ಪುತ್ತೂರು: ಪುತ್ತೂರು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ ಮುಗಿದು ಒಂದು ವರ್ಷ ಆಗಿದೆ. ಹೊಸ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡದೆ ನಗರಸಭೆ ಉಸ್ತುವಾರಿಯನ್ನು ಅಧಿಕಾರಿಗಳು ವಹಿಸಿಕೊಂಡು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದಿದ್ದರಿಂದ ಸಮಸ್ಯೆಗಳು ಉಂಟಾಗುತ್ತಿದೆ. ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಿಗೆ ಜಲಸಿರಿ ಯೋಜನೆಯಿಂದ ಪ್ರತಿ ಮನೆಗೆ ನೀರಿನ ಸಂಪರ್ಕ ಕಲ್ಪಿಸಿ ಪ್ರಾಯೋಗಿಕ ಹಂತದಲ್ಲಿ ನೀರು ವಿತರಿಸುವ ಕಾರ್ಯ ಪ್ರಾರಂಭಗೊಂಡರು ಇನ್ನೂ ಸಮಸ್ಯೆ ಬಗೆ ಹರಿದಿಲ್ಲ. ಪ್ರಾಕೃತಿಕ ವಿಕೋಪ ಸಂಬಂಧಿಸಿ ಇನ್ನೂ ಪೂರ್ವ ತಯಾರಿ ಸಭೆ ನಡೆಸಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ವಾರದೊಳಗೆ ಸರಿಪಡಿಸುವಂತೆ ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಪುತ್ತೂರು ನಗರಸಭೆಯ ಬಿಜೆಪಿ ಚುನಾಯಿತ ಸದಸ್ಯರ ನಿಯೋಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನವಿ ಮಾಡಿದ್ದಾರೆ.
ಜಲಸಿರಿ ಯೋಜನೆಗೆ ಸುಮಾರು 113 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿ ಪ್ರತಿ ಮನೆಗೆ ನೀರಿನ ಸಂಪರ್ಕ ಕಲ್ಪಿಸಿ ಪ್ರಾಯೋಗಿಕವಾಗಿ ಒಂದು ಹಂತದಲ್ಲಿ ನೀರನ್ನು ವಿತರಿಸುವ ಕೆಲಸ ಈಗಾಗಲೇ ಆರಂಭಗೊಂಡಿದೆ. ಆದರೆ ಪ್ರಸ್ಯುತ ಈ ಯೋಜನೆಯು ಪ್ರತಿ ವಾರ್ಡಿನಲ್ಲಿ ಪ್ರತಿಯೊಂದು ಮನೆಗೆ ಅಸಮರ್ಪಕ ನೀರಿನ ವಿತರಣೆಯಾಗುತ್ತಿರುವ ಬಗ್ಗೆ ದೂರುಗಳು ಮತ್ತು ಜಲಸಿರಿ ಅಧಿಕಾರಿಯ ಬಗ್ಗೆ ದಿನ ನಿತ್ಯ ದೂರುಗಳು ಬರುತ್ತಿವೆ. ಈ ಕುರಿತು ಈ ಹಿಂದೆಯೂ ಜಿಲ್ಲಾಧಿಕಾರಿಗಳಿಗೆ ಮತ್ತು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಜಲಸಿರಿ ಯೋಜನೆ ಮತ್ತು ಸರಕಾರದ ಯೋಜನೆಯಲ್ಲಿ 24*7 ನೀರು ಒದಗಿಸಬೇಕೆಂದು ಆದೇಶವಿದ್ದು, ಇನ್ನೂ 30 ವರ್ಷ ಪುತ್ತೂರು ನಗರಕ್ಕೆ ಬೇಕಾದ ನೀರು ಸಂಗ್ರಹಣಾ ಹಾಗು ವಿತರಣೆಗೆ ಈ ಯೋಜನೆಯನ್ನು ಅಳವಡಿಸಿದರೂ ಈ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸುವ ಅನಿವಾರ್ಯತೆ ಬಂದಿದೆ. ಈ ಕುರಿತು ಬಹಳಷ್ಟು ದೂರುಗಳು ಬರುತ್ತಿವೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಮತ್ತು ಚುನಾಯಿತ ಆಡಳಿತ ಇಲ್ಲದೆ ಇರುವುದರಿಂದ ನಗರಸಭೆಯ ಯಾವುದೆ ಚುನಾಯಿತ ಸದಸ್ಯರು ಯಾವುದೇ ಸಮಸ್ಯೆನ್ನು ನಗರಸಭೆಯ ಮುಂದಿಟ್ಟರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದರಿಂದ ನಗರಸಭೆಯಲಿ ನೀರಿನ ಮತ್ತು ಇತರ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಮಳೆಗಾಲದ ಮುಂಚಿತವಾಗಿ ಮಳೆ ಹಾನಿ, ಪ್ರಾಕೃತಿಕ ವಿಕೋಪ ಆಗದ ಹಾಗೆ ಪ್ರತಿ ವರ್ಷ ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಮುಂಜಾಗರುಕತೆ ಕ್ರಮವಾಗಿ ಚರಂಡಿ ಹೂಳೆತ್ತುವ, ಅಪಾಯಕಾರಿ ಮರಗಳ ಕೊಂಬೆ ಗಿಡ ಗಂಟಿಗಳನ್ನು ತೆರವು ಮಾಡುವ ಕೆಲಸ ಟೆಂಡರ್ ಪ್ರಕ್ರಿಯೆಯು ನಡೆಸುತ್ತಾ ಬಂದಿದ್ದೆವು. ಆದರೆ 2023ರ ಮೇ.2ಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮುಗಿದು ಅನಂತರದ ದಿನಗಳಲ್ಲಿ ಸರಕಾರ ಹೊಸ ಅಧ್ಯಕ್ಷರು ಮತ್ತ ಉಪಾಧ್ಯಕ್ಷರನ್ನು ಆಯ್ಕೆ ಮಾಡದೆ ಇರುವುದರಿಂದ ನಗರಸಭೆಯ ಉಸ್ತುವಾರಿಯನ್ನು ಅಧಿಕಾರಿಗಳು ವಹಿಸಿಕೊಂಡು ಚುನಾಯಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದಿರುವುದು ಸಮಸ್ಯೆ ಆಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಾದ ನಾವು ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿರುವುದರಿಂದ ತಕ್ಷಣ ನಗರಸಭೆ ಅಧಿಕಾರಿಗಳನ್ನು ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಮರ್ಪಕವಾಗಿ ಕುಡಿಯುವ ನೀರು ಮತ್ತು ಚರಂಡಿಗಳ ಗಿಡ ಗಂಟಿಗಳನ್ನು ತೆಗೆದು ಸ್ವಚ್ಛತೆಯನ್ನು ತಕ್ಷಣ ನಡೆಸಿಕೊಡಬೇಕಾಗಿ ಮನವಿಯಲ್ಲಿ ವಿನಂತಿಸಿದ್ದಾರೆ.
7 ದಿನದೊಳಗೆ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸದಿದ್ದಲ್ಲಿ ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ನಿಕಟಪೂರ್ವ ಅದ್ಯಕ್ಷ ಕೆ.ಜೀವಂಧರ್ ಜೈನ್, ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಯಶ್ರೀ ಎಸ್ ಶೆಟ್ಟಿ, ಯುವರಾಜ್ ಪೆರಿಯತ್ತೋಡಿ, ಹರೀಶ್ ಬಿಜತ್ರೆ, ನಿತೀಶ್ ಕುಮಾರ್ ಶಾಂತಿವನ ಸಹಿತ ನಗರಸಭೆ ಬಿಜೆಪಿ ಚುನಾಯಿತ ಸದಸ್ಯರು ಉಪಸ್ಥಿತರಿದ್ದರು.