು. ಇದೇ ಕಾರಣಕ್ಕೆ ಏಳು ಬಾರಿ ಶಸ ಚಿಕಿತ್ಸೆ ನಡೆಸಿ ಫಲಕಾರಿಯಾಗಿತ್ತು. ಲವಲವಿಕೆಯಿಂದ ಇದ್ದ ಈತನಿಗೆ ಇತ್ತೀಚೆಗೆ ಮತ್ತೆ ಮೂಗಿನಲ್ಲಿ ದುಮಾಂಸ ಬೆಳೆದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಗುರುವಾರ ಶಸಚಿಕಿತ್ಸೆ ನಡೆಸಲಾಯಿತು. ಅದು ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾರೆ.
ಮನೋಜ್ ಕುಟುಂಬ ತೀರ ಬಡತನದಲ್ಲಿದೆ, ತಂದೆ ಕೂಲಿ ಕೆಲಸ ಮಾಡುತ್ತಾರೆ, ತಾಯಿ ಗೃಹಿಣಿಯಾಗಿದ್ದಾರೆ. ಒರ್ವ ಸಹೋದರಿಯನ್ನು ಮದುವೆ ಮಾಡಿಕೊಡಲಾಗಿದೆ, ಮನೆಯ ದೀಪದಂತಿದ್ದ ಮನೋಜ್ ಎಂಡೋ ಪೀಡಿತನಾದರೂ ದ್ವಿತೀಯ ಪಿಯುಸಿ ವರೆಗೆ ಶಿಕ್ಷಣ ಪಡೆದಿದ್ದು, ಸ್ವಾವಲಂಬಿಯಾಗಿ ಬದುಕಬೇಕೆನ್ನುವ ಛಲ ಆತನಲ್ಲಿತ್ತು. ತಾನು ಮನೆಯವರಿಗೆ ಹೊರೆಯಾಗಬಾರದು ಎಂದು ಆಡು ಸಾಕಾಣೆ ಮಾಡುತ್ತಿದ್ದರು. ಅದನ್ನು ಕಡಿಮೆ ಮಾಡಿ ಬಳಿಕ ನಾಟಿ ಕೋಳಿ ಸಾಕಾಣೆ ಪ್ರಾರಂಭಿಸಿದ್ದರು. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಮನೋಜ್ ದೀಪದ ಬತ್ತಿ ತಯಾರಿಸುವ ಸ್ವ-ಉದ್ಯೋಗ ಪ್ರಾರಂಭಿಸಿದ್ದರು. ಇದಕ್ಕಾಗಿ ಯಂತ್ರವನ್ನೂ ಸಾಲ ಮಾಡಿ ಖರೀದಿಸಿದ್ದರು.