ಪ್ರೊ| ವಿ.ಬಿ. ಅರ್ತಿಕಜೆರವರಿಗೆ ನಿರಂಜನ ಪ್ರಶಸ್ತಿ, ಮಿತ್ತೂರು ಪ್ರತಿಷ್ಠಾನಕ್ಕೆ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ

0

ವಿವೇಕಾನಂದ ಕಾಲೇಜು ನಿರಂಜನರ ನೆನಪಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ – ಡಾ. ನಿರಂಜನ ವಾನಳ್ಳಿ

ಪುತ್ತೂರು: ನಿರಂಜನರ ಕಾದಂಬರಿಗಳಿಂದ, ಅಂಕಣಗಳಿಂದ ಅಂದು ಮಾತ್ರವಲ್ಲ ಇಂದಿಗೂ ಜನಮನದಲ್ಲಿ ಜೀವಂತವಾಗಿರುವವರು, ಪ್ರಗತಿಶೀಲರಾಗಿ ಉಚ್ಚ ಮಟ್ಟದಲ್ಲಿ ಸಾಧನೆ ಮಾಡಿದವರು. ಅಂತೆಯೇ ಇಂದು ನಿರಂಜನ ಪ್ರಶಸ್ತಿಗೆ ಭಾಜನರಾದ ಪ್ರೊ| ವಿ.ಬಿ ಅರ್ತಿಕಜೆ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗುವಂಥದ್ದು. ಬಾಲ್ಯದಲ್ಲಿ ಅವರು ಪಟ್ಟ ಶ್ರಮ, ಅವರಲ್ಲಿದ್ದ ಛಲ ಇಂದು ಅವರನ್ನು ಈ ಮಟ್ಟಕ್ಕೆ ಬೆಳೆಯುವಂತೆ ಮಾಡಿದೆ. ಪ್ರತಿಯೊಬ್ಬರೂ ಇವರಂತೆ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದರೆ ಆ ದೇಶ ಮುಂದುವರಿಯಲು ಸಾಧ್ಯ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನ ವಾನಳ್ಳಿ ಹೇಳಿದರು.


ವಿವೇಕಾನಂದ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ವಿವೇಕಾನಂದ ಸಂಶೋಧನಾ ಕೇಂದ್ರ, ಶಿವರಾಮ ಕಾರಂತ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ನೆರವೇರಿದ ಪ್ರೊ| ವಿ.ಬಿ. ಅರ್ತಿಕಜೆ ಅವರಿಗೆ ನಿರಂಜನ ಪ್ರಶಸ್ತಿ ಹಾಗೂ ಮಿತ್ತೂರು ಪ್ರತಿಷ್ಟಾನಕ್ಕೆ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.


ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ| ವರದರಾಜ ಚಂದ್ರಗಿರಿ ಮಾತನಾಡಿ, ವಿದ್ವಾಂಸರನ್ನು ಸೃಷ್ಟಿ ಮಾಡುವ ಹಾಗೂ ಗೌರವಿಸುವ ಉದ್ದೇಶದಿಂದ ಮಿತ್ತೂರು ಪ್ರತಿಷ್ಠಾನಕ್ಕೆ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಸಂಸ್ಥೆಯ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ. ಹೊಸತನದ ಕಡೆಗೆ ಒಲವು ಹರಿಸುವ ತಿಮ್ಮಯ ಭಟ್ಟರ ಗುಣ ಹೊಸ ತಲೆಮಾರಿನ ಯುವಜನತೆಗೆ ಮಾದರಿ ಆಗಬೇಕೆಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ ಯಂ ಕೃಷ್ಣ ಭಟ್ ಮಾತನಾಡಿ, ಹಿಂದಿನ ಕಾಲದ ಸಾಹಿತಿಗಳು ಎಲೆ ಮರೆಯ ಕಾಯಿಯ ಹಾಗೆ ಉಳಿಯುವುದನ್ನು ಕಾಣಬಹುದು. ಫೆಸ್ಬುಕ್ ಕಾಲಘಟ್ಟದಲ್ಲಿ ಪುಸ್ತಕಗಳು ವನ ಸುಮದಂತೆ ಹಿಂದೆ ಉಳಿದು ಬಿಡುತ್ತಿದೆ. ಇಂದು ಮುದ್ರಣಕ್ಕಿಂತ ಡಿಜಿಟಲ್ ಮಾಧ್ಯಮದಲ್ಲಿ ಬರಹಗಳನ್ನು ಕಾಣಬಹುದು. ಆದರೆ ಪುಸ್ತಕಗಳಿಗೆ ಅದರದೇ ಆದ ಮಹತ್ವವಿದೆ. ಈ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಯುವಜನತೆಗೆ ತಮ್ಮನ್ನು ತಾವು ಸಾಹಿತ್ಯಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿ ಎಂದು ಆಶಿಸಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ ಎನ್ ಉಪಸ್ಥಿತರಿದ್ದರು.


ಕಾಲೇಜಿನ ಪ್ರಾಂಶುಪಾಲ ವಿಷ್ಣು ಗಣಪತಿ ಭಟ್ ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ| ವಿಜಯಸರಸ್ವತಿ ವಂದಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು.
ಪಡೀಲು ಶಂಕರ ಭಟ್ ದತ್ತಿ ನಿಧಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಹಾಗೂ ದಿ. ಬಡಕ್ಕಿಲ್ಲ ಸೀತಾ ರಾಮ ಭಟ್ ಮತ್ತು ಲಕ್ಷ್ಮಿ ಅಮ್ಮ ಮೆಮೋರಿಯಲ್ ದತ್ತಿನಿಧಿಗೆ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

LEAVE A REPLY

Please enter your comment!
Please enter your name here