ಈಶ್ವರಮಂಗಲ: ಮೇ.8 ಮತ್ತು 9ರಂದು ಕೆಮ್ಮತ್ತಡ್ಕದಲ್ಲಿನ ತರವಾಡು ಮನೆಯಲ್ಲಿ ಶ್ರೀ ಅಣ್ಣಪ್ಪ ಪಂಜುರ್ಲಿ, ಶ್ರೀ ವಿಷ್ಣುಮೂರ್ತಿ ಹಾಗೂ ಪರಿವಾರ ದೈವಗಳ ಕೋಲವು ನಡೆಯಿತು.
ಮೇ.08ರಂದು ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ವಿಷ್ಣುಮೂರ್ತಿ ದೈವದ ತಂಬಿಲ ನಡೆಯಿತು. ಸಂಜೆ ಗಂಟೆ 5ಕ್ಕೆ ದೈವಗಳ ಭಂಡಾರ ತೆಗೆಯುವುದು, ದೈವನರ್ತಕರಿಗೆ ಎಣ್ಣೆ ಬೂಳ್ಯ ಕೊಡುವುದು, ಗುರುಕಾರ್ನವಾರು, ರಾಹು ಗುಳಿಗ ಕೋಲ, ಮಂತ್ರವಾದಿಗುಳಿಗ, ಭೂಮಿ ಗುಳಿಗ ದೈವಗಳ ಪ್ರಸಾದ ಸ್ವೀಕಾರ ಹಾಗೂ ಅನ್ನಸಂತರ್ಪಣೆ ನಡೆಯಿತು. ಬಳಿಕ ರಾತ್ರಿ ಕಲ್ಲುರ್ಟಿ ಮತ್ತು ಕೊರತ್ತಿ ದೈವಗಳ ಕೋಲ, ಕೊರಗಜ್ಜ ದೈವದ ಕೋಲ, ವರ್ಣಾರ ಪಂಜುರ್ಲಿ ಹಾಗೂ ಕುಪ್ಪೆ ಪಂಜುರ್ಲಿದೈವದ ಕೋಲ, ನಂತರ ಪೊಟ್ಟನ್ ದೈವದ ಅಗ್ನಿ ಪ್ರವೇಶ ಮತ್ತು ಕೋಲ, ಪ್ರಸಾದ ಸ್ವೀಕಾರ ನಡೆಯಿತು.
ಮೇ.9ರಂದು ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ಹಾಗೂ ಬಯಲು ಕೋಲ, ಅಣ್ಣಪ್ಪ ಪಂಜುರ್ಲಿ ಕೋಲ, ಕರಿಚಾಮುಂಡಿ ಕೋಲ ನಡೆದು ಬಳಿಕ ಪ್ರಸಾದ ಸ್ವೀಕಾರ ಮತ್ತು ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಗೌರವ ಸಲಹೆಗಾರರಾದ ನಾಗಪ್ಪ ಮಾಸ್ತರ್ ಬೊಮ್ಮೆಟ್ಟಿ, ಅಚ್ಯುತ ಮಣಿಯಾಣಿ, ಕುಟುಂಬಸ್ಥರು, ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು. ಶ್ರೀ ದೈವಗಳ ಕೋಲಕ್ಕೆ ಧನ ಸಹಾಯ ಮತ್ತು ದವಸ ಧಾನ್ಯಗಳನ್ನು ನೀಡಿದವರಿಗೆ ಗೌರವಾಧ್ಯಕ್ಷರಿಂದ ಸನ್ಮಾನ ಮಾಡಲಾಯಿತು.